ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ನಾಪತ್ತೆ: ಕುಳೂರು ಸೇತುವೆಯಲ್ಲಿ ಕಾರು ಪತ್ತೆ

0
667

ಸನ್ಮಾರ್ಗ ವಾರ್ತೆ

ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಕೂಳೂರು ಸೇತುವೆಯ ಬಳಿ ನಾಪತ್ತೆಯಾಗಿದ್ದಾರೆ.

ಇಂದು ಮುಂಜಾನೆ 6 ಗಂಟೆಗೆ ಕದ್ರಿ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು, ಮುಮ್ತಾಜ್ ಅಲಿ ಅವರ ಬಿಎಂಡಬ್ಲ್ಯೂಕಾರು ಸೇತುವೆಯ ಬಳಿ ಪಾರ್ಕ್ ಮಾಡಿರುವುದು ಪತ್ತೆಯಾಗಿದೆ.

ಅವರ ನಾಪತ್ತೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸ್ಥಳಕ್ಕೆ ಬಂದು 2 ಬೋಟ್‌ಗಳೊಂದಿಗೆ ಕೂಳೂರಿನ ಫಲ್ಗುಣಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೆ ಮುಮ್ತಾಜ್ ಅಲಿ ಪತ್ತೆಯಾಗಿಲ್ಲ, ಮತ್ತು ಶೋಧ ಮುಂದುವರಿದಿರುವುದಾಗಿ ತಿಳಿದು ಬಂದಿದೆ. ವಿಷಯ ಹರಿದಾಡುತ್ತಿದ್ದಂತೆಯೇ ನೂರಾರು ಮಂದಿ ಕೂಳೂರು ಸೇತುವೆಯ ಬಳಿ ಜಮಾಯಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಅನುಪಮ್ ಅಗರವಾಲ್ ಸೇರಿದಂತೆ ಹಲವು ಮಂದಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸುದ್ದಿಸಂಸ್ಥೆ ಎಎನ್‌ಐ ಪ್ರತಿನಿಧಿಯೊಂದಿಗೆ ಮಾತನಾಡಿರುವ ಪೊಲೀಸ್ ಕಮಿಷನರ್, “ಇಂದು ಮುಂಜಾನೆ ಕೂಳೂರು ಸೇತುವೆಯ ಬಳಿ ಉದ್ಯಮಿ ಮುಮ್ತಾಜ್ ಅಲಿ ಅವರ ವಾಹನ ಪತ್ತೆಯಾಗಿದೆ ಎಂಬ ಮಾಹಿತಿ ನಮಗೆ ಬಂತು. ಅವರು ಸೇತುವೆಯಿಂದ ಜಿಗಿದಿರಬಹುದು ಎಂಬ ಅನುಮಾನ ಇದೆ” ಎಂದು ತಿಳಿಸಿದ್ದಾರೆ.

“ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ತನ್ನ ಕಾರಿನಲ್ಲಿ ಮನೆಯಿಂದ ಹೊರಟು ನಗರದೆಲ್ಲೆಡೆ ಸುತ್ತಾಡಿದ್ದು, 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಕಾರನ್ನು ನಿಲ್ಲಿಸಿದ್ದಾರೆ. ನಂತರ ಅವರ ಮಗಳು ಅಪಘಾತವಾಗಿದೆ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್‌ಡಿಆರ್‌ಎಫ್‌ ಮತ್ತು ಕೋಸ್ಟ್ ಗಾರ್ಡ್ ತಂಡಗಳು ನದಿಯಲ್ಲಿ ಹುಡುಕಾಟ ನಡೆಸುತ್ತಿವೆ ಮತ್ತು ಅವರು ನದಿಗೆ ಹಾರಿದ್ದಾರೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಮಿಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ.