ಜೈಲುಗಳಲ್ಲಿ ಜಾತಿ ತಾರತಮ್ಯ ; ಜಾತಿ ಭೇದ ತಡೆಗೆ ಸುಪ್ರೀಂ ಕೋರ್ಟ್ ಮಹತ್ವದ ಕ್ರಮ

0
130

ಸನ್ಮಾರ್ಗ ವಾರ್ತೆ

ರಾಜ್ಯ ಕಾರಾಗೃಹದಲ್ಲಿ ಕೈದಿಗಳಿಗೆ ಅವರ ಜಾತಿಯ ಆಧಾರದ ಮೇಲೆ ಕೆಲಸ ಹಂಚುವ ಮತ್ತು ಬ್ಯಾರಕ್ ಹಂಚುವ ಕೈಪಿಡಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಾತ್ರವಲ್ಲದೆ ಜೈಲುಗಳಲ್ಲಿ ಜಾತಿ ತಾರತಮ್ಯ ಸಹಿಸಲಾಗದು, ಇದು ಸಂವಿಧಾನ ವಿರೋಧಿ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳು ಜೆಬಿ ಪಾರ್ಡಿವಾಲಾ ಮತ್ತು ಮನೋಜ್ ಮಿಶ್ರ ಅವರ ತ್ರಿಸದಸ್ಯ ಪೀಠವು ಪತ್ರಕರ್ತೆ ಸುಕನ್ಯ ಶಾಂತಾ ಅವರ ವರದಿ ಆಧಾರಿತ ಮನವಿಯನ್ನು ಮುಂದಿಟ್ಟು ಈ ತೀರ್ಪು ನೀಡಿದೆ. ಭಾರತಾದ್ಯಂತ ಜೈಲಿನಲ್ಲಿ ಜಾತಿ ಆಧಾರಿತ ಭೇದಾಭಾವದ ಕುರಿತು ಸುಕನ್ಯಾ ಶಾಂತ ಬರೆದ ಲೇಖನವನ್ನು “ದಿ ವೈರ್” ಪ್ರಕಟಿಸಿತ್ತು.

ಒಟ್ಟು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ, ತಮ್ಮ ಕಾರಾಗೃಹ ಕೈಪಿಡಿಗಳನ್ನು ತಿದ್ದುಪಡಿ ಮಾಡಲು ಕೋರ್ಟ್ ನಿರ್ದೇಶಿಸಿದ್ದು, ಜಾತಿ ಆಧಾರಿತ ವಿಭಜನೆಗೆ ವಿರುದ್ಧವಾಗಿ ಮಾದರಿ ಕಾರಾಗೃಹ ರೂಪಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಮಾತ್ರವಲ್ಲದೆ, ಜೈಲು ದಾಖಲೆಗಳಲ್ಲಿ ಕೈದಿಗಳ ಜಾತಿ ಆಧಾರಿತ ಮಾಹಿತಿಯನ್ನು ತೆಗೆದುಹಾಕಲು ಕೋರ್ಟ್ ಆದೇಶಿಸಿದೆ.

ಜೈಲುಗಳಲ್ಲಿ ಒಳಚರಂಡಿ ಶುಚಿ ಕೆಲಸ ನಿರ್ದಿಷ್ಟ ಜಾತಿಯ ಕೈದಿಗಳಿಗೆ ಮತ್ತು ಅಡುಗೆ ಕೆಲಸ ಬೇರೊಂದು ಜಾತಿಯ ಕೈದಿಗಳಿಗೆ ಎಂಬ ಭೇದಾಭಾವ ಸಂವಿಧಾನದ 15ನೇ ವಿಧಿಯ ಉಲ್ಲಂಘನೆ ಎಂದು ಕೋರ್ಟ್ ನಿರ್ಣಯಿಸಿದೆ. ಜೈಲುಗಳಲ್ಲಿ ಕೈದಿಗಳೊಂದಿಗೆ ಅಮಾನವೀಯ ಕೆಲಸಗಳನ್ನು ಮಾಡಿಸಬಾರದು, ಯಾರಾದರೂ ಹಾಗೆ ಮಾಡಿಸಿದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಸಾಮಾನ್ಯ ಜೈಲು ಶಿಕ್ಷೆಗೆ ಒಳಪಡುವ ವ್ಯಕ್ತಿಗೆ ಅವರ ಜಾತಿಯ ಆಧಾರದ ಮೇಲೆ ಶುಚಿ ಕೆಲಸ ನೀಡಬಹುದು ಎಂದು ಉತ್ತರ ಪ್ರದೇಶ ಕಾರಾಗೃಹ ಕೈಪಿಡಿ ನಿಯಮ ಹೇಳಿದರೆ, ರಾಜಸ್ಥಾನ ಕಾರಾಗೃಹ ಕೈಪಿಡಿಯಲ್ಲಿ ನಿರ್ದಿಷ್ಟ ಜಾತಿಯ ಕೈದಿಗಳನ್ನು ತಿರುಕರು, ಅಪರಾಧಿಗಳು ಎಂದು ವರ್ಗೀಕರಣ ಮಾಡಲಾಗಿದೆ. 13 ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್, ಬಿಹಾರ ಮತ್ತು ಮಹಾರಾಷ್ಟ್ರಗಳ ಕಾರಾಗೃಹ ಕೈಪಿಡಿಗಳಲ್ಲಿನ ಒಂದೇ ರೀತಿಯ ಭೇದಾಭಾವದ ಕಾನೂನುಗಳಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಸುಕನ್ಯಾ ಶಾಂತಾರವರನ್ನು ಮೆಚ್ಚಿ, “ಅವರು ವಿವರವಾಗಿ ಬರೆದ ಲೇಖನಕ್ಕೆ ಧನ್ಯವಾದಗಳು” ಎಂದರು.