ಡೆಂಗಿ ಹರುಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿದೆ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

0
171

ಸನ್ಮಾರ್ಗ ವಾರ್ತೆ

ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜ, ಆದರೆ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೆಂಗಿ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಪ್ರತಿನಿತ್ಯ ನಿಗಾ ವಹಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.‌ ಯಾವುದೇ ಬೆಡ್ ಅಥಾವಾ ಔಷಧಿಯ ಕೊರತೆಯಿಲ್ಲ.‌ ಡೆಂಗಿ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯವರೊಂದಿಗೆ ಚರ್ಚೆ ನಡೆಸಿದ್ದು, ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಅಗತ್ಯವಿಲ್ಲ ಎಂದು ಸಲಹಾ ಸಮಿತಿಯವರು ತಿಳಿಸಿದ್ದಾರೆ ಎಂದರು.‌

ಇನ್ನು ಎರಡು ತಿಂಗಳು ಡೆಂಗಿ ಹಾವಳಿ ಇರುತ್ತದೆ. ಜನರು ಹೆಚ್ಚು ಜಾಗೃತರಾಗಬೇಕು. ಮನೆಯ ಸುತ್ತಮುತ್ತಲು ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕೂಡ ಜನರಲ್ಲಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.‌ ಪ್ರತಿ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ನಾಶ ಪಡಿಸುವ ಕಾರ್ಯ ನಡೆಸುತ್ತಿದೆ.

ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆದು, ಟೆಸ್ಟಿಂಗ್ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒ ಗಳಿಗೆ ಸೂಚಿಸಲಾಗಿದೆ. ಔಷಧಿಗಳ ಲಭ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಜನರು ಹೆಚ್ಚು ಜಾಗೃತರಾಗಿ ಡೆಂಗಿ ಹರಡದಂತೆ ಎಚ್ಚರಿಕೆ ವಹಿಸುವುದೇ ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌

ಡೆಂಗಿ ಹರುಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿದೆ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಡೆಂಗಿ ಹೆಚ್ಚಳಕ್ಕೂ, ನಾನು ಮಂಗಳೂರಿನ ಅಂತಾರಾಷ್ಟ್ರೀಯ ಸರ್ಕಾರಿ ಈಜುಕೊಳಕ್ಕೆ ಭೇಟಿ ನೀಡಿ ಈಜಿದ್ದಕ್ಕೂ ಎತ್ತಣ ಸಂಬಂಧ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಯನ್ನ ಪ್ರಶ್ನಿಸಿದರು.

ಮಂಗಳೂರಿನಲ್ಲಿ ನಾನು ಈಜಿದ್ದು ಮಾತ್ರವಲ್ಲ, ಡೆಂಗಿ ಈಡಿಸ್ ಸೊಳ್ಳೆಗಳ ಲಾರ್ವಾ ನಾಶಪಡಿಸುವ ಬೃಹತ್ ಅಭಿಯಾನಕ್ಕೆ ಕೂಡ ಚಾಲನೆ ಕೊಟ್ಟಿದ್ದೇನೆ. ಮನೆ ಮನೆಗೆ ತೆರಳಿ ನೀರು ಶೇಖರಣೆಯಾಗಿರುವ ಸ್ಥಳಗಳನ್ನ ಗುರುತಿಸಿ ಅಲ್ಲಿಯ ನಿವಾಸಿಗಳನ್ನ ಎಚ್ಚರಿಸಿದ್ದೇವೆ. ಎರಡು ದಿನ ಪ್ರವಾಸದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.‌ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದ್ದೇನೆ.

ಹೀಗಿರುವಾಗ ಬಿಜೆಪಿ ನಾನು ಈಜುಕೊಳ್ಳದಲ್ಲಿ ಈಜಿದ್ದನ್ನೇ ಪ್ರಶ್ನೆ ಮಾಡಿದೆ‌. ಬಿಜೆಪಿಗರಿಗೆ ಈಜು ಒಂದು ರೀತಿಯಲ್ಲಿ ಮೋಜು ಮಸ್ತಿಯಾಗಿರಬಹುದು‌. ಆದರೆ ನನಗಲ್ಲ. ನಾನು ಮಂಗಳೂರಿನ ಸರ್ಕಾರಿ ಈಜುಕೊಳಕ್ಕೆ ಭೇಟಿ ನೀಡಿದ್ದೇನೆ ಹೊರೆತು ಬಿಜೆಪಿಯವರ ರೀತಿ ಯಾವುದೋ ರೆಸಾರ್ಟ್ ಗೆ ಹೋಗಿಲ್ಲ.‌ ಅದು ಬೆಳಗ್ಗೆ 6 ಗಂಟೆಗೆ ಎದ್ದು, ಸಮಯ ಬಿಡುವು ಮಾಡಿಕೊಂಡು ನಾನು ಈಜುಕೊಳಕ್ಕೆ ಹೋಗಿದ್ದೆ. ಏಕೆಂದರೆ ಈಜುಕೊಳ್ಳಕ್ಕೆ ಭೇಟಿ ನೀಡುವುದು ನನ್ನ ಮಂಗಳೂರು ಪ್ರವಾಸದ ಒಂದು ಭಾಗವಾಗಿತ್ತು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.‌