ಮದ್ರಸಾಗಳಿಗೆ ಆರ್ಥಿಕ ನೆರವು ನಿಲ್ಲಿಸುವ ಆದೇಶ, ಸಂವಿಧಾನಿಕ ಹಕ್ಕು ನಿರಾಕರಿಸುವ ಹುನ್ನಾರ : ವೆಲ್ಫೇರ್ ಪಾರ್ಟಿ

0
99

ಸನ್ಮಾರ್ಗ ವಾರ್ತೆ

ಇತ್ತೀಚಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಮದ್ರಸಾಗಳು ಮತ್ತು ಮದ್ರಸಾ ಮಂಡಳಿಗಳಿಗೆ ನೀಡುವ ಎಲ್ಲಾ ಆರ್ಥಿಕ ನೆರವುಗಳನ್ನು ನಿಲ್ಲಿಸಬೇಕೆಂದು ರಾಜ್ಯಗಳಿಗೆ ಪತ್ರ ಬರೆದಿರುವುದು ಖಂಡನೀಯ. ಇದು ಸಂವಿಧಾನಿಕ ಹಕ್ಕು ನಿರಾಕರಿಸುವ ಹುನ್ನಾರವಾಗಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.

ಇದು ಮಕ್ಕಳನ್ನು ಧಾರ್ಮಿಕ ಶಿಕ್ಷಣದಿಂದ ವಂಚಿತಗೊಳಿಸುವ ಹುನ್ನಾರವಾಗಿದೆ. ಮದ್ರಸಾಗಳನ್ನು ಕೇಂದ್ರ ಸರಕಾರದ ನಿಯಂತ್ರಣದಲ್ಲಿ ತರುವ ಷಡ್ಯಂತ್ರದ ಭಾಗವಾಗಿದೆ ಎಂದಿದ್ದಾರೆ.

ಕೆಲವರು ಮದ್ರಸಾ ಶಿಕ್ಷಣದ ಬಗ್ಗೆ ಕೆಂಗಣ್ಣು ಬೀರಿ ಪೂರ್ವಾಗ್ರಹ ಪೀಡಿತರಾಗಿ ಮದ್ರಸಾದಲ್ಲಿ ಭಯೋತ್ಪಾದನೆ ಕಲಿಸುತ್ತದೆ ಎಂದು ವೃಥಾ ಆರೋಪ ಹೊರಿಸುತ್ತಾರೆ. ನಿಜವಾಗಿ ಮದ್ರಸಾ ಶಿಕ್ಷಣವು ಧಾರ್ಮಿಕ ಅಚ್ಚುಕಟ್ಟು ಶಿಸ್ತು, ಸಹನೆ ಸಂಯಮ ಆರಾಧನಾ ಕ್ರಮಗಳ ಜೊತೆಗೆ ದೇವಭಯ ಮನದಲ್ಲಿ ಮೂಡಿಸಿ ಕೆಡುಕಿನತ್ತ ಸಾಗದಂತೆ ತರಭೇತಿ ನೀಡುತ್ತದೆ. ಸದಾಚಾರದ ಶಿಕ್ಷಣ ನೀಡುತ್ತದೆ. ಅದರ ಪಠ್ಯ ಪುಸ್ತಕಗಳು ಬಹಿರಂಗವಾಗಿಯೇ ಇದೆ. ಅದರಲ್ಲೇನೂ ರಹಸ್ಯವಿಲ್ಲ. ಆದರೂ ಕಾಮಾಲೆ ಕಣ್ಣಿಂದ ನೋಡಿ ಆರ್ಥಿಕ ನೆರವುಗಳನ್ನು ತಡೆಹಿಡಿಯುವಂತಹಾ ಕ್ರಮಕ್ಕೆ ಕೇಂದ್ರ ಸರಕಾರದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿರುವುದು ಸಂವಿಧಾ‌ನ ವಿರೋಧಿ ಕೃತ್ಯವಾಗಿದ್ದು ಇದು ಅತ್ಯಂತ ಖಂಡನೀಯ ಎಂದರು.

ಪ್ರತಿಯೊಂದು ಧರ್ಮವನ್ನು ಕಲಿಯಲು ಅನುಸರಿಸಲು ಪ್ರಚಾರ ಪಡಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿರುವಾಗ ಕೇಂದ್ರ ಸರಕಾರ ಮದ್ರಸಾ ಶಿಕ್ಷಣದತ್ತ ಕೆಂಗಣ್ಣು ಬೀರಿರುವುದು ಯಾವ ನ್ಯಾಯ ಎಂದೂ ಅವರು ಪ್ರಶ್ನಿಸಿದ್ದಾರೆ.