ಈ ವರ್ಷ 5, 8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲ

0
313

ಸನ್ಮಾರ್ಗ ವಾರ್ತೆ

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಹಾಗೂ 9ನೇ ತರಗತಿ ಮಕ್ಕಳಿಗೆ ಈ ವರ್ಷ ಪಬ್ಲಿಕ್‌ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ.

ಬೋರ್ಡ್‌ ಪರೀಕ್ಷೆಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಈ ಹಿಂದೆ ಇದ್ದಂತೆ ಎಲ್ಲ ತರಗತಿಗಳಿಗೂ ಮೌಲ್ಯಾಂಕನ ಮುಂದುವರೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ಬೋರ್ಡ್‌ ಪರೀಕ್ಷೆ ಈ ಸಂಬಂಧ ಎಲ್ಲ ಶಾಲೆಗಳಿಗೂ ನಿರ್ದೇಶನ ನೀಡಿರುವ ಇಲಾಖೆ, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು 1ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಭಾಗ 1 ಮತ್ತು ಭಾಗ 2ರ ಆಧಾರದಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಾಂಕನ ಪೂರ್ಣಗೊಳಿಸಬೇಕು.

ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಮೌಲ್ಯಾಂಕನ ಅಂಕಗಳು ಮತ್ತು ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕು. 10ನೇ ತರಗತಿಗೆ ಮಾತ್ರ ಆಂತರಿಕ ಮೌಲ್ಯಾಂಕನ ಅಂಕಗಳು ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ನಡೆಸುವ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ಫಲಿತಾಂಶವಾಗಿ ಪ್ರಕಟಿಸಬೇಕೆಂದು ಸೂಚಿಸಿದೆ.

ಶಾಲಾ ಬ್ಯಾಗ್‌ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಪಠ್ಯ ಪುಸ್ತಕಗಳನ್ನು ಭಾಗ-1 ಮತ್ತು ಭಾಗ-2ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಭಾಗ-1ರ ಪಠ್ಯ ಶೇ.50 ಹಾಗೂ ಭಾಗ-2ರ ಪಠ್ಯ ಶೇ.50 ಒಟ್ಟು ಸೇರಿ ಶೇ.100ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದೆ ಇದನ್ನು ಅನುಸರಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.