ನೀಟ್ ರದ್ದುಪಡಿಸಲಿ, ರಾಜ್ಯಗಳಿಗೆ ಮತ್ತೆ ಅಧಿಕಾರ ನೀಡಲಿ – ಮಮತಾ

0
130

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೀಟ್ ವ್ಯವಸ್ಥೆಯನ್ನು ತೆಗೆದು ಹಾಕಿ ಮೊದಲಿನಂತೆ ರಾಜ್ಯಗಳಿಗೆ ಅದರ ಅಧಿಕಾರವನ್ನು ಮರಳಿಸಬೇಕೆಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಮಮತಾರಿಗಿಂತ ಮೊದಲು ಇದೇ ರೀತಿ ತಮಿಳ್ನಾಡು ಸರಕಾರ ಕೂಡ ಆಗ್ರಹ ವ್ಯಕ್ತಪಡಿಸಿತ್ತು. ಇದಕ್ಕೆ ಸಂಬಂಧಿಸಿ ಈಗ ಮಮತಾ ಬ್ಯಾನರ್ಜಿ ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳನ್ನು ಬಾಧಿಸಿದೆ ಎಂದು ಮಮತಾ ವಿವರಿಸಿದ್ದು, ಪಾರದರ್ಶಕ ತನಿಖೆಗೆ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

2017ರ ಮೊದಲು ರಾಜ್ಯಗಳಿಗೆ ಸ್ವಂತವಾಗಿ ಪರೀಕ್ಷೆ ನಡೆಸುವ ಅನುಮತಿಯಿತ್ತು. ಆ ವ್ಯವಸ್ಥೆ ಅಡೆತಡೆ ತೊಂದರೆ ಇಲ್ಲದೆ ನಡೆಯುತ್ತಿತ್ತು. ಮೋದಿ ಸರಕಾರ ಇವನ್ನೆಲ್ಲ ಹಾಳು ಮಾಡಿದೆ. ವಿಕೇಂದ್ರೀಕರಣದ ಬದಲು ಕೇಂದ್ರಿಕರಣ ಮಾಡುವ ಮೋದಿ ನೀತಿಯಿಂದ ಹೀಗಾಗಿದ್ದು ಎಂಬ ಕೂಗುಗಳು ಕೇಳಿಸುತ್ತಿವೆ.

ರಾಜ್ಯಗಳು ಒಬ್ಬ ಮೆಡಿಕಲ್ ಕಲಿಯುವ ವಿದ್ಯಾರ್ಥಿಗೆ 50 ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸುತ್ತಿದೆ. ಆದುದರಿಂದ ಅವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ರಾಜ್ಯಗಳಿಗೆ ಕೊಡಬೇಕು ಎಂಬ ಬಲವಾದ ಆಗ್ರಹಗಳು ಅರ್ಥಪೂರ್ಣವಾಗಿದೆ.

ಮತ್ತೆ ಮೊದಲಿನ ಸಂಪ್ರದಾಯಕ್ಕೆ ಮರಳಬೇಕಾಗಿದೆ ಎಂಬುದು ಮಮತಾ ಬ್ಯಾನರ್ಜಿಯವರ ಆಗ್ರಹವಾಗಿದ್ದು ಪರೀಕ್ಷಾ ಸಂಪ್ರದಾಯವನ್ನು ಪುನಃ ವಿಕೇಂದ್ರಿಸಬೇಕು. ಕೇಂದ್ರ ಸರಕಾರ ಕೇಂದ್ರೀಕರಣ ನೀತಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರುದ್ಧವಾಗಿದೆ. ಮಾತ್ರವಲ್ಲ ಅದರಿಂದಾಗಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.