ಹಸ್ತಲಾಘವ ಮತ್ತು ಆಲಿಂಗನ

0
359

ಸನ್ಮಾರ್ಗ ವಾರ್ತೆ

ಸಂಗ್ರಹ: ಎನ್.ಎಂ. ಪಡೀಲ್

ಬರ‍್ರಾ ಇಬ್ನು ಆಸಿಬ್‌ರಿಂದ ವರದಿಯಾಗಿದೆ. ಅಲ್ಲಾಹನ ಸಂದೇಶವಾಹಕರು ಹೇಳಿದರು: “ಇಬ್ಬರು ಮುಸ್ಲಿಮರು ಪರಸ್ಪರ ಹಸ್ತಲಾಘವ ಮಾಡಿದರೆ ಅವರು ತೆರಳುವ ಮೊದಲೇ ಅವರ ಪಾಪಗಳು ಕ್ಷಮಿಸಲ್ಪಡುವುದು.” (ಅಬೂದಾವೂದ್)

ಸ್ನೇಹ, ಪ್ರೀತಿಯನ್ನು ಹೆಚ್ಚಿಸುವ ಎಲ್ಲಾ ಕಾರ್ಯಗಳನ್ನು ಇಸ್ಲಾಮ್ ಪ್ರೋತ್ಸಾ ಹಿಸುತ್ತದೆ. ಪರಸ್ಪರ ಭೇಟಿಯಾದಾಗ ಸಲಾಂ ಹೇಳುವುದು, ಹಸ್ತಲಾಘವ ಮಾಡುವುದು, ಪ್ರಶಂಸಿಸುವುದು, ಉಭಯ ಕುಶಲೋಪರಿ ನಡೆಸುವುದು ಪುಣ್ಯದಾಯಕವಾಗಿದೆ.

ಇದು ಪ್ರೀತಿ ಮತ್ತು ಸಹೋದರತೆಯ ಪ್ರತೀಕವಾಗಿದೆ. ಮನಸ್ಸಿನ ಹಗೆ, ಬೇಸರ ತೊಲಗುವುದು. ಹೃದಯದೊಳಗಿನ ಸ್ನೇಹವನ್ನು ಪ್ರಕಟಿಸಬೇಕೆಂದು ಪ್ರವಾದಿ(ಸ) ತಿಳಿಸಿರುವರು. ಮೇಲಿನ ಪ್ರವಾದಿ ವಚನದಲ್ಲಿ ಈ ವಿಷಯವನ್ನೇ ತಿಳಿಸಲಾಗಿದೆ.

ಪ್ರವಾದಿ ಸಂಗಾತಿಗಳು ಪರಸ್ಪರ ಹಸ್ತಲಾಘವ ಮಾಡುತ್ತಾ ಆಲಿಂಗಿಸುತ್ತಾ ಇದ್ದರು. ಖತಾದ(ರ) ಹೇಳಿರುವರು, ಅನಸ್ ಇಬ್ನು ಮಾಲಿಕ್(ರ)ರೊಂದಿಗೆ ನಾನು ಕೇಳಿದೆನು, “ಅಲ್ಲಾಹನ ಸಂದೇಶವಾಹಕರ ಅನುಯಾಯಿಗಳು ಪರಸ್ಪರ ಹಸ್ತಲಾಘವ ಮಾಡುವ ರೂಢಿಯಿತ್ತೇ? ಅಸನ್(ರ) “ಹೌದು” ಎಂದುತ್ತರಿಸಿದರು.” (ಬುಖಾರಿ)

ಇಮಾಮ್ ನವವಿ ಬರೆದಿರುವರು: “ಪರಸ್ಪರ ಭೇಟಿಯಾದಾಗ ಹಸ್ತಲಾಘವ ಮಾಡುವುದು ಸುನ್ನತ್ತಾಗಿದೆಯೆಂದು ಎಲ್ಲಾ ವಿದ್ವಾಂಸರ ಅಭಿಮತವಾಗಿದೆ.” (ಫತ್ಹುಲ್ ಬಾರಿ)

ಅಬೂದರ್(ರ)ರೊಡನೆ ಓರ್ವರು ಪ್ರಶ್ನಿಸಿದರು: “ಪ್ರವಾದಿ(ಸ) ನಿಮ್ಮನ್ನು ಕಂಡರೆ ಹಸ್ತಲಾಘವ ಮಾಡುತ್ತಿದ್ದರಾ?” ಆಗ ಅವರು ಹೇಳಿದರು, ಒಂದು ದಿನ ಪ್ರವಾದಿವರ್ಯರು(ಸ) ನನ್ನನ್ನು ಕರೆಯಲು ಓರ್ವರನ್ನು ಕಳಿಸಿದ್ದರು. ಆಗ ನಾನು ಮನೆಯಲ್ಲಿರಲಿಲ್ಲ. ನಾನು ಮನೆಗೆ ಹಿಂದಿರುಗಿದಾಗ ವಿಷಯ ತಿಳಿದು ಪ್ರವಾದಿವರ್ಯರನ್ನು(ಸ) ಭೇಟಿಯಾಗಲು ಹೋದೆನು. ಅವರು ಮಂಚದಲ್ಲಿ ಮಲಗಿದ್ದರು. ನನ್ನನ್ನು ಕಂಡ ಕೂಡಲೇ ಎದ್ದು ಆಲಿಂಗಿಸಿದರು. ಆಗ ನನಗಾದ ಸಂತೋಷದಕ್ಕೆ ಪಾರವೇ ಇರಲಿಲ್ಲ.” (ಅಬೂದಾವೂದ್)

ಅವರು ಪ್ರತೀ ಸಲ ಭೇಟಿಯಾದಾಗಲೂ ಹಸ್ತಲಾಘವ ಮಾಡುತ್ತಿದ್ದರು.
ಆಯಿಶಾ(ರ) ಹೇಳಿರುವರು: ಸ್ವಭಾವ, ಹಾವಭಾವ, ಗಾಂಭೀರ್ಯದಲ್ಲಿ ಅಲ್ಲಾಹನ ಸಂದೇಶವಾಹಕರೊಂದಿಗೆ ಸಾಮ್ಯತೆಯಿರುವ ವ್ಯಕ್ತಿಯಾಗಿ ಮಗಳು ಫಾತಿಮಾರಲ್ಲದೆ ಬೇರೆ ಯಾರನ್ನೂ ನಾನು ಕಂಡಿಲ್ಲ. ಅವರು ಹತ್ತಿರ ಬಂದರೆ ಪ್ರವಾದಿ(ಸ) ಎದ್ದು ನಿಂತು ಹಸ್ತಲಾಘವ ಮಾಡಿ ಚುಂಬಿಸಿ ಹತ್ತಿರ ಕೂರಿಸುತ್ತಿದ್ದರು.” (ಅಬೂದಾವೂದ್)

ಹಸ್ತಲಾಘವ ಕುರಿತು ಮಾತ್ರ ಪ್ರವಾದಿ ವಚನವಿರುವುದಲ್ಲ. ಆಲಿಂಗನದ ಬಗ್ಗೆಯೂ ಅನೇಕ ಹದೀಸ್‌ಗಳಿವೆ. ಝೈದ್ ಇಬ್ನು ಹಾರಿಸ್ ಮದೀನಕ್ಕೆ ಆಗಮಿಸಿದಾಗ ಪ್ರವಾದಿ(ಸ) ಅವರನ್ನು ಆಲಿಂಗಿಸಿ ಚುಂಬಿಸಿದ್ದರೆಂದು ಇಮಾಮ್ ತಿರ್ಮಿದಿ ವರದಿ ಮಾಡಿದ್ದಾರೆ.

ಅನಸ್(ರ) ಹೇಳಿರುವರು: “ಸಹಾಬಿಗಳು ಪರಸ್ಪರ ಭೇಟಿಯಾದಾಗ ಹಸ್ತಲಾಘವ ಮಾಡುತ್ತಿದ್ದರು. ಪ್ರಯಾಣ ಮಾಡಿ ಬಂದವರನ್ನು ಆಲಿಂಗಿಸುತ್ತಿದ್ದರು.” (ತ್ವಬ್ರಾನಿ)

ಕುಟುಂಬ ಸೌಹಾರ್ದತೆಯು ಮಾತುಕತೆಗಳಿಗೆ ಮಾತ್ರ ಸೀಮಿತವಾದಂತಹ ಇಂದಿನ ಕಾಲದಲ್ಲಿ ಹಸ್ತಲಾಘವ, ಆಲಿಂಗನ, ಲಾಲಿಸುವುದು ಮುಂತಾದ ಸ್ನೇಹಪೂರಿತ ವರ್ತನೆಯು ಬಹಳ ಪ್ರಾಮುಖ್ಯತೆ ನೀಡಬೇಕು. ಆದರೆ “ನಾನು ಅನ್ಯ ಸ್ತ್ರೀಯರೊಂದಿಗೆ ಹಸ್ತಲಾಘವ ಮಾಡುವುದಿಲ್ಲ” ಎಂದೂ ಪ್ರವಾದಿ(ಸ) ಹೇಳಿರುವರು. (ಅನ್ನಸಾಈ)

ಆಯಿಶಾ(ರ) ಹೇಳಿರುವರು: “ಅಲ್ಲಾಹನಾಣೆ ಪ್ರವಾದಿ(ಸ) ಕೈ ಯಾವ ಪರ ಸ್ತ್ರೀಯರ ಕೈಗಳನ್ನು ಮುಟ್ಟಲಿಲ್ಲ. ಅವರು ಪ್ರವಾದಿಯೊಂದಿಗೆ ಬೈಅತ್ ಮಾಡಿರುವುದು ಕೂಡಾ ಬರೀ ಮಾತಿನಿಂದ ಆಗಿದೆ.” (ಮುಸ್ಲಿಮ್)