ನೀಟ್ ಅಕ್ರಮ | ಕೇಂದ್ರ ಮಾನವ ಸಂಪನ್ಮೂಲ ಸಚಿವ ರಾಜೀನಾಮೆ ನೀಡಲಿ; ಎಸ್‌ಐಓ ಆಗ್ರಹ

0
156

ಸನ್ಮಾರ್ಗ ವಾರ್ತೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳ ಕುರಿತು ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚಿಸಬೇಕು. ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಅಕ್ರಮದ ಹೊಣೆ ಹೊತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಸ್‌ಐಓ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಡಿದ ಎಸ್‌ಐಓ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮದ್ ಕೈಫ್, “ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟವಾಡುತ್ತಿದೆ. ಕಳೆದ ನಾಲ್ಕು ನೀಟ್ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಯಾಗಿರುವ ಅನುಮಾನಗಳಿದ್ದರೂ, ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತ್ತು. ಆದರೆ, ಈ ಬಾರಿಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಯಾಗಿರುವುದನ್ನು ಸ್ವತಹಃ ಹೆಚ್.ಆರ್.ಡಿ ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದ ಸಂಬಂಧ ಬಿಜೆಪಿಯ ಹಲವಾರು ಮುಖಂಡರನ್ನು ಬಂಧಿಸಲಾಗಿದೆ. ಇದನ್ನು ನೋಡಿದರೆ ನೀಟ್ ಪರೀಕ್ಷೆಯ ಮೂಲಕ ಬಡವರ ಮಕ್ಕಳು ವೈದ್ಯರಾಗದಂತೆ ತಡೆಯುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿರುವುದು ಸ್ಪಷ್ಟವಾಗುತ್ತಿದೆ” ಎಂದು ಆರೋಪಿಸಿದ್ದಾರೆ.

“ವೈದ್ಯನಾಗಬೇಕೆಂಬ ಕನಸಿನೊಂದಿಗೆ ಕಷ್ಟಪಟ್ಟು ಓದಿ,ಪರೀಕ್ಷೆ ಬರೆದ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಹಾಗಾಗಿ ಪ್ರಕರಣವನ್ನು ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಗೆ ಒಪ್ಪಿಸಬೇಕು. ಪ್ರಕರಣದ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಮಾತನಾಡಬೇಕು. ಎಲ್ಲ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಮರು ಪರೀಕ್ಷೆ ನಡೆಸಬೇಕು” ಎಂದು ಮುಹಮದ್ ಕೈಫ್ ಆಗ್ರಹಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ತಾಜುದ್ದೀನ್ ಷರೀಫ್ ಮಾತನಾಡಿ, “ಕೇಂದ್ರ ಸರ್ಕಾರ ನೇಮಿಸಿದ ಎನ್‌ಟಿಎ ಸಂಸ್ಥೆಯಿಂದ ನೀಟ್ ಬರೆದ ಆರ್ಹ ಅಭ್ಯರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕೆಲವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಶಾಸಕರು, ಸಂಸದರ ಅಧೀನದ ಶಿಕ್ಷಣ ಸಂಸ್ಥೆಗಳು ಮತ್ತು ನೀಟ್ ಕೋಚಿಂಗ್ ಸೆಂಟರ್‌ಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಮಕ್ಕಳ ವೈದ್ಯಕೀಯ ಕನಸಿಗೆ ಕೊಳ್ಳಿ ಇಡಲಾಗಿದೆ. ಇದು ನಿಜಕ್ಕೂ ಖಂಡನೀಯ. ಕೂಡಲೇ ಕೇಂದ್ರ ಹೆಚ್.ಆರ್.ಡಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಕಾನೂನು ವಿದ್ಯಾರ್ಥಿನಿ ದೀಪಿಕಾ ಮರಳೂರು ಮಾತನಾಡಿ, “ಕಷ್ಟಪಟ್ಟು ಪರೀಕ್ಷೆ ಬರೆದು ವೈದ್ಯರಾಗಿ ರೋಗಿಗಳ ಸೇವೆ ಮಾಡುವ ಬದಲು, ವಾಮಮಾರ್ಗದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಪ್ರಶ್ನೆಪತ್ರಿಕೆ ಖರೀದಿಸಿ ವೈದ್ಯನಾಗುವ ವ್ಯಕ್ತಿಯಿಂದ ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯ. ಈ ವಿಚಾರದಲ್ಲಿ ಸರ್ಕಾರಕ್ಕೆ ಮಾತನಾಡಲು ನೈತಿಕತೆಯೇ ಇಲ್ಲ. ಕೂಡಲೇ ಶಿಕ್ಷಣ ಮಂತ್ರಿಗಳು ರಾಜೀನಾಮೆ ನೀಡಬೇಕು. ಮರು ಪರೀಕ್ಷೆ ನಡೆಸುವ ಮೂಲಕ ನೊಂದು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು” ಎಂದು ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ಮದೀಹ, ಮಹಮದ್ ಖಲೀಲ್ ಖಾನ್, ಮಹಮದ್ ಜಲೀಲ್, ಅಸಾದುಲ್ಲಾಖಾನ್, ಹಮೀನ, ತಮನ್ನಾ, ಮಸಿಹಾ, ಇಲ್ಲಾಮ್ ಮತ್ತಿತರರು ಇದ್ದರು.