ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಡಲಾಗಿದೆ ಎಂದ ಪೂಂಜಾ ವಿರುದ್ಧ ದೂರು ದಾಖಲಿಸಿದ ಬೆಳ್ತಂಗಡಿ ಜಮಾಅತ್

0
377

ಸನ್ಮಾರ್ಗ ವಾರ್ತೆ

ಮಸೀದಿ ಮತ್ತು ಮದರಸಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೇರಿಸಿಡಲಾಗಿದೆ ಎಂದು ದ್ವೇಷಪೂರಿತವಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ವಿಧಾನ ಸಭೆಯ ಸ್ಪೀಕರ್ ರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.

ಅವರ ವಿರುದ್ಧ ಕ್ರಮ‌ಕೈಗೊಳ್ಳಬೇಕೆಂದು ಆಗ್ರಹಿಸಿ‌ ‘ಬೆಳ್ತಂಗಡಿ ತಾಲೂಕು ಜಮಾಅತ್ ಗಳ ಒಕ್ಕೂಟ ದೂರು ಸಲ್ಲಿಸಿದೆ.

ಬೆಳ್ತಂಗಡಿ ತಾಲೂಕಿನ ಜಮಾಅತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಆಯಾಯಾ ಪ್ರದೇಶದ ಜಮಾಅತ್ ಪ್ರಮುಖರನ್ನೊಳಗೊಂಡ ‘ತಾಲೂಕು ಜಮಾಅತ್ ಗಳ ಒಕ್ಕೂಟ’ದ ನೇತೃತ್ವದಲ್ಲಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಿ ಬಳಿಕ ಈ ದೂರು ಸಲ್ಲಿಸಲಾಯಿತು.

“ಶಾಸಕರ ಈ‌ ಹೇಳಿಕೆಯಿಂದ ಸಾರ್ವಜನಿಕವಾಗಿ ಆತಂಕ ಉಂಟಾಗಿದೆ. ಸಮಾಜದ ಶಾಂತಿ ಮತ್ತು ಸೌಹಾರ್ದ ಕೆಡವಿ ಗಲಭೆ ಸೃಷ್ಟಿಸುವ ಹುನ್ನಾರ ಇದೆ. ಇದರ ಕಾರಣ ಮುಸ್ಲಿಂ ಸಮುದಾಯದ ವಿರುದ್ಧ ಜನ ಭೀತರಾಗಿದ್ದು, ರಾಜ್ಯದ ಕೋಮು ಸೌಹಾರ್ದತೆಯನ್ನು ಕೆಡಿಸುವ ಕೆಲಸಗಳಿಗೆ ಪ್ರಚೋದನೆ ನೀಡುವ ಭಾಷಣ ಇದಾಗಿದೆ. ಇದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.

ಶಾಸಕರು ಈ ಹಿಂದೆಯೂ ಇಸ್ಲಾಂ ನ ಮುಂಜಿ ಕರ್ಮ, ಮುಸಲ್ಮಾನರಿಗೆ ಜಾಗ ನೀಡಬಾರದು, ಮುಸ್ಲಿಮರ ಮತ ಬೇಡ ಎಂದೆಲ್ಲ ಹೇಳಿ ಜನಾಂಗೀಯ ದ್ವೇಷ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಶೀಘ್ರ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಲಾಯಿತು.