ಮುಹಮ್ಮದ್ ಸಿರಾಜ್ ನ ‘ಅಲ್ಲಾಹ್’ ಗೆ ವಿರೋಧ ಏಕೆ?

0
851

ಸನ್ಮಾರ್ಗ ಸಂಪಾದಕೀಯ

ಭಾರತದಲ್ಲಿ ಮುಸ್ಲಿಮ್ ದ್ವೇಷ ಎಷ್ಟು ಆಳವಾಗಿದೆ ಎಂಬುದಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮುಹಮ್ಮದ್ ಸಿರಾಜ್ ಒಂದೊಳ್ಳೆಯ  ಉದಾಹರಣೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿರುವಾಗ ಕೆಲವರಿಗೆ ಸಿರಾಜ್‌ನಲ್ಲಿ ಇಸ್ಲಾಮ್  ಕಾಣಿಸಿದೆ. ವಿಶ್ವಕಪ್ಪನ್ನು ಎತ್ತಿ ಹಿಡಿದ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಾಜ್, Thank you Almighty Allah ಎಂದು ಬರಕೊಂಡಿದ್ದರು. ಇದನ್ನೇ ಅಪರಾಧವಾಗಿ ಕಂಡಿರುವ ಅನೇಕರು ಸಿರಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು  ಭಾರತೀಯ ತಂಡದ ಗೆಲುವೇ ಹೊರತು ಅಲ್ಲಾಹನದ್ದಲ್ಲ’ ಎಂದು ಓರ್ವ ಬರೆದರೆ, ‘ಅಲ್ಲಾಹನಿಂದ ಇದು ಸಾಧ್ಯ ಎಂದಾಗಿದ್ದರೆ  ಪಾಕಿಸ್ತಾನ ವಿಶ್ವಕಪ್ ಗೆಲ್ಲುತ್ತಿತ್ತೇ ಹೊರತು ಭಾರತವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ‘ಭಾರತ ವಿಶ್ವಕಪ್ ಗೆದ್ದಿರೋದಕ್ಕೆ ಅಲ್ಲಾಹನೂ  ಕಾರಣವಲ್ಲ, ಮುಸ್ಲಿಮ್ ಆಟಗಾರನೂ ಕಾರಣವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ಇಂಥ ದ್ವೇಷಪೂರಿತ ಇನ್ನಷ್ಟು ಪ್ರತಿಕ್ರಿಯೆಗಳು ಸಿರಾಜ್  ಇನ್‌ಸ್ಟಾಗ್ರಾಮ್ ನಲ್ಲಿದೆ..  ನಿಜವಾಗಿ,

ಅತೀವ ಆನಂದದ ವೇಳೆ ವ್ಯಕ್ತಪಡಿಸುವ ಭಾವನೆಗಳನ್ನು ಸನ್ನಿವೇಶದಿಂದ ಬೇರ್ಪಡಿಸಿ ಓದುವುದೇ ತಪ್ಪು. ಗೆದ್ದ ಖುಷಿಯಲ್ಲಿದ್ದ ಸಿರಾಜ್ ದೇವನನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಭಾಷೆಯಲ್ಲಿ ದೇವನನ್ನು ಅಲ್ಲಾಹ್ ಅನ್ನುತ್ತಾರೆ. ಹಾಗೆಯೇ, ವಿರಾಟ್ ಕೊಹ್ಲಿ ದೇವನನ್ನು ಗಾಡ್  ಅನ್ನುತ್ತಾರೆ. ಅದು ಅವರ ಭಾಷೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ವಿರಾಟ್ ಕೋಹ್ಲಿ ತನ್ನ ಸಂತಸವನ್ನು ವ್ಯಕ್ತಪಡಿಸಿರುವುದು ಹೀಗೆ:

This was my last T20 World Cup; this is exactly what we wanted to achieve. One day you feel like you can’t get a run, and this happens, God is great.

ಕೊಹ್ಲಿ ಮತ್ತು ಸಿರಾಜ್ ಇಬ್ಬರೂ ತಮ್ಮ ತಂಡದ ಸಾಧನೆಗಾಗಿ ದೇವನನ್ನು ಸ್ಮರಿಸಿದ್ದಾರೆ. ಆದರೆ ಯಾರೂ ಕೊಹ್ಲಿಯನ್ನು ಟ್ರೋಲ್ ಮಾಡಿಲ್ಲ.  ‘ಫೈನಲ್ ಪಂದ್ಯದಲ್ಲಿ 76 ರನ್ ಮಾಡಿರುವುದು ಕೊಹ್ಲಿ, ಹೀಗಿರುವಾಗ, ದೇವನೇಕೆ ದೊಡ್ಡವನಾಗಬೇಕು, ಆಡಿದ್ದು ದೇವನಾ..’ ಎಂದು ಯಾರೂ  ಪ್ರಶ್ನಿಸಿಲ್ಲ. ಆದರೆ ಸಿರಾಜ್ ಅದನ್ನೇ ತನ್ನ ಭಾಷೆಯಲ್ಲಿ ಹೇಳಿದಾಗ ಅದು ಮಹಾ ಅಪರಾಧವಾಗುತ್ತದೆ. ಮಾತ್ರವಲ್ಲ, ದೇವರು ಒಂದುವೇಳೆ ಗೆಲ್ಲಿಸುವುದಾದರೆ, ಪಾಕಿಸ್ತಾನವನ್ನು ಗೆಲ್ಲಿಸಬೇಕೇ ಹೊರತು ಭಾರತವನ್ನಲ್ಲ ಎಂಬ ಅತೀ ಕಳಪೆ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುತ್ತಾರೆ. ಅಲ್ಲಾಹ್  ಎಂದರೆ ಮುಸ್ಲಿಮರ ದೇವ ಮತ್ತು ಆತ ಮುಸ್ಲಿಮ್ ಪಕ್ಷಪಾತಿ ಎಂಬ ಅವರ ಅಪಕ್ವ ಆಲೋಚನೆಯೇ ಈ ರೀತಿಯ ಪ್ರತಿಕ್ರಿಯೆಗೆ ಮೂಲ  ಕಾರಣ.

ಈ ಬಾರಿ ಸಂಸತ್ ಸದಸ್ಯರ ಪ್ರಮಾಣ ವಚನದ ವೇಳೆ ಪ್ರಮುಖ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರು ‘ಈಶ್ವರನ’ ಹೆಸರಲ್ಲಿ ಪ್ರತಿಜ್ಞೆ  ಸ್ವೀಕರಿಸಿದರು. ಹಾಗಂತ, ಯೂಸುಫ್ ಪಠಾಣ್ ಹಿಂದೂ ಅಲ್ಲ. ಅವರ ತಂದೆ ಓರ್ವ ಧರ್ಮಗುರು. ಧೋನಿ ನೇತೃತ್ವದ ತಂಡ 2007ರಲ್ಲಿ  ಟಿ20 ವಿಶ್ವಕಪ್ ಗೆದ್ದಾಗ ಅದರ ಭಾಗವಾಗಿದ್ದವರು ಇದೇ ಯೂಸುಫ್ ಪಠಾಣ್. ಧಾರ್ಮಿಕ ಕುಟುಂಬದಿಂದ  ಬಂದ ಮತ್ತು ಧರ್ಮವನ್ನು  ನಿಷ್ಠೆಯಿಂದ ಅನುಸರಿಸುವ ಯೂಸುಫ್ ಪಠಾಣ್, ಅಲ್ಲಾಹನನ್ನು ಈಶ್ವರ್ ಅಂದರು. ಸಿರಾಜ್ ನೇರವಾಗಿಯೇ ಅಲ್ಲಾಹ್ ಅಂದರು. ಎರಡರ  ಅರ್ಥವೂ ಭಿನ್ನವಾಗಿಲ್ಲ. ಅಲ್ಲದೆ, ಅಲ್ಲಾಹನನ್ನು ಈಶ್ವರ್ ಎಂದ ಯೂಸುಫ್ ಪಠಾಣ್‌ರನ್ನೂ ಮುಸ್ಲಿಮರು ಟೀಕಿಸಿಲ್ಲ, ಸಿರಾಜ್‌ನನ್ನೂ ಟೀಕಿಸಿಲ್ಲ.  ಯಾಕೆಂದರೆ, ಅಲ್ಲಾಹ್ ಎಂಬ ಪದದ ಅರ್ಥ ಏನು ಅನ್ನುವುದು ಅವರಿಗೆ ಗೊತ್ತಿದೆ. ಸರ್ವಶಕ್ತ, ಸೃಷ್ಟಿಕರ್ತ, ದೇವ ಎಂಬ ಅರ್ಥದಲ್ಲಿ  ಮುಸ್ಲಿಮರು ಅಲ್ಲಾಹ್ ಎಂಬ ಪದ ಬಳಸುತ್ತಾರೆ. ಅಲ್ಲಾಹ್ ಎಂದರೆ, ಮುಸ್ಲಿಮರ ದೇವ ಮತ್ತು ಈಶ್ವರ್ ಅಂದರೆ ಹಿಂದೂಗಳ ದೇವ ಎಂಬ  ಅರ್ಥ ಇಲ್ಲವೇ ಇಲ್ಲ. ಹಾಗಂತ, ಸಿರಾಜ್‌ನನ್ನು ಟೀಕಿಸಿದವರಿಗೆ ಈ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಈ ಟೀಕೆ ಈಗಾಗಲೇ ಈ ದೇಶದಲ್ಲಿ ಬೆಂಕಿ ಕೊಟ್ಟು ಹೊತ್ತಿಸಿ ಬಿಡಲಾಗಿರುವ ಮುಸ್ಲಿಮ್ ದ್ವೇಷಭಾವದ ಫಲಿತಾಂಶ ಎಂದು ಹೇಳುವುದೇ ಹೆಚ್ಚು ಸರಿ. ಯಾಕೆಂದರೆ,

ಈ ಬಗೆಯ ದ್ವೇಷಭಾವ ವ್ಯಕ್ತವಾಗಿರುವುದು ಇದೇ ಮೊದಲಲ್ಲ. 2021 ಅಕ್ಟೋಬರ್‌ನಲ್ಲೂ ಇಂಥದ್ದೇ  ಮುಸ್ಲಿಮ್ ದ್ವೇಷ ವ್ಯಕ್ತವಾಗಿತ್ತು. ಆಗ  ನಿಂದನೆಗೆ ಗುರಿಯಾದದ್ದು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ  ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಶಮಿಯ ಬೌಲಿಂಗ್ ಉತ್ತಮವಾಗಿರಲಿಲ್ಲ. ಪಾಕ್ ತಂಡ ಹತ್ತು ವಿಕೆಟ್‌ಗಳಿಂದ ಆ ಪಂದ್ಯವನ್ನು  ಗೆದ್ದುಕೊಂಡಿತ್ತು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶಮಿಯನ್ನು ತೀವ್ರವಾಗಿ ನಿಂದಿಸಲಾಯಿತು. ದ್ರೋಹಿ, ಪಾಕ್ ಬೆಂಬಲಿಗ, ಮ್ಯಾಚ್  ಫಿಕ್ಸಿಂಗ್ ಮಾಡಿದವ ಎಂದೆಲ್ಲಾ ಜರೆಯಲಾಯಿತು. ಹಾಗಂತ, ಆ ಪಂದ್ಯ ಸೋಲುವುದಕ್ಕೆ ಶಮಿ ಒಬ್ಬರೇ ಕಾರಣವಾಗಿರಲಿಲ್ಲ. ಬ್ಯಾಟುಗಾರರೂ  ಕಾರಣವಾಗಿದ್ದರು. ಇತರ ಬೌಲರ್‌ಗಳೂ ಕಾರಣವಾಗಿದ್ದರು. ಆದರೆ, ಅವೆಲ್ಲವನ್ನೂ ಅಡಗಿಸಿ ದುಬಾರಿ ಒಂದು ಓವರನ್ನೇ ಕಟಕಟೆಯಲ್ಲಿ ನಿಲ್ಲಿಸಿದುದೇಕೆ ಎಂಬ ಪ್ರಶ್ನೆಗೆ ಉತ್ತರ ಬೇರೇನೂ ಅಲ್ಲ- ಮುಸ್ಲಿಮ್ ದ್ವೇಷ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಆಳವಾಗಿದೆ. ರಾಜಕೀಯ ಕಾರಣಕ್ಕಾಗಿ ಮಣ್ಣು, ನೀರು, ಗೊಬ್ಬರ ಹಾಕಿ ಬೆಳೆಸಲಾದ ಈ ದ್ವೇಷವೆಂಬ ಸಸಿ  ಇವತ್ತು ಬೆಳೆದು ಹೆಮ್ಮರವಾಗಿದೆ. ಪ್ರತಿಯೊಂದರಲ್ಲೂ ಮುಸ್ಲಿಮ್ ದ್ವೇಷಕ್ಕೆ ಕಾರಣವನ್ನು ಹುಡುಕುವ ಅಪಾಯಕಾರಿ ಗುಂಪು ತಯಾರಾಗಿದೆ.  ಅಂದಹಾಗೆ, ಇಂಥ ಗುಂಪಿನಲ್ಲಿರುವವರ ಸಂಖ್ಯೆ ಸಣ್ಣದು ಎಂದು ಹೇಳಿ ನಮಗೆ ತಿರಸ್ಕರಿಸಬಹುದು. ಆದರೆ, ಈ ಸಣ್ಣ ಗುಂಪು ಸಮಾಜದ  ಮೇಲೆ ಬೀರುತ್ತಿರುವ ಪರಿಣಾಮಗಳು ಸಣ್ಣದಲ್ಲ ಮತ್ತು ಇಂಥವರು ತೀರಾ ಜನಸಾಮಾನ್ಯರೂ ಅಲ್ಲ. ಸಿರಾಜ್ ವಿರುದ್ಧ ವೆರಿಫೈಡ್  ಖಾತೆಗಳಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದೇ ಈ ಗುಂಪಿನ ಆಳ-ಅಗಲವನ್ನು ತಿಳಿಸುತ್ತದೆ. ಇಂಥ ಗುಂಪಿನ ಸಂಖ್ಯೆ ಎಷ್ಟೇ ಸಣ್ಣದಿರಲಿ,  ಅದು ತನ್ನ ದ್ವೇಷ ಭಾವವನ್ನು ಜನಸಾಮಾನ್ಯರ ಬಳಿಗೂ ತಲುಪಿಸುವಷ್ಟು ಪ್ರಭಾವಶಾಲಿಯಾಗಿದೆ. ದ್ವೇಷಕ್ಕೆ ಪೂರಕವಾದ ಏನೂ ಇಲ್ಲದಿದ್ದರೂ  ಅನಾವಶ್ಯಕವಾಗಿ ಅಂಥದ್ದೊಂದು  ಭಾವವನ್ನು ಸೃಷ್ಟಿಸಿ ಹಂಚುವುದು ಇಂಥ ಗುಂಪಿನ ಪೂರ್ಣಕಾಲಿಕ ಉದ್ಯೋಗ. ಮುಸ್ಲಿಮ್ ಜನಸಾಮಾ ನ್ಯರಿಂದ ಹಿಡಿದು ಸಿನಿಮಾ ರಂಗ, ಕ್ರೀಡಾ ರಂಗ, ಕಲಾರಂಗ, ಅಧಿಕಾರಿ ವರ್ಗ ಸಹಿತ ಎಲ್ಲರನ್ನೂ ಹಿಂದೂ ವಿರೋಧಿಗಳಂತೆ ಅಥವಾ  ಕರ್ಮಠರಂತೆ ಚಿತ್ರಿಸುವುದನ್ನು ಈ ಗುಂಪು ಮಾಡುತ್ತಾ ಬರುತ್ತಿದೆ. ಮಾತ್ರವಲ್ಲ, ಮುಸ್ಲಿಮರ ಜೊತೆ ಸ್ನೇಹಮಯ ಸಂಬಂಧವನ್ನು ಹೊಂದಿರುವ  ಮತ್ತು ಮುಸ್ಲಿಮ್ ದ್ವೇಷಭಾವವನ್ನು ಪ್ರಶ್ನಿಸುವ ಹಿಂದೂಗಳನ್ನೂ ಈ ಗುಂಪು ಟ್ರೋಲ್ ಮಾಡುತ್ತಿದೆ. ಈ ಗುಂಪಿಗೆ ಆಯಕಟ್ಟಿನ ಜಾಗದಲ್ಲಿರುವವರ ಬೆಂಬಲವೂ ಇದೆ. ರಾಜಕೀಯ ಆಶ್ರಯವೂ ಸಿಗುತ್ತಿದೆ. ಆದ್ದರಿಂದ,

ಗುಂಪು  ಸಣ್ಣದಾಗಿದ್ದರೂ ಅದು ಹುಟ್ಟು ಹಾಕುವ ಕಲ್ಪಿತ ಬರಹಗಳು ಮತ್ತು ಪ್ರತಿಕ್ರಿಯೆಗಳು ತಳಮಟ್ಟದ ಜನಸಾಮಾನ್ಯರನ್ನು ತಲುಪಬಲ್ಲಷ್ಟು  ಶಕ್ತಿಶಾಲಿಯಾಗಿದೆ. ಈ ಕಾರಣದಿಂದಲೇ ಸಿರಾಜ್‌ರ ವಿರುದ್ಧ ವ್ಯಕ್ತವಾಗಿರುವ ದ್ವೇಷಭಾವದ ಪ್ರತಿಕ್ರಿಯೆಗಳು ಮಹತ್ವ ಪಡೆಯುತ್ತವೆ. 11 ಮಂದಿಯ  ಸಾಂಘಿಕ ಆಟವಾಗಿ ಗುರುತಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಒಬ್ಬ ಮುಸ್ಲಿಮನ ಒಂದು ಬಾರಿಯ ಕಳಪೆ ಪ್ರದರ್ಶನವನ್ನು ಹೆಕ್ಕಿ ಜರೆಯುವುದೆಂದರೆ,  ಅದಕ್ಕೆ ಆಟದ ಮೇಲಿನ ಪ್ರೀತಿ ಕಾರಣ ಎಂದು ಹೇಳುವುದಕ್ಕಿಂತ ಆಟಗಾರನ ಧರ್ಮದ ಮೇಲಿನ ದ್ವೇಷವೇ ಕಾರಣ ಅನ್ನುವುದೇ ಸರಿ. ಇದಕ್ಕೆ  ಓರ್ವ ಸಿರಾಜ್ ಮಾತ್ರ ಉದಾಹರಣೆಯಲ್ಲ. ಮುಹಮ್ಮದ್ ಶಮಿಯನ್ನೂ ಹೀಗೆಯೇ ನಡೆಸಿಕೊಳ್ಳಲಾಗಿದೆ. ಮಾತ್ರವಲ್ಲ, ದೇಶದಾದ್ಯಂತ  ಮುಸ್ಲಿಮರ ಮೇಲೆ ಆಗುತ್ತಿರುವ ಅನ್ಯಾಯ-ದೌರ್ಜನ್ಯ ಮತ್ತು ಸುಳ್ಳು ಪ್ರಚಾರಗಳಲ್ಲೂ ಇದು ವ್ಯಕ್ತವಾಗುತ್ತಿದೆ. ನಿಜವಾಗಿ,

ಸಮಸ್ಯೆ ಸಿರಾಜ್‌ನ ಅಲ್ಲಾಹನದ್ದಲ್ಲ. ಈ ಅಲ್ಲಾಹನನ್ನು ದ್ವೇಷಿಸುತ್ತಿರುವ ನಿರ್ದಿಷ್ಟ ಮನಸ್ಥಿತಿಯದ್ದು. ಅಲ್ಲಾಹ್, ಈಶ್ವರ್, ಗಾಡ್ ಎಂಬುದೆಲ್ಲಾ  ದೇವನನ್ನು ಸಂಬೋಧಿಸುವ ವಿವಿಧ ಪದಗಳು ಎಂಬುದನ್ನು ಈ ಗುಂಪಿಗೆ ತಿಳಿಸಿಕೊಡಬೇಕಾದ ಅಗತ್ಯವೂ ಇಲ್ಲ. ಯಾಕೆಂದರೆ, ಗೊತ್ತಿದ್ದೇ  ಈ  ಗುಂಪು ಧರ್ಮ ದ್ವೇಷಕ್ಕೆ ಇಳಿದಿದೆ. ಒಂದುವೇಳೆ, ಅಲ್ಲಾಹ್ ಎಂಬ ಪದದ ಬದಲು ಈಶ್ವರ್ ಎಂದು ಸಿರಾಜ್ ಬರೆದುಕೊಂಡಿರುತ್ತಿದ್ದರೆ ಇದೇ  ಗುಂಪು ಸಿರಾಜ್‌ನನ್ನು ಹಾಡಿ ಹೊಗಳುತ್ತಿತ್ತು ಎಂಬುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿಲ್ಲ.