ನೇತನ್ಯಾಹು ಹಣೆಯಲ್ಲಿ ನೆರಿಗೆ ಮೂಡಿಸಿದ ಇರಾನ್

0
285

ಸನ್ಮಾರ್ಗ ವಾರ್ತೆ

✍️ಅಮಾನ್ ಕೆ

ಪಶ್ಚಿಮೇಶಿಯಾ ಕುದಿಯತೊಡಗಿದೆ. ಇಸ್ರೇಲ್ ಇನ್ನಷ್ಟು ಉರುಳಿನೊಳಗೆ ಸಿಲುಕಿ ಕೊಂಡಂತೆ ಕಾಣ್ತಾ ಇದೆ. 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದಾಗ ಇದು ಅವೆರಡರ ನಡುವಿನ ಸಂಘರ್ಷ ಎಂದೇ ನಂಬಲಾಗಿತ್ತು. ಆದರೆ ಈ ದಾಳಿಗೆ ಒಂದು ವರ್ಷವಾಗುತ್ತಾ ಬರುತ್ತಿದ್ದಂತೆಯೇ ಪೂರ್ಣ ಚಿತ್ರಣವೇ ಬದಲಾಗಿದೆ. ಇಸ್ರೇಲ್ ಪ್ರಪಾತಕ್ಕೆ ಉರುಳುತ್ತಾ, ಅದರ ಅಸ್ತಿತ್ವವೇ ನಾಶವಾಗುತ್ತಾ ಎಂಬ ಚರ್ಚೆಯವರೆಗೆ ಪರಿಸ್ಥಿತಿ ಬಂದು ಮುಟ್ಟಿದೆ. ಯುದ್ಧ ಕಣಕ್ಕೆ ಇರಾನ್ ಅಧಿಕೃತವಾಗಿ ಬರುವುದರೊಂದಿಗೆ ನೇತನ್ಯಾಹು ಹಣೆಯಲ್ಲಿ ನೆರಿಗೆಗಳು ಮೂಡತೊಡಗಿವೆ. ಅಣು ಶಕ್ತ ರಾಷ್ಟ್ರಗಳ ನಡುವಿನ ಈ ಘರ್ಷಣೆಯ ಅಂತ್ಯ ಹೇಗಾಗಬಹುದು ಎಂಬ ಭಯ ಇಡೀ ಪಶ್ಚಿಮೇಷ್ಯಾವನ್ನೇ ಆವರಿಸಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದೆ. 300ರಷ್ಟು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದರ ಜೊತೆ ಜೊತೆಗೆ ಇಸ್ರೇಲ್ ನಲ್ಲಿ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಏಳು ಮಂದಿಯನ್ನು ಸಾಯಿಸಿದ್ದಾರೆ. ಅನೇಕ ಮಂದಿಗೆ ಗಾಯಗಳಾಗಿವೆ. ಅತ್ಯಂತ ಬಿಗಿ ಬಂದೋಬಸ್ತಿನ ಇಸ್ರೇಲ್ ಒಳಗೆ ಇಬ್ಬರು ಬಂದೂಕುಧಾರಿಗಳು ನುಸುಳಿದ್ದು ಹೇಗೆ ಎಂಬ ಬಗ್ಗೆ ಇಸ್ರೇಲ್ ಗೆ ಇನ್ನೂ ಗೊತ್ತಾಗಿಲ್ಲ. ಇರಾನಿನ ಬ್ಯಾಲೆಸ್ಟಿಕ್ ಕ್ಷಿಪಣಿಗಿಂತಲೂ ಹೆಚ್ಚು ಇಸ್ರೇಲ್ ಗೆ ಭಯ ಮೂಡಿಸಿದ್ದು ಈ ಇಬ್ಬರು ಬಂದೂಕುಧಾರಿಗಳು. ಈ ಹಿಂದೆ ಇಸ್ರೇಲ್ ಆತ್ಮಹತ್ಯಾ ದಾಳಿಗಳಿಂದ ಕಂಗೆಟ್ಟಿತ್ತು.

ಹಮಾಸ್ ನ ಆತ್ಮಹತ್ಯಾ ಬಾಂಬರ್ ಗಳು ಸಿಡಿಯುತ್ತಾ ಇದ್ದರು. ಈಗ ಜಗತ್ತು ಮರೆತಿದ್ದರೂ ಇಸ್ರೇಲ್ ಈವರೆಗೂ ಆ ಆಘಾತವನ್ನು ಮರೆತಿರುವ ಸಾಧ್ಯತೆ ಇಲ್ಲ. ಆ ಬಳಿಕ ಹಮಾಸ್ ತನ್ನ ಆ ಹೋರಾಟವನ್ನು ಕೊನೆಗೊಳಿಸಿತ್ತು. ಇದೀಗ ಇಸ್ರೇಲ್ ನ ಒಳಗೆ ಬಂದೂಕುಧಾರಿಗಳು ನುಸುಳಿರುವುದು ಮತ್ತೊಂದು ಆತ್ಮಹತ್ಯಾ ದಾಳಿಯ ಮುನ್ಸೂಚನೆಯೇ ಎಂಬ ಭೀತಿ ನೇತನ್ಯಾಹು ಅವರನ್ನು ಕಾಡತೊಡಗಿದೆ.

ಇನ್ನೊಂದು ಕಡೆ ಇರಾನ್ ಅಧಿಕೃತವಾಗಿ ಯುದ್ಧ ರಂಗಕ್ಕೆ ಇಳಿದಿದೆ. ಪಶ್ಚಿಮೇಶಿಯಾದ ಘರ್ಷಣೆಯಲ್ಲಿ ರಾಷ್ಟ್ರವೊಂದು ಅಧಿಕೃತವಾಗಿ ಯುದ್ಧ ಕಣಕ್ಕೆ ಇಳಿದದ್ದು ಇದೇ ಮೊದಲು. ಹಮಾಸಾಗಲಿ ಹಿಝ್ಬುಲ್ಲಾ ಆಗಲಿ ಅಥವಾ ಹೂತಿಗಳೇ ಆಗಲಿ ಅವೆಲ್ಲ ಅಧಿಕೃತವಾಗಿ ಒಂದು ರಾಷ್ಟ್ರದ ಪ್ರತಿನಿಧಿಗಳಲ್ಲ. ಅವೆಲ್ಲ ರಾಷ್ಟ್ರದ ಖಾಸಗಿ ಸೇನೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇರಾನ್ ಯಾವಾಗ ಯುದ್ಧ ಕಣಕ್ಕೆ ಇಳಿಯಿತೋ ಇಸ್ರೇಲ್ ನ ಒಳಗೆ ತಳಮಳ ಪ್ರಾರಂಭವಾಗಿದೆ. ಇರಾನ್ ಮೇಲೆ ಅಣುಬಾಂಬು ದಾಳಿ ನಡೆಸಬೇಕು ಎಂದು ಇಸ್ರೇಲ್ ಸಚಿವ ಬೆಗಿನ್ ಹೇಳಿರುವುದೇ ಇಸ್ರೇಲ್ ನ ತಳಮಳವನ್ನು ಸೂಚಿಸುತ್ತದೆ. ಎರಡು ಅಣುಶಕ್ತ ರಾಷ್ಟ್ರಗಳು ಕಾದಾಡುವುದೆಂದರೆ ಅದು ಆ ಎರಡು ರಾಷ್ಟ್ರಗಳ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಇಡೀ ಪಶ್ಚಿಮೇಶ್ಯವನ್ನೇ ಬಾಧಿಸಲಿದೆ. ಒಂದು ವೇಳೆ ಇಸ್ರೇಲ್ ಪ್ರತೀಕಾರ ತೀರಿಸಿದರೆ ಇರಾನ್ ಅಣುಬಾಂಬಿನತ್ತ ಕೈ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ಇಸ್ರೇಲ್ ನ ಒಳಗೆ ಯುದ್ಧ ವಿರೋಧಿ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.. ಒಂದು ವರ್ಷದಿಂದ ಇಸ್ರೇಲ್ ಯುದ್ಧದಲ್ಲಿ ಭಾಗಿಯಾಗಿದೆ.. ಆದರೆ ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡವರನ್ನು ಬಿಡಿಸಿಕೊಳ್ಳಲು ಇಸ್ರೇಲ್ ಗೆ ಇನ್ನೂ ಸಾಧ್ಯವಾಗಿಲ್ಲ. ಇದರ ನಡುವೆ ಲೆಬನಾನ್ ಮೇಲೆಯೂ ಇಸ್ರೇಲ್ ದಾಳಿಗೆ ಹೊರಟಿದೆ. ಆ ಕಡೆಯಿಂದ ಯಮನ್ ನ ಹೂತಿಗಳ ಮೇಲೆಯೂ ದಾಳಿ ಮಾಡಲು ಪ್ರಾರಂಭಿಸಿದೆ. ಮತ್ತೊಂದು ಕಡೆ ಸಿರಿಯಾಕ್ಕೂ ಬಾಂಬ್ ಹಾಕುತ್ತಿದೆ. ಇದೀಗ ಇರಾನ್ ನೇರವಾಗಿ ಯುದ್ಧ ರಂಗಕ್ಕೆ ಇಳಿದಿದೆ. ಇದು ಇಸ್ರೇಲ್ ಗೆ ಸಂಬಂಧಿಸಿ ಶುಭ ಸೂಚನೆ ಅಲ್ಲ ಎಂಬ ಭಾವ ಇಸ್ರೇಲ್ ನಲ್ಲಿ ಹೆಚ್ಚಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಇನ್ನೊಂದು ಕಡೆ ಯುದ್ಧ ವೆಚ್ಛದಿಂದಾಗಿ ಇಸ್ರೇಲ್ ನ ಆರ್ಥಿಕ ವ್ಯವಸ್ಥೆ ದಿನೇ ದಿನೇ ಕುಸಿಯುತ್ತಿದೆ. ವಿಮಾನ ನಿಲ್ದಾಣಗಳು ಬಾಗಿಲು ಮುಚ್ಚುತ್ತಿವೆ. ವ್ಯಾಪಾರ ವಹಿವಾಟುಗಳಿಗಾಗಿ ಹಡಗುಗಳನ್ನು ನೆಚ್ಚಿಕೊಳ್ಳುವ ಅವಕಾಶವೂ ಇಲ್ಲ. ಅದರ ಮೇಲೆ ಹೂತಿಗಳು ದಾಳಿ ಮಾಡುತ್ತಿದ್ದಾರೆ. ಪ್ರತಿದಿನ ಯುದ್ಧ ಭೀತೀಯ ಸೈರನ್ ಮೊಳಗುತಿದೆ. ಜನರು ಭಯದಿಂದ ಬಂಕರುಗಳಿಗೆ ಓಡುತ್ತಿದ್ದಾರೆ. ಹೆಚ್ಚಿನ ಸಮಯವನ್ನು ಜನರು ಮನೆಯೊಳಗೆ ಕಳೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕಾದ ನೆರವಿನ ಹೊರತಾಗಿ ಇಸ್ರೇಲ್ ಗೆ ಉಳಿದುಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಇದೆ.

2023 ಅಕ್ಟೋಬರ್ ಏಳರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದಾಗ ಎರಡು ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಇದು, ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಘರ್ಷಣೆ ಎಂದು ಕೆಲವರು ಹೇಳಿದರೆ ಈ ಘರ್ಷಣೆಯು ಇಡೀ ಪಶ್ಚಿಮೇಶ್ಯವನ್ನೇ ವ್ಯಾಪಿಸಲಿದೆ ಎಂದು ಇನ್ನೂ ಅನೇಕರು ಹೇಳಿದ್ದರು. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ವರ್ಷವಾಗುತ್ತಾ ಬಂದ ಈ ಸಂದರ್ಭದಲ್ಲಿ ನಿಂತು ನೋಡಿದರೆ ಎರಡನೆಯ ಅಭಿಪ್ರಾಯವೇ ನಿಜವಾಗುತ್ತಿರುವಂತೆ ಅನಿಸುತ್ತಿದೆ. ಎರಡು ಅಣುಶಕ್ತ ರಾಷ್ಟ್ರಗಳು ಇದೀಗ ಎದುರು ಬದುರು ನಿಂತಿವೆ. ಪರಸ್ಪರ ಅಣುಬಾಂಬುಗಳನ್ನು ಎಸೆದು ನಾಶವಾಗುತ್ತಾ ಅನ್ನುವ ಪ್ರಶ್ನೆ ಇರುವಂತೆಯೇ ಇಸ್ರೇಲ್ ಅನ್ನು ಅಮೆರಿಕ ಬೆಂಬಲಿಸಿದಂತೆಯೇ ಇರಾನನ್ನು ರಷ್ಯಾ ಮತ್ತು ಚೀನಾಗಳು ಬೆಂಬಲಿಸಲಿದೆಯಾ ಎಂಬ ಪ್ರಶ್ನೆಯೂ ಇದೆ. ಹಾಗಾದರೆ ಅದು ಮೂರನೇ ವಿಶ್ವ ಯುದ್ಧಕ್ಕೆ ಖಂಡಿತ ನಾಂದಿಯಾಗಲಿದೆ.

ಇಸ್ರೇಲ್ ಮೇಲೆ ಇರಾನ್ ನ ದಾಳಿಯನ್ನು ಬೆಂಬಲಿಸಿ ಸಾವಿರಾರು ಮಂದಿ ಇರಾನ್ ನಲ್ಲಿ ರ‍್ಯಾಲಿ ನಡೆಸಿರುವುದನ್ನು ನೋಡಿದರೆ ಈ ಘರ್ಷಣೆ ಸುಲಭದಲ್ಲಿ ಕೊನೆಗೊಳ್ಳಲ್ಲ ಎಂದು ಅನಿಸುತ್ತದೆ.