ಮಾನವ ಸಾಗಾಟ: ಮುಖ್ಯ ಆರೋಪಿಯನ್ನು ಬಂಧಿಸಿದ ಕೇರಳ ಪೊಲೀಸರು

0
218

ಸನ್ಮಾರ್ಗ ವಾರ್ತೆ

ಕೊಲ್ಲಂ,ಜೂ. 26: ಆನ್‍ಲೈನ್ ವಂಚನೆಗಾಗಿ ಅನಧಿಕೃತವಾಗಿ ಯುವಕರನ್ನು ವಿದೇಶಕ್ಕೆ ಸಾಗಾಟ ಮಾಡುವ ತಂಡದ ಮುಖ್ಯ ಆರೋಪಿಯನ್ನು ಕೊಲ್ಲಂ ಈಸ್ಟ್ ಪೊಲೀಸರು ಬಂಧಿಸಿದ್ದಾರೆ.

ಈತನ ಹೆಸರು ರಂಜಿತ್ ಎಂದಾಗಿದೆ. ವೆಳ್ಳಮನ್ ಇಡವಟ್ಟ ಎಂಬಲ್ಲಿನ ನಿವಾಸಿ ಆಗಿದ್ದು ಈತ ವಿಯೆಟ್ನಾಮ್‍ಗೆ ಜಾಹೀರಾತು ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಕರನ್ನು ಕಾಂಬೋಡಿಯಕ್ಕೆ ಕಳುಹಿಸುತ್ತಿದ್ದ.

ವೀಸಕ್ಕೆ ಹಣ ಕೇಳಿ ಯುವಕರಿಂದ ಎರಡರಿಂದ ಮೂರು ಲಕ್ಷ ರೂಪಾಯಿವರೆಗೆ ಈತ ಪೀಕಿಸಿದ್ದಾನೆ. ಉಜ್ವಲ ಭವಿಷ್ಯ ಕಾಣುತ್ತಿದ್ದ ಯುವಕರು ಈತನ ಬಲೆಗೆ ಬೀಳುತ್ತಿದ್ದರು.

ಟೂರ್ ವೀಸಾದಲ್ಲಿ ವಿಯೆಟ್ನಾಂಗೆ ತಲುಪಿದ ಯುವಕರು ಕಾಂಬೋಡಿಯ ಗಡಿಗೆ ಸೇರಿದ ಹೊಟೇಲ್‍ನಲ್ಲಿ ವಾಸ್ತವ್ಯ ಮಾಡಿಕೊಟ್ಟು ಏಜೆಂಟುಗಳು ಪಾಸ್‍ಪೋರ್ಟ್ ಮೊಬೈಲ್ ಫೋನ್‍ಗಳನ್ನು ತೆಗೆದಿರಿಸಿಕೊಂಡು ಕಾಂಬೋಡಿಯಕ್ಕೆ ತಲುಪಿಸುತ್ತಿದ್ದರು. ಇವರಿಗೆ ಇಲ್ಲಿಂದ ಆನ್‍ಲೈನ್ ವಂಚನೆ ಮಾಡುವ ಕೆಲಸ ನೀಡಲಾಗುತ್ತಿತ್ತು.

ಸಾಮಾಜಿಕ ಮಾಧ್ಯಮಗಳ ಮೂಲಕ ವಿವಿಧ ದೇಶಗಳ ಜನರ ವಿವರ ಸಂಗ್ರಹಿಸುವುದು ಅವರ ಹಣವನ್ನು ಪತ್ತೆ ಹಚ್ಚುವುದು ಇವರಿಗೆ ಗುರಿ ನಿಗದಿಪಡಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಪೊಲೀಸರು ಬಂಧಿಸಿದ ಪ್ರವೀಣ್ ಎಂಬಾತ ಕೂಡ ಕಾಂಬೋಡಿಯಕ್ಕೆ ಕೆಲಸಕ್ಕೆ ಹೋಗಿದ್ದ ಮತ್ತು ವಂಚಕರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಎಂದು ಕೊಲ್ಲಂ ಈಸ್ಟ್ ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಸಂಬಳ ಸಿಗುತ್ತದೆ ಎಂದು ನಂಬಿಸಿ ಆರೋಪಿ ಯುವಕರನ್ನು ಕಾಂಬೋಡಿಯಕ್ಕೆ ಸರಬರಾಜು ಮಾಡುತ್ತಿದ್ದನು. ಆರು ತಿಂಗಳಲ್ಲಿ ಈತ ಹದಿನೆಂಟು ಯುವಕರನ್ನು ಈ ರೀತಿ ಮೋಸ ಮಾಡಿ ಕಾಂಬೋಡಿಯಕ್ಕೆ ಕಳುಹಿಸಿದ್ದಾನೆ. ಕೇರಳ ಪೊಲೀಸರ ಸೈಬರ್ ವಿಂಗಿಗೆ ಸಿಕ್ಕಿದ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಾನವ ಕಳ್ಳಸಾಗಾಟ ತಂಡದ ಇತರ ಆರೋಪಿಗಳ ಕುರಿತು ಈತನಿಂದ ತಮಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದರು.