ಉತ್ತರಪ್ರದೇಶ: ಗುಂಪು ಹತ್ಯೆಗೊಳಗಾದ ಯುವಕನ ವಿರುದ್ಧವೇ 11 ದಿನಗಳ ನಂತರ ಎಫ್‍ಐಆರ್

0
436

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರ ಪ್ರದೇಶದ ಅಲಿಗಢ ನಗರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹಿಂದೂಗಳ ಗುಂಪೊಂದು ಹತ್ಯೆಗೈದ ಹನ್ನೊಂದು ದಿನಗಳ ನಂತರ, ದರೋಡೆ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೃತನ ಸಹಿತ ಆತನ ಸಹೋದರ ಮತ್ತು ಇತರ ಐವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದು ವಿವಾದ ಸೃಷ್ಟಿಯಾಗಿದೆ.

ಗುಂಪಿನಿಂದ ಹತ್ಯೆಯಾದ ಫರೀದ್ ಮತ್ತು ಇತರ ಆರು ಮುಸ್ಲಿಂ ಪುರುಷರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 395 ಅಡಿಯಲ್ಲಿ ಎಫ್‍ಐಆರ್ ಅನ್ನು ಅಲಿಗಡ ಪೊಲೀಸರು ದಾಖಲಿಸಿದ್ದಾರೆ.

ಲಕ್ಷ್ಮಿ ಮಿತ್ತಲ್ ಎಂಬ ಮಹಿಳೆ ಮೃತ ಫರೀದ್ ಮತ್ತು ಇತರರು ಸೇರಿ ತನ್ನ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೋಚಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೆಟ್ಟಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಸ್ಪಿ ರಾಕೇಶ್ ಸಿಸೋಡಿಯಾ, ಮಹಿಳೆಯ ದೂರಿನ ಆಧಾರದ ಮೇಲೆ, ಗುಂಪೊಂದು ಥಳಿಸಿ ಸಾವನ್ನಪ್ಪಿದ ಫರೀದ್ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಆದರೆ ಇದು ದರೋಡೆ ಯತ್ನ ಅಲ್ಲ, ಕೋಮು ಉದ್ದೇಶದಿಂದ ಫರೀದ್‍ನನ್ನು ಜನರ ಗುಂಪು ಹತ್ಯೆ ಮಾಡಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ವರದಿಯಲ್ಲಿ ಹೀಗೆ ವಿವರಿಸಲಾಗಿದೆ.
ಜೂನ್ 29 ರಂದು ಬಿಡುಗಡೆಯಾದ ವರದಿಯಲ್ಲಿ, ಜೂನ್ 18 ರಂದು ಮೊಹಮ್ಮದ್ ಫರೀದ್ ತನ್ನ ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದನು, ಮಾಮು ಭಂಜಾ ಪ್ರದೇಶದ ಬೈ-ಲೇನ್ ಬಳಿ ಸ್ಥಳೀಯರ ಗುಂಪೊಂದು ಅವರನ್ನು ಎದುರುಗೊಂಡಿದೆ. ಆತನನ್ನು ಮೊದಲು ಮುಸ್ಲಿಂ ಎಂದು ಗುರುತಿಸಲಾಯಿತು ಮತ್ತು ಕೊಲ್ಲುವ ಉದ್ದೇಶದಿಂದ ದಾಳಿ ನಡೆಸಲಾಯಿತು ಎಂದು ವರದಿ ಹೇಳುತ್ತದೆ.

ಗುಂಪಿನ ಥಳಿತಕ್ಕೊಳಗಾಗಿ ಮಾರಕವಾಗಿ ಗಾಯಗೊಂಡಿದ್ದ ಫರೀದ್‍ನನ್ನು ಮುಲ್ಖಾನ್ ಸಿಂಗ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ಪಲಿಸದೆ ಸಾವನ್ನಪ್ಪಿದ್ದಾನೆ.

ಫರೀದ್‍ಗೆ ಲಾಠಿ ಏಟಿನ 22 ಗಾಯಗಳಾಗಿದೆ. ಮೂರು ಪಕ್ಕೆಲುಬುಗಳು ಮುರಿದಿವೆ. ಶ್ವಾಸಕೋಶ ಮತ್ತು ತಲೆ ಬುರುಡೆ ಬಿರುಕು ಬಿಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ. ಫರೀದ್‍ರ ಕುಟುಂಬವನ್ನು ಸ್ಥಳೀಯ ಶಾಸಕರಾಗಲಿ ಬಿಜೆಪಿ ನಾಯಕರಾಗಲಿ ಭೇಟಿಯಾಗಿಲ್ಲ ಎಂದು ಕುಟುಂಬ ತಿಳಿಸಿದೆ.