ರಾಹುಲ್ ಬ್ರಿಟೀಷ್ ಪ್ರಜೆ; ಸಂಸದ ಸ್ಥಾನ ರದ್ದುಗೊಳಿಸಿ: ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

0
296

ಸನ್ಮಾರ್ಗ ವಾರ್ತೆ

“ರಾಹುಲ್ ಗಾಂಧಿಯವರು ಬ್ರಿಟೀಷ್ ಪ್ರಜೆ. ಹಾಗಾಗಿ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸಂಸದನಾಗಿರುವ ಕಾಂಗ್ರೆಸ್ ಮುಖಂಡನನ್ನು ಅನರ್ಹಗೊಳಿಸಬೇಕು” ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

“2024ರ ಲೋಕಸಭಾ ಚುನಾವಣೆಗೆ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್‌ನಿಂದ ಸ್ಪರ್ಧಿಸಿ ಗೆದ್ದಿರುವ ರಾಹುಲ್ ಗಾಂಧಿ ಅವರು ಬ್ರಿಟೀಷ್ ಪ್ರಜೆಯಾಗಿದ್ದಾರೆ. ಚುನಾವಣೆಗೆ ನಿಲ್ಲಬೇಕಾದರೆ ಆತ ಭಾರತೀಯ ಪ್ರಜೆಯಾಗಿರಬೇಕು. ಹಾಗಾಗಿ, ಅವರ ಲೋಕಸಭಾ ಸದಸ್ಯನ ಸ್ಥಾನವನ್ನು ರದ್ದುಗೊಳಿಸಬೇಕು” ಎಂದು ಕರ್ನಾಟಕದ ನಿವಾಸಿ ಎಸ್. ವಿಘ್ನೇಶ್ ಶಿಶಿರ್ ಎಂಬಾತ ವಕೀಲ ಅಶೋಕ್ ಪಾಂಡೆ ಎಂಬುವವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.

ಈ ಅರ್ಜಿಯಲ್ಲಿ, “ರಾಹುಲ್ ಗಾಂಧಿಯವರು BACKOPS LIMITED ಎಂಬ ಕಂಪನಿಯ ನಿರ್ದೇಶಕರಾಗಿದ್ದರು ಮತ್ತು ಆ ಕಂಪನಿಯು ಇಂಗ್ಲೆಂಡ್‌ನಲ್ಲಿದೆ. ಕಂಪನಿಯು ಬ್ರಿಟೀಷ್ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಗಾಂಧಿಯವರು ತಮ್ಮ ರಾಷ್ಟ್ರೀಯತೆಯ ಕಾಲಂನಲ್ಲಿ ‘ಬ್ರಿಟೀಷ್’ ಎಂದು ಉಲ್ಲೇಖಿಸಿದ್ದಾರೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

https://x.com/LiveLawIndia/status/1804171389944955015?t=BapyNTXUQZPyj7_GPfepbw&s=19

ಹೀಗಾಗಿ, ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ, “ರಾಹುಲ್ ಗಾಂಧಿಯವರಿಗೆ ಅಧಿಕಾರದ ಪ್ರಮಾಣ ವಚನವನ್ನು ಲೋಕಸಭೆಯ ಸ್ಪೀಕರ್ ಅವರು ಬೋಧಿಸದಂತೆ ಮತ್ತು ಸಂಸತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡದಂತೆ ನಿರ್ದೇಶನ ನೀಡಬೇಕು” ಎಂದು ಕೋರಲಾಗಿದೆ.

ಅಲ್ಲದೇ, ಈ ಪಿಐಎಲ್ ಅರ್ಜಿಯಲ್ಲಿ, ಮೋದಿ ಉಪನಾಮ ಪ್ರಕರಣದಲ್ಲಿ ನೀಡಲಾಗಿದ್ದ ಎರಡು ವರ್ಷದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ನೀಡಿಲ್ಲ. ಏಕೆಂದರೆ ಆರ್‌ಪಿ ಕಾಯ್ದೆಯ ಕೆಲವೊಂದು ನಿಯಮದ ವಿರುದ್ಧ ಸಾಗಿದ್ದಾರೆ. ರಾಹುಲ್ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದ್ದರೂ, ಅಫ್ಜಲ್ ಅಫ್ಜಲ್ ಅನ್ಸಾರಿ ಪ್ರಕರಣದಲ್ಲಿ ನೀಡಿದಂತೆ ಮತ್ತೆ ಸ್ಪರ್ಧಿಸಬಹುದು ಎಂದು ಎಲ್ಲೂ ಹೇಳಿಲ್ಲ. ಆದ್ದರಿಂದ ಅವರ ಶಿಕ್ಷೆಗೆ ತಡೆ ನೀಡಿರುವುದನ್ನು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಎಂದು ಪರಿಗಣಿಸುವಂತಿಲ್ಲ” ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ, ಗಾಂಧಿಯವರು ಭಾರತದ ಪ್ರಜೆಯಲ್ಲದ ಕಾರಣ ಅವರ ಚುನಾವಣೆಯನ್ನು ಬದಿಗಿಡಬೇಕು. ಅವರು ಬ್ರಿಟನ್‌ನ ಪ್ರಜೆಯಾಗಿರುವುದರಿಂದ ಸಂಸದರಾಗಿ ಆಯ್ಕೆಯಾಗಲು ಅರ್ಹತೆ ಹೊಂದಿಲ್ಲ. ರಾಹುಲ್ 2006ರಲ್ಲೇ ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ. ಬ್ರಿಟಿಷ್ ಪ್ರಜೆಯಾಗಿ ಅವರು ಸಂವಿಧಾನಾತ್ಮಕವಾಗಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸೇರಿಸಲಾಗಿದೆ.

ಸದ್ಯ ಸಲ್ಲಿಸಲಾಗಿರುವ ಅರ್ಜಿಯು ಮುಂದಿನ ತಿಂಗಳು ಈ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ. 2019ರಲ್ಲಿ ಕೂಡ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡದಂತೆ ಇಬ್ಬರು ಖಾಸಗಿ ವ್ಯಕ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.