ಚುನಾವಣಾ ಬಾಂಡ್ ಮೂಲಕ ಸುಲಿಗೆ: ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆ‌ರ್ ದಾಖಲಿಸಲು ಕೋರ್ಟ್ ಆದೇಶ

0
156

ಸನ್ಮಾರ್ಗ ವಾರ್ತೆ

ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿರುವ ಅಪರಾಧಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆ‌ರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಹೆದರಿಸಿ ಸುಲಿಗೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಜನಾಧಿಕಾರ ಸಂಘರ್ಷ ಪರಿಷತ್‌ (ಜೆಎಸ್‌ಪಿ)ಯ ಆದರ್ಶ ಅಯ್ಯರ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯವು, ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಅಪರಾಧಕ್ಕಾಗಿ ಎಫ್‌ಐಆ‌ರ್ ದಾಖಲಿಸಲು ತಿಲಕ್ ನಗರ ಪೊಲೀಸ್‌ ಠಾಣೆಗೆ ಆದೇಶಿಸಿದೆ.

42ನೇ ಎಸಿಎಂಎಂ ನ್ಯಾಯಾಲಯಕ್ಕೆ ಜನಾಧಿಕಾರ ಸಂಘರ್ಷ ಪರಿಷತ್‌ ಸಲ್ಲಿಸಿದ್ದ ದೂರಿನಲ್ಲಿ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು, ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ನಾಯಕರು, ಆಗಿನ ಬಿಜೆಪಿ ಕರ್ನಾಟಕ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್, ಬಿ ವೈ ವಿಜಯೇಂದ್ರ, ಬಿಜೆಪಿ ಕರ್ನಾಟಕ ಇವರ ಮೇಲೆ ದೂರು ನೀಡಿದ್ದರು.

ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಎಫ್‌ಐಆ‌ರ್ ದಾಖಲಿಸಲು ಬೆಂಗಳೂರಿನ ತಿಲಕ್ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.