ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

0
211

ಸನ್ಮಾರ್ಗ ವಾರ್ತೆ

ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳು ನಡೆಯುತ್ತಿರುವ ನಡುವೆ ಜೂನ್ 23ರ ಭಾನುವಾರ ನಡೆಯಬೇಕಾಗಿದ್ದ ನೀಟ್ ಸ್ನಾತಕೋತ್ತರ (ನೀಟ್ ಪಿಜಿ) ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನೀಟ್ ಹಗರಣವು ಮೋದಿ ಸರ್ಕಾರದ ಮುಂದೆ ಬಂದು ನಿಲ್ಲುತ್ತದೆ. ಬಿಜೆಪಿಯಿಂದ ಕೊಳೆತು ಹೋಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಸ್ಥಳೀಯ ಸಮಸ್ಯೆಗೆ ಅಧಿಕಾರಿ ಬದಲಾಯಿಸುವುದು ಒಂದೇ ಪರಿಹಾರವಲ್ಲ” ಎಂದು ಹೇಳಿದ್ದಾರೆ.

“ಎನ್‌ಟಿಎಯನ್ನು ಸ್ವಾಯತ್ತ ಸಂಸ್ಥೆ ಎಂದು ಬಿಂಬಿಸಲಾಗಿತ್ತು. ಆದರೆ ವಾಸ್ತವದಲ್ಲಿ ಬಿಜೆಪಿ/ಆರ್‌ಎಸ್‌ಎಸ್‌ನ ವಂಚಕ ಹಿತಾಸಕ್ತಿಗಳನ್ನು ಪೂರೈಸಲು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ಮೋದಿ ಸರ್ಕಾರ ಜವಾಬ್ದಾರಿ ಹೊರಬೇಕು. ಇದೀಗ ನೀಟ್ ಪಿಜಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕಳೆದ ಹತ್ತು ದಿನಗಳಲ್ಲಿ ನಾಲ್ಕು ಪರೀಕ್ಷೆಗಳನ್ನು ರದ್ದು ಅಥವಾ ಮುಂದೂಡಲಾಗಿದೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

https://x.com/kharge/status/1804576176427676078?t=n0ekpLLsL3DItQGZ9ZqeuQ&s=19

“ಪೇಪರ್ ಸೋರಿಕೆ, ಭ್ರಷ್ಟಾಚಾರ, ಅಕ್ರಮಗಳು ಮತ್ತು ಶಿಕ್ಷಣ ಮಾಫಿಯಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿದೆ. ಅಸಂಖ್ಯಾತ ಯುವಕರು ಬಳಲುತ್ತಿರುವ ಕಾರಣ ಈ ತಡವಾಗಿ ತೇಪೆ ಹಾಕುವ ಕೆಲಸ ಯಾವುದೇ ಪರಿಣಾಮ ಬೀರಲ್ಲ” ಎಂದು ಟೀಕಿಸಿದ್ದಾರೆ.

ಇನ್ನು ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಈಗ ನೀಟ್ ಪಿಜಿ ಕೂಡ ಮುಂದೂಡಲಾಗಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ದುರದೃಷ್ಟಕರ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ.

https://x.com/RahulGandhi/status/1804571167929630981?t=eKm4-SuwpVsBmwckFwPJdA&s=19

“ಬಿಜೆಪಿ ಆಡಳಿತದಲ್ಲಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕಾಗಿ ಅಧ್ಯಯನ ಮಾಡುವ ಬದಲಾಗಿ ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಸರ್ಕಾರದ ಜೊತೆ ‘ಹೋರಾಟ’ ಮಾಡಬೇಕಾದ ಸ್ಥಿತಿಯಿದೆ. ಪ್ರತಿ ಬಾರಿಯೂ ಮೌನವಾಗಿ ಕಾರ್ಯಕ್ರಮವನ್ನು ವೀಕ್ಷಿಸುವ ಮೋದಿ, ಪೇಪರ್ ಲೀಕ್ ದಂಧೆ ಮತ್ತು ಶಿಕ್ಷಣ ಮಾಫಿಯಾದ ಮುಂದೆ ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ” ಎಂದು ದೂರಿದರು.

“ನರೇಂದ್ರ ಮೋದಿಯವರ ಅಸಮರ್ಥ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅಪಾಯವಾಗಿದೆ. ನಾವು ಅದರಿಂದ ದೇಶದ ಭವಿಷ್ಯವನ್ನು ಉಳಿಸಬೇಕಾಗಿದೆ” ಎಂದು ಅಭಿಪ್ರಾಯಿಸಿದರು.