ನಾಲಗೆಯ ಬಗ್ಗೆ 100% ಗ್ಯಾರಂಟಿ ಕೊಡಬಲ್ಲಿರಾ?

0
74

ಸನ್ಮಾರ್ಗ ವಾರ್ತೆ

✍️ಮುಖ್ತಾರ್ ಅಹ್ಮದ್
ಪಾಣೆಮಂಗಳೂರು

“ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ. ಒಳಿತು ಸ್ವರ್ಗದೆಡೆಗೆ ಒಯ್ಯುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದುದರಿಂದ ನಾವು ಸತ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು.

“ತನ್ನ ನಾಲಗೆ ಮತ್ತು ಗುಪ್ತಾಂಗಗಳ ಬಗ್ಗೆ (ಅವುಗಳನ್ನು ಪಾಪ ಕಾರ್ಯಗಳಿಗೆ ಉಪಯೋಗಿಸದಂತೆ ರಕ್ಷಿಸುವೆನೆಂದು) ಯಾರಾದರೂ ಗ್ಯಾರಂಟಿ ಕೊಟ್ಟರೆ, ನಾನು ಅವನಿಗೆ ಸ್ವರ್ಗದ ಗ್ಯಾರಂಟಿ ನೀಡುವೆನು.” (ಹದೀಸ್)

ಈ ಪ್ರವಾದಿ ವಚನದ ಬಗ್ಗೆ ನಾವೆಷ್ಟು ಗಂಭೀರವಾಗಿದ್ದೇವೆ?
ಗುಪ್ತಾಂಗಗಳ ಬಗ್ಗೆ ಗ್ಯಾರಂಟಿ ನೀಡಬಹುದಾದರೂ ನಾಲಗೆಯ ಬಗ್ಗೆ ಕಷ್ಟ ಸಾಧ್ಯ. ಬಹಳಷ್ಟು ಜನರು ತನ್ನ ಪುಣ್ಯಗಳನ್ನು ನಾಲಗೆಯ ನಿಮಿತ್ತ ಕಳೆದುಕೊಂಡು ಪರಲೋಕಕ್ಕೆ ತಲುಪುವಾಗ ದಿವಾಳಿಯಾಗುವ ಸನ್ನಿವೇಶವನ್ನು ಪ್ರವಾದಿ(ಸ) ವಿವರಿಸಿದ್ದಾರೆ. ನಾಲಗೆ ಬಹಳ ಕೋಮಲವಾದ ಮಾಂಸದ ಮುದ್ದೆ. ಆದರೆ ಅದರ ಪ್ರಭಾವ ಬಹಳ ಸೂಕ್ಷ್ಮವಾಗಿರುತ್ತದೆ. ನಾಲಗೆಯ ಮೂಲಕ ಕೋಟ್ಯಂತರ ಜನರ ಮನಸ್ಸು ಗೆಲ್ಲಬಹುದು ಅಥವಾ ಸೋಲಬಹುದು. ಆದುದರಿಂದ ನಾಲಗೆಯ ನಿಯಂತ್ರಣ ಅತೀ ಅಗತ್ಯ. ಪ್ರವಾದಿವರ್ಯರ(ಸ) ವಚನಗಳು ಮತ್ತು ಪವಿತ್ರ ಕುರ್‌ಆನಿನ ಸೂಕ್ತಗಳಿಂದಲೂ ಇದು ತಿಳಿಯಬಹುದು.

“ಅವನ ಬಾಯಿಯಿಂದ ಹೊರಡುವ ಯಾವ ಮಾತು ಕೂಡ ಸದಾ ಸನ್ನದ್ಧವಿರುವ ಒಬ್ಬ ಕಾವಲುಗಾರನಿಂದ ದಾಖಲಿಸ್ಪಡದೆ ಇರುವುದಿಲ್ಲ.” (ಪವಿತ್ರ ಕುರ್‌ಆನ್- 50: 18)

ಪ್ರವಾದಿ(ಸ) ಹೇಳಿದರು, “ಪ್ರತಿದಿನ ಬೆಳಿಗ್ಗೆ ಮನುಷ್ಯನ ದೇಹದ ಇತರ ಎಲ್ಲ ಅಂಗಗಳು, ಅಸಹಾಯಕರಾಗಿ ನಾಲಗೆಯನ್ನು ಈ ರೀತಿಯಾಗಿ ಬೇಡಿಕೊಳ್ಳುತ್ತವೆ. ನಮ್ಮ ವಿಷಯದಲ್ಲಿ ಅಲ್ಲಾಹನಲ್ಲಿ ಭಯಪಡು, ಏಕೆಂದರೆ ನೀನು ತಪ್ಪಿ ನಡೆದರೆ, ಅದರ ನಷ್ಟ ನಾವೂ ಭರಿಸಬೇಕಾಗುತ್ತದೆ.” (ತಿರ್ಮಿದಿ)

ಆಧುನಿಕ ಯುಗದಲ್ಲಿ ನಾಲಗೆಯೊಂದಿಗೆ ತೊರ‍್ಬೆರಳು ಕೂಡ ತಪ್ಪಿ ನಡೆಯುತ್ತದೆ. ಮೊಬೈಲ್‌ನಲ್ಲಿ ಬೇಕಾಬಿಟ್ಟಿ ಬರೆಯುವ ಪ್ರವೃತ್ತಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ವೇಳೆ ಪ್ರವಾದಿವರ್ಯರ(ಸ) ಕಾಲದಲ್ಲಿ ಮೊಬೈಲ್ ಬಳಕೆ ಇರುತ್ತಿದ್ದರೆ, ಅದರ ದುರ್ಬಳಕೆ ಮತ್ತು ಅಪಾಯದ ಬಗ್ಗೆ ಖಂಡಿತವಾಗಿಯೂ ಎಚ್ಚರಿಸುತ್ತಿದ್ದರು. ನಾವು ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂದು ಅಪರಿಚಿತ ಜನರೊಂದಿಗೂ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂನಲ್ಲಿ ಬಹಳ ಕೀಳ್ಮಟದಲ್ಲಿ ಸಂಹವನ ನಡೆಸುವುದನ್ನು ಕಾಣುತ್ತೇವೆ. ಇಸ್ಲಾಮಿನ ಬಗ್ಗೆ ತಪ್ಪುಕಲ್ಪನೆ ಇರುವ ಜನರು ಕೆಟ್ಟದಾಗಿ ಬರೆಯಬಹುದು. ಅದನ್ನು ನೋಡಿ ಉದ್ವೇಗಕ್ಕೆ ಒಳಗಾಗದೆ ಒಳ್ಳೆಯ ರೀತಿಯಲ್ಲಿ ಉತ್ತರಿಸುವ ಚಾಕುಚಕ್ಯತೆ ನಮ್ಮಲ್ಲಿರಬೇಕು.

ನಮ್ಮ ಎಲ್ಲ ವರ್ತನೆಗಳೆಲ್ಲ ನಡೆ-ನುಡಿಯ ಮೂಲಕ ಪ್ರತಿಯೊಂದನ್ನು ದೇವಚರರು ದಾಖಲಿಸುತ್ತಿದ್ದಾರೆ. ಕೆಲವೊಮ್ಮೆ ನಾವು ಹಂಚಿಕೊಳ್ಳುವ ಕೆಲವು ವೀಡಿಯೋಗಳನ್ನು ಸ್ವತಃ ಫೇಸ್‌ಬುಕ್ ತಡೆಹಿಡಿಯುವುದನ್ನು ಗಮನಿಸಿರಬಹುದು. ಆದುದರಿಂದ ಅವಾಚ್ಯ ಮತ್ತು ಅಸಭ್ಯ ಪದಬಳಕೆ, ನಿಂದನೆ, ತೇಜೋವಧೆಗಳು ಮುಸ್ಲಿಮರಿಂದ ನಡೆಯಬಾರದು. ಅದು ಸಮುದಾಯದ ಚಿತ್ರಣವನ್ನು ಬಿಂಬಿಸುತ್ತದೆ.

ಸಮುದಾಯವನ್ನು ಖೈರೆ ಉಮ್ಮತ್’ ಎಂದು ಕುರ್‌ಆನ್ ಬಣ್ಣಿಸಿದೆ. ಅದರ ಪ್ರತಿಯೊಬ್ಬ ವ್ಯಕ್ತಿಯೂ ಒಳ್ಳೆಯ ರೀತಿಯಲ್ಲಿ ಸಂಹವನ ನಡೆಸುವವನಾಗಿರಬೇಕು. ಯಾವುದೇ ವಿಷಯದ ಸತ್ಯ ಮತ್ತು ಸುಳ್ಳನ್ನು ಪರಾಮರ್ಶಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಏಕೆಂದರೆ ಅದರ ಮೂಲಕ ತಪ್ಪುಕಲ್ಪನೆಗಳು, ನಕರಾತ್ಮಕ ಚಿಂತನೆಗಳು ಪರಿಸರಿಸುವಂತಾಗುತ್ತದೆ. ಒಬ್ಬರ ಮೊಬೈಲ್‌ನಿಂದ ಹಂಚಿಕೊAಡ ವಿಷಯ ಹಲವು ಕಡೆಗಳಿಗೆ ಹಬ್ಬಿ ಚಿಕ್ಕ ವಿಷಯಗಳು ದೊಡ್ಡಾಗುತ್ತದೆ. ಕೆಲವು ಸಲ ಹಳೆಯ ವಿಡಿಯೋ ಹಂಚಿಕೊಳ್ಳುವ ದುಷ್ಟ ಪ್ರವೃತ್ತಿಯೂ ಇದೆ. ಹಾಗೆಯೇ ಎಡಿಟ್ ಮಾಡಿದ ನಕಲಿ ವಿಡಿಯೋ ಸಂದೇಶಗಳು ಇರುತ್ತದೆ. ಪ್ರವಾದಿ(ಸ) ಹೇಳುತ್ತಾರೆ: "ಒಳ್ಳೆಯ ಮಾತನ್ನಾಡಲಿ, ಇಲ್ಲದಿದ್ದರೆ ಮೌನ ಪಾಲಿಸಲಿ." ಈ ಮಾತು ಕೇವಲ ನಾಲಗೆಗೆ ಸೀಮಿತವಾಗಬಾರದು. ಪ್ರವಾ ದಿ(ಸ) ಹೇಳು ತ್ತಾರೆ, "ಒಂದು ಮಾತನ್ನು ಪರಾಮರ್ಶಿಸದೆ ಮುಂದಕ್ಕೆ ತಲುಪಿಸುವ ಮನುಷ್ಯನ ಕುಕೃತ್ಯವು ಅವನು ಸುಳ್ಳುಗಾರನೆಂಬುದಕ್ಕೆ ಸಾಕ್ಷಿಯಾಗಿದೆ." (ಮುಸ್ಲಿಮ್)

ಹಾಗೆಯೇ ಹಲವು ಸಲ ಅನೈತಿಕ ಸಂಬಂಧ,ಬಲತ್ಕಾರ ಅಶ್ಲೀಲತೆಗೊಳಪಟ್ಟ ವಿಡಿಯೋ, ಆಡಿಯೋ ಅಥವಾ ಲೇಖನಗಳನ್ನು ಫಾರ್ವಡ್ ಮಾಡುವವರೂ ಇದ್ದಾರೆ. ಅದು ನಿಜ ಸಂಗತಿಯಾದರೆ ಧೂಷಣೆಯಾಗಿದೆ. “ಇಲ್ಲದಿರುವುದನ್ನು ಹೇಳಿದರೆ ನೀನು ಆತನ ಮೇಲೆ ಸುಳ್ಳಾರೋಪ (ಬುಹ್ತಾನ್) ಹೊರಿಸಿದೆ” ಎಂಬ ಹದೀಸ್ ಮುಸ್ಲಿಮ್‌ನಲ್ಲಿದೆ. ಅದೇ ರೀತಿ “ನಿನ್ನ ಸಹೋದರನ ಕುರಿತು ಆತನಿಗೆ ಇಷ್ಟ ಇಲ್ಲದಿರುವುದನ್ನು ಹೇಳುವುದು ಪರನಿಂದೆಯಾಗಿದೆ”. “ದೂಷಣೆಯು ಸತ್ಯವಾಗಿದ್ದರೆ ಅದು ಪರನಿಂದೆಯಾಗಿದೆ. ಇಬ್ಬರನ್ನೂ ಪರಸ್ಪರ ಜಗಳಾಡಿಸಲು ಆಗಿದ್ದರೆ ಚಾಡಿಯಾಗಿದೆ.” (ತಫ್ಹೀಮುಲ್ ಕುರ್‌ಆನ್)

ಪ್ರವಾದಿ(ಸ) ಮಿಅï‌ರಾಜ್‌ಗೆ ಹೋದಾಗ (ಗಗನಾರೋಹಣ) ಕೆಲವರ ಉಗುರುಗಳು ತಾಮ್ರದ್ದಾಗಿರುವುದನ್ನು ನೋಡಿದರು. ಅವರು ಅವುಗಳಿಂದ ತಮ್ಮ ಮುಖ ಮತ್ತು ಎದೆಯನ್ನು ಪರಚಿಕೊಂಡು ಗಾಯಗೊಳ್ಳುತ್ತಿದ್ದರು. ಅವರ ಬಗ್ಗೆ ಹ. ಜಿಬ್ರೀಲ್ (ಅ) ಅವರೊಂದಿಗೆ ವಿಚಾರಿಸಿದಾಗ, ಇವರು ಜನರ ಮಾಂಸ (ನಿಂದನೆ) ತಿನ್ನುವವರಾಗಿದ್ದರು ಮತ್ತು ಜನರ ಘನತೆಗೆ ಧಕ್ಕೆ ತರುವವರಾಗಿದ್ದರು ಎಂದರು.

ಓ ಜನರೇ! ತನ್ನ ಮುಸ್ಲಿಮ್ ಸಹೋದರನ ಪರನಿಂದೆ ಮಾಡಬೇಡಿ ಮತ್ತು ಅವರ ರಹಸ್ಯ ನಡೆಗಳನ್ನು ಕೆದಕಿ ನೋಡಬಾರದು. ಯಾರು ತನ್ನ ಸಹೋದರನ ಗೌಪ್ಯವನ್ನು ಕೆದಕಿದನೋ, ಆತನ ಗೌಪ್ಯವನ್ನು ಅಲ್ಲಾಹನೂ ಕೆದುಕುವನು. ಅಲ್ಲಾಹನು ಯಾರ ಗೌಪ್ಯ ವನ್ನು ಕೆದಕಿದನೋ ಆತ ತನ್ನ ಮನೆಯೊಳಗಿದ್ದರೂ ಅಲ್ಲಾಹ್ ಅಪಮಾನಿಸುವನು. (ಅಬೂದಾವೂದ್)

ಇವತ್ತು ಇದು ವ್ಯಕ್ತಿಗೆ ಸೀಮಿತವಾಗಿಲ್ಲ, ಬದಲಾಗಿ ಸಂಘಟನಾ ಮೈಷಮ್ಯದಿಂದಲೂ ಮಾನಹರಾಜು ಮಾಡಲಾಗುತ್ತದೆ. ಆಶಯ, ಆದರ್ಶಗಳ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟು ಕೆಸೆರೆರಚುವ ಕ್ರೌರ್ಯಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಪ್ರವಾದಿ(ಸ) ಹೇಳಿದರು, “ಅತ್ಯಂತ ಕೆಟ್ಟ ಅಪವಾದ ಜನರ ಸಂಬಂಧ ಕೆಡಿಸಲು ಮಾಡುವ ಚಾಡಿಯಾಗಿದೆ.” (ಮುಸ್ಲಿಮ್)

ಇನ್ನೊಂದು ಹದೀಸ್ ವಚನ ಹೀಗಿದೆ, ಯಾರನ್ನು ನೋಡಿದಾಗ ಅಲ್ಲಾಹನ ಸ್ಮರಣೆಯಾಗುತ್ತದೋ, ಅವನು ಅಲ್ಲಾಹನ ದಾಸನ ಪೈಕಿ ಅತ್ಯುತ್ತಮನು. ಹೆಚ್ಚು ಚಾಡಿ ಹೇಳುವವರು, ಸ್ನೇಹಿತರ ಸಂಬಂಧ ಕೆಡಿಸುವವರು ಹಾಗೂ ಇತರರನ್ನು ಸಂಕಷ್ಟಕ್ಕೆ ಸಿಲುಕಿಸಲು ಅವಕಾಶಕ್ಕಾಗಿ ಕಾಯುತ್ತ ಇರುವವನು ಅಲ್ಲಾಹನ ದಾಸರ ಪೈಕಿ ಅತ್ಯಂತ ಕೆಟ್ಟವನು. (ಮುಸ್ನದ್ ಅಹ್ಮದ್)

ಆದುದರಿಂದ ಸಹೋದರರೇ, ಸಾಮಾಜಿಕ ಜಾಲತಾಣವನ್ನು ‘ಒಳಿತಿನ ಆಜ್ಞೆ ಮತ್ತು ಕೆಡುಕಿನ ನಿರ್ಮಾಲನಕ್ಕಾಗಿ’ ಸದ್ಬಳಕೆ ಮಾಡೋಣ. ಇದರಿಂದ ಗರಿಷ್ಠ ಪ್ರಯೋಜನ ಪಡೆಯೋಣ ಮತ್ತು ಎಲ್ಲರ ಜನರ ಹೃದಯ ಗೆಲ್ಲುವಂತಾಗಬೇಕು. ನಮ್ಮ ಸಂದೇಶಗಳು ಜನರಿಗೆ ಚಿಂತನೆಗೊಳಪಡಿಸುವಂತಾಗಬೇಕು. ಜನರು ಅಲ್ಲಾಹನ ಧರ್ಮ ನೈಜ ಸಂದೇಶಗಳನ್ನು ಆಲೋಚಿಸುವಂತಾಗಬೇಕು. ಅದರ ವಕ್ತಾರರು ನಾವಾಗೋಣ. ಅಲ್ಲಾಹನ ಪ್ರವಾದಿ ಹೇಳಿದ ಸ್ವರ್ಗದ ಗ್ಯಾರಂಟಿ ಪಡೆಯುವವರಲ್ಲಿ ನಾವೂ ಸೇರೋಣ.