ಸೌದಿಯಲ್ಲಿ ಚಿತ್ರ ಮಂದಿರ ಆಯಿತು; ಇದೀಗ ಶಾಲೆಗಳಲ್ಲಿ 7 ಸಾವಿರ ಮ್ಯೂಸಿಕ್ ಶಿಕ್ಷಕರ ನೇಮಕ

0
370

ಸನ್ಮಾರ್ಗ ವಾರ್ತೆ

ರಿಯಾದ್: ಸೌದಿ ಅರೇಬಿಯಾ ತನ್ನ ವಿಷನ್ 2030 ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಂಗೀತ ಶಿಕ್ಷಣವನ್ನು ಜಾರಿಗೆ ತರುತ್ತಿದೆ. ಸಂಗೀತ ಶಿಕ್ಷಣವನ್ನು ಕಲಿಸುವುದಕ್ಕಾಗಿ ಸುಮಾರು 7000 ಮ್ಯೂಸಿಕ್ ಶಿಕ್ಷಕರನ್ನು ನೇಮಿಸಲಾಗಿದೆ.

ಶಿಕ್ಷಣದ ಆಧುನೀಕರಣ, ಕಲೆ, ಮನರಂಜನೆಯ ಮೂಲಕ ಆರ್ಥಿಕತೆಯನ್ನು ವೈವಿಧ್ಯಮಯ ಗೊಳಿಸಲು ಮತ್ತು ಸಮಾಜವನ್ನು ಆಧುನಿಕವಾಗಿ ಅಭಿವೃದ್ಧಿಗೊಳಿಸಲು ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಈ ಕ್ರಮವನ್ನು ಜಾರಿಗೆ ತರುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಮೊದಲು ಸಂಗೀತವನ್ನು ಸೌದಿ ಅರೇಬಿಯಾ ಶಾಲೆಗಳಲ್ಲಿ ನಿಷೇಧಿಸಲಾಗಿತ್ತು. ಸಾಂಸ್ಕೃತಿಕ ವ್ಯಾಪ್ತಿಯನ್ನು ವಿಶಾಲಗೊಳಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಶೈಕ್ಷಣಿಕ ಪಠ್ಯ ಕ್ರಮದ ಭಾಗವಾಗಿ ಮ್ಯೂಸಿಕನ್ನು ಅಳವಡಿಸಲಾಗಿದೆ ಎಂದು ಸೌದಿಯ ಸಂಸ್ಕೃತಿ ಮತ್ತು ಶಿಕ್ಷಣ ಸಚಿವಾಲಯ ಹೇಳಿದೆ.

ಶಿಕ್ಷಕರಲ್ಲಿ ಅನೇಕರು ಶಾಸ್ತ್ರೀಯ ಸಂಗೀತ, ಅರೆಬಿಕ್ ಸಂಗೀತ, ಆಧುನಿಕ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ. ನಮ್ಮ ಯುವಕರಲ್ಲಿ ಸೃಜನಶೀಲತೆ, ಸಾಂಸ್ಕೃತಿಕ ಪ್ರಜ್ಞೆ, ಭಾವನಾತ್ಮಕ ಜಾಣ್ಮೆಯನ್ನು ಬೆಳೆಸಲು ಸಂಗೀತ ಶಿಕ್ಷಣವು ಅತ್ಯಗತ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ಈ ಕ್ರಮವನ್ನು ಸೌದಿ ಶಿಕ್ಷಣದ ಮೈಲಿಗಲ್ಲು ಎಂದಿದ್ದು, ಇದು ಯುವ ಸೌದಿಗಳಿಗೆ ಕಲೆ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಹೊಸ ವೃತ್ತಿ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ಸೌದಿಯು ದಿನೇದಿನೇ ಸಾಂಸ್ಕೃತಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ, ದೇಶವು ಚಿತ್ರಮಂದಿರಗಳನ್ನು ತೆರೆದಿದೆ, ಅಂತರಾಷ್ಟ್ರೀಯ ಸಂಗೀತ ಉತ್ಸವಗಳನ್ನು ಆಯೋಜಿಸಿದೆ. ಜಾಗತಿಕ ಕಲಾವಿದರ ಪ್ರದರ್ಶನಗಳನ್ನು ಸ್ವಾಗತಿಸಿದೆ. ಆದರೆ ದಶಕದ ಹಿಂದೆ ಈ ಕುರಿತು ಚಿಂತಿಸಲೂ ಸಾಧ್ಯವಿರಲಿಲ್ಲ.