ಕೆಡುಕಿನ ನಿರ್ಮೂಲನೆಗೆ ಸಂಘಟಿತರಾಗಿ: ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಕರೆ

0
390

ಸನ್ಮಾರ್ಗ ವಾರ್ತೆ

ಸಮಾಜದಲ್ಲಿರುವ ಕೆಡುಕುಗಳನ್ನು ನಿರ್ಮೂಲನೆಗೊಳಿಸಿ ಒಳಿತನ್ನು ಸಂಸ್ಥಾಪಿಸುವುದು ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ. ಈ ಕೆಲಸವನ್ನು ಅವರು ಸಂಘಟಿತರಾಗಿ ಮಾಡಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಹೇಳಿದರು.

ಪಟ್ಟಣದ ಟಿಪ್ಪು ನಗರದಲ್ಲಿರುವ ಆಲಾ ಮಸೀದಿ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನಗರ ಶಾಖೆಯ ವತಿಯಿಂದ ಹಮ್ಮಿಕೊಂಡ ಮುಸ್ಲಿಂ ಸಮಾಜದ ಗಣ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ನಮ್ಮ ಸಮಾಜದಲ್ಲಿ ಸಾಮಾಜಿಕ ಕೆಡುಕುಗಳಾದ ಕೋಮುವಾದ, ಭ್ರಷ್ಟಾಚಾರ, ನೈತಿಕ ಅಧಿಪತನ, ಸ್ವಜನ ಪಕ್ಷಪಾತ, ಧಾರ್ಮಿಕ ಅಸಹಿಷ್ಣುತೆ ಹಾಗೂ ದ್ವೇಷವು ದಿನದಿಂದ ದಿನ ಹೆಚ್ಚಾಗುತ್ತಿದೆ ಇವು ದೇಶದ ಪ್ರಗತಿ ಹಾಗೂ ಶಾಂತಿಗೆ ಮಾರಕವಾಗಿವೆ ಇವುಗಳನ್ನು ನಿರ್ಮೂಲನೆಗೊಳಿಸದೇ ಹೋದಲ್ಲಿ ಸದೃಢ ಭಾರತದ ನಿರ್ಮಾಣ ಅಸಾಧ್ಯವಾಗಿದೆ. ದೇಶದ ಹಿತ ಚಿಂತನೆ ಎಲ್ಲರ ಕರ್ತವ್ಯವಾಗಿದೆ.

ಭಾರತ ಜಗತ್ತಿನಲ್ಲಿಯೇ ಶ್ರೇಷ್ಠ ಧಾರ್ಮಿಕ ಪರಂಪರೆಯನ್ನು ಹೊಂದಿದ ದೇಶವಾಗಿದೆ ಶತ ಶತಮಾನಗಳಿಂದ ಇಲ್ಲಿ ಎಲ್ಲ ಧರ್ಮಗಳ ಜನರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕುತ್ತಿದ್ದಾರೆ ಇದನ್ನು ಸಹಿಸದ ಕೆಲವರು ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಜನರ ಮದ್ಯೆ ದ್ವೇಷವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ ಇವರನ್ನು ನಿಯಂತ್ರಿಸುವ ಕೆಲಸ ಆಗಬೇಕು ನಾವೆಲ್ಲರೂ ಒಂದು ನಾವೆಲ್ಲರೂ ಭಾರತೀಯರು ಎಂಬ ಭಾವನೆಯು ಎಲ್ಲರಲ್ಲೂ ಬರಬೇಕಾಗಿದೆ. ಮುಸ್ಲಿಂ ಸಮುದಾಯ ಇಂಥಹ ಸಂಕೀರ್ಣ ಸಮಯದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಮುಂದೆ ಬರಬೇಕಾಗಿದೆ. ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಯು ಮುಸ್ಲಿಂ ಸಮುದಾಯದಲ್ಲಿ ಇದರ ಕುರಿತು ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಮಹಮ್ಮದ್ ತಲ್ಹಾ ಬೆಂಗಳೂರು, ಬೆಳಗಾವಿ ವಿಭಾಗೀಯ ಸಂಚಾಲಕ ಎಂ.ಐ.ಬಡಗಣ. ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಬಿಲಾಲ್ ಇದ್ದರು. ಅಲ್ಲಾಭಕ್ಷ ನಮಾಜಕಟ್ಟಿ ಕುರಆನ್ ಪಠಿಸಿದರು. ಸ್ಥಾನೀಯ ಅಧ್ಯಕ್ಷ ಮುಜಾಹೀದ್ ನಮಾಜಕಟ್ಟಿ ನಿರೂಪಿಸಿದರು.