ಹರಾಮ್‌ಗಳು ಆರಾಮಗಳಾಗುತ್ತಿರುವ ದಿನಗಳಲ್ಲಿ…

0
82

ಸನ್ಮಾರ್ಗ ವಾರ್ತೆ

✍️ ಅಬೂ ಅನೀಸ್, ಕಲ್ಲಾಪು

ಒಂದು ಕಾಲದಲ್ಲಿ ಹರಾಮ್(ನಿಷಿದ್ಧ) ಎಂದು ಹೇಳುತ್ತಿದ್ದ ಕಾರ್ಯಗಳು ಇದೀಗ ಆರಾಮ (ಸುಖದ) ಸ್ಥಾನವನ್ನು ಪಡೆದುಕೊಂಡಿವೆ…

ಕೆಲವು ವರುಷಗಳ ಹಿಂದೆ ಆಟೋ ರಿಕ್ಷಾ ಚಾಲಕನೊಬ್ಬ ಪ್ರಯಾಣದ ವೇಳೆ ನನ್ನೊಂದಿಗೆ ಹೇಳಿದ ಮಾತು. ಕುಡಿದು ಮೃತನಾದ ಯುವಕನೊಬ್ಬ ಫುಟ್‌ಪಾತ್‌ನಲ್ಲಿ ತರುಣಿಯೊಬ್ಬಳ ಹಿಂದೆ ಬಿದ್ದು ಪೀಡಿಸುತ್ತಿದ್ದ. ಈ ಅವಾಂತರವನ್ನು ದಾರಿ ಹೋಕರು ನೋಡುತ್ತಿದ್ದರು. ಅದನ್ನು ತಡೆಯಲು ಯಾರೂ ಪ್ರಯತ್ನಿಸಿದಂತಿರಲಿಲ್ಲ. ಪ್ರಯಾಣದ ವೇಳೆ ಈ ಅನುಚಿತ ದೃಶ್ಯವು ನಮ್ಮ ಕಣ್ಣೆದುರು ನಡೆದಿತ್ತು. ಈ ಘಟನೆಯನ್ನು ಉದ್ಧರಿಸಿಕೊಂಡು ಆತ ನನ್ನೊಡನೆ ಈ ಮೇಲಿನ ಮಾತು ಹೇಳಿದ್ದ.

ಹೌದು. ನೈತಿಕತೆ ಶಿಷ್ಟಾಚಾರಗಳು ಗೌರವ ಗುಣಸಂಪನ್ನತೆಗಳು ಇದೀಗ ಮುಗ್ಧರ, ಗಮಾರರ ಚರ್ಯೆಯಾಗಿ ಬದಲಾಗುತ್ತಿದೆ. ಶಾಲೆ-ಕಾಲೇಜುಗಳಲ್ಲಿ ಕಿಂಚಿತ್ತೂ ಸಚ್ಚಾರಿತ್ರ್ಯವಂತನಾದ ವಿದ್ಯಾರ್ಥಿಯಿದ್ದರೆ `ದೊಡ್ಡ ಗಾಂಧಿ’ ಎಂದು ಆತನನ್ನು ಮೂದಲಿಸುವವರೂ ಇದ್ದಾರೆ. ಗುರುಗಳು ಶಿಷ್ಯರು ಎಂಬ ಭಾವನೆಗಳು ದುರ್ಬಲವಾಗಿ ಗುರುಗಳು ಮತ್ತು ಗೆಳೆಯರು ಎಂಬಂತಾಗಿದೆ. ತಂದೆ ಮತ್ತು ಮಕ್ಕಳಲ್ಲಿ ಇರಬೇಕಾದ ಶಿಷ್ಟ ಸಂಬಂಧಗಳು ಮಾಯವಾಗುತ್ತಿವೆ. ಈ ಬದಲಾಗುತ್ತಿರುವ ನಡವಳಿಕೆಗಳನ್ನು ಪೂರ್ಣವಾಗಿ ಅನೈತಿಕತೆಯೆನ್ನುವಂತಿಲ್ಲ. ಆದರೂ ಗುರು-ಶಿಷ್ಯರ, ತಂದೆ-ಮಕ್ಕಳಲ್ಲಿರುವ ಸಂಬಂಧಗಳಲ್ಲಿ ಗೌರವ ಗಾಂಭೀರ್ಯತೆಗಳು ಕುಂಠಿತವಾಗಿ ಸಲುಗೆ ಹಾಸ್ಯ ಅಗೌರವಗಳು ಮೇಳೈಸುತ್ತಿವೆ. ಆದರೆ ಈ ಗೌರವ ಶಿಸ್ತು ಶಿಷ್ಟಾಚಾರಗಳನ್ನು ಕಾಯ್ದುಕೊಳ್ಳಲು ಪೂರಕವಾದ ಸಲಹೆ ಉಪದೇಶಗಳು ಪೋಷಕರಿಂದಲೂ ಶಿಕ್ಷಕರಿಂದಲೂ ಮುಕ್ತವಾಗಿ ಮೂಡಿ ಬರಬೇಕಾಗಿದೆ.

ವಾಸ್ತವದಲ್ಲಿ ಮಾನವ ಸೃಷ್ಟಿ ಶ್ರೇಷ್ಠನಾಗಿದ್ದಾನೆ. ಅವನಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಪ್ರಬುದ್ಧತೆಯಿದೆ. ಶಿಲಾಯುಗದ ಮಾನವನು ಅಭಿವೃದ್ಧಿ ಹೊಂದುತ್ತಾ ಉತ್ತುಂಗತೆಯ ಪರಾಕಾಷ್ಠೆಗೇರಿದ್ದಾನೆ. ಜೋಪಡಿಗಳಲ್ಲಿ ಬದುಕುತ್ತಿದ್ದ ಮಾನವನು ಇಂದು ಹವಾನಿಯಂತ್ರಿತ ತಾರಸಿ ಬಂಗಲೆಗಳಲ್ಲಿ ವಿಹರಿಸುತ್ತಿದ್ದಾನೆ. ಕೈಗಾಡಿ, ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸುತ್ತಿದ್ದ ಮಾನವ ಇಂದು ಪಕ್ಷಿಗಳಂತೆ ವಿಮಾನಗಳಲ್ಲಿ ಹಾರಾಡುತ್ತಿದ್ದಾನೆ. ಮಾತ್ರವಲ್ಲ ಮತ್ಸ್ಯಗಳಂತೆ ಜಲಾಂತರಗಾಮಿಗಳ ಮೂಲಕ ಸಾಗರದ ಅಂತರಾಳದಲ್ಲಿ ಈಜಾಡುತ್ತಿದ್ದಾನೆ.

ಈ ರೀತಿ ಸ್ವಚ್ಛಂದವಾಗಿ ವೈಜ್ಞಾನಿಕ ಸಂಶೋಧನೆಗಳ ಮೂಲಕ ಉತ್ತುಂಗಕ್ಕೇರಿದ ಮಾನವನಿಗೆ ಸ್ವಯಂ ಮಾನವತೆಯನ್ನು ಸಂರಕ್ಷಿಸಿ ಕಾಯ್ದುಕೊಂಡಿರಲು ಸಾಧ್ಯವಾಗಲಿಲ್ಲ. ಅರ್ಥಾತ್ ಈ ವೈಜ್ಞಾನಿಕ ಅದ್ಭುತಗಳ ಮೂಲಕ ತನ್ನ ಸುಖ ಸುಪ್ಪತ್ತಿಗೆಗೆ ಬೇಕಾದ ಸೌಕರ್ಯಗಳನ್ನು ಪಡೆದಿರುವನು. ಆದರೆ ಅದೇ ವೈಜ್ಞಾನಿಕ ಸಂಶೋಧನೆಗಳ ಮೂಲಕ ಮಾನವನು ಸ್ವಯಂ ಸರ್ವನಾಶಕ್ಕೆ ಆವಶ್ಯಕವಾದ ಮಾರಕ ಅಸ್ತ್ರಗಳನ್ನು ಸಂಶೋಧಿಸಿ ಯಶಸ್ವಿಯಾಗಿದ್ದಾನೆ. ಅರ್ಥಾತ್ ವೈಜ್ಞಾನಿಕ ಅದ್ಭುತಗಳು ಮನುಷ್ಯನನ್ನು ಮನುಷ್ಯನಾಗಿ ಬದಲಾಯಿಸುವ ಮಾನದಂಡವಾಗಲಿಲ್ಲ.

ಮಾನವನ ಬುದ್ಧಿ ಮತ್ತು ಧೀಮಂತಿಕೆ ಮಾನವಕುಲದ ಸರ್ವಾಂಗೀಣ ಅಭ್ಯುದಯಕ್ಕಾಗಿರಬೇಕು. ಏಕೆಂದರೆ ಮಾನವನು ತನ್ನ ಅಸ್ತಿತ್ವವನ್ನು ಅರಿತು ನೋಡುವಂತಹ ಪ್ರಬುದ್ಧತೆಯನ್ನು ನೈಸರ್ಗಿಕವಾಗಿ ಪಡೆದುಕೊಂಡಿದ್ದಾನೆ. ತನ್ನ ಉಳಿವು ಅಳಿವುಗಳ ಬಗ್ಗೆ ಚಿಂತಿಸುವ ಶಕ್ತಿಯನ್ನು ಹೊಂದಿದ್ದಾನೆ. ಆದರೆ ಇಂದು ಜಾಗತಿಕ ಮಟ್ಟದಲ್ಲಿ ಏನು ನಡೆಯುತ್ತಾ ಇದೆ? ವೈಜ್ಞಾನಿಕ ಪ್ರಗತಿಯಲ್ಲಿ ಪುಳಕಿತವಾದ ಮಾನವ ಜಗತ್ತು ಬದುಕನ್ನು ಹಸನಾಗಿಸಲು ವಿವಿಧ ಸಿದ್ಧಾಂತಗಳನ್ನು ಆವಿಷ್ಕರಿಸಿದೆ. ಅದನ್ನು ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳೆಂದು ಬೇರ್ಪಡಿಸಿದೆ. ಮಾತ್ರವಲ್ಲ ಮಾನವ ವರ್ಗವು ಉಳ್ಳವರು ಇಲ್ಲದವರು, ಸವರ್ಣೀಯರು ಅವರ್ಣೀಯರು ಎಂದು ಸ್ವಯಂ ವಿಭಜಿಸಲ್ಪಟ್ಟಿದೆ.

ಆದರೆ ಈ ವಿಂಗಡನೆಗಳು ಮಾನವಕುಲವನ್ನು ಪ್ರಗತಿಯತ್ತ ಕೊಂಡೊಯ್ಯುವ ಬದಲು ಜಟಿಲತೆ ಮತ್ತು ಸಂಕಷ್ಟದತ್ತ ತಲುಪಿಸಿದೆ. ಇಂದು ಯುಕ್ರೇನ್ ರಷ್ಯಾದ ಮಧ್ಯೆ ನಡೆಯುತ್ತಿರುವ ಯುದ್ಧದ ಮೂಲ ಉದ್ದೇಶ ಎಡಪಂಥೀಯ ಬಲ ಪಂಥೀಯ ವಿಚಾರಗಳ ಪೈಪೋಟಿಯಾಗಿದೆ.

ಸಾಮ್ರಾಜ್ಯವಾದಿ ಶಕ್ತಿಗಳ ಮೇಲಾಟ. ಮಾರಕಾಸ್ತ್ರಗಳಿಂದ ಕೂಡಿದ ಯುದ್ಧಗಳು ಉಭಯ ಕಡೆಯ ಸೈನಿಕರನ್ನು ಮಾತ್ರ ಕೊಲ್ಲುತ್ತಿಲ್ಲ. ಕ್ಷಿಪಣಿ ಪ್ರಯೋಗ, ಚಾಲಕ ರಹಿತ ಡ್ರೋನ್‌ಗಳ ಮೂಲಕ ಫೈಟರ್ ಬಾಂಬರ್ ವಿಮಾನಗಳ ಮೂಲಕ ಕ್ರೂರ ಆಕ್ರಮಣಗೈಯ್ಯುವ ಮಾರಕಾಸ್ತ್ರಗಳು ನಿರಪರಾಧಿ ಮಹಿಳೆಯರು, ವೃದ್ಧರೆನ್ನದೆ ನವಜಾತ ಶಿಶುಗಳನ್ನೂ ನಿರ್ಧಾಕ್ಷಿಣ್ಯವಾಗಿ ಕೊಂದು ಹಾಕುತ್ತಿದೆ. ಸಾವಿರಾರು ಅಮಾಯಕ ನಾಗರಿಕರನ್ನು ಇರುವೆಗಳನ್ನು ಕೊಲ್ಲುವಂತೆ ನಾಶ ಮಾಡಲಾಗುತ್ತಿದೆ.

ಇದೀಗ ನಡೆಯುತ್ತಿರುವ ಇಸ್ರಾಈಲ್-ಫೆಲೆಸ್ತೀನಿಯರ ನಡುವೆ ಯುದ್ಧದ ಮೂಲ ಹಿನ್ನಲೆ ಏನಾಗಿದೆ? ಜನಾಂಗೀಯತೆ ಸೆಮೆಟಿಕ್ ಜನಾಂಗೀಯತೆಯ ದುರಾಭಿಮಾನ ಇದೀಗ ಫೆಲೆಸ್ತೀನ್ ಮೂಲ ನಿವಾಸಿಗಳ ವಾಸ ಸ್ಥಳವನ್ನು ಕಬಳಿಸಿಕೊಂಡು ಆರಾಮದ ಝಿಯೋನಿಸ್ಟ್ ರಾಷ್ಟ್ರ ಕಟ್ಟಿ ಬೆಳೆಸುವ ಉತ್ಕಟೇಚ್ಚೆ ಒಂದಡೆಯಾದರೆ ತಮ್ಮ ಜನ್ಮ ಭೂಮಿಯನ್ನು ರಕ್ಷಿಸುವ ಜೀವನ್ಮರಣ ಹೋರಾಟದಲ್ಲಿ ಫೆಲೆಸ್ತೀನಿಯರು ತೊಳಲಾಡುತ್ತಿದ್ದಾರೆ. ಇಸ್ರಾಈಲ್ ಫೆಲೆಸ್ತೀನಿಯರ ವಂಶನಾಶದಲ್ಲಿ ಝಿಯೋನಿಸ್ಟ್ ಪುನೀತತ್ವವನ್ನು ಕಾಣುತ್ತಿದೆ. ವಿಶ್ವ ಸಂಸ್ಥೆ, ಮಾನವಹಕ್ಕು ಸಂಘಟನೆ, ಅಂತಾರಾಷ್ಟ್ರೀಯ ನ್ಯಾಯಾಲಯಗಳು ಕ್ರೂರ ಬಲಾಢ್ಯ ರಾಷ್ಟ್ರಗಳ ವೀಟೊ ಪ್ರಯೋಗದ ಆಡುಂಬೋಲವಾಗಿ ಮಾರ್ಪಟ್ಟಿದೆ.

ಕ್ರೌರ್ಯವನ್ನೇ ಶೌರ್ಯವೆಂದು ನಂಬಿರುವ ಮತ್ತು ಜನರನ್ನು ನಂಬಿಸುವ ಹುನ್ನಾರಗಳು ರಾಜನೀತಿಯ ಸ್ಥಾನಮಾನವನ್ನು ಪಡೆದಿದೆ.

ಇಲ್ಲಿ ನೈತಿಕತೆ ಸ್ವತಂತ್ರವಾಗಿಲ್ಲ. ಅನ್ಯಥಾ ನೈತಿಕ ಅರಾಜಕತೆ ವೈಭವೀಕರಿಸಲ್ಪಟ್ಟಿದೆ. ಧಾರ್ಮಿಕ ಮೌಲ್ಯಗಳನ್ನು ಬಿಟ್ಟು ದೂರ ಹೋದ ಭೌತಿಕವಾದವು ವಿರಾಜಮಾನವಾಗಿದೆ.

ಧರ್ಮನೀತಿಗಳು ರಾಜಕಾರಣಕ್ಕೆ ಸಲ್ಲದು. ಧರ್ಮಪ್ರೇರಿತ ಆಡಳಿತವು ರಾಜ್ಯದಲ್ಲಿ ಕ್ಷೋಭೆಯನ್ನಷ್ಟೇ ಮಾಡಬಲ್ಲದು. ಜನರು ಧಾರ್ಮಿಕ ಮೂಲಭೂತವಾದದ ಬಲಿ ಪಶುಗಳಾಗುವರು… ಕಾರ್ಲ್ ಮಾಕ್ಸ್ ನ ಸಮತಾವಾದ ಧರ್ಮವನ್ನು ಅಫೀಮಿನ ಅಮಲಿಗೆ ಹೋಲಿಸಿದೆ. ಧರ್ಮ ವಿಧಿಗಳು ಆಕಾಶದ ಮೇಲಿರುವ ಮತ್ತು ಭೂಮಿಯ ಅಡಿಯಲ್ಲಿರುವ (ಪಾರತ್ರಿಕ) ವಿಷಯಗಳ ಬಗ್ಗೆ ಹೇಳುತ್ತದೆ. ಜನರನ್ನು ಪ್ರತಿಗಾಮಿತ್ವದೆಡೆಗೆ ಕೊಂಡೊಯುತ್ತದೆ ಎಂದು ನಂಬಿಸಲಾಗಿದೆ. ಇನ್ನು ಬಂಡವಾಳಶಾಹಿಗಳ ಅಂಬೋಣ ಇನ್ನೊಂದು ತರದ್ದಾಗಿದೆ. ಧರ್ಮದ ಛಾಯೆಯಲ್ಲಿರುವ ಬಂಡವಾಳಶಾಹಿ ಪ್ರಭಲಗಳು ಜೀಸಸ್‌ನದು ಜೀಸಸ್‌ನಿಗೆ, ಸೀಸರ್ ನದು ಸೀಸರ್‌ನಿಗೆ ಎಂಬ ರಾಗ ಹಾಡುತ್ತಾರೆ. ಧರ್ಮ ನೀತಿಗಳು ರಾಜ ನೀತಿಗೆ ಅನುಯೋಜ್ಯವಲ್ಲ ಎಂಬ ತೀರ್ಮಾನದಲ್ಲಿದ್ದಾರೆ.

ಅಲ್ಲದೆ ಇಂದು ಧರ್ಮದ ಛಾಯೆಯಲ್ಲಿ ಬೆಳೆದಿರುವ ಜನಾಂಗೀಯತೆಯಿದೆ. ಅದರ ಚಿಂತನೆಗಳು ಮಾನವೀಯತೆ, ಅನುಕಂಪ, ಸೌಹಾರ್ದ ಸಾಮರಸ್ಯವನ್ನು ನಿರಸ್ತೆಜಗೊಳಿಸುತ್ತಿವೆ. ಇನ್ನೊಂದು ವಿಭಾಗದ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಪೈಶಾಚಿಕತೆ ಅದು.

ಧರ್ಮ ವಿಧಿಗಳೊಂದಿಗೆ ನಡೆಯಬೇಕಾದ ವೈವಾಹಿಕ ಸಂಬಂಧಗಳು ದಿನೇ ದಿನೇ ವಿವಾಹ ರಹಿತವಾಗಿ ಅಥವಾ ವಿವಾಹ ಪೂರ್ವದಲ್ಲಿ, ಲಿವಿಂಗ್ ಟುಗೆದರ್ ಎಂಬ ಆಂಗ್ಲ ಪದ ಪ್ರಯೋಗದಲ್ಲಿ ತಾತ್ಕಾಲಿಕ ಲೈಂಗಿಕ ಸಂಪರ್ಕಕ್ಕೆ ಹಸಿರು ನಿಶಾನಿ ತೋರಿಸಲಾಗುತ್ತಿದೆ. ಈ ತಾತ್ಕಾಲಿಕವಾದ ಲೈಂಗಿಕ ತೃಷೆಯಲ್ಲಿ ಜೋಡಿಗಳಲ್ಲಿ ಯಾವೊಬ್ಬರಲ್ಲಿ ಆಕರ್ಷಣೆ ಕುಂಠಿತವಾದಾಗ ಕಾನೂನಿನಂತೆ ಬಿಡುಗಡೆಗೆ ಅವಕಾಶವಿದ್ದರೂ ಕೊಲೆಯಲ್ಲಿ ಪರ್ಯಾವಸಾನವಾದ ಅನೇಕ ಉದಾಹರಣೆಗಳಿವೆ. ಇಲ್ಲಿ ಅನೈತಿಕ ಸ್ವಾತಂತ್ರವು ಮೇಳೈಸಿವೆ. ಹೆಣ್ಣು ಇನ್ನೂ ಅಬಲೆಯಾಗಿದ್ದಾಳೆ. ಆಕೆಯ ಮಾನ ಮರ್ಯಾದೆ ಸ್ವಂತಿಕೆ ಮಾತ್ರವಲ್ಲ ಆಕೆಯ ಬದುಕುವ ಹಕ್ಕು ಕಸಿಯಲ್ಪಟ್ಟಿವೆ. ಇದಕ್ಕೆ ಕಾನೂನಿನ ಆಸರೆಯಿದೆ. ಆದರೆ ಮೂಲಭೂತವಾದ ನ್ಯಾಯವು ಇಲ್ಲಿ ವಂಚಿಸಲ್ಪಟ್ಟಿದೆ. ಅದರಂತೆ ನ್ಯಾಯಾಲಯಗಳು ತೀರ್ಪು ನೀಡುತ್ತದೆ. ಸಂತ್ರಸ್ತರು ವಂಚಿಸಲ್ಪಡುತ್ತಾರೆ.

ವಾಸ್ತವದಲ್ಲಿ ಇದು ಏನನ್ನು ಪ್ರತಿಪಾದಿಸುತ್ತದೆ. ಪ್ರಗಾಮಿತವೆಂದು ತ್ಯಜಿಸಲ್ಪಟ್ಟ ಆಧ್ಯಾತ್ಮಿಕ ಮೂಲಭೂತ ವಿಚಾರಗಳು ಮಾತ್ರ ಜನರನ್ನು ನೈತಿಕ ಅರಾಜಕತೆಯಿಂದ ರಕ್ಷಿಸಬಲ್ಲದು. ಏಕೆಂದರೆ ಅಲ್ಲಿ ಸ್ವಾತಂತ್ರ್ಯದೊಂದಿಗೆ ನೈತಿಕತೆಗೂ ಸಮಪಾಲು ನೀಡಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಇಲ್ಲಿ ಕುಡಿತ, ಜೂಜು, ಹಾದರಗಳು ವೈಯಕ್ತಿಕ ಸ್ವಾತಂತ್ರ್ಯದ ಪಟ್ಟಿಯಲ್ಲಿ ಸೇರ್ಪಡೆಯಾಗಲಿಲ್ಲ. ಅವೆಲ್ಲವೂ ನೈತಿಕ ಅಧಃಪತನ ಮತ್ತು ವಿನಾಶ ಮಾರ್ಗಗಳಾಗಿ ಪರಿಗಣಿಸಲ್ಪಟ್ಟಿವೆ. ಬಡ್ಡಿ ವ್ಯವಹಾರಗಳನ್ನು ಉಳ್ಳವರು ಇಲ್ಲದವರ ಮೇಲೆ ನಡೆಸುವ ಸುಲಿಗೆ ಎಂದು ಪರಿಗಣಿಸಿದೆ. ಸ್ಥಿತಿವಂತರು ತಮ್ಮ ಗಳಿಕೆಯ ನಿರ್ದಿಷ್ಟ ಮೊತ್ತವನ್ನು ತನ್ನ ಕೃಷಿ ಆದಾಯದ ನಿರ್ದಿಷ್ಟ ಅಂಶವನ್ನು ಝಕಾತ್‌ನ ರೂಪದಲ್ಲಿ ಕಡ್ಡಾಯ ದಾನ ಮಾಡಬೇಕೆಂದು ಆಜ್ಞಾಪಿಸಿದೆ. ಹಾದರವನ್ನು ದಂಡನಾರ್ಹಗೊಳಿಸಿದೆ. ಪುರುಷನಿಗೆ ಗರಿಷ್ಠ ನಾಲ್ಕು ವಿವಾಹಗಳನ್ನು ಮಾಡುವ ಹಕ್ಕಿನೊಂದಿಗೆ ಆಕೆಯ ಪತ್ನಿಯರಿಗೂ ಮಕ್ಕಳಿಗೂ ಆಹಾರ ಬಟ್ಟೆ ಶಿಕ್ಷಣ ಮತ್ತು ಆಸ್ತಿಯ ಹಕ್ಕಿನಲ್ಲೂ ನ್ಯಾಯಯುತ ಪಾಲನ್ನು ನೀಡಬೇಕೆಂಬುದನ್ನು ಕಾನೂನು ಬದ್ಧಗೊಳಿಸಿದೆ. ಏಕಪತೀವ್ರತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಭೌತಿಕವಾದಿಗಳು ಆರೋಪಿಸುವಂತೆ ಆಕಾಶದ ಮೇಲಿನ ಮತ್ತು ಭೂಮಿಯಡಿಯ ವಿಚಾರಗಳು ಎಂದಾದರೆ ಮೇಲುದ್ಧರಿಸಿದ ನೈತಿಕ ವಿಧಿಗಳು ಭೂಮಿಯಲ್ಲಿ ಬದುಕುವ ಜನರಿಗಾಗಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಇವೆಲ್ಲವೂ ಪ್ರವಾದಿಯವರ(ಸ) ದೌತ್ಯೋಪದೇಶದಲ್ಲಿ ಅಡಕವಾಗಿರುವ ಬದುಕಿನ ವಿಚಾರಗಳಾಗಿವೆ. ಈ ವಿಚಾರಗಳು ಸರ್ವೇಶ್ವರನ ಆರಾಧನೆ ಮತ್ತು ಆಜ್ಞಾನುಸರಣೆಯಲ್ಲಿ ಅಧಿಷ್ಠಿತವಾಗಿವೆ. ಧರ್ಮ ಗ್ರಂಥಗಳಲ್ಲಿ ಈ ವಿಶಿಷ್ಟ ಮಾರ್ಗದರ್ಶನಗಳು ಉಲ್ಲೇಖಿಸಲ್ಪಟ್ಟಿವೆ.

ನಿಜಾರ್ಥದಲ್ಲಿ ಮಾನವನ ಬದುಕು ಶಾಂತಿ ನೆಮ್ಮದಿ ಮಾತ್ರವಲ್ಲ ಶಿಸ್ತು ಸಂಯಮ ಮತ್ತು ನೈತಿಕ ತಳಹದಿಗಳಲ್ಲಿ ನಿಂತಿರಬೇಕಾದರೆ, ಈ ದಿವ್ಯಮಾರ್ಗ ಸೂಚನೆಗಳನ್ನು ಗರಿಷ್ಠವಾಗಿ ಅನುಷ್ಠಾನಿಸಬೇಕಾಗಿದೆ. ಇದರಲ್ಲಿ ಸ್ವಚ್ಛಂದವಾದ ಕಡಿವಾಣ ಹಾಕಲಾಗಿದೆ.