ನೇತನ್ಯಾಹು ನಿವಾಸಕ್ಕೆ ಹಿಝ್ಬುಲ್ಲಾ ಡ್ರೋನ್: ಹಿಝ್ಬುಲ್ಲಾ ಸಾಮರ್ಥ್ಯಕ್ಕೆ ಬೆಚ್ಚಿಬಿದ್ದ ಇಸ್ರೇಲ್

0
215

ಸನ್ಮಾರ್ಗ ವಾರ್ತೆ

ಇಸ್ರೇಲ್ ಪ್ರಧಾನಿ ನೇತಾನ್ಯಾಹು ಅವರ ವಸತಿಯ ಮೇಲೆ ಡ್ರೋನ್ ಆಕ್ರಮಣ ನಡೆದಿರುವುದಾಗಿ ವರದಿಯಾಗಿದೆ. ಇಸ್ರೇಲಿನ ಪಶ್ಚಿಮ ಪಟ್ಟಣವಾದ ಸಿಸೆರಿಯಾದಲ್ಲಿರುವ ವಸತಿಯ ಮೇಲೆ ಹಿಝ್ಬುಲ್ಲ ಈ ಡ್ರೋನ್ ಆಕ್ರಮಣ ನಡೆಸಿದೆ ಎಂದು ಪ್ರಧಾನಿಯವರ ವಕ್ತಾರರು ದೃಢಪಡಿಸಿದ್ದಾರೆ.

ಇಸ್ರೇಲಿನ ಎಲ್ಲಾ ಕಣ್ಗಾವಲನ್ನು ಭೇದಿಸಿ ಹಿಝ್ಬುಲ್ಲಾ ಈ ಡ್ರೋನ್ ಆಕ್ರಮಣ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಯಹ್ಯಾ ಸಿನ್ವಾರ್ ಹತ್ಯೆಯ ಬಳಿಕ ಈ ದಾಳಿ ನಡೆದಿದೆ. ಈ ಘಟನೆಯ ವೇಳೆ ನೆತನ್ಯಾಹು ಮತ್ತು ಅವರ ಕುಟುಂಬ ಆ ನಿವಾಸದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಹಾಗೆಯೇ ಲೆಬನಾನ್ ಹಾರಿಸಿದ ಕ್ಷಿಪಣಿಗೆ ಇಸ್ರೇಲಿನ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಹಿಝ್ಬುಲ್ಲಾ ಸರಣಿ ದಾಳಿಗಳನ್ನು ನಡೆಸುತ್ತಿದ್ದು ಇಸ್ರೇಲ್ ನ ಕಟ್ಟಡದ ಭಾಗವು ಅದರಿಂದಾಗಿ ಹಾನಿಗೀಡಾಗಿದೆ ಎಂದು ಸೌದಿ ಮಾಧ್ಯಮ ವರದಿ ಮಾಡಿದೆ. ನೇತಾನ್ಯಾಹು ಅವರ ನಿವಾಸವು ಲೆಬನಾಲಿನಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಇಸ್ರೇಲ್ ನ ಒಳ ನುಗ್ಗಿ ದಾಳಿ ನಡೆಸುವಷ್ಟು ಹಿಝ್ಬುಲ್ಲಾ ಸಮರ್ಥವಾಗಿದೆ ಎಂಬ ಸಂದೇಶ ಈ ಮೂಲಕ ರವಾನೆಯಾಗಿದೆ ಎಂದು ಹೇಳಲಾಗಿದೆ.