ಗಾಝಾ ನಾಶವಾಗುತ್ತಿದ್ದರೂ ಮಹಮೂದ್ ಅಬ್ಬಾಸ್ ಮೌನವಾಗಿದ್ದಾರೆ: ಆಕ್ರೋಶ ವ್ಯಕ್ತಪಡಿಸಿದ ಫೆಲೆಸ್ತೀನಿಯರು

0
192

ಸನ್ಮಾರ್ಗ ವಾರ್ತೆ

ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ವರ್ತನೆಯ ಬಗ್ಗೆ ಫೆಲೆಸ್ತೀನ್ ನಲ್ಲಿ ಮತ್ತು ಫೆಲೆಸ್ತೀನಿನ ಹೊರಗಡೆ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ. ಗಾಝಾದಲ್ಲಿ ಮಾರಣಹೋಮ ನಡೆಯುತ್ತಿದ್ದರೂ ಅಬ್ಬಾಸ್ ಅವರು ಬಹುತೇಕ ಮೌನಿಯಾಗಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಯಾಸಿರ್ ಅರಫಾತ್ ಅವರ ನಿಧನದ ಬಳಿಕ ಪ್ರಾಧಿಕಾರದ ಅಧ್ಯಕ್ಷತೆಗೆ ಏರಿದ ಮಹಮೂದ್ ಅಬ್ಬಾಸ್ ಅವರು ಪಾಶ್ಚಾತ್ಯ ರಾಷ್ಟ್ರಗಳ ಅಂಗೀಕಾರ ಪಡೆದಿರುವ ಮತ್ತು ಇಸ್ರೇಲ್ ನೊಂದಿಗೆ ಶಾಂತಿ ಮಾತುಕತೆ, ನಡೆಸಲು ಅರ್ಹತೆಗಿಟ್ಟಿಸಿರುವ ವ್ಯಕ್ತಿಯಾಗಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಝಾದ ಮೇಲಿನ ದಾಳಿಯನ್ನು ಖಂಡಿಸಿದ್ದನ್ನು ಬಿಟ್ಟರೆ ಉಳಿದಂತೆ ಮಹಮೂದ್ ಅಬ್ಬಾಸ್ ಅವರು ಬಹುತೇಕ ಮೌನಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಖಂಡನಾ ಹೇಳಿಕೆ ಕೂಡ ತುಟಿ ಸೇವೆ ಮಾತ್ರವೇ ಆಗಿತ್ತು ಎಂದೂ ಹೇಳುವವರಿದ್ದಾರೆ.

ಕೇವಲ ಹೇಳಿಕೆಗಳಿಂದ ಗಾಝಾವನ್ನು ಉಳಿಸಲು ಮತ್ತು ಗಾಝಾದ ಜನರು ಅನುಭವಿಸುತ್ತಿರುವ ಸಂಕಟಗಳನ್ನು ಬಿಂಬಿಸಲು ಸಾಧ್ಯವಾಗದು. ಮಹಮೂದ್ ಅಬ್ಬಾಸ್ ಅವರು ಅಂತಾರಾಷ್ಟ್ರೀಯವಾಗಿ ಪ್ರಭಾವ ಬೀರುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ವಿದೇಶಿ ರಾಷ್ಟ್ರಗಳಿಗೆ ಭೇಟಿ ನೀಡಿ ಇಸ್ರೇಲ್ ವಿರುದ್ಧ ಸಾಮೂಹಿಕ ಒತ್ತಡವನ್ನು ಹೇರಬೇಕಿತ್ತು, ಆದರೆ ಮಹಮೂದ್ ಅಬ್ಬಾಸ್ ಅವರು ಯಾವುದನ್ನೂ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದೇ ವರ್ಷದ ಜೂನ್‌ನಲ್ಲಿ ಫೆಲೆಸ್ತೀನಿಯನ್ ಸೆಂಟರ್ ಫಾರ್ ಪಾಲಿಸಿ ಅಂಡ್ ಸರ್ವೆ ರಿಸರ್ಚ್ ನಡೆಸಿದ ಸರ್ವೆಯ ಪ್ರಕಾರ 89 ಶೇಕಡ ಫೆಲೆಸ್ತೀನಿಯರು ಮಹಮೂದ್ ಅಬ್ಬಾಸ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. 88 ವರ್ಷದ ಮಹಮೂದ್ ಅಬ್ಬಾಸ್ ಅವರು ಆಡಳಿತ ನಡೆಸಲು ಅನರ್ಹರು ಎಂದು ಕೂಡ ಅವರು ಹೇಳಿದ್ದಾರೆ. ಹಾಗೆಯೇ ಫೆಲೆಸ್ತೀನಿ ಪ್ರಾಧಿಕಾರವನ್ನು ವಿಸರ್ಜಿಸಬೇಕು ಎಂದು 62% ಫೆಲೆಸ್ತೀನಿಯರು ಆಗ್ರಹಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಫೆಲೆಸ್ತೀನ್ ನಲ್ಲಿ ಚುನಾವಣೆ ನಡೆದಿಲ್ಲ ಮತ್ತು ಮಹಮೂದ್ ಅಬ್ಬಾಸ್ ಅವರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.