ಬಿಸಿಲ ತಾಪಕ್ಕೆ ಹಜ್ ನಲ್ಲಿ ಮೃತಪಟ್ಟ 640 ಮಂದಿಯಲ್ಲಿ ಭಾರತದ 90 ಯಾತ್ರಿಕರು: ವರದಿ

0
539

ಸನ್ಮಾರ್ಗ ವಾರ್ತೆ

ರಿಯಾದ್‌ (ಸೌದಿ ಅರೇಬಿಯಾ) : ಅಸಾಧ್ಯ ಸೆಖೆ ಮತ್ತು ಬಿಸಿಲ ಹೊಡೆತಕ್ಕೆ ಈ ಬಾರಿ 640ಕ್ಕೂ ಹೆಚ್ಚು ಮಂದಿ ಹಜ್ ಯಾತ್ರಿಗಳು ಮಕ್ಕಾದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ 90 ಮಂದಿ ಭಾರತೀಯರು ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕರನ್ನು ಉಲ್ಲೇಖಿಸಿ ಅಂತ‌ರ್ ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎಫ್ ಪಿ ವರದಿ ಮಾಡಿದೆ.

“ಸುಮಾರು 90 ಸಾವುಗಳನ್ನು ನಾವು ದೃಢಪಡಿಸಿದ್ದೇವೆ.. ಕೆಲವರು ಸಹಜ ಕಾರಣಗಳಿಂದ ಮೃತಪಟ್ಟಿದ್ದರೆ, ಹಲವು ಮಂದಿ ವೃದ್ಧ ಯಾತ್ರಿಗಳೂ ಇದ್ದರು. ಕೆಲವರು ಹವಾಮಾನ ಪರಿಸ್ಥಿತಿಯಿಂದ ಮೃತಪಟ್ಟಿರಬೇಕು” ಎಂದು ಸೌದಿ ರಾಜತಾಂತ್ರಿಕ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಎಎಫ್‌ಪಿ ವರದಿ ಪ್ರಕಾರ ಮೃತಪಟ್ಟವರ ಸಂಖ್ಯೆ 550 ಎಂದು ಅಂದಾಜಿಸಲಾಗಿತ್ತು. ಆದರೆ ಇದುವರೆಗಿನ ಅಂದಾಜಿನ ಪ್ರಕಾರ ಮೃತಪಟ್ಟವರ ಸಂಖ್ಯೆ 645ಕ್ಕೇರಿದೆ ಎಂದು ಎಎಫ್‌ಪಿ ಹೇಳಿದೆ. ಇದರಲ್ಲಿ 323 ಮಂದಿ ಈಜಿಪ್ಟ್ ಪ್ರಜೆಗಳು ಹಾಗೂ 60 ಮಂದಿ ಜೋರ್ಡಾನ್‌ನವರು ಸೇರಿದ್ದಾರೆ. ಇಂಡೋನೇಷ್ಯಾ ಇರಾನ್, ಸೆನೆಗಲ್, ಟ್ಯುನೇಶಿಯಾ ಮತ್ತು ಇರಾಕ್‌ನ ಸ್ವಾಯತ್ತ ಖುರ್ದಿಷ್ ಪ್ರದೇಶದ ಜನರೂ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ.

ಕಳೆದ ವರ್ಷ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇವರಲ್ಲಿ ಬಹುತೇಕ ಇಂಡೋನೇಷ್ಯಾದವರು. ಭಾನುವಾರ ಒಂದೇ ದಿನದಲ್ಲಿ 2700ಕ್ಕೂ ಹೆಚ್ಚು ಉಷ್ಣಾಘಾತ ಪ್ರಕರಣಗಳು ವರದಿಯಾಗಿದ್ದರೂ, ಒಟ್ಟು ಸಾವಿನ ಸಂಖ್ಯೆಯನ್ನು ಸೌದಿ ಅರೇಬಿಯಾ ಅಧಿಕೃತವಾಗಿ ಪ್ರಕಟಿಸಿಲ್ಲ.

ಭಾರತೀಯರ ಸಾವಿನ ಸಂಖ್ಯೆಯನ್ನು ದೃಢಪಡಿಸಿರುವ ರಾಜತಾಂತ್ರಿಕ ಸಿಬ್ಬಂದಿ ಹೇಳುವ ಪ್ರಕಾರ ಕೆಲ ಭಾರತೀಯ ಯಾತ್ರಿಗಳು ನಾಪತ್ತೆಯಾಗಿದ್ದಾರೆ. ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ.