ಕುಪ್ಪೆಪದವಿನಲ್ಲಿ ಸೀರತ್ ಸಾರ್ವಜನಿಕ ಸಭೆ

0
140

ಸನ್ಮಾರ್ಗ ವಾರ್ತೆ

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ರಾಜ್ಯ ಅಭಿಯಾನ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ರಾಜ್ಯ ಅಭಿಯಾನ ಹಾಗೂ ಮಹಿಳಾ ವಿಭಾಗದ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯ ರಾಷ್ಟ್ರ ಅಭಿಯಾನದ ಅಂಗವಾಗಿ ಸಪ್ಟೆಂಬರ್ 22 ಆದಿತ್ಯವಾರ ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ವತಿಯಿಂದ ಕುಪ್ಪೆಪದವು ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ| ಸುರೇಶ್ ವೈ. ಮಾತನಾಡಿ, “ಸೌಹಾರ್ಧತೆಯ ಸಂದೇಶವನ್ನು ಸಾರಿದರಲ್ಲದೆ, ಸಮಾಜದಲ್ಲಿ ಸೌಹಾರ್ದತೆಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. ದೈಹಿಕ ಆರೋಗವನ್ನು ರಕ್ಷಿಸುವ ವೈದ್ಯರು ಸಮಾಜದ ಆರೋಗ್ಯವನ್ನು ಕೂಡಾ ಕಾಪಾಡುವ ಹೊಣೆ ಉಳ್ಳವರಾಗಿದ್ದಾರೆ” ಎಂದರು.

ನೈತಿಕತೆಯೇ ಸ್ವಾತಂತ್ರ್ಯ ವಿಚಾರವಾಗಿ ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮ ಮಾತನಾಡಿ, “ನಮ್ಮ ಹುಟ್ಟು ಹೇಗಿರಬೇಕೆಂಬ ಸ್ವಾತಂತ್ರ್ಯ ನಮಗಿರಲಿಲ್ಲ. ಆದರೆ, ಹುಟ್ಟಿದ ನಂತರ ಹೇಗೆ ಜೀವಿಸಬೇಕೆಂಬ ಸ್ವಾತಂತ್ರ್ಯ ಇದೆ. ಈ ಸ್ವಾತಂತ್ರ್ಯ ಕೆಡುಕನ್ನು ಪಸರಿಸಲಿಕ್ಕಾಗಿ ಅಲ್ಲ, ಅನೈತಿಕತೆಯನ್ನು ಬೆಳೆಸಲಿಕ್ಕಾಗಿಯೂ ಅಲ್ಲ. ಈ ಸ್ವಾತಂತ್ರ್ಯ ನೈತಿಕ ಮೌಲ್ಯಗಳೊಂದಿಗೆ ಬದುಕಲಿಕ್ಕಾಗಿ, ಪರಸ್ಪರ ಗೌರವವನ್ನು ಬೆಳೆಸಲಿಕ್ಕಾಗಿ ಆಗಿದೆ” ಎಂದರು. ಪಾದುವ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಗ್ರೆಗರಿ ರೊಸಾರಿಯೋ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸನ್ಮಾರ್ಗ ವಾರಪತ್ರಿಕೆ ಮತ್ತು ನ್ಯೂಸ್ ಚಾನೆಲ್ ಪ್ರಧಾನ ಸಂಪಾದಕ ಎ.ಕೆ ಕುಕ್ಕಿಲ ಮಾತನಾಡಿ, “ಯುವಕರಲ್ಲಿ ಆವೇಶವನ್ನು ತುಂಬುವ ಸಲುವಾಗಿ ವೇದಿಕೆಗಳನ್ನು ಸಜ್ಜುಗೊಳಿಸಲಾಗುತ್ತಿರುವ ಈ ಸನ್ನಿವೇಶದಲ್ಲಿ ನೈತಿಕತೆಯ ವಿಚಾರವನ್ನಿಟ್ಟು ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ನಂಬಿಕೆ ಕಳೆದುಕೊಂಡಿರುವ, ಸುಳ್ಳು ವ್ಯಾಪಕವಾಗಿರುವ ಸಮಾಜದಲ್ಲಿ ಸತ್ಯವನ್ನು ಪಸರಿಸುವುದು ಮತ್ತು ನೈತಿಕತೆಯನ್ನು ಬೆಳೆಸುವುದು ಅನಿವಾರ್ಯವಾಗಿದೆ. ವ್ಯಕ್ತಿಗಳ ಚಾರಿತ್ರ್ಯ ನಾಶವಾಗುತ್ತಿದೆ. ಮೌಲ್ಯಗಳು ಅಧಪತನವಾಗುತ್ತಿದೆ. ಇದನ್ನು ಬದಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ” ಎಂದರು.

ಕಾರ್ಯಕ್ರಮದಲ್ಲಿ ಯುವ ಲೇಖಕ ಅಬೂಝೀಶಾನ್ ಬರೆದಿರುವ “ಸ್ನೇಹದ ಪ್ರತೀಕ ಪ್ರವಾದಿ ಮುಹಮ್ಮದ್ (ಸ)” ಪುಸ್ತಕ ಬಿಡುಗಡೆ ನಡೆಯಿತು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ಸಂಚಾಲಕರಾದ ಝಾಕಿರ್ ಹಸನ್, ಹಮ್ದ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕುಪ್ಪೆಪದವು ಅಧ್ಯಕ್ಷರಾದ ಇಸ್ಮಾಯಿಲ್ ಶರೀಫ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾ. ಮುಬಾರಿಝ್ ಕಿರಾಅತ್ ಪಠಿಸಿದರು, ಹೈದರ್ ಎಡಪದವು ಸ್ವಾಗತಿಸಿದರು, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಕುಪ್ಪೆಪದವು ಸಂಚಾಲಕ ಅರ್ಫಾಝ್ ಕಲಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು, ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು, ರಮೀಝ್ ಕಲಾಯಿ ಧನ್ಯವಾದವಿತ್ತರು.