ಸರ್ಕಾರಿ ಉದ್ಯೋಗಿಗಳು 9.15ರೊಳಗೆ ಕಚೇರಿಗೆ ಹಾಜರಾಗುವಂತೆ ಅವಧಿ ನಿಗದಿಪಡಿಸಿದ ಕೇಂದ್ರ

0
155

ಸನ್ಮಾರ್ಗ ವಾರ್ತೆ

ತಡವಾಗಿ ಕಚೇರಿಗೆ ಬರುವ ಸರ್ಕಾರಿ ಉದ್ಯೋಗಿಗಳಿಗೆ ಕಠಿಣ ಶಿಸ್ತು ಅಳವಡಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮುಂದಾಗಿದೆ. ಹಿರಿಯ ಅಧಿಕಾರಿಗಳು ಒಳಗೊಂಡು ಎಲ್ಲ ಕೇಂದ್ರ ಸರ್ಕಾರದ ಉದ್ಯೋಗಿಗಳು ಬೆಳಿಗ್ಗೆ 9 ಗಂಟೆಗೆ ಹಾಜರಾಗಬೇಕು. 15 ನಿಮಿಷಗಳು ಮಾತ್ರ ವಿನಾಯಿತಿ ನೀಡಲಾಗಿದ್ದು, 9.15ರೊಳಗೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಆದೇಶ ಹೊರಡಿಸಲಾಗಿದೆ.

ಮಾಧ್ಯಮವೊಂದರ ಪ್ರಕಾರ, ಹಿರಿಯ ಅಧಿಕಾರಿಗಳನ್ನು ಒಳಗೊಂಡು ಎಲ್ಲ ಉದ್ಯೋಗಿಗಳು ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಬಳಸಬೇಕು. ಕೋವಿಡ್ ಆದ ನಾಲ್ಕು ವರ್ಷಗಳ ನಂತರದಲ್ಲಿ ಹಲವರು ಇದನ್ನು ನಿರ್ಲಕ್ಷಿಸಿದ್ದಾರೆ.

“ಯಾವುದಾದರೂ ಕಾರಣಕ್ಕೆ ನಿರ್ದಿಷ್ಟ ದಿನದಂದು ಉದ್ಯೋಗಿಯು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದಿದ್ದಲ್ಲಿ, ಸಂಬಂಧಿಸಿದ ಮೇಲಧಿಕಾರಿಗೆ ಮೊದಲೇ ತಿಳಿಸಬೇಕು ಹಾಗೂ ಸಾಮಾನ್ಯ ರಜೆಗೆ ಅನುಮತಿ ಪಡೆದಿರಬೇಕು. ಆಯಾ ವಿಭಾಗದ ಅಧಿಕಾರಿಗಳು ಕೂಡ ಉದ್ಯೋಗಿಗಳ ಹಾಜರಾತಿಯನ್ನು ಹಾಗೂ ಕ್ರಮಬದ್ಧತೆಯನ್ನು ಮೇಲ್ವಿಚಾರಣೆಗೊಳಿಸುತ್ತಿರಬೇಕು” ಎಂದು ತಿಳಿಸಲಾಗಿದೆ.

ಒಂದು ವೇಳೆ ಹಾಜರಾತಿಯ ಶಿಸ್ತನ್ನು ಮೀರಿ 9.15ಕ್ಕೆ ಕಚೇರಿಗೆ ಹಾಜರಾದ ಉದ್ಯೋಗಿಗಳಿಗೆ ಅವರ ಸಾಮಾನ್ಯ ರಜೆಯಲ್ಲಿ ಅರ್ಧ ದಿನವನ್ನು ಕಡಿತಗೊಳಿಸಬೇಕು. ಸರ್ಕಾರಿ ಕಚೇರಿಗಳು 9 ರಿಂದ 5.30ರವರೆಗೂ ಕಾರ್ಯನಿರ್ವಹಿಸುತ್ತವೆ.

ಹಾಜರಾತಿಯ ಕ್ರಮಬದ್ಧತೆಗೆ ಆಧಾರ್‌ ಚಾಲಿತ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಈ ಮೊದಲು ಅಳವಡಿಸಲಾಗಿತ್ತು. ಕೋವಿಡ್‌ ನಂತರ ಇದನ್ನು ಸ್ಥಗಿತಗೊಳಿಸಲಾಗಿತ್ತು.2022ರ ಫೆಬ್ರವರಿಯಲ್ಲಿ ಪುನಃ ಅಳವಡಿಲಾಗಿತ್ತು. ನಂತರದ ದಿನಗಳಲ್ಲಿ ಉದ್ಯೋಗಿಗಳು ಬಯೋಮೆಟ್ರಿಕ್‌ ಯಂತ್ರಕ್ಕೆ ಮುದ್ರೆಯೊತ್ತುವುದನ್ನು ನಿರ್ಲಕ್ಷಿಸುತ್ತಿದ್ದರು.