ಕಲ್ಲಡ್ಕ: ಅನುಗ್ರಹ ಪದವಿಪೂರ್ವ ಕಾಲೇಜು, ಸಾಧಕಿಯರಿಗೆ ಅಭಿನಂದನಾ ಕಾರ್ಯಕ್ರಮ

0
849

ಸನ್ಮಾರ್ಗ ವಾರ್ತೆ

ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2023-24) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮತ್ತು ವಿಷಯವಾರು ಶೇಖಡ. 100 ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹವ್ವಾ ಜುಮಾ ಮಸೀದಿ, ಬೋಳಂಗಡಿಯ ಖತೀಬರಾದ ಮೌಲಾನ ಯಹ್ಯಾ ತಂಙಳ್ ಮದನಿಯವರು ಮಾತನಾಡಿ, ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡುತ್ತಾ ಅವರ ಪರಿಶ್ರಮ ಹಾಗೂ ಸಫಲತೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅನುಗ್ರಹ ಕಾಲೇಜಿನ ಸಂಚಾಲಕರಾದ ಅಮಾನುಲ್ಲಾ ಖಾನ್ ರವರು ‘ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಸಿಸುತ್ತಾ ಇದಕ್ಕೆ ಪ್ರೇರಣೆ ನೀಡಿದ ಪೋಷಕರಿಗೆ, ಮಾರ್ಗದರ್ಶನ ನೀಡಿದ ಉಪನ್ಯಾಸಕಿ ವರ್ಗದವರಿಗೆ, ಪ್ರಾಂಶುಪಾಲರಿಗೆ ಹಾಗೂ ಬೆನ್ನೆಲುಬಾಗಿ ನಿಂತ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ಲಾ‌.ಸಿ ಇವರು “ಬೋಧಕ ವರ್ಗದವರು, ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯು ಒಂದು ಕುಟುಂಬವಿದ್ದಂತೆ, ನಾವೆಲ್ಲರೂ ಏಕ ಮನಸ್ಕರಾಗಿ ಕಾರ್ಯ ನಿರ್ವಹಿಸಿದರೆ ಏನನ್ನೂ ಸಾಧಿಸಬಹುದು.

ಈ ಶೈಕ್ಷಣಿಕ ವರ್ಷದ ಸಾಧನೆಯು ನಮ್ಮ ಸಮಗ್ರತೆಗೆ ಸಾಕ್ಷಿಯಾಗಿದೆ,” ಎಂದು ಸನ್ಮಾಸಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ‘ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಜನಾಬ್ ಹೈದರ್ ಅಲಿ ಇವರು ಅತಿಥಿಗಳನ್ನು ಪರಿಚಯಿಸಿದರು.

ಪ್ರಾಂಶುಪಾಲರಾದ ಶ್ರೀಮತಿ ಹೇಮಲತ ಬಿ.ಡಿ. ಯವರು ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಅದೇ ರೀತಿ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು ಹಾಗೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಕರ್ನಾಟಕ ಇವರು ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಜನಾಬ್ ಇಮಾರತ್ ಅಲಿ, ಉಪ ಕಾರ್ಯದರ್ಶಿಯಾದ ಜನಾಬ್ ಅಬ್ದುಲ್ಲಾ ಕುಂಞ, ಆಡಳಿತ ಮಂಡಳಿ ಸದಸ್ಯರಾದ ಜನಾಬ್ ಸುಲೈಮಾನ್, ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿಯವರಾದ ಶ್ರೀಮತಿ ಮಮಿತಾ ಎಸ್.ರೈ ಉಪಸ್ಥಿತರಿದ್ದರು.

ಸಭೆಯಲ್ಲಿ ಹೆತ್ತವರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ರಾಬಿಯ ಅಬ್ದುಲ್‌ ರಹೀಮ್‌ ಕಿರಾಅತ್ ನಡೆಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಕುಮಾರಿ ಶ್ವೇತ ವಂದಿಸಿದರು, ವಿಜ್ಞಾನ ವಿಭಾಗದ ಉಪನ್ಯಾಸಕಿ ಕುಮಾರಿ ಫಾತಿಮತ್ ಶಫೀಕ ಕಾರ್ಯಕ್ರಮವನ್ನು ನಿರೂಪಿಸಿದರು.