ನಾನೇಕೆ ಇಸ್ಲಾಂ ಧರ್ಮ ಸ್ವೀಕರಿಸಿದೆ: ಮನಸು ತೆರೆದಿಟ್ಟ ಖ್ಯಾತ ತಮಿಳು ಸಂಗೀತ ನಿರ್ದೇಶಕ ಯುವನ್ ಶಂಕರ್

0
2037

ಸನ್ಮಾರ್ಗ ವಾರ್ತೆ

ತಮಿಳು ಸಿನಿಮಾರಂಗದ ಸಾರ್ವಕಾಲಿಕ ಸಂಗೀತ ದಿಗ್ಗಜರಾಗಿ ಗುರುತಿಸಿಕೊಂಡಿರುವ ಇಳಯರಾಜ ಅವರ ಮಗ ಯುವನ್ ಶಂಕರ್ ಕೂಡ ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಇವರು 2014ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಇದೀಗ ತಾನು ಇಸ್ಲಾಂ ಧರ್ಮ ಯಾತಕ್ಕಾಗಿ ಸ್ವೀಕರಿಸಿದೆ ಎಂಬುದನ್ನು ಅವರು ಬಹಿರಂಗ ಪಡಿಸಿದ್ದಾರೆ.

ನಾಲ್ಕು ವರ್ಷಗಳ ಕಾಲ ಅವರು ಸಂಗೀತ ಕೆರಿಯರ್ ನಿಂದಲೇ ದೂರ ಇದ್ದರು. ಈ ನಾಲ್ಕು ವರ್ಷಗಳ ಕಾಲ ನೀವು ಎಲ್ಲಿದ್ದೀರಿ ಎಂದು ಸಭಿಕರು ಪ್ರಶ್ನಿಸಿದಾಗ ಅವರು ತನ್ನ ಅಂತರಂಗವನ್ನು ಬಿಚ್ಚಿಟ್ಟರು.

ಅಮ್ಮನ ಸಾವಿನ ಬಳಿಕ ನಾನು ಲೋಸ್ಟ್ ಚೈಲ್ಡ್ ಆಗಿ ಮಾರ್ಪಟ್ಟೆ. ಅವರನ್ನು ನಾನು ಆಗಾಗ ಕನಸಿನಲ್ಲಿ ಕಾಣುತ್ತಿದ್ದೆ. ಎಲ್ಲಿದ್ದಾರೆ ನನ್ನ ಅಮ್ಮ? ಅವರು ಎಲ್ಲೋ ಇದ್ದಾರೆ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ಎಲ್ಲಿ? ಈ ಹಿನ್ನೆಲೆಯಲ್ಲಿ ನಾನು ಅನ್ವೇಷಣೆ ಪ್ರಾರಂಭಿಸಿದೆ. ಅದು ನನ್ನನ್ನು ಬೇಟೆಯಾಡುತ್ತಿತ್ತು. ಅಮ್ಮನ ಮರಣದ ಹಿನ್ನೆಲೆಯಲ್ಲಿ ನಾನು ಮದ್ಯಪಾನಿಯಾದೆ. ಅದಕ್ಕಿಂತ ಮೊದಲು ನಾನು ಪಾರ್ಟಿಗೆ ಹೋಗುತ್ತಿದ್ದೆನಾದರೂ ಮದ್ಯ ಸೇವಿಸುತ್ತಿರಲಿಲ್ಲ ಮತ್ತು ಸಿಗರೇಟ್ ಸೇದುತ್ತಿರಲಿಲ್ಲ. ತಟ್ಟನೆ ಒಂದು ದಿನ ಈ ಎಲ್ಲಕ್ಕೂ ನನಗೆ ಉತ್ತರ ಸಿಕ್ಕಿತು. ನಮ್ಮ ಸುತ್ತಮುತ್ತಲು ಏನು ನಡೆಯುತ್ತಿದೆಯೋ ಅದು ಸುಮ್ಮನೆ ಅಲ್ಲ. ಮೇಲೆ ಓರ್ವನಿದ್ದಾನೆ. ಆತ ಎಲ್ಲವನ್ನೂ ಬರೆಯುತ್ತಿದ್ದಾನೆ. ಅದರಂತೆ ಎಲ್ಲವೂ ನಡೆಯುತ್ತಿದೆ ಎಂದು ನನಗೆ ಅನಿಸಿತು. ಇದನ್ನು ನನಗೆ ಕಲಿಸಿದ್ದು ಇಸ್ಲಾಂ ಆಗಿದೆ ಎಂದು ಯುವನ್ ಶಂಕರ್ ಹೇಳಿದ್ದಾರೆ.

ನನ್ನ ಇಸ್ಲಾಂ ಸ್ವೀಕಾರವನ್ನು ಅಪ್ಪ ಇಳೆಯರಾಜ ತಡೆದಿರಲಿಲ್ಲ. ಪ್ರತಿದಿನ ಐದು ಬಾರಿ ದೇವನನ್ನು ಪ್ರಾರ್ಥಿಸುವ ನಿನ್ನನ್ನು ನಾನೇಕೆ ತಡೆಯಬೇಕು ಎಂದು ತಂದೆ ಪ್ರಶ್ನಿಸಿದರು ಎಂದವರು ಹೇಳಿದ್ದಾರೆ.

2015ರಲ್ಲಿ ಮದುವೆಯಾದ ಬಳಿಕ ಯುವನ್ ಶಂಕರ್ ತಾನು ಇಸ್ಲಾಂ ಸ್ವೀಕರಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು ಮತ್ತು ತನ್ನ ಹೆಸರು ಇನ್ನು ಮುಂದೆ ಅಬ್ದುಲ್ ಹಾಲಿಕ್ ಎಂದಾಗಿರುತ್ತದೆ ಎಂದು ಅವರು ಹೇಳಿದ್ದರು. ಆದರೆ ಸಂಗೀತ ಕ್ಷೇತ್ರದಲ್ಲಿ ತನ್ನ ಹೆಸರನ್ನು ತಾನು ಯುವನ್ ಶಂಕರ್ ರಾಜ ಎಂದೇ ಬಳಸುವುದಾಗಿಯೂ ಅವರು ಹೇಳಿದ್ದರು.