ಹಜ್ ಸಮಯದಲ್ಲಿ 72 ಡಿಗ್ರಿಗೆ ಏರಲಿರುವ ಬಿಸಿಲ ತಾಪ: ಹೊರಗೆ ಬಾರದಂತೆ ಎಚ್ಚರಿಸಿದ ಸೌದಿ ಸರ್ಕಾರ

0
305

ಸನ್ಮಾರ್ಗ ವಾರ್ತೆ

ಹಜ್ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ 72° ಸೆಲ್ಸಿಯಸ್ ವರೆಗೆ ಬಿಸಿಲು ಅನುಭವವಾಗುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಆದ್ದರಿಂದ ಹಜ್ ಯಾತ್ರಿಕರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ತಮ್ಮ ಕೋಣೆಯಿಂದ ಹೊರಬರದಂತೆ ಜಾಗರೂಕತೆ ಪಾಲಿಸಬೇಕು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಕೋಣೆಗಳಿಂದ ಹೊರಬರುವಾಗ ಚಪ್ಪಲಿ ಮತ್ತು ಕೊಡೆಯನ್ನು ಕಡ್ಡಾಯವಾಗಿ ಉಪಯೋಗಿಸಬೇಕು ಎಂದು ಕೂಡ ಸೂಚನೆ ನೀಡಿದೆ.

ಈ ಬಾರಿಯ ಹಜ್ ಸಮಯದಲ್ಲಿ 45 ರಿಂದ 48 ಡಿಗ್ರಿ ಸೆಲ್ಸಿಯಸ್ ಬಿಸಿಲು ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮಶಾಇರದ ಕೆಲವು ಪರ್ವತ ಪ್ರದೇಶಗಳಲ್ಲಿ 72° ಸೆಲ್ಸಿಯಸ್ ಬಿಸಿಲಿನ ಅನುಭವವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಹೆಚ್ಚು ಸಮಯ ಸೂರ್ಯನ ಬೆಳಕು ಮೈಮೇಲೆ ಬೀಳುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಸಚಿವಾಲಯ ತಿಳಿಸಿದೆ.

ಬಾಯಾರಿಕೆಯ ಅನುಭವ ಆಗದಿದ್ದರೂ ಧಾರಾಳ ನೀರು ಕುಡಿಯಬೇಕು ಮತ್ತು ನೀರಿನಂಶ ಉಳಿಸಿಕೊಳ್ಳುವ ಹಣ್ಣು ಹಂಪಲುಗಳನ್ನು ತಿನ್ನಬೇಕು ಎಂದು ಕೂಡ ಸಚಿವಾಲಯ ತಿಳಿಸಿದೆ. ಹಾಗೆಯೇ ಜನನಿಬಿಡತೆಯಿಂದಾಗಿ ಪಾದರಕ್ಷೆ ಕಳಚಿ ಹೋಗುವ ಅಥವಾ ತುಂಡಾಗುವ ಸಾಧ್ಯತೆ ಅಧಿಕವಿದ್ದು ತೀರ್ಥ ಯಾತ್ರಾರ್ಥಿಗಳು ತಮ್ಮ ಬ್ಯಾಗಿನಲ್ಲಿ ಹೆಚ್ಚುವರಿ ಪಾದರಕ್ಷೆಯನ್ನು ಕಾಪಿಟ್ಟುಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.