ಆಂಧ್ರ: ಜಗನ್ ಪಾರ್ಟಿ ಕಚೇರಿ ನೆಲಸಮ; ಸೇಡಿನ ಕ್ರಮ ಎಂದ ವೈಎಸ್ಸಾರ್ ಕಾಂಗ್ರೆಸ್

0
176

ಹೊಸದಿಲ್ಲಿ: ನಿರ್ಮಾಣ ಹಂತದಲ್ಲಿರುವ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ ಕಟ್ಟಡವನ್ನು ಆಂಧ್ರಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಶನಿವಾರ ನೆಲಸಮಗೊಳಿಸಿದೆ. ಈ ಕಚೇರಿಯು ರಾಜ್ಯದ ಗುಂಟೂರು ಜಿಲ್ಲೆಯ ತಾಡೆಪಲ್ಲಿ ಪ್ರದೇಶದಲ್ಲಿದೆ. ಅಧಿಕಾರಿಗಳ ಪ್ರಕಾರ, ಭೂಒತ್ತುವರಿ ಮಾಡಿಕೊಂಡು ಜಗನ್ ಈ ಈ ಕಟ್ಟಡವನ್ನು ಕಟ್ಟಿಸಿದ್ದರು.

ಆಡಳಿತಾರೂಢ ತೆಲುಗು ದೇಶಂ ಪಕ್ಷ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ ಬುಲ್ಡೋಝಿಂಗ್ ಕುರಿತು ಆರೋಪಿಸಿದೆ. ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್‍ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಜಂಟಿ ಕಾರ್ಯಾಚರಣೆಯಲ್ಲಿ ಕಟ್ಟಡ ನೆಲಸಮ ಗೊಳಿಸಿತು. ಸಿಆರ್‍ಡಿಎ ಕ್ರಮವನ್ನು ಪ್ರಶ್ನಿಸಿ ಶುಕ್ರವಾರ ಆಂಧ್ರಪ್ರದೇಶ ಹೈಕೋರ್ಟ್‍ಗೆ ಜಗನ್ ಪಾರ್ಟಿ ವೈಎಸ್ಸಾರ್ ಕಾಂಗ್ರೆಸ್ ಪಾರ್ಟಿ ಮೊರೆ ಹೋಗಿತ್ತು . ಕಟ್ಟಡ ಕೆಡವುದನ್ನು ನಿಲ್ಲಿಸುವಂತೆ ಹೈಕೋರ್ಟು ಆದೇಶಿಸಿದೆ. ಹೈಕೋರ್ಟ್‍ನ ಆದೇಶದ ಹೊರತಾಗಿಯೂ ನಿರ್ಮಾಣ ಹಂತದಲ್ಲಿರುವ ಕಚೇರಿಯನ್ನು ಕೆಡವಿದ್ದು ಕೋರ್ಟ್ ನಿಂದೆ ಎಂದು ವೈಎಸ್‍ಆರ್‍ಸಿಪಿ ಹೇಳಿಕೆಯಲ್ಲಿ ತಿಳಿಸಿದೆ.

ಕೋರ್ಟಿನ ಆದೇಶವನ್ನು ಸಿಆರ್‍ಡಿಎ ಅಧಿಕಾರಿಗಳಿಗೆ ತಲುಪಿಸಲಾಗಿತ್ತು. ಆದರೂ ಸಿಆರ್‍ಡಿಎ ಕಟ್ಟಡ ಕೆಡವುವ ಪ್ರಕ್ರಿಯೆಗಳನ್ನು ಮುಂದುವರೆಸಿದ್ದು ಕೋರ್ಟು ನಿಂದೆ ಎಂದು ಜಗನ್ ಪಾರ್ಟಿ ಆರೋಪಿಸಿದೆ. ಕಳೆದ ತಿಂಗಳವರೆಗೆ ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಲೋಕಸಭೆ ಚುನಾವಣೆ ಜತೆಜತೆಗೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲುಂಡಿದೆ. ನಂತರ ಅಧಿಕಾರಕ್ಕೆ ಬಂದ ತೆಲುಗು ದೇಶಂ ಪಕ್ಷ ಜಗನ್‍ರ ವಿರುದ್ಧ ಸೇಡಿನ ಕಾರ್ಯಾಚರಣೆಗಿಳಿದಿದೆ ಎಂದು ವೈಎಸ್ಸಾರ್ ಕಾಂಗ್ರೆಸ್ ಆರೋಪಿಸಿದೆ.