ಸಿದ್ದರಾಮಯ್ಯರನ್ನು ಭ್ರಷ್ಟಾಚಾರಿ ಎಂದು ಕರೆದು ನಗೆಪಾಟಲಿಗೀಡಾದ ಮೋದಿ

0
265

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ಸಿದ್ದರಾಮಯ್ಯರನ್ನು ಹರಿಯಾಣದ ಸೋನಿಪತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅತೀ ದೊಡ್ಡ ಭ್ರಷ್ಟಾಚಾರಿ ಎಂದು ಮೋದಿ ಘೋಷಿಸಿದ್ದಾರೆ. ಮೋದಿಯ ಭ್ರಷ್ಟಾಚಾರಕ್ಕೆ ವ್ಯಾಖ್ಯೆ ಏನೋ. ಇಡಿ ಬೆಂಬತ್ತಿದ ಮಹಾ ಭ್ರಷ್ಟಾಚಾರಿಗಳು ಬಿಜೆಪಿಯ ವಾಷಿಂಗ್ ಮೆಶಿನ್‌ನಲ್ಲಿ ಕ್ಲೀನ್ ಆಗಿ ಹೊರ ಬರುತ್ತಿದ್ದಾರೆ ಎಂದು ಆರೋಪಿಸುವುದು ಒಂದು ಕಡೆ ಇದ್ದೇ ಇದೆ. ಹೀಗಿರುವಾಗ ಮೋದಿಗೆ ಸಿದ್ದರಾಮಯ್ಯ ಭ್ರಷ್ಟಾಚಾರಿ. ಬಹುಶಃ ಕರ್ನಾಟಕದಲ್ಲಿ ಸಿದ್ದರಾಮಯ್ಯ ಖದರಿರುವುದು ಮತ್ತು ಬಿಜೆಪಿ ಅವರ ಮುಂದೆ ಚೇತರಿಸದೆ ತತ್ತರಿಸುವುದು ಇದೊಂದೇ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಮೋದಿ ಆರೋಪಕ್ಕೆ ಕಾರಣ ಎನ್ನುವಂತಿಲ್ಲ ಕೂಡ. ಮೋದಿಗೆ, ಬಿಜೆಪಿ ಹರ್ಯಾಣದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ ಅಷ್ಟೇ ಅಲ್ವಾ.

ಮೋದಿ ಸರಕಾರ ಹಿಂತೆಗೆದುಕೊಂಡ ಮೂರು ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರಬೇಕೆಂದು ಹಿಮಾಚಲ ಪ್ರದೇಶದ ಮಾಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಾಣಾವತ್ ಅಲ್ಲಿಯೇ ಸಾರ್ವಜನಿಕ ಸಭೆಯಲ್ಲಿ ಕೂಗು ಹಾಕಿದರು. ಅದು ನೇರವಾಗಿ ಹರ್ಯಾಣದ ರೈತರಿಗೆ ನಾಟಿತು. ಅವರು ಈಗ ಬಿಸಿ ಬಿಸಿಯಾಗಿದ್ದಾರೆ. ಬಿಜೆಪಿಯನ್ನು ಹರ್ಯಾಣದಿಂದಲೇ ಕಿತ್ತು ಹಾಕಲು ಟೊಂಕ ಕಟ್ಟಿ ನಿಂತಿದ್ದಾರೆ. ಒಂದು ಕಡೆ ಕಂಗನಾ ಹೀಗೆ ಮಾಡಿದರೆ ಹರ್ಯಾಣದ ಸೋನಿಪತ್ ನಲ್ಲಿ ಸಿದ್ದರಾಮಯ್ಯರನ್ನು ಮಹಾ ಭ್ರಷ್ಟಾಚಾರಿ ಎಂದು ಬಿಜೆಪಿಯನ್ನೇ ಬಯಸುವವರಲ್ಲಿ ಕಾವೇರಿಸಿದರು.

ಇರಲಿ, ದಿಲ್ಲಿಯ ಗಡಿಯಲ್ಲಿ ಮೋದಿ ಸರಕಾರದ ತ್ರಿವಳಿ ಕಾನೂನುಗಳನ್ನು ವಿರೋಧಿಸಿ ರೈತರು ಒಂದು ವರ್ಷ ಕಾಲ ಪ್ರತಿಭಟಿಸುತ್ತಿದ್ದರಲ್ಲ, 750ಕ್ಕೂ ಹೆಚ್ಚು ರೈತರು ಪ್ರಾಣ ತೆತ್ತರಲ್ಲ, ಆ ಬಗ್ಗೆ ಒಂದು ಮಾತೂ ಯಾಕಿಲ್ಲ. ಇದು ದೇಶಕ್ಕೆ ಅನ್ನ ಬೆಳೆಯುವ ರೈತರ ಅಪಮಾನವಲ್ಲವೇ? ಅವರಿಗೆ ಆ ಅಭಿವ್ಯಕ್ತಿಯ ಹಕ್ಕಿದೆ ಎಂದು ಒಪ್ಪಿಕೊಳ್ಳುತ್ತಲೇ ನೈತಿಕವಾಗಿ ಶಿಷ್ಟಾಚಾರಕ್ಕೆ ವಿರುದ್ಧ ಮಾತೆಂದು ರೈತರೇ ಹೇಳುತ್ತಿದ್ದಾರೆ.

ಇನ್ನೊಂದು ಅರ್ಥದಲ್ಲಿ ಶಿಷ್ಟಾಚಾರ ಅಲ್ಲದ್ದು ಭ್ರಷ್ಟಾಚಾರವೇ ಆಗುತ್ತದೆ. ಹೌದು ಭ್ರಷ್ಟಾ ಚಾರಕ್ಕೆ ಹಲವು ಮಜಲುಗಳಿವೆ. ಇವೆಲ್ಲ ಬೆಳವಣಿಗೆಯಲ್ಲಿ ಹೇಳಬಹುದಾದದ್ದೂ ಮೋದಿ ಸಿದ್ದರಾಮಯ್ಯರನ್ನು ಅಪಮಾನಿಸಿದರೂ ಇಲ್ಲದಿದ್ದರೂ ಹರ್ಯಾಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಹಾಗೆಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತಿವೆ.

2014ರಲ್ಲಿ ಮನೋಹರಲಾಲ್ ಕಟ್ಟರ್ ರನ್ನು ಮೋದಿ ಎಲ್ಲಿಂದಲೋ ಕರೆಯಿಸಿಕೊಂಡು ಹರ್ಯಾಣದ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿದ್ದರು. ಈಗ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ಸಿನ ದೀಪೆಂದರ್ ಹೂಡಾ ಕಟ್ಟರ್‌ರ ಬಿಜೆಪಿ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿ ಹೇಳುತ್ತಿದ್ದಾರೆ. ನಿರುದ್ಯೋಗ, ಮಾದಕ ವಸ್ತುಗಳಲ್ಲಿ ಪೋರ್ಟಲ್ ಮತ್ತು ಐಡಿ ವೆಬ್‌ಸೈಟ್, ಆ್ಯಪ್ ಅಕ್ರಮಗಳ ಬಗ್ಗೆ ಹರ್ಯಾಣದ ಬಿಜೆಪಿ ಸರಕಾರವನ್ನು ಕುಟುಕುತ್ತಿದ್ದಾರೆ. ಅವರ ಪ್ರಕಾರ ಇದೊಂದು ಕಟ್ಟರ್ ಸರಕಾರದ ಮಹಾ ಭ್ರಷ್ಟಾಚಾರ. ಹೊಸ ಬಗೆಯ ಐಡಿಗಳನ್ನು ತಂದು ಕಟ್ಟರ್ ಸರಕಾರ ಜನರನ್ನು ಓಡಾಡಿಸುತ್ತಿದೆ. ಇದೊಂದು ಜನರನ್ನು ಅಲೆದಾಡಿಸುವ ಭ್ರಷ್ಟಾಚಾರ ಎಂದು ಅವರು ಹೇಳಿದ್ದಾರೆ. ಹೀಗೆ ಸರಕಾರದ ಒಂದೊಂದು ಯೋಜನೆಗಳಿಗೆ ಒಂದೊಂದು ಪೋರ್ಟಲ್ ಏನೇನೊ ಹೊಸ ತಂತ್ರ ಕುತಂತ್ರಗಳು ಮುನ್ನೆಲೆಗೆ ಬರುವಾಗ ಅವೆಲ್ಲವನ್ನೂ ಶಿಷ್ಟಾಚಾರವೆಂದು ಪರಿಗಣಿಸುವುದಾದರೂ ಹೇಗೆ? ಹರಿಯಾಣದ ಮುಖ್ಯಮಂತ್ರಿಯಾಗಿ ಈಗ ಕಟ್ಟರ್ ಇಲ್ಲ. ಅವರು ಕೇಂದ್ರ ಸರಕಾರದಲ್ಲಿದ್ದಾರೆ. ಹರ್ಯಾಣದಲ್ಲಿ ಇತ್ತೀಚೆಗೆ ಜಿಂದಾಲ್ ಸಮೂಹ ಸಂಸ್ಥೆಗಳ ಪ್ರಮುಖೆ ಸಾವಿತ್ರಿ ಜಿಂದಾಲ್ ಹಿಸ್ಸಾರ್ ಕ್ಷೇತ್ರದಿಂದ ಚುನಾವಣೆಗೆ ಪಕ್ಷೇತರೆಯಾಗಿ ಇಳಿದಿದ್ದಾರೆ. ಬಿಜೆಪಿಗೆ ಹಿನ್ನಡೆಯಾಗಬಹುದಾದ ಮತ್ತೂ ಒಂದು ವಿಚಾರವಾಗಿದೆ ಇವೆಲ್ಲ. ಇರಲಿ,

ಹೌದು ಸ್ಪಷ್ಟವಾಗಿ ಹೇಳುವುದಾದರೆ ಜನರು ತಮಗೆ ಬೇಡ ಎನ್ನುವ ಯಾವುದನ್ನೂ ಅವರ ಮೇಲೆ ಹೇರುವುದು ಸಕ್ರಮ ಅಲ್ಲ. ಮೋದಿ ಸರಕಾರ ತಂದ ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನೇ ಎತ್ತಿಕೊಳ್ಳಿ. ಮುಸ್ಲಿಮರಿಗೆ ಬೇಡ ಅದು. ಮೋದಿ ಸರಕಾರಕ್ಕೆ ಬೇಕು. ಆದರೆ ಅದನ್ನು ಮುಸ್ಲಿಮರ ಮೇಲೆ ಹೇರಲು ನೋಡುತ್ತಿದೆ. ಇದು ಕೂಡ ಅಕ್ರಮ ಭ್ರಷ್ಟಾಚಾರಕ್ಕೆ ಸಮಾನವಾದ್ದೆಂದು ಯಾಕೆ ಹೇಳಬಾರದು? ಕೆಲವು ಹೆಸರಾಂತ ಉದ್ಯಮಿಗಳು ವಕ್ಪ್ ಜಮೀನಿನಲ್ಲಿ ಕೂತದ್ದನ್ನು ಸಕ್ರಮಗೊಳಿಸುವುದಕ್ಕಾಗಿ ವಕ್ಫ್ ತಿದ್ದುಪಡಿ ಮಸೂದೆ ತರಲಾಗಿದೆ ಎನ್ನುವವರಿದ್ದಾರೆ. ವಿಷಯ ಇದಾದರೆ ಸಿದ್ದರಾಮಯ್ಯ ಜಮೀನು ಭ್ರಷ್ಟಾಚಾರವನ್ನು ಎತ್ತುವ ಮೋದಿ ವಕ್ಫ್ ಆಸ್ತಿಯ ಮೇಲೆ ಕೂತವರನ್ನು ಮೊದಲು ಎತ್ತಿ ಹೊರ ಹಾಕಲಿ ಎಂದು ಹೇಳಬಹುದು. ವಾಸ್ತವದಲ್ಲಿ ಮಸೂದೆಯ ಮೂಲಕ ವಕ್ಫ್ ಆಸ್ತಿಗಳ ಮೇಲೆ ಸರಕಾರ ನಿಯಂತ್ರಣಕ್ಕೆ ಯತ್ನಿಸುತ್ತಿದೆ. ಇದು ಶಿಷ್ಟಾಚಾರ ಅಲ್ಲ. ಮಹಾ ಭ್ರಷ್ಟಾಚಾರವೇ. ಆದ್ದರಿಂದ ಭ್ರಷ್ಟಾಚಾರದಲ್ಲಿ ಚರ್ಚೆಗೆ ಬನ್ನಿ ಎಂದು ಮೋದಿಗೆ ಸಿದ್ಧರಾಮಯ್ಯ ಸವಾಲು ಹಾಕಿ ಕರೆದದ್ದರಲ್ಲಿ ತಪ್ಪಿಲ್ಲ. ಸರಿಯಾಗಿದೆ. ಮೈಸೂರಿನ ಮೂಡದ ಹಗರಣದಲ್ಲಿ ಬಿಜೆಪಿ ಪರ ವ್ಯಕ್ತಿಯೊಬ್ಬರು ರಾಜ್ಯಪಾಲರಿಗೆ ದೂರು ಕೊಡುತ್ತಾರೆ. ರಾಜ್ಯಪಾಲರು ವಿಚಾರಣೆಗೆ ಸಮ್ಮತಿ ಸೂಚಿಸುತ್ತಾರೆ. ಸಿದ್ದರಾಮಯ್ಯ ಕೋರ್ಟಿನ ಮೊರೆ ಹೋಗುತ್ತಾರೆ. ಹೈಕೋರ್ಟು ಸಿದ್ದರಾಮಯ್ಯರನ್ನು ಪ್ರಾಸಿಕ್ಯೂಟ್ ಮಾಡಬಹುದು ಎಂದು ಸಮ್ಮತಿಯನ್ನು ಕೂಡ ಸೂಚಿಸಿದೆ. ಈಗ ಸದ್ಯಕ್ಕೆ ಸಿದ್ದರಾಮಯ್ಯ ವಿರುದ್ಧ ಆಗಿದ್ದಿಷ್ಟೇ.

ವಾಸ್ತವದಲ್ಲಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಗಟ್ಟಿಯಾಗಿ ಕೂರಿಸಿದವರಲ್ಲಿ ಪ್ರಮುಖರು. ಅವರ ಕಾರ್ಯಶೈಲಿಯಿಂದ ಬಿಜೆಪಿ ಕರ್ನಾಟಕದಲ್ಲಿ ಕಳಾಹೀನವಾದದ್ದು. ಸಾಲದ್ದಕ್ಕೆ ಬಿಜೆಪಿಗರ ವಿರುದ್ಧ ಎಂತೆಂತಹ ಆರೋಪಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ಪೊಕ್ಸೋ ಕೇಸು, ಬಿಜೆಪಿಗರು ನಡೆಸಿದ ಹಳೆ ಹಗರಣಗಳ ಮರು ತನಿಖೆ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಆರೋಪದಲ್ಲಿ ಬಂಧನ… ಇಂತಹ ಹತ್ತಾರು ಘಟನಾವಳಿಗಳಲ್ಲಿ ಇಲ್ಲಿ ಬಿಜೆಪಿ ತನ್ನ ವರ್ಚಸ್ಸು ಕಳಚಿಕೊಂಡಿದೆ. ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣದಲ್ಲಿ ಸ್ವಲ್ಪ ಜೀವ ಹಿಡಿದು ನಿಂತುಕೊಂಡಿದೆ ಎಂಬಂತಾಗಿದೆ. ಸಿದ್ದರಾಮಯ್ಯರ ಪತ್ನಿಯ ಹೆಸರಿನಲ್ಲಿ ಮಂಜೂರಾದ ಜಾಗದ ವಿಷಯದಲ್ಲಿ ಮೇಲ್ನೋಟಕ್ಕೆ ಅಕ್ರಮ ಆಗಿದ್ದು ವ್ಯಕ್ತವಾಗುವುದಿಲ್ಲ. ಆದರೂ ತನಿಖೆಯ ನಂತರ ಅದು ಸ್ಪಷ್ಟವಾಗುತ್ತದೆ. ಇವತ್ತು ಮೋದಿ ಮತ್ತು ಮೋದಿ ಸರಕಾರದ ವಿರುದ್ಧ ಇಡಿ, ಸಿಬಿಐ, ಐಟಿಗಳನ್ನು ದುರುಪಯೋಗಿಸುತ್ತಿದೆ ಎಂಬ ಆರೋಪ, ಇಲೆಕ್ಟ್ರಾಲ್ ಬಾಂಡ್, ಪಿಎಂ ಕೇರ್, ರಾಫೆಲ್ ವಿಮಾನ ಖರೀದಿ, ದೇಶದ ಸಂಪತ್ತನ್ನು ಉದ್ಯಮಿಗಳ ನಿರ್ವಹಣೆಗೆ ಕೊಟ್ಟದ್ದು ಹೀಗೆ ಸಾಲು ಸಾಲು ಆರೋಪಗಳನ್ನು ಪ್ರತಿಪಕ್ಷಗಳು ಎತ್ತಿವೆ. ಹೀಗಾಗಿ ಮೋದಿಯ ಭ್ರಷ್ಟಾಚಾರ ಕತೆಗಳನ್ನೆಲ್ಲ ಹರ್ಯಾಣದಲ್ಲೂ ಕರ್ನಾಟಕದಲ್ಲೂ ಜನ ನಂಬಲ್ಲ.

ಇತ್ತೀಚೆಗೆ ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣಾ ಥಿಯರಿಯನ್ನು ಪಾಸು ಮಾಡಿತು. ಈವರೆಗೂ ಈ ದೇಶದಲ್ಲಿ ಇಂತಹ ಒಂದು ಪ್ರಯೋಗವೇ ಆಗಿಲ್ಲ. ವಿಶಾಲ ಭಾರತಕ್ಕೆ ಒಂದೇ ಸಲ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆಸುವುದು ಯಾವ ಶಿಷ್ಟಾಚಾರ ಇದು? ಯಾಕೆಂದರೆ ಈ ಹೊಸ ಪ್ರಯೋಗವನ್ನು ಪ್ರತಿಪಕ್ಷಗಳ ಸಹಿತ ದೇಶದ ರಾಜಕೀಯ ಮುತ್ಸದ್ದಿಗಳು ವಿರೋಧಿಸಿದ್ದಾರೆ. ಇಷ್ಟೆಲ್ಲ ವಿರೋಧವನ್ನು ಮೀರಿ ಕೇಂದ್ರ ಸಚಿವ ಸಂಪುಟ ಒಂದೇ ದೇಶ ಒಂದೇ ಚುನಾವಣೆಯನ್ನು ಜಾರಿಗೆ ತರಲು ಹೊರಟಿದೆ! ಹಾಗಿದ್ದರೆ ಇಲ್ಲಿ ಜನರಿಗೆ ಪ್ರತಿಪಕ್ಷಗಳಿಗೆ ಬೆಲೆಯಿಲ್ಲವೇ. ಇದನ್ನೇ ಸರ್ವಾಧಿಕಾರ ಎಂದು ಕರೆಯುವುದು. ಈ ಸರ್ವಾಧಿಕಾರಿ ಮನೋಸ್ಥಿತಿ ಕೂಡ ಒಂದು ಭ್ರಷ್ಟಾಚಾರವೇ. ಶಿಷ್ಟಾಚಾರವಂತೂ ಅಲ್ಲವೇ ಅಲ್ಲ.

ವಿಷಯ ಬದಲಿಸೋಣ:
ರಾಜ್ಯದ ಹೈಕೋರ್ಟು ಜಡ್ಜ್ ಜಸ್ಟಿಸ್ ವೇದವ್ಯಾಸಾಚಾರ್ ಮುಸ್ಲಿಮರನ್ನು ಮತ್ತು ಸ್ತ್ರೀತ್ವವನ್ನು ಅಪಮಾನಿಸಿದ್ದಕ್ಕೆ ಸುಪ್ರೀಂ ಕೋರ್ಟು ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಹೆಚ್ಚು ಮುಸ್ಲಿಮರೇ ವಾಸಿಸುವ ಜಾಗವನ್ನು ಅವರು ಪಾಕಿಸ್ತಾನಕ್ಕೆ ಹೋಲಿಸಿದ್ದರು. ತನ್ನ ಎದುರು ಕಕ್ಷಿಯ ಒಳ ಉಡುಪಿನ ಬಟ್ಟೆಯ ಬಣ್ಣವೂ ಕೂಡ ಮಹಿಳಾ ವಕೀಲರಿಗೆ ಗೊತ್ತಿದೆ ಎಂದೂ ಹೇಳಿದ್ದರು. ಇವೆರಡು ಪ್ರಕರಣಗಳು ಜಡ್ಜ್ ಪೀಠದಲ್ಲಿ ಕೂತಿರುವವರು ಎಂತಹ ಮಾನಸಿಕತೆ ಇಟ್ಟುಕೊಂಡಿದ್ದಾರೆ ಎಂಬುದನ್ನು ದೇಶಕ್ಕೆ ಮಾತ್ರವಲ್ಲ ವಿದೇಶಗಳಿಗೂ ತೋರಿಸಿಕೊಟ್ಟಿತು. ಜಡ್ಜ್ ಇಂತಹ ಹೇಳಿಕೆ ನೀಡಿದ ಎರಡು ವೀಡಿಯೊಗಳು ವೈರಲ್ ಆದ ನಂತರ ಸುಪ್ರೀಂ ಕೋರ್ಟೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತು. ಜಸ್ಟಿಸ್ ವೇದವ್ಯಾಸಾಚಾರ್ ಕ್ಷಮೆ ಕೇಳಿದ್ದರಿಂದ ಪ್ರಕರಣವನ್ನು ಅಲ್ಲಿಗೆ ಮುಗಿಸಿತು. ಸುಪ್ರೀಂಕೋರ್ಟು ಭಾರತದ ಯಾವ ಪ್ರದೇಶವನ್ನೂ ಪಾಕಿಸ್ತಾನ ಎಂದು ಕರೆಯಬಾರದೆಂದು ಆದೇಶಿಸಿತು. ಇದು ಜಡ್ಜ್ ಪೀಠದಲ್ಲಿ ಕೂತವರಿಗೆ ಪಾಠವಾಗಬಹುದು. ನಿರಾಧಾರವಾದ ಮಾತುಗಳು ದೇಶದ ಅಖಂಡತೆಯನ್ನು ತೊಂದರೆಗೀಡು ಮಾಡುತ್ತದೆ. ಜಡ್ಜ್ ಗಳು ಇಂತಹ ಮಾತುಗಳನ್ನು ಆಡಬಾರದು.

ಬೇರೆಯೇ ಒಂದು ವಿಚಾರವನ್ನು ಇಲ್ಲಿ ಎತ್ತಿಕೊಳ್ಳುವುದಾದರೆ ಇತ್ತೀಚೆಗೆ ಸೆಂಟ್ರಲ್ ಡ್ರಗ್ ಸ್ಟಾಂರ‍್ಡ್ ಆರ್ಗನೈ ಝೇಶನ್ ಮದ್ದುಗಳ ಗುಣಮಟ್ಟದಲ್ಲಿ ಮದ್ದು ತಯಾರಿಕಾ ಕಂಪೆನಿಗಳು ನಡೆಸುತ್ತಿರುವ ಹೇರಾಫೇರಿಯನ್ನು ಬಹಿರಂಗಪಡಿಸಿತು. ಅದರಲ್ಲೂ ನಾವು ತಿನ್ನುವ ಪ್ಯಾರಸಿಟಮೋಲ್ ಕೂಡ ಅಪಾಯಕಾರಿಯೇ ಆಗುತ್ತದೆ. ಅಂದರೆ ಗುಣಮಟ್ಟ ಪರಿಶೀಲನೆಯಲ್ಲಿ ಪ್ಯಾರಾಸಿಟಮೊಲ್ ಸಹಿತ 53 ಔಷಧಗಳು ವಿಫಲವಾಗಿದೆ. ಈ ಪರೀಕ್ಷೆಯನ್ನು ಸೆಂಟ್ರಲ್ ಡ್ರಗ್ ಸ್ಟಾಂರ‍್ಡ್ ಆರ್ಗನೈಝೇಶನ್ ಮಾಡಿದೆ. ಕ್ಯಾಲ್ಸಿಯಂ, ವಿಟಮಿನ್ ಡಿ-3 ಮದ್ದುಗಳು, ರಕ್ತದೊತ್ತಡ, ಶುಗರ್‌ಗಳ ಮದ್ದು ಪರೀಕ್ಷಿಸಿದಾಗ ಗುಣಮಟ್ಟದಲ್ಲಿ ಕೊರತೆ ಕಂಡು ಬಂದಿದೆ ಎಂದು ಇಂಡಿಯನ್ ರೆಗ್ಯುಲೇಟರ್ ನಡೆಸಿದ ಪರೀಕ್ಷೆಯ ಫಲಿತಾಂಶ ತಿಳಿಸುತ್ತಿವೆ.
ಪಾರಸಿಟಮೊಲ್ ಎಪಿ500, ಎಂಜಿ, ಪಾನ್-ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಸಾಫ್‌ಜೆಲ್ಸ್, ವಿಟಮಿನ್ ಸಿ, ಡಿ3 ಮಾತ್ರೆಗಳು ಗುಣಮಟ್ಟದಲ್ಲಿ ವಿಫಲವಾದ ಪಟ್ಟಿಗೆ ಸೇರಿದೆ. ಅಲ್ಕೊ ಲೆಬಟರಿ, ಹಿಂದುಸ್ತಾನ್ ಆಂಟಿಬಯೊಟಿಕ್ಸ್, ಹೆಟ್ರೊ ಡ್ರಗ್ಸ್, ಕರ್ನಾಟಕ ಆಂಟಿಬಯೊಟಿಕ್ಸ್, ಫ್ಯೂರ್ ಆಂಡ್ ಕೇರ್ ಹೆಲ್ತ್ಕೇರ್, ಮೆಗ್‌ಲೈಫ್ ಸಯನ್ಸ್ ಕಂಪೆನಿಗಳು ಮದ್ದುಗಳು ಇವು.

ಗುಣಮಟ್ಟದಲ್ಲಿ ವಿಫಲವಾದ 53 ಮದ್ದುಗಳ ಎರಡು ಪಟ್ಟಿಯನ್ನು ಕಳೆದ ದಿವಸ ಬಿಡುಗಡೆಗೊಳಿಸಲಾಯಿತು. ಇದೇವೇಳೆ ವರದಿಯನ್ನು ಒಪ್ಪಿಕೊಳ್ಳಲು ತಯಾರಕ ಕಂಪೆನಿಗಳು ಸಿದ್ಧವಾಗಿಲ್ಲ. ಪರೀಕ್ಷೆಯಿಂದ ಸಾಬೀತಾಗಿಯೂ ತಪ್ಪೊಪ್ಪಿಕೊಳ್ಳಲು ಸಿದ್ಧವಿಲ್ಲದ ಕಂಪೆನಿಗಳಿಗೆ ಎಲ್ಲಿಂದ ಭಂಡ ಧೈರ್ಯ ಬಂತು. ವ್ಯವಸ್ಥೆಯೇ ಮಹಾಭ್ರಷ್ಟವಾಗುವುದರಿಂದ ಹೀಗೆಲ್ಲ ಸಾಧ್ಯವಾಗುತ್ತಿದೆ. ಈ ಕಂಪೆನಿಗಳಿಗೆ ಹಣ ಮಾಡುವುದು ಮುಖ್ಯ. ಜನರ ಜೀವ ಪ್ರಾಮುಖ್ಯದ್ದೇ ಅಲ್ಲ. ಅಂದರೆ ರಾಜಕೀಯ ಪಾರ್ಟಿಗಳ ಇಲಕ್ಟ್ರಾಲ್ ಬಾಂಡ್‌ಗಳನ್ನು ಇವು ಯಾಕೆ ಖರೀದಿಸಿರಲಾರದು ಎಂದು ಜನರು ಪ್ರಶ್ನಿಸಬಹುದಾಗಿದೆ. ಸುಪ್ರೀಂ ಕೋರ್ಟಿನ ಮೂಲಕ ಬಹಿರಂಗವಾದ ಇಲಕ್ಟ್ರಾಲ್ ಬಾಂಡ್ ಮೂಲಕ ಕೋಟಿ ಕೋಟಿ ಹಣ ಕಪ್ಪ ಕೊಟ್ಟವರಲ್ಲಿ ಔಷಧ ಕಂಪೆನಿಯೂ ಇತ್ತು. ಹೀಗೆ ಆಳುವವರಿಗೆ ಒಂದಿಲ್ಲ ಒಂದು ರೀತಿಯಲ್ಲಿ ಲಂಚ ಕೊಟ್ಟು ಭ್ರಷ್ಟಾಚಾರ ಎಸಗಿದ್ದಾರೆ. ಜನರ ಜೀವಕ್ಕೆ ಅಪಾಯ ತಂದೊಡ್ಡುವ ಮಹಾ ಭ್ರಷ್ಟಾಚಾರ ಇದು. ಇವತ್ತು ಇಲೆಕ್ಟ್ರಾಲ್ ಬಾಂಡ್‌ನಲ್ಲಿ ಅತೀ ಹೆಚ್ಚು ಹಣ ಸಂಗ್ರಹಿಸಿದ್ದು ಮೋದಿಯ ಬಿಜೆಪಿ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ಹೇಳಿದೆ. ನೋಡಿ ಇಂತಹ ಮೋದಿ ಹರ್ಯಾಣದ ಸೋನಿಪತ್‌ನಲ್ಲಿ ಸಿದ್ದರಾಮಯ್ಯರನ್ನು ಮಹಾ ಭ್ರಷ್ಟಾಚಾರಿ ಎಂದು ಕರೆದುದು. ವಿಚಿತ್ರ ಅಲ್ವೇ.

ವಿಷಯಕ್ಕೆ ಬರೋಣ:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಷ್ಟು ವಿಚಿತ್ರವಾದ ನೀತಿ ಕಾರ್ಯಕ್ರಮಗಳನ್ನು ಮುಂದಿಟ್ಟರೂ ಜಗತ್ತು ಈಗ ಅಚ್ಚರಿಪಡುವುದಿಲ್ಲ. ಪ್ರಜಾಪ್ರಭುತ್ವ ಪರಂಪರೆ, ಧರ್ಮ ನಿರಪೇಕ್ಷ ಮೌಲ್ಯಗಳೆಲ್ಲ ಹಿಂದುತ್ವ ಸರ್ವಾಧಿಕಾರದ ಕಾಲಕೆಳಗೆ ಹಾಕುವ ಅಪಾರ ಪರಿಶ್ರಮವನ್ನು ಕಳೆದ ಹತ್ತು ವರ್ಷದಿಂದ ಮೋದಿ ಕೂಟ ಮಾಡುತ್ತಾ ಇದೆ.

ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಭ್ರಷ್ಟಾಚಾರ ಕುರಿತು ಒಂದು ಅಕ್ಷರ ಮಾತಾಡುವ ಅರ್ಹತೆಯಿಲ್ಲ ಎಂದು ಹೇಳಿದ್ದಾರೆ. ತನ್ನ ವಿರುದ್ಧ ಬಿಜೆಪಿ ನಾಯಕರ ಸಂಚು ಮೂಡಾ ಪ್ರಕರಣವೆಂದು ಹೇಳುತ್ತಾರೆ. ಕರ್ನಾಟಕದ ಅನೇಕ ಬಿಜೆಪಿ ನಾಯಕರು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೂ ಇಡಿ ಐಟಿ ಸಿಬಿಐ ಅವರನ್ನು ಮುಟ್ಟಿಲ್ಲ. ಭ್ರಷ್ಟಾಚಾರ ಆರೋಪ ಇರುವ ಪ್ರತಿಪಕ್ಷದ 25 ನಾಯಕರು 2014ರ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಿಮಂತ ಬಿಶ್ವ ಶರ್ಮ, ಸುವೇಂದು ಅಧಿಕಾರಿ ಸಹಿತ 23 ಮಂದಿಗೆ ಕೇಂದ್ರ ತನಿಖಾ ಏಜೆನ್ಸಿಗಳು ಕ್ಲೀನ್ ಚಿಟ್ ನೀಡಿವೆ. ತನಿಖಾಧಿಕಾರಿಗಳ ಮೂಲಕ ಬಿಜೆಪಿಯೇ ಒಂದು ಕಾಲದಲ್ಲಿ ಭ್ರಷ್ಟಾಚಾರಿಗಳೆಂದು ಕರೆದವರನ್ನು ಶುಭ್ರ ಶುಚಿ ಎಂದು ಸರ್ಟಿಫಿಕೇಟು ಕೊಡಿಸುವುದು ಕೂಡ ಭ್ರಷ್ಟಾಚಾರವಾಗಿದೆ.

ಹಾಗೇ ಹೇಳುವುದಾರೆ ಭ್ರಷ್ಟಾಚಾರ ಎಂಬುದು ಒಂದು ಜಮೀನು ಪಡೆಯುವಲ್ಲಿ, ಲಂಚ ಪಡೆಯುವುದಕ್ಕೋ, ಅಕ್ರಮ ರೀತಿಯಲ್ಲಿ ಸರಕಾರಿ ಗುತ್ತೆಗಳನ್ನು ನೀಡುವುದಕ್ಕೋ ಸೀಮಿತವಾಗುತ್ತದೆಯೇ? ಇಲ್ಲ. ಪ್ರತಿಪಕ್ಷಗಳ ಸರಕಾರಗಳನ್ನು ಉರುಳಿಸಲು ಬಿಜೆಪಿ ಬಳಸುತ್ತಿರುವ ಆಪರೇಷನ್ ಕಮಲ ಕೂಡ ಮಹಾ ಭ್ರಷ್ಟಾಚಾರ, ಶಿಷ್ಟಾಚಾರದ ಕಗ್ಗೊಲೆಯೇ ಆಗಿದೆ. ಕರ್ನಾಟಕದಲ್ಲಿ, ಮಹಾರಾಷ್ಟ್ರದಲ್ಲಿ, ಗೋವಾದಲ್ಲಿ, ಮಣಿಪುರದಲ್ಲಿ ಒಂದಿಲ್ಲ ಒಂದು ರೀತಿಯ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಕೆಡವಿ ಹಾಕಿತು. ಇದು ಈ ದೇಶದ ಪ್ರಜಾಪ್ರಭುತ್ವದ ವಿರುದ್ಧ ಮಹಾ ಭ್ರಷ್ಟಾಚಾರವಾಗಿದೆ. ಈಗ ಒಂದು ದೇಶ ಒಂದು ಚುನಾವಣೆಯಿಂದ ನಮ್ಮ ವೈವಿಧ್ಯತೆಯ ಮಹತ್ವವನ್ನು ಇಲ್ಲದಾಗಿಸಿ ಚುನಾವಣೆಯ ಮೂಲಕ ಮೋದೀಕರಣ ನಡೆಸುವುದು ಕೂಡ ಭ್ರಷ್ಟಾಚಾರವೇ. ಅಂತೂ ಕರ್ನಾಟಕದ ಜನ ಮೋದಿಯ ಈ ವಾದವನ್ನು ಖಂಡಿತ ಸ್ವೀಕರಿಸಲಾರರು. ಅಧಿಕಾರಕ್ಕಾಗಿ ಬಿಜೆಪಿಯವರು ಯಾವ ಮಟ್ಟಕ್ಕೂ ಹೋಗಬಹದು. ಇದರಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಜನರಿಗಲ್ಲದೆ ತಮಗೆ ಬೇಕಾದ್ದನ್ನು ಮಾಡುವ ಆಡಳಿತಗಾರರು ಭ್ರಷ್ಟಾಚಾರಿಗಳು ಸರ್ವಾಧಿಕಾರಿಗಳು ಆಗಿದ್ದಾರೆ ಎಂದು ಜನಕ್ಕೆ ಗೊತ್ತಿದೆ. ಅದು ಮೋದಿಯೇ ಆದರೂ ಕೂಡ.