ಡಿಸೆಂಬರ್ 31ರ ಒಳಗೆ ಪಟ್ಟಣ ಬಿಟ್ಟು ತೊಲಗಿ: ಮುಸ್ಲಿಮರಿಗೆ ಧಮಕಿ ಹಾಕಿದ ಉತ್ತರಾಖಂಡದ ವ್ಯಾಪಾರಿ ಸಂಘ

0
222

ಸನ್ಮಾರ್ಗ ವಾರ್ತೆ

ಡಿಸೆಂಬರ್ 31ರ ಒಳಗೆ ಪಟ್ಟಣವನ್ನು ತೊರೆಯಬೇಕು ಎಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಕಾನ್ಸರ್ ಪಟ್ಟಣದ ವ್ಯಾಪಾರಿ ಸಂಘ 15 ಮುಸ್ಲಿಂ ಕುಟುಂಬಗಳಿಗೆ ಆದೇಶ ನೀಡಿದೆ. ಇವುಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳೂ ಸೇರಿವೆ.. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಕನ್ಸರ್ ನ ಮೈದಾನದಲ್ಲಿ ಜಾಗೃತಿ ರ‍್ಯಾಲಿಯನ್ನು ನಡೆಸಿದ ಬಳಿಕ ವ್ಯಾಪಾರ ಮಂಡಲ್ ಈ ನಿರ್ದೇಶನವನ್ನು ನೀಡಿದೆ.

ನಿಗದಿತ ದಿನಾಂಕದೊಳಗೆ ಪಟ್ಟಣ ತೊರೆಯದೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೆಯೇ ಯಾರು ಇಂಥವರಿಗೆ ಬಾಡಿಗೆ ಮನೆಯನ್ನು ನೀಡಿರುವರೋ ಆ ಮಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ರತಿಯೊಬ್ಬರಿಗೂ 10,000 ರೂಪಾಯಿ ದಂಡವನ್ನು ವಿಧಿಸಲಾಗುವುದು ಎಂದು ಮೈದಾನ್ ಸೇವಾ ಸಮಿತಿಯ ಅಧ್ಯಕ್ಷ ವೀರೇಂದ್ರ ಸಿಂಗ್ ಹೇಳಿದ್ದಾರೆ.

ಯಾವುದೇ ವ್ಯಾಪಾರಿಗಳು ಕನ್ಸರ್ ಗ್ರಾಮ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿಯೂ ಯಾವುದೇ ವ್ಯಾಪಾರಿ ಈ ಗ್ರಾಮಕ್ಕೆ ಬಂದರೆ ಅವರನ್ನು ಬಂಧಿಸಲಾಗುವುದು ಮತ್ತು 10 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುವುದು. ಅಲ್ಪಸಂಖ್ಯಾತ ಸಮುದಾಯದಿಂದ ಹಿಂದೂ ಸಮುದಾಯದ ಹೆಣ್ಣು ಮಕ್ಕಳಿಗೆ ಆಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತಾಳಲಾಗಿದೆ ಎಂದವರು ಹೇಳಿದ್ದಾರೆ.

ಆದರೆ ಇಂಥ ಆರೋಪವನ್ನು ಪಟ್ಟಣದ ಮುಸ್ಲಿಮರು ನಿರಾಕರಿಸಿದ್ದಾರೆ. ನಾವು ಯಾವುದೇ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ. ಇದು ಪಟ್ಟಣದ ಕೋಮು ಸೌಹಾರ್ದತೆಗೆ ವಿರುದ್ಧವಾದ ತೀರ್ಮಾನವಾಗಿದೆ ಮಾತ್ರ ಅಲ್ಲ ಮುಸ್ಲಿಮರನ್ನು ಹೊರಗಟ್ಟುವ ದುರುದ್ದೇಶದ ವ್ಯಾಪಾರಿ ಮನಸ್ಥಿತಿ ಇದರಲ್ಲಿ ಅಡಗಿದೆ ಎಂದವರು ಹೇಳಿದ್ದಾರೆ.

ಕನ್ಸರ್ ಗ್ರಾಮವು 11 ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಇಲ್ಲಿ ನಡೆದ ರ‍್ಯಾಲಿಯಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿತ್ತು ಎಂದು ವರದಿಯಾಗಿದೆ.