ಮಕ್ಕಳೊಂದಿಗೆ ಸಹನೆ: ಯಅ’ಕೂಬ್(ಅ)ರ ಚರಿತ್ರೆಯಲ್ಲಿ

0
608

ಸನ್ಮಾರ್ಗ ವಾರ್ತೆ

ಪ್ರತಿಯೊಂದು ಮಕ್ಕಳೂ ಅಮೂಲ್ಯವಾದ ಸಂಪತ್ತಾಗಿದೆ. ಮಕ್ಕಳಿಗೆ ಬೆಳೆಯಲು ಪ್ರೀತಿ, ಸಂತೋಷ, ಧಾರ್ಮಿಕ, ನೈತಿಕ ಹಾಗೂ ಮೌಲ್ಯಾಧಾರಿತ ಆರೋಗ್ಯಪೂರ್ಣ ವಾತಾವರಣದ ಅಗತ್ಯವಿದೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕಾದರೆ ತಂದೆ ತಾಯಿಗಳಿಗೆ ಪ್ರೀತಿ, ಮಮತೆ, ತಾಳ್ಮೆ ಮತ್ತು ಸಹನೆ ಅತ್ಯಗತ್ಯ. ಮಕ್ಕಳು ಹಟ ಮಾಡಿದಾಗ, ಹಿಂಸೆ ಕೊಟ್ಟಾಗ ಕಠಿಣವಾಗಿ ಶಿಕ್ಷಿಸದೇ ಪ್ರೀತಿಯಿಂದ ಸರಿಯಾದ ಸದುಪದೇಶವನ್ನು ನೀಡಬೇಕು. ಉತ್ತಮ ಕೆಲಸಗಳನ್ನು ಮಾಡಿದಾಗ ಪ್ರಶಂಶಿಸುತ್ತಾ ಅವರಿಗೆ ಉಡುಗೊರೆ ನೀಡಿ ಗೌರವಿಸಬೇಕು. ಇಂತಹ ಧನಾತ್ಮಕ ಪ್ರೋತ್ಸಾಹವು ಮುಂದೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರತಿ ಮಕ್ಕಳು ಘನತೆ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ.

ಪವಿತ್ರ ಕುರ್ ಆನ್ ನಲ್ಲಿ ಕೆಲವು ಪ್ರವಾದಿಗಳ ಕುಟುಂಬ ಜೀವನವನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ತಂದೆ ಮತ್ತು ಮಗನ ಸಹನೆಯ ಪರೀಕ್ಷೆಯ ಕೆಲವು ಉದಾಹರಣೆಗಳೂ ಕಂಡು ಬರುತ್ತದೆ. ಸೂರಃ ಯೂಸುಫ್ ನಲ್ಲಿ ಅಹ್ಸನುಲ್ ಖಸಸ್ ಎಂಬ ಹೆಸರಿನಲ್ಲಿ ಉಲ್ಲೇಖಸಿಲಾಗಿರುವ ಯಅ’ಕೂಬ್(ಅ) ಮತ್ತು ಅವರ ಪುತ್ರರ ಚರಿತ್ರೆಯು ತಂದೆ -ಮಕ್ಕಳ ಸಂಬಂಧಗಳ ಹಲವು ಪಾಠಗಳನ್ನು ಕಲಿಸುತ್ತದೆ.

ಯೂಸುಫ್(ಅ) ತಮ್ಮ ತಂದೆಯವರಿಗೆ ಹೆಚ್ಚು ಪ್ರಿಯರು ಎಂಬ ಕಾರಣಕ್ಕಾಗಿ ಮಲ ಸಹೋದರರು ಅವರನ್ನು ಬಾವಿಗೆ ಹಾಕಲು ಪ್ರೇರೇಪಿಸುತ್ತದೆ. ಸಣ್ಣ ಪ್ರಾಯದಲ್ಲೇ ಯೂಸುಫ್(ಅ) ತಮ್ಮ ತಂದೆಯ ಒಡನಾಟ, ಪಾಲನೆ, ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಅ’ಕೂಬ್(ಅ)ರ ಕುಟುಂಬದಲ್ಲಿ ಏನು ನಡೆಯಬಾರದೋ ಅದು ನಡೆದಾಗ ಮಕ್ಕಳು ತಪ್ಪು ಮಾಡಿದಾಗ ಬಹಿಷ್ಕರಿಸದೆ, ಮನೆಯಿಂದ ಹೊರಹಾಕದೆ, ಕೋಪಗೊಳ್ಳದೆ, ಜಗಳ ಮಾಡದೆ, ಸಂಬಂಧ ಮುರಿಯದೆ, ಕಟ್ಟುನಿಟ್ಟು, ಕಠೋರತೆಯಿಂದ ವರ್ತಿಸದೆ ಸಾಮರಸ್ಯವನ್ನುಂಟು ಮಾಡುವ ಮೂಲಕ ಮಕ್ಕಳೊಂದಿಗೆ ಪ್ರೀತಿ ಸಹನೆಯಿಂದ ವರ್ತಿಸುವ ಅತ್ಯುತ್ತಮ ಮಾದರಿಯಾಗಿದೆ.

ಒಂದು ಕುಟುಂಬದಲ್ಲಿರಬೇಕಾದಂತಹ ಸಹಾನುಭೂತಿ, ಕರುಣೆ, ಮೃದು ನೀತಿಗೆ ಪ್ರೇರಣೆಯನ್ನು ನೀಡುತ್ತದೆ. ತಮ್ಮ ಮಕ್ಕಳು ಅಲ್ಲಾಹನೆಡೆಗೆ ಮರಳಿ ಕ್ಷಮಾಯಾಚನೆ ಮಾಡಬೇಕೆಂಬುದನ್ನು ಬಯಸಿದ್ದರು. ಯಅ’ಕೂಬ್(ಅ)ರ ಅಲ್ಲಾಹನ ಮೇಲಿರುವ ವಿಶ್ವಾಸ, ಭರವಸೆ, ಸಹನೆ, ಚಾರಿತ್ರ್ಯ ಎಲ್ಲವೂ ಅವರ ಮಕ್ಕಳನ್ನು ಅಲ್ಲಾಹನ ಕಡೆಗೆ ಮರಳುವಂತೆ ಮಾಡಿತು. ಮಕ್ಕಳ ಕುಂದುಕೊರತೆ, ದೌರ್ಬಲ್ಯವನ್ನು ಅರಿತು ಅದರ ಹಾನಿಯಿಂದ ರಕ್ಷಿಸಬಯಸಿದ್ದರು. ಕಣ್ಣೀರು ಸುರಿಸುತ್ತಾ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುತ್ತಿದ್ದರು.

“ಚಿಂತಿಲ್ಲ, ನಾನು ಸಹಿಸಿಕೊಳ್ಳುವೆನು- ಚೆನ್ನಾಗಿ ಸಹಿಸಿಕೊಳ್ಳುವೆನು. ನಿಮ್ಮ ಸೃಷ್ಟನೆಯ ಮಾತುಗಳ ಬಗ್ಗೆ ಅಲ್ಲಾಹನೊಡನೆ ಮಾತ್ರ ಸಹಾಯ ಯಾಚಿಸಬಹುದಷ್ಟೆ.” (ಪವಿತ್ರ ಕುರ್ ಆನ್ 12: 18)

“ನಾನು ನನ್ನ ತಲ್ಲಣ ಮತ್ತು ದುಃಖದ ಮೊರೆಯನ್ನು ಅಲ್ಲಾಹನ ಹೊರತು ಇನ್ನಾರೊಡನೆಯೂ ಇಡುವುದಿಲ್ಲ. ಅಲ್ಲಾಹನನ್ನು ನಾನು ತಿಳಿದುಕೊಂಡಂತೆ ನೀವು ತಿಳಿದಿಲ್ಲ.” (ಪವಿತ್ರ ಕುರ್ ಆನ್ 12: 86)

ಯೂಸುಫ್(ಅ) ತಂದೆಯನ್ನು ಪ್ರೀತಿಯಿಂದ ’ಯಾ ಅಬತಿ’ (ನನ್ನ ಅಪ್ಪಾ), ಅದೇ ರೀತಿ ಯಅ’ಕೂಬ್(ಅ) ರು ತನ್ನ ಪುತ್ರನನ್ನು ’ಯಾ ಬುನಯ್ಯ’ (ನನ್ನ ಮಗನೇ) ಎಂದು ಪರಸ್ಪರ ಗೌರವದೊಂದಿಗೆ ಅಭಿಸಂಬೋಧಿಸುವುದನ್ನು ಕಾಣಬಹುದಾಗಿದೆ. ಯೂಸುಫ್(ಅ) ಕನಸು ಕಂಡಾಗ ತನ್ನ ರಹಸ್ಯ ವಿಷಯಗಳನ್ನು ತಂದೆಯೊಂದಿಗೆ ಹಂಚಿಕೊಳ್ಳುವಂತಹ ನಿಕಟ ಸಂಬಂಧವಿತ್ತು. ನಿಮ್ಮ ಮಕ್ಕಳಿಗೂ ತಮ್ಮ ಸಮಸ್ಯೆ, ತೊಂದರೆ ಕೊಡುವಂತಹ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ಕಲ್ಪಿಸಿರಿ. ಹೆತ್ತವರ ಮೇಲೆ ಉತ್ತಮ ನಂಬಿಕೆ, ವಿಶ್ವಾಸ ಬರುವಂತಾಗಲಿ.

ಅಪರಿಚಿತರಿಗಿಂತ ಹೆಚ್ಚಾಗಿ ಕುಟುಂಬದ ಆಪ್ತ ಬಂಧುಗಳಲ್ಲಿಯೇ ಅಸೂಯೆ ಉಂಟಾಗುವುದು ಹೆಚ್ಚು. ಆದುದರಿಂದ ನಿಕಟ ಬಂಧುಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬ ಸಂಬಂಧಗಳು ಮುರಿಯುವಂತೆ ಮಾಡುವುದು ಶೈತಾನನ ಗುರಿಯಾಗಿರುತ್ತದೆ. ಪರಸ್ಪರ ದ್ವೇಷಿಸುವಂತೆ, ಜಗಳ ಮಾಡುವಂತೆ ಮಾಡುವುದನ್ನು ಇಷ್ಟಪಡುತ್ತಾನೆ. ನಿಮಗೆ ಕ್ಷಮಾ ನೀತಿಯನ್ನು ಅನುಸರಿಸಲು ಸಾಧ್ಯವಾದರೆ ಮಾತ್ರ ಸಂಬಂಧಗಳು ಉಳಿಯುವುದು. ಹತ್ತಿರದ ಬಂಧುಗಳು ನಿಮಗೆ ನೋವನ್ನುಂಟು ಮಾಡುವರು. ಕಿರುಕುಳ ನೀಡುವರು.

ಮಕ್ಕಳು ಕೆಡುಕು, ತಪ್ಪು ಮಾಡಿದಾಗ, ಅಜ್ಞಾನದಿಂದ ವರ್ತಿಸಿದಾಗ ಅವರೊಂದಿಗೆ ಸಂಬಂಧ ಮುರಿಯಬೇಡಿರಿ, ಕೋಪಗೊಳ್ಳಬೇಡಿರಿ. ನಿಮ್ಮ ಮಕ್ಕಳಲ್ಲಿ ದೇವಭಯವನ್ನುಂಟು ಮಾಡಬೇಕಾದರೆ ನೀವು ನಿಮ್ಮ ಚಾರಿತ್ರ್ಯ, ಆರಾಧನಾ ಕರ್ಮಗಳಲ್ಲಿ ಸುಧಾರಣೆಯನ್ನು ಮಾಡಿರಿ. ತಂದೆ- ಮಕ್ಕಳು, ತಾಯಿ- ಮಕ್ಕಳು, ಸಹೋದರ- ಸಹೋದರಿಯರು ಎಂಬ ಭಾವನಾತ್ಮಕ ಬಂಧವನ್ನುಂಟು ಮಾಡಿರಿ. ಹೆತ್ತವರಿಂದ ಸಿಗಬೇಕಾದ ಕಾಳಜಿ ,ಆರೈಕೆ, ಪ್ರೀತಿಗೆ ಕೊರತೆ ಮಾಡಬೇಡಿರಿ. ಮಕ್ಕಳ ಮೊಂಡುವಾದ, ಹಿಂಸಾತ್ಮಕ, ನಿಷ್ಠುರತೆ, ಕಠೋರತೆ, ಬಂಡಾಯ, ನಕಾರಾತ್ಮಕ ವರ್ತನೆಗಳನ್ನು ಸಹನೆಯಿಂದ ದಯೆ ತೋರುತ್ತಾ ಉತ್ತಮ ಪದಗಳಿಂದ ಪ್ರತಿಕ್ರಿಯಿಸಿ.

ಹದಿಹರೆಯದ ಮಕ್ಕಳಲ್ಲಿ ಹಾರ್ಮೋನುಗಳು ಅವರ ಮನಸ್ಥಿತಿ, ಭಾವನೆಗಳು, ನಡವಳಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತವೆ. ಅವರಲ್ಲಿ ಸಹನೆ ಕಡಿಮೆಯಿರುತ್ತದೆ. ಅವರ ಮೆದುಳು ಸರಿಯಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಅವರ ಶರೀರವು ಚಲನೆಯನ್ನು ಬಯಸುತ್ತದೆ. ಅವರಿಗೆ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿದಿಲ್ಲ. ಮಕ್ಕಳ ಕಠೋರ ವರ್ತನೆಗೆ ಹೆತ್ತವರು ಕಠಿಣತೆಯಿಂದ ಪ್ರತಿಕ್ರಿಯಿಸಿದಾಗ ಫಲಿತಾಂಶವು ಮಕ್ಕಳಲ್ಲಿ ಕಠೋರ ಸ್ವಭಾವವುಂಟಾಗಬಹುದು. ಹೆತ್ತವರ ಸಹನೆ, ಮೃದುನೀತಿ ಕಾಲಕ್ರಮೇಣ ಮಕ್ಕಳ ಮೇಲೆ ಪ್ರಭಾವ ಬೀರಬಹುದು. ಮಕ್ಕಳ ಯಾವುದಾದರೂ ವರ್ತನೆ ಅವರನ್ನು ದ್ವೇಷಿಸುವಂತೆ ಮಾಡದಿರಲಿ. ಅವರ ವರ್ತನೆಯನ್ನು ಮಾತ್ರ ದ್ವೇಷಿಸಿರಿ. ಅವರ ಇಹಪರ ಜೀವನದ ಒಳಿತನ್ನು ಆಲೋಚಿಸುತ್ತಾ ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸಿ ಮತ್ತು ಅವರ ಮೇಲೆ ಕರುಣೆ ತೋರಿ. ಮಕ್ಕಳಿಗೆ ಹೊಡೆಯುವುದರಿಂದ ಮತ್ತು ಬಡಿಯುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಟಿತವಾಗುತ್ತದೆ. ನಮಾಝ್ ಮಾಡದಿದ್ದಾಗಲೂ ಮಕ್ಕಳಿಗೆ ಹೊಡೆಯಲು ಹತ್ತು ವರ್ಷದವರೆಗೆ ಕಾಯಬೇಕು.

ಆಧುನಿಕ ಕಾಲದಲ್ಲಿ ಹೆತ್ತವರು ವಿಭಿನ್ನ ಹಂತಗಳಲ್ಲಿ ಮಕ್ಕಳಿಂದ ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ವಿವಾಹಕ್ಕಿಂತ ಮೊದಲು ಗಂಡು ಮಕ್ಕಳು ಏನು ಮಾಡಿದರೂ ಪ್ರೋತ್ಸಾಹಿಸುವವರು ವಿವಾಹದ ನಂತರ ತಪ್ಪು ದೃಷ್ಟಿಯಲ್ಲಿ ನೋಡುವವರಿದ್ದಾರೆ. ಮಕ್ಕಳ ಕುಂದುಕೊರತೆ, ದೌರ್ಬಲ್ಯಗಳನ್ನು ದೂರುವವರಿಗೆ ಮಕ್ಕಳು ಎಷ್ಟು ಒಳಿತು ಮಾಡಿದರೂ ಆ ಒಳಿತುಗಳನ್ನು ಗುರುತಿಸಲು ವಿಫಲರಾಗುತ್ತಾರೆ. ಮಕ್ಕಳಲ್ಲಿರುವ ಒಳಿತುಗಳನ್ನು ಗುರುತಿಸಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವವರಿಗೆ ಮಾತ್ರ ಮಕ್ಕಳು ಅನುಗ್ರಹವಾಗುವರು. ಭಾವನಾತ್ಮಕವಾಗಿ ಯಾವುದಾದರೊಂದು ಮಕ್ಕಳಲ್ಲಿ ಪ್ರೀತಿಯಿರುವುದು ಸ್ವಾಭಾವಿಕ. ಭಾವನೆಯನ್ನು ನಿಯಂತ್ರಿಸಲು ಅಸಾಧ್ಯ. ಆದರೆ ಅದನ್ನು ಇತರರ ಮುಂದೆ ವ್ಯಕ್ತಪಡಿಸಬಾರದು. ಮಕ್ಕಳಿಗೆ ಆರೈಕೆ, ಮೂಲಭೂತ ಬೇಡಿಕೆ, ವರ್ತನೆ, ಉಡುಗೊರೆ ನೀಡುವಲ್ಲಿ ಸಮಾನತೆ ಹಾಗೂ ನ್ಯಾಯ ಪಾಲಿಸಿರಿ.

ಮಕ್ಕಳು ಅಲ್ಲಾಹನು ನೀಡುವ ಅನುಗ್ರಹ, ಪರೀಕ್ಷೆ ಮತ್ತು ಲೌಖಿಕ ಜೀವನದ ಕ್ಷಣಿಕ ಸೊಬಗು ಮಾತ್ರ. ಲೌಖಿಕ ಜೀವನದಲ್ಲಿ ಮಕ್ಕಳ ಪಾಲನೆ ಪೋಷಣೆ ಸಂತೋಷದಾಯಕವೂ, ಅತಿ ದೊಡ್ಡ ಸವಾಲು, ಜವಾಬ್ದಾರಿಯೂ, ಪರಲೋಕದಲ್ಲಿ ಪ್ರತಿಫಲದಾಯಕವೂ ಹೌದು. ಆಧುನಿಕ ಕಾಲದಲ್ಲಿ ಬುದ್ಧಿವಂತಿಕೆ, ಚಿಂತನೆ, ಸಮಾಲೋಚನೆ ಹಾಗೂ ಯುಕ್ತಿಯಿಂದ ಮಕ್ಕಳೊಂದಿಗೆ ವ್ಯವಹಾರ ಮಾಡಬೇಕು. ಮಕ್ಕಳಲ್ಲಿ ಅಲ್ಲಾಹನೆಡೆಗೆ ಮರಳುವ, ಅವನೊಂದಿಗೆ ಪ್ರಾರ್ಥಿಸುವ ದೇವಭಯವುಂಟು ಮಾಡಲು ಪ್ರಯತ್ನಿಸಿ. ಸ್ವತಂತ್ರವಾಗಿ ಧಾರ್ಮಿಕ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಿರಿ. ಮಕ್ಕಳು ಪ್ರಬುದ್ಧರಾದ ನಂತರ ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು ಮತ್ತು ಅವರನ್ನು ಗೌರವಿಸಬೇಕೆಂಬುದು ನನ್ನ ಪ್ರಭುವಿನ ಆಜ್ಞೆಯೆಂದು ಮನವರಿಕೆಯಾಗುವುದು. ಅವರು ಪ್ರಬುದ್ಧರಾಗುವವರೆಗೆ ನೀವು ಅವರೊಂದಿಗೆ ಸಹನೆಯಿಂದ ವರ್ತಿಸಿರಿ.

✍️ಖದೀಜ ನುಸ್ರತ್