ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ಯಾಗಿ ಟೀಂ ಇಂಡಿಯಾ ವೇಗಿ ಸಿರಾಜ್‌ ಅಧಿಕಾರ ಸ್ವೀಕಾರ

0
127

ಸನ್ಮಾರ್ಗ ವಾರ್ತೆ

ಹೈದರಾಬಾದ್‌: ಟೀಂ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ಅಧಿಕಾರ ಸ್ವೀಕರಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಆಗಸ್ಟ್‌ನಲ್ಲಿ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ ಮತ್ತು ಬಾಕ್ಸರ್ ನಿಖಾತ್ ಝರೀನ್ ಅವರು ಕ್ರೀಡೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆ ನೀಡುವುದಾಗಿ ಘೋಷಿಸಿದ್ದರು.

ಈ ಘೋಷಣೆಯಂತೆ ಇಂದು ಸಿರಾಜ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮೊಹಮ್ಮದ್ ಸಿರಾಜ್‌ ಜತೆ ಸಂಸದ ಎಂ ಅನಿಲ್ ಕುಮಾರ್ ಯಾದವ್ ಮತ್ತು ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಹಾಜರಿದ್ದರು.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಘೋಷಣೆಯ ನಂತರ ತೆಲಂಗಾಣ ಸರ್ಕಾರವು ಸಾರ್ವಜನಿಕ ಸೇವೆಗಳಿಗೆ ನೇಮಕಾತಿಗಳ ನಿಯಂತ್ರಣ ಮತ್ತು ಸಿಬ್ಬಂದಿ -1994 ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು.

ಸಿರಾಜ್‌ ಅವರು ಟಿ20 ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಈ ಗೌರವ ನೀಡಿದೆ.

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣದ ಡಿಎಸ್‌ಪಿಯಾಗಿ ನೇಮಿಸಲಾಗಿದೆ. ಅವರ ಕ್ರಿಕೆಟ್‌ ಸಾಧನೆಗೆ ರಾಜ್ಯದಿಂದ ಈ ಗೌರವ ಸಲ್ಲಿಸಲಾಗಿದೆ. ಸಿರಾಜ್‌ ಅವರು ಕ್ರಿಕೆಟ್‌ ವೃತ್ತಿ ಜೀವನವನ್ನು ಮುಂದುವರಿಸುತ್ತಾರೆ ಮತ್ತು ಹೊಸ ಜವಾಬ್ದಾರಿ ಹಲವರಿಗೆ ಪ್ರೇರಣೆಯಾಗಲಿದೆ ಎಂದು ತೆಲಂಗಾಣ ಪೊಲೀಸ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ.