ಪ್ರಜೆಗಳ ಸಕಾರಾತ್ಮಕ ಮತ್ತು ಸಹಕಾರಾತ್ಮಕ ಪ್ರೇರಣೆಯಿದ್ದರೆ ದೇಶದಲ್ಲಿ ಪ್ರಗತಿ

0
260

ಸನ್ಮಾರ್ಗ ವಾರ್ತೆ

•ಆಮಿರ್ ಅಶ್ ಅರೀ ಬನ್ನೂರು

ಬ್ರಿಟಿಷ್ ಚಕ್ರಾಧಿಪತ್ಯದಿಂದ ನಿರಾಳತೆಯತ್ತ ಭಾರತೀಯ ಜನಸಾಮಾನ್ಯರ ಬದುಕನ್ನು ದಾಟಿಸಲು ಘಟಿಸಿದ ಸ್ವಾತಂತ್ರ್ಯಕ್ಕೆ ಎಪ್ಪತ್ತೇಳರ ಸಂಭ್ರಮ.1857ರಲ್ಲಿ ಬ್ರಿಟಿಷರ ವಿರುದ್ಧ ದೇಶಪ್ರೇಮದ ಎದೆಯುಬ್ಬಿಸಿ ನಿಂತ ಭಾರತೀಯ ಸೇನಾನಿಗಳಿಂದ ಹಿಡಿದು 1947 ಆಗಸ್ಟ್ 15ರ ಮಧ್ಯರಾತ್ರಿ ಕೆಂಪು ಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವವರೆಗೆ ತಲುಪುವ ಸ್ವಾತಂತ್ರ್ಯ ಸಮರದ ಇತಿಹಾಸವು ಸಂಪತ್ತುಗಳನ್ನು ಒತ್ತೆ ಇಟ್ಟ, ಕುಟುಂಬವನ್ನು ಕಳೆದುಕೊಂಡ, ಜಾತಿ ಧರ್ಮಗಳ ಸೀಮೆಯನ್ನು ಮೀರಿ ಪ್ರಾಣ ತ್ಯಾಗ ಮಾಡಿ ಹೋರಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತದೆ.

ಅವರನ್ನು ಪ್ರತಿಯೊಬ್ಬ ಭಾರತೀಯರು ಪ್ರಾಮಾಣಿಕವಾಗಿ ಸ್ಮರಿಸುವ ಅಥವಾ ನೆನಪಿಸಲೇಬೇಕಾದ ದಿನ.

ವರ್ತಮಾನದ ತಲ್ಲಣಗಳಾದ ಪ್ರಜಾಪ್ರಭುತ್ವದ ಕಗ್ಗೊಲೆ, ಸರ್ವಾಧಿಪತ್ಯ, ನಿರುದ್ಯೋಗ, ಬೆಲೆ ಏರಿಕೆ, ಕೋಮುವಾದ, ಭ್ರಷ್ಟಾಚಾರ, ಎಲ್ಲೆ ಮೀರಿದ ಹಸಿವು ಮತ್ತು ಭಯ ತಾಂಡವಾಡುವ ವಾತಾವರಣದಲ್ಲೂ ಸ್ವಾತಂತ್ರದ ಆಚರಣೆಗೆ ವೇದಿಕೆ ಒದಗಿಸಬೇಕಾಗಿ ಬಂದಿರುವುದು ಕಾಲದ ಅನಿವಾರ್ಯತೆ.‌ 

ದೇಶವು ಬ್ರಿಟಿಷ್ ಆಡಳಿತದ ಪರಿಣಾಮ ಎರಡು ಶತಮಾನಗಳ ಕಾಲ ಧನಾತ್ಮಕ ಶಕ್ತಿಯ ಕಳೆದುಕೊಂಡು ದಣಿದು ಹೋಯಿತು. ಪ್ರಜೆಗಳ ಬದುಕು ದಾರುಣವಾಗಿ ಬಿಟ್ಟಿತು. ದಾರಿ ತೋಚದೆ ಕಂಗಾಲಾದ ಭಾರತೀಯರಿಗೆ ಬಿಳಿಯರ ಗುಲಾಮರಾಗಬೇಕಾದ ಸಂದಿಗ್ಧ ಪರಿಸ್ಥಿತಿಯನ್ನು ಎದುರಾಯಿತು.ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದ ಸ್ವಾತಂತ್ರ್ಯ ಅಥವಾ ಇನ್ನಿತರ ಯಾವುದೇ ಅವಕಾಶಗಳು ಸಿಗಲಿಲ್ಲ.ದಬ್ಬಾಳಿಕೆ,ದೌರ್ಜನ್ಯದ ವಿರುದ್ಧ ಧ್ವನಿಯಾದರನ್ನು ಸೆರೆಮನೆಗೆ ಹಾಕಿ ಹಿಂಸಾತ್ಮಕ ಶಿಕ್ಷೆಗಳಿಗೆ ಗುರಿಪಡಿಸಿದರು. ಸ್ವಾತಂತ್ರ್ಯ ಸೇನಾನಿಗಳ ಪಟ್ಟಿ ತಯಾರಿಸುವಾಗ ನಮ್ಮ ನೆನಪಿನ ಚಾವಡಿಯಲ್ಲಿ ಕಾಣಿಸಿಕೊಳ್ಳುವ ಸಂಖ್ಯೆಗಿಂತ ದೊಡ್ಡದಿದೆ ನಮ್ಮ ಇತಿಹಾಸಕ್ಕೆ ದಕ್ಕದೆ ಹೋದ ಹೋರಟಗಾರರ ಸರದಿ.‌ ಅವರದ್ದು ಎಲ್ಲವನ್ನು ಕಳೆದುಕೊಂಡ ಹೋರಾಟ, ಕೊನೆಯದಾಗಿ‌ ಉಳಿದಿದ್ದ ಪ್ರಾಣ ಕೂಡ. ಆ ಭಾರತೀಯರು ಕಳೆದುಕೊಂಡಿದ್ದೆ ಹೆಚ್ಚು.‌ ಇದನ್ನು ಎದೆತಟ್ಟಿ ಒಪ್ಪಬೇಕು. ಬ್ರಿಟಿಷರನ್ನು ಹೆಣೆಯಲು‌‌ ಸಂಘಟಿತರಾದ ಭಾರತೀಯರ ಸಹಸ್ರಾರು ಸಶಕ್ತ ಹೋರಾಟಗಳು ಹಲವು ತಿರುವುಗಳನ್ನು ಪಡೆದವು. ಏಳು ಬೀಳುಗಳ ನಡೆಯು ಬ್ರಿಟಿಷರ ವಿರುದ್ಧದ ಕಿಚ್ಚು ಆರುತ್ತಿರಲಿಲ್ಲ. ಇವೆಲ್ಲದರ ತರುವಾಯ ನಂತರದ ದಿನಗಳಲ್ಲಿ ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ತೊಳಗಿದರು. 

ಭಾರತವಿಂದು ಜಗತ್ತಿನ ಅತಿ ದೊಡ್ಡ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ. ದೇಶವು ತನ್ನದೇ ನೆಲೆಗಟ್ಟಿನಲ್ಲಿ ನೆಲೆಸಿದೆ. ಮಹತ್ವವಾದಗಳನ್ನು ಕಟ್ಟುಪಾಡುಗಳನ್ನು ಇಟ್ಟುಕೊಂಡಿದೆ. ಅದುವೇ ಭಾರತದ ಸಂವಿಧಾನ.

ಅದರಲ್ಲಿ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾದ ಹಕ್ಕು, ಆಸ್ತಿಯ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರೋಪಾಯದ ಹಕ್ಕನ್ನು ನಾಗರಿಕರ ಅಸಹಾಯಕತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಎಲ್ಲಾತರದ ಸ್ವಾತಂತ್ರ್ಯವನ್ನು ಒದಗಿಸಿದೆ. ಇದನ್ನು ಆಡಳಿತ ವ್ಯವಸ್ಥೆಯೂ ದೇಶದ ಜನರಿಗೆ ನ್ಯಾಯಯುತವಾಗಿ ನೀಡಿದಾಗ ಪ್ರಜೆಗಳು ಸ್ವತಂತ್ರರಾಗುವುದು. 

ಅದೇ ಪಕ್ಷ, ಜನಸಾಮಾನ್ಯರ ಆಹಾರ, ಧರಿಸುವ ಬಟ್ಟೆಗಳ, ಆಚಾರ-ವಿಚಾರಗಳ, ಧಾರ್ಮಿಕ ನಂಬಿಕೆಗಳ ಮೇಲೆ ಬೇಕಾಬಿಟ್ಟಿ ಕಾನೂನುಗಳನ್ನು ತರುವುದು, ಧರ್ಮಗಳ ನೋಡಿ ನಿಯಮಗಳನ್ನು ಹೇರುವುದು ಸ್ವಾತಂತ್ರ್ಯ ಹೊಂದಿರುವ ಭೌಗೋಳಿಕ ವ್ಯವಸ್ಥೆಗೂ, ಅಲ್ಲಿನ ಪ್ರಜೆಗಳಿಗೂ ಸಮಂಜಸವೆನಿಸಲ್ಲ. ಪ್ರಜೆಗಳು ಸ್ವಾತಂತ್ರ್ಯವಿದೆ ಎಂಬ ಮಾತ್ರಕ್ಕೆ ಎನೂ ಮಾಡಬಹುದೆಂದು ಕಟ್ಟುಪಾಡುಗಳನ್ನು ಮೆಟ್ಟಿನಿಂತು ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸರ್ಕಾರ ಅಥವಾ ಸಂವಿಧಾನ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುವುದು. 

ದೇಶದ್ರೋಹವಾಗುವುದು ಪರಿ. ದೇಶದ ಆಡಳಿತ ಮತ್ತು ಪ್ರಜೆಗಳು ಪರಸ್ಪರ ಕಾನೂನುಗಳನ್ನು ಅನುಸರಿಸಿ, ಪಾಲಿಸಿದರೆ ಮಾತ್ರ ದಿಗ್ಗಜರು ತಂದುಕೊಟ್ಟ ಸ್ವಾತಂತ್ರ್ಯದ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ.

ಪ್ರಜೆಗಳ ಪಾಲಿನ ಸ್ವಾತಂತ್ರ್ಯೋತ್ಸವು ಚಾರಿತ್ರಿಕ ನೆನಪುಗಳನ್ನು ಹಂಚಿ ಸಂಭ್ರಮಿಸುವ ಒಂದು ನಿರ್ದಿಷ್ಟ ಸಮಯ ಅಥವಾ ದಿನವಾಗದೆ, ಮೌಡ್ಯಗಳ ಬಂಧನ, ಜಾತಿಗಳ ಬಂಧನ, ಧರ್ಮಗಳ ಬಂಧನ, ಸಾಮಾಜಿಕ ಗೌರವದ ಬಂಧನವನ್ನು ಭೇದಿಸಿ ಬದುಕುವ ಪ್ರಜೆಗೆ ಸ್ವಾತಂತ್ರ್ಯ ಶ್ರೀರಕ್ಷೆಯಾಗಿ ಸಿಗುವ ವರ್ತಮಾನವಾಗಬೇಕಿದೆ.

ಪ್ರಸ್ತುತ ವಿಧ್ಯಾಮಾನದ ಪ್ರಕಾರ ಯಾವುದೇ ರಾಷ್ಟ್ರೀದ ರಕ್ಷಣೆ ಅಲ್ಲಿನ ವಿದ್ಯಾವಂತ ಸಮೂಹದ ಮೇಲೆ ಅವಲಂಬಿತವಾಗಿದೆ. ಆಡಳಿತ ಪಕ್ಷದ ಲೋಪದೋಷಗಳು ಮತ್ತು ಅಪರಾಧಿಗಳ ಬಗ್ಗೆ ಪ್ರಶ್ನಿಸುವ ಪ್ರಜ್ಞಾವಂತಿಕೆ ವಿದ್ಯಾವಂತರದ್ದು. ಬಾಂಗ್ಲಾದೇಶದಲ್ಲಿ ಆಡಳಿತ ರೂಡಿ ಸರಕಾರಕ್ಕೆ ಬಹುಮತ ಮೀರಿ ಇದ್ದರೂ ಜನಾಕ್ರೋಶದ ಎದುರು ಮಂಡಿಯೂರಿದ ಪ್ರಧಾನಿಗಳು ದೇಶದಿಂದ ಓಡಿ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಆಡಳಿತ ವ್ಯವಸ್ಥೆಯಲ್ಲಿ ಪ್ರಧಾನಿ ಅಥವಾ ಅಧಿಕಾರಿಗಳಿಗಿಂತಲೂ ಮುಖ್ಯವಾದ ಪಾತ್ರಧಾರಿಗಳು ಜನಸಾಮಾನ್ಯರಾಗಿದ್ದಾರೆ ಎಂಬುದನ್ನು ಅಲ್ಲಿನ ಜನ ಜಾಗತಿಕ ಮಟ್ಟದಲ್ಲಿ ತೋರಿಸಿಕೊಟ್ಟಿದ್ದಾರೆ.

ಭಾರತದ ಭವಿಷ್ಯದ ಬಗ್ಗೆ ಚಿಂತಿಸುವಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವರ್ತಮಾನದ ಹೋರಾಟಗಾರರಾಗಿದ್ದಾರೆ. ಬ್ರಿಟಿಷರ ಬಂದೂಕು, ಫಿರಂಗಿಗಳು ಸೇರಿದ ಮಾರಕಾಯಧಗಳು ಎದೆ ಸೀಳಿದರೂ, ತರಹೇವಾರು ಸಮಸ್ಯೆಗಳು, ಸಂಕಷ್ಟಗಳು ಎದುರಾದ ವೇಳೆಯಲ್ಲೂ ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡುವ ಸಂಕಲ್ಪದಿಂದ ಹಿಂಜರಿಯದೆ ಹೋರಾಡಿದ ಸೇನಾನಿಗಳು ದೇಶವನ್ನು ಉಳಿಸಲು ಮಾಡಿದ ಪ್ರತಿಜ್ಞೆ ಮತ್ತೊಮ್ಮೆ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದಗಳಿಂದ ಮರುಕಳಿಸಬೇಕು. ಇವರ ಆವಶ್ಯಕತೆ ಕಾಲದ ಬೇಡಿಕೆಯಾಗಿದೆ. ಪ್ರಜೆಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳದೆ ಹೋದರೆ ದೇಶದ ಅವನತಿ ಕಟ್ಟಿಟ್ಟ ಬುತ್ತಿ. ಸಾಂವಿಧಾನಿಕ ಸರ್ಕಾರ ಕಾರ್ಯರೂಪದಲ್ಲಿದ್ದರೂ, ಅದೇ ಸಂವಿಧಾನದ ತಿದ್ದುಪಡಿಯ ಬಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಲು ತುಸು ನಾಚಿಕೆ ಪಡದ ರಾಜಕಾರಣಿಗಳು, ಮುಂದೊಂದು ದಿನ ಅದನ್ನು ಮಾಡಲು ಹಿಂಜರಿಯಲ್ಲ.

ಕೊನೆಯದಾಗಿ ಹೇಳಬಲ್ಲೆ.‌ ಭಾರತವು ಅಪರಾಧ, ಭ್ರಷ್ಟಾಚಾರ, ಹಿಂಸೆ, ನಕ್ಸಲಿಸಂ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ರೋಗಗಳಿಗೆ ಬಲಿಯಾಗದೆ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಲಿ.

ದೇಶದ ಪ್ರತಿಯೊಬ್ಬರಿಗೂ ಸಕಾರಾತ್ಮಕ‌ ಮತ್ತು ಸಹಕಾರಾತ್ಮಕ ಪ್ರೇರಣೆಯಿದ್ದರೆ ಭಾರತ ವಿಶ್ವಗುರು ಆಗುವ ದಿನ ದೂರವೇನಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಮೊದಲ ದಿನ ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಭಾಷಣ ಅದು ಕೇವಲ ಕೇಳುಗನ ಶ್ರವಣಗಳಿಗೆ ತಲುಪುವ ಮಾತುಗಳಾಗಿರದೆ‌, ಅದರಲ್ಲಿ ಈ ಭವ್ಯವಾದ ಜಾತ್ಯಾತೀತ ಭಾರತವನ್ನು ಮತ್ತೊಮ್ಮೆ ಸುಂದರ ಹೂದೋಟವಾಗಿಸುವ, ಮಧುರವಾದ ಭಾವನೆಗಳಿಂದ ಸಂಕೀರ್ಣಗೊಂಡಿರುವ ವಿಶಾಲ ಮನೋಭಾವದ ಚಿಂತನೆಗಳಿರಲಿ. ಜಾಗತಿಕ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಬೇಕಾದ ಯುವ ತಲೆ ಮಾರುಗಳಿಗೆ ಮಹತ್ವವಾದ ಸಂದೇಶಗಳಿರಲಿ.‌
ಬನ್ನಿ ನಾವೆಲ್ಲರೂ ಒಂದಾಗೋಣ ಈ ದೇಶದ ಪ್ರಗತಿಯ ಬಗ್ಗೆ ಜಾಗೃತಿಯನ್ನು ಮೂಡಿಸೋಣ.