ಬ್ಯಾರಿ ಅಕಾಡಮಿ: ಸಮುದಾಯಕ್ಕೆ ಏನು ಲಾಭ ಇದೆ ಎಂಬ ಪ್ರಶ್ನೆಗೆ…

0
154

ಸನ್ಮಾರ್ಗ ವಾರ್ತೆ

ಈ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ. ಕೆಲವು ಭಾಷೆಗಳು ಕೋಟ್ಯಂತರ ಜನರ ಬಾಯಲ್ಲಿ ಉಳಿದರೆ, ಇನ್ನು ಕೆಲವು ಭಾಷೆಗಳು ಸೀಮಿತ ಸಂಖ್ಯೆಯ ಜನರ ಮಧ್ಯೆ ಉಸಿರಾಡುತ್ತಿವೆ. ಭಾಷೆಗಳ ಅಭಿವೃದ್ಧಿಗೆ ಸರಕಾರ ಮಾತ್ರವಲ್ಲ, ಸಂಘ ಸಂಸ್ಥೆಗಳು ಕೂಡ ಸಾಕಷ್ಟು ಶ್ರಮ ವಹಿಸುತ್ತಿವೆ. ಹಣಕಾಸಿನ ನೆರವು ನೀಡುತ್ತಿವೆ.

ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಇವೆಲ್ಲವೂ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಹಾಗಂತ ಅದೇ ಬದುಕಲ್ಲ. ಅದರಾಚೆಗೂ ಬದುಕು ಇದೆ ಎಂಬ ಸತ್ಯವನ್ನು ನಾವು ಅರಿಯಬೇಕು. ಅಂದರೆ ಒಬ್ಬೊಬ್ಬರಿಗೆ ಒಂದೊಂದು ವಿಷಯ ಅಥವಾ ವಸ್ತುವಿನಲ್ಲಿ ವಿಶೇಷ ಆಸಕ್ತಿ, ಅಭಿರುಚಿ ಇರುತ್ತದೆ. ಭಾಷೆ, ಸಾಹಿತ್ಯ ಕೂಡಾ ಅದಕ್ಕೆ ಹೊರತಾಗಿಲ್ಲ. ಕೆಲವರು ಇದರಲ್ಲಿ ಹೆಚ್ಚು ಸಕ್ರಿಯರಾದರೆ ಇನ್ನು ಕೆಲವರಿಗೆ ಇದರಲ್ಲಿ ಆಸಕ್ತಿಯೇ ಇರುವುದಿಲ್ಲ. ಕೆಲವರು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಕ್ರಿಯರಾಗಿರುತ್ತಾರೆ. ಕೆಲವರಿಗೆ ಇದು ಆಗಿ ಬರುವುದೇ ಇಲ್ಲ. ಹಾಗಾಗಿ ನಿರ್ದಿಷ್ಟವಾಗಿ ನಾವು ಇಂತದ್ದನ್ನೇ ಮಾಡಬೇಕು, ಹೇಳಬೇಕು, ಆಸಕ್ತಿ ವಹಿಸಬೇಕು ಎಂದು ಕಟ್ಟುಪಾಡಿನೊಳಗೆ ಕೂಡಿ ಹಾಕುವುದು ಸರಿಯಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು. ಅವರ ಹೇಳಿಕೆಗಳನ್ನು ಗೌರವಿಸಬೇಕು.

ಈ ಮಾತನ್ನು ನಾನಿಲ್ಲಿ ಯಾಕೆ ಹೇಳುತ್ತಿದ್ದೇನೆ ಅಂದರೆ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸರಕಾರ ನಮಗೆ ನೀಡಿರುವುದು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಗೆ ಆಗಿದೆ. ನಾವು ಈ ಚೌಕಟ್ಟಿನೊಳಗೆ ಕೆಲಸ ಮಾಡಲು ಸಾಧ್ಯವಿದೆಯೇ ವಿನಃ ಸಮುದಾಯದ ಸಬಲೀಕರಣ ಅಥವಾ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ. ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಗೆ ಲಕ್ಷಾಂತರ ಹಣ ವ್ಯಯಿಸಿದರೆ ಸಮುದಾಯಕ್ಕೆ ಏನು ಲಾಭವಿದೆ? ಎಂದು ಪ್ರಶ್ನಿಸುತ್ತಾರೆ. ಆ ಹಣವನ್ನು ಮನೆ ಕಟ್ಟಲು, ಹೆಣ್ಮಕ್ಕಳ ಮದುವೆಗೆ ಧನ ಸಹಾಯ, ರೋಗಿಗಳಿಗೆ ನೆರವು, ವಿದ್ಯಾರ್ಥಿಗಳ ಶುಲ್ಕ ಪಾವತಿಸಲು ಕೊಡಬಹುದಲ್ಲಾ ಎಂದು ಕೆಲವರು ಹೇಳುತ್ತಾರೆ. ಇಂತಹ ಪ್ರಶ್ನೆ-ಮಾತುಗಳನ್ನು ತಪ್ಪು ಅಂತ ನಾನು ಹೇಳಲಾರೆ. ಆದರೆ ಅಕಾಡೆಮಿಗೆ ಅದರದ್ದೇ ಆದ ಜವಾಬ್ದಾರಿ ಇದೆ. ಸರಕಾರವು ಆ ಚೌಕಟ್ಟಿನೊಳಗೆ ಕೆಲಸ ಮಾಡಲು ಅಕಾಡೆಮಿಯ ಅಧ್ಯಕ್ಷರು, ಸದಸ್ಯರಿಗೆ ಜವಾಬ್ದಾರಿ ನೀಡಿದೆಯೇ ವಿನಃ ಅದರ ಬೈಲಾ, ನೀತಿ- ನಿಯಮಗಳನ್ನು ಮೀರಿ ಕೆಲಸ ಮಾಡಲು ಅಧಿಕಾರವಿಲ್ಲ. ಈ ವಾಸ್ತವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವಿರಾಗಿ ನಾನು ಭಾವಿಸುತ್ತೇನೆ.

ಸಮುದಾಯದಲ್ಲಿ ಇಂದು ಪ್ರಾದೇಶಿಕವಾಗಿ ವೈವಿಧ್ಯತೆ ಹೊಂದಿರುವ ಬ್ಯಾರಿ ಜನಾಂಗದ ಭಾಷೆಯಲ್ಲೇ ಆಯಾ ಪ್ರದೇಶಕ್ಕೆ ಅನುಸರಿಸಿದ ವ್ಯತ್ಯಾಸವಿದೆ ಅದು ಸಹಜ ಕೂಡ ಆಗಿದೆ. ಆದರೆ ಅಷ್ಟೊಂದು ಸಮಂಜಸತೆಯನ್ನು ಒಪ್ಪಿಕೊಂಡು ನಾವು ಇದೀಗ ಈ ಒಟ್ಟು ಜನಾಂಗದ ಹೆಸರನ್ನೇ ನಮ್ಮ ಭಾಷೆಯಲ್ಲಿಯೂ ಗುರುತಿಸುವ ನೆಲೆಯಲ್ಲಿ ನಮ್ಮ ಭಾಷೆಯನ್ನು ಕೂಡಾ ಅದೇ ಹೆಸರಿನಲ್ಲೇ ಗುರುತಿಸುವಂತೆ ಮಾಡಿರುವುದು ನಮಗೆಲ್ಲರಿಗೂ ಬಹಳ ಹೆಮ್ಮೆಯ ವಿಚಾರವಾಗಿದೆ. ಯಾಕೆಂದರೆ ಈ ಬ್ಯಾರಿ ಎಂಬ ಪದವೇ ಇಂದು ಬಹಳ ಗೌರವದ ಸಂಕೇತವಾಗಿ ಬದಲಾಗಿದೆ ಎಂಬುದನ್ನು ನಾವು ಮರೆಯಬಾರದು. ಇಂದು ನಮ್ಮ ಜನಾಂಗದ ಜನರು ತಮ್ಮ ತಮ್ಮ ಕಾಯಕ ರಂಗವಾಗಿರುವ, ಅದು, ಶೈಕ್ಷಣಿಕ, ವಾಣಿಜ್ಯ ರಂಗ ಅಥವಾ ಕಲಾ ಕ್ಷೇತ್ರಗಳಲ್ಲಿಯೂ ಇದೇ ಹೆಸರನ್ನು ಇಟ್ಟು ಮುಂದುವರಿಯುತ್ತಿರುವನ್ನು ನಾವು ತಿಳಿದಿರಬೇಕು. ವಸ್ತುಸ್ಥಿತಿ ಹೀಗಿರುವಾಗ ನಮ್ಮ ಭಾಷಾ ವೈವಿಧ್ಯತೆಯನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸಿ ಅದನ್ನು ನಮ್ಮ ಜನಾಂಗೀಯ ಭಾಷೆಯಾಗಿ ಅಂಗೀಕರಿಸಿರುತ್ತಾ ಮತ್ತೆ ಅದರಲ್ಲಿನ ಪದಗಳ ವ್ಯತ್ಯಾಸಗಳನ್ನು ಮುಂದಿಟ್ಟು ಒಡಕಿನ ಬಿರುಕು ಕಾಣುವುದು ಖಂಡಿತ ವಿಪರ್ಯಾಸವಾಗಿದೆ. ಅದುದರಿಂದ ನಾವು ನಮ್ಮ ಭಾಷಾ ಬೆಸುಗೆಯನ್ನೇ ಬಲಪಡಿಸಬೇಕೆ ವಿನಾ ಭಿನ್ನಾಭಿಪ್ರಾಯಗಳನ್ನಲ್ಲ.

~ ಸಾರಾ ಅಲಿ ಪರ್ಲಡ್ಕ
ಬ್ಯಾರಿ ಅಕಾಡೆಮಿ ಸದಸ್ಯೆ
ಬೆಲ್ಕಿರಿ ದ್ವೈ ಮಾಸಿಕದ ಉಪ ಸಂಪಾದಕಿ