ಸೆಬಿ ಅಧ್ಯಕ್ಷೆಯ ವಜಾಕ್ಕೆ ಆಗ್ರಹಿಸಿ ಆಗಸ್ಟ್ 22 ರಂದು ಇಡಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

0
396

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್‍ರನ್ನು ಹುದ್ದೆಯಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮತ್ತು ಆಗಸ್ಟ್ 22ಕ್ಕೆ ಇಡಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಹಿಂಡನ್‍ಬರ್ಗ್ ವರದಿಯ ಹಿನ್ನೆಲೆಯಲ್ಲಿ ಸೆಬಿ ಮುಖ್ಯಸ್ಥೆ ಬುಚ್‍ರ ವಿರುದ್ಧ ಜೆಪಿಸಿ ತನಿಖೆ ಕೂಡ ನಡೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು , ಪಿಸಿಸಿ ಅಧ್ಯಕ್ಷರುಗಳ ಸಭೆ ಕರೆಯಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಹಿಂಡನ್‍ಬರ್ಗ್ ವಿಷಯವನ್ನು ಪ್ರಸ್ತಾಪಿಸಿದರು. ನಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದರು.

ಪ್ರಧಾನಿ ವಂಚನೆಯಲ್ಲಿ ಶಾಮೀಲಾಗಿದ್ದಾರೆ. ಜೆಪಿಸಿಸಿ ತನಿಖೆ ನಡೆಸಿದರೆ ಮಾತ್ರ ಇದು ಬಹಿರಂಗಕ್ಕೆ ಬರುವುದು. ಸೆಬಿ ಅದಾನಿಗೆ ವಿನಾಯಿತ ನೀಡಿದ್ದು ಗಂಭೀರ ವಿಷಯವಾಗಿದೆ ಎಂದು ಕೆಸಿ ವೇಣುಗೋಪಾಲ್ ಹೇಳಿದರು.

ಸೆಬಿ ಭಾರತದ ಶೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಯಾಗಿದೆ. ಇದರ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಅದಾನಿ ಗ್ರೂಪಿನ ವಿದೇಶದಲ್ಲಿರುವ ಗುಪ್ತ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದನ್ನು ಹಿಂಡನ್‍ಬರ್ಗ್ ವರದಿ ಬಹಿರಂಗಪಡಿಸಿದೆ. ಈ ಹಿಂದೆ ತಾವು ಬಹಿರಂಗಕ್ಕೆ ತಂದಿದ್ದ ಅದಾನಿಯ ಶೇರು ಮೋಸದ ಕುರಿತು ವಿವರವಾದ ತನಿಖೆಗೆ ಮುಂದಾಗದಿರುವುದಕ್ಕೆ ಸೆಬಿ ಅಧ್ಯಕ್ಷೆ ಅದಾನಿ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದು ಕಾರಣವಾಗಿದೆ ಎಂದು ಹಿಂಡನ್ ಬರ್ಗ್ ಹೇಳಿದೆ.

ಗೌತಂ ಅದಾನಿಯ ಸಹೋದರ ವಿನೋದ್ ಅದಾನಿಯ ಕಂಪೆನಿಯಲ್ಲಿ ಬುಚ್ ಮತ್ತು ಅವರ ಪತಿ ಹೂಡಿಕೆ ಮಾಡಿದ್ದು ಬರ್ಮುಡ ಮತ್ತು ಮೊರಿಷ್ಯದಲ್ಲಿ ಈ ದಾಖಲೆಯಲ್ಲಿ ಮಾತ್ರ ಈ ಕಂಪೆನಿ ಅಸ್ತಿತ್ವದಲ್ಲಿ ಇದೆ ಮತ್ತು ಇಬ್ಬರೂ 2015ರಲ್ಲಿ ಹೂಡಿಕೆ ಮಾಡಿದ್ದರು ಎಂದು ಹಿಂಡನ್ ಬರ್ಗ್ ಬಹಿರಂಗಪಡಿಸಿದೆ. ಮಾಧಬಿ 2017ರಲ್ಲಿ ಸೆಬಿಯ ಸದಸ್ಯರಾದರು. 2022ರಲ್ಲಿ ಅವರು ಸೆಬಿಯ ಅಧ್ಯಕ್ಷೆಯಾದರು.