ಕಾಂಗ್ರೆಸ್ ಸೋಲಿಗೆ ಯಾರು ಹೊಣೆ?

0
86

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ಹರ್ಯಾಣದಲ್ಲಿ ಕಾಂಗ್ರೆಸ್ ಸೋತಿದೆ. ಜಮ್ಮು ಕಾಶ್ಮೀರದಲ್ಲಿ ಇಂಡಿಯ ಗೆದ್ದಿದೆ. ಬಹುತೇಕ ಎಲ್ಲ ವಿಶ್ಲೇಷಣೆಗಳೂ ಕಾಂಗ್ರೆಸ್ ಪರ ಇತ್ತು. ಆದರೆ, ಸೋಲು ಮಾತ್ರ ಕಟ್ಟಿಟ್ಟ ಬುತ್ತಿಯಾಯಿತು. ಈ ಸೋಲು ಮತದಾರರ ತೀರ್ಪೆಂದು ಮತದಾರರೇ ಒಪ್ಪುವುದಿಲ್ಲ. ಕಾಂಗ್ರೆಸ್ ಕೂಡ ಹರ್ಯಾಣದಲ್ಲಿ ವೋಟಿಂಗ್ ಮೆಶಿನ್‌ನಲ್ಲಿ ಮೋಸ ನಡೆಸಿ ಬಿಜೆಪಿ ಗೆದ್ದದ್ದೆಂದು ಹೇಳುತ್ತಿದೆ. ಬಹುಶಃ ಸೋಲಿನ ಆಘಾತವು ಕಾಂಗ್ರೆಸ್ಸನ್ನು ಹೀಗೆ ಹೇಳಿಸುತ್ತಿದೆ ಎಂದು ಈಗ ಬಿಜೆಪಿಯವರು ಮಾತ್ರ ಅಲ್ಲ ಕೆಲವು ರಾಜಕೀಯ ವಿಶ್ಲೇಷಕರೂ ಪ್ರತಿಪಾದಿಸುತ್ತಿದ್ದಾರೆ. ಏನೇ ಅಲ್ಲಿ ನಡೆದಿರಲಿ,

ಹರ್ಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರದ ಕುರ್ಚಿಗೇರಿತು ಎಂಬುದು ಕಣ್ಣಿಗೆ ಕಟ್ಟುವ ಸತ್ಯ. ಈ ಸತ್ಯವನ್ನು ಕಾಂಗ್ರೆಸ್‌ಗೆ ಹೇಗೆ ನಿರಾಕರಿಸಲು ಸಾಧ್ಯ? ತನ್ನ ಸ್ವಯಂಕೃತಾಪರಾಧದಿಂದ ಮಾಡಿಕೊಂಡ ಎಡವಟ್ಟುಗಳನ್ನು ಖಂಡಿತ ಮತದಾರ ಕ್ಷಮಿಸುವುದು ಕಷ್ಟವಿದೆ. ಯಾಕೆಂದರೆ,
ಯಾವತ್ತೂ ಚುನಾವಣೆಯಲ್ಲಿ ಕೊನೆಗಳಿಗೆಯ ತಿರುವುಗಳು ಪ್ರಮುಖವಾಗುತ್ತವೆ. ಸತ್ಯ ಹೇಳಬೇಕಾದರೆ ತಿರುವುಗಳೇ ಗೊತ್ತಿಲ್ಲದ ದೇಶದ ಬಹಳ ಹಳೆಯ ಪಾರ್ಟಿ ಕಾಂಗ್ರೆಸ್ ಎಂದು ಹೇಳಬಹುದು. ಎಂದೂ ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್ ಮುತ್ಸದ್ಧಿ ಅಲ್ಲ.

ನೋಡಿ, ಕಾಂಗ್ರೆಸಿನ ಘಟಾನುಘಟಿಗಳಾದ ಕಾಂಗ್ರೆಸ್ಸಿನ ಕುಮಾರಿ ಶೆಲ್ಜಾ, ಭೂಪೇಂದ್ರ ಸಿಂಗ್ ಹೂಡ ನಡುವಿನ ಹಗ್ಗಜಗ್ಗಾಟ ಕೊನೆಗಳಿಗೆಯವರೆಗೂ ಇತ್ತು. ಚುನಾವಣೆ ನಡೆಯುವ ಮೊದಲು ದಿನದಂದು ತಾನು ಕಾಂಗ್ರೆಸ್ಸಿಗಳೇ ಆಗಿದ್ದೇವೆ ಎಂದು ಮುಖಂಡೆ ಕುಮಾರಿ ಶಿಲ್ಜಾ ಹೇಳಿಕೆ ನೀಡಬೇಕಾಯಿತು. ಅಂದರೆ ಶೆಲ್ಜಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂದು ದೊಡ್ಡ ಮಟ್ಟದಲ್ಲಿ ಗುಟ್ಟಾಗಿ ಪ್ರಚಾರವನ್ನು ಹಿಂದುತ್ವವಾದಿಗಳು ನಡೆಸಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಅರುವತ್ತರಷ್ಟು ರ‍್ಯಾಲಿ ನಡೆಸಿದರೂ ಬಿಜೆಪಿಯ ಅಬ್ಬರದ ಪ್ರಚಾರದ ಮುಂದೆ ಏನೂ ಅಲ್ಲ ಎಂಬತ್ತಿತ್ತು. ರಾಹುಲ್ ಗಾಂಧಿ ಕಡಿಮೆ ರ‍್ಯಾಲಿ ಮಾಡಿದರು. ಜನ ನೆರದ್ದೌದು. ಬಿಜೆಪಿಯ ಬಹುತೇಕ ರ‍್ಯಾಲಿಗಳು ಬೋರು ಹೊಡೆಸಿತ್ತು. ರೈತರು, ಕ್ರೀಡಾಪಟುಗಳು ಬಿಜೆಪಿಯಿಂದ ಮುಖ ತಿರುಗಿಸಿದ್ದರು. ಹಾಗಿದ್ದೂ ಕಾಂಗ್ರೆಸ್‌ಗೆ ಸೋಲಾದುದರ ಹಿಂದಿನ ತಂತ್ರ ಏನು? ಚುನಾವಣೆಯ ಆಯೋಗವನ್ನು ತರಾಟೆಗೆತ್ತಿಕೊಳ್ಳುವ ಕಾಂಗ್ರೆಸ್‌ಗೆ ಕುಮಾರಿ ಶೆಲ್ಜ, ದೀಪೆಂದರ್ ಹೂಡಾರನ್ನು ಸುಮ್ಮನಿರಿಸಿ ಒಟ್ಟಿಗೆ ಚುನಾವಣೆಯಲ್ಲಿ ಬಳಸಿಕೊಳ್ಳಲು ಯಾಕಾಗಲಿಲ್ಲ? ಬಹುಶಃ ಕಾಂಗ್ರೆಸ್ ದೇಶದ ಬಹು ದುರ್ಬಲ ಪಾರ್ಟಿಗಳಲ್ಲೊಂದು. ಅದು ಸ್ವಯಂ ಕಾಲ ಮೇಲೆ ಕೊಡಲಿ ಹಾಕಿ ಕೊಳ್ಳುವ ಪಾರ್ಟಿ.

ನೋಡಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಕಾಂಗ್ರೆಸ್ಸಿನವರೇ ಮುಂಚೂಣಿಯಲ್ಲಿದ್ದಾರೆ. ಡಿಕೆಶಿ ಮುಖ್ಯಮಂತ್ರಿಯಾಗಬೇಕೆಂದು ಹೇಳುವವರಿದ್ದಾರೆ. ಅದರ ನಡುವೆ ಮೂರನೆಯದಾಗಿ ದಲಿತ ಮುಖ್ಯ ಮಂತ್ರಿಯ ಬೇಡಿಕೆಯೂ ಕೇಳಿ ಬಂದಿದೆ. ಸತೀಶ್ ಜಾರಕಿಹೊಳಿ ಶಾಸಕರ ಮನೆಮನೆಗೆ ಹೋಗಿ ಬರುತ್ತಿದ್ದಾರೆ. ಇವರಿಗೆ ಅಧಿಕಾರವೇ ಇರದಿರುತ್ತಿದ್ದರೆ ಕಾಂಗ್ರೆಸ್ ಪಾರ್ಟಿಯ ನಾಯಕರು ಯಡಿಯೂರಪ್ಪರ ಬೆನ್ನ ಹಿಂದೆ ಹೋಗುತ್ತಿದ್ದರಾ ಎಂದು ಜನ ಪ್ರಶ್ನಿಸತೊಡಗಿದ್ದಾರೆ. ಕಾಂಗ್ರೆಸ್ ನಾಯಕರು ಜನಪರ ನಾಯಕರಾಗಿ ಬೆಳೆದಿಲ್ಲ. ಬಹುಪರಾಕ್ ಹಾಕುವವರ ಜೊತೆ ತಮ್ಮನ್ನು ಉಬ್ಬಿಸಿಕೊಳ್ಳುತ್ತಿದ್ದಾರೆ. ಹರ್ಯಾಣದಲ್ಲಿಯೂ ಆಗಿದ್ದು ಇಷ್ಟೇ. ನೀವೇ ಗೆಲ್ಲುತ್ತೀರಿ ಎಂದು ಸಮೀಕ್ಷೆ ಸಹಿತ ವಾತಾವರಣವನ್ನು ಈ ಸಲ ಬಿಜೆಪಿ ಹುಟ್ಟು ಹಾಕಿತು. ಒಳಗೊಳಗಿನಿಂದ ಆರೆಸ್ಸೆಸ್‌ನ ಕಾರ್ಯಕರ್ತರನ್ನು ಬಿಟ್ಟು ಚಿತ್ರವನ್ನು ತಿರುಗಿಸಿತು. ಸೋಲುವುದೇ ಅಭ್ಯಾಸವಾಗಿರುವ ಕಾಂಗ್ರೆಸ್ಸಿಗೆ ರಾಹುಲ್ ಗಾಂಧಿಯಂತಹ ನಿತ್ಯ ಪರಿಶ್ರಮಿ ನಾಯಕ ಇಲ್ಲದಿರುತ್ತಿದ್ದರೆ ಈಗಾಗಲೇ ಭಾರತದ ಭೂಪಟದಿಂದ ಕಾಂಗ್ರೆಸ್ ಮುಕ್ತ ಆಗಿಬಿಡುತ್ತಿತ್ತು. ಸೋಲಿನಿಂದ ಮತ್ತು ಘಟನೆಗಳಿಂದ ಪಾಠ ಕಲಿಯದವರ ಅಸ್ತಿತ್ವ ಉಳಿಯುವುದು ಕಷ್ಟವೇ ಆಗಿರುತ್ತದೆೆ.

ಇನ್ನೊಂದು ಕಡೆ ಜಮ್ಮು ಕಾಶ್ಮೀರದಲ್ಲಿ ಇಂಡಿಯ ಗೆದ್ದದ್ದರಲ್ಲಿಯೂ ಕಾಂಗ್ರೆಸ್ಸಿಗೆ ಹೇಳುವುದಕ್ಕೇನಿಲ್ಲ. ಕೇವಲ ಆರು ಸೀಟುಗಳು ಅದರ ಖಾತೆಯಲ್ಲಿ ಇದೆ. ವೋಟು ಶೇರಿಂಗ್ ಪ್ರಮಾಣವೂ ಗಣನೀಯವಾಗಿ 11.97%ಕ್ಕೆ ಇಳಿದಿದೆ. ಅತ್ತ ಬಿಜೆಪಿಯನ್ನು ನೋಡಿ, 25.64% ಮತಗಳಿಸಿದೆ. ಬಹುಶಃ ಮುಸ್ಲಿಮರೇ ಹೆಚ್ಚಿರುವ ನಾಡಿನಲ್ಲಿ ಹಿಂದುತ್ವವಾದಿಗಳು ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ವೋಟು ಗಳಿಸಲು ಹೇಗೆ ಸಾಧ್ಯವಾಯಿತೆಂದು ಕಾಂಗ್ರೆಸ್ ಊಹಿಸಬೇಕು.

ಹರ್ಯಾಣದಲ್ಲಿ ಬಿಜೆಪಿ ಕಾಂಗ್ರೆಸ್ಸಿನ ಪ್ರಮಾಣ ಶೇ39ನ್ನು ಮೀರಿ ಸರಿಸಮಾನವಾಗಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದ ನ್ಯಾಶನಲ್ ಕಾನ್ಫರೆನ್ಸ್ ಗೆ
23 ಶೇಕಡಕ್ಕಿಂತ ಸ್ವಲ್ಪ ಹೆಚ್ಚು ಮತ ಚಲಾವಣೆಯಾಗಿದೆ. ಇದರರ್ಥ ರಾಹುಲ್ ಗಾಂಧಿಯ ಪ್ರಚಾರ ನ್ಯಾಶನಲ್ ಕಾನ್ಫರೆನ್ಸ್ ಗೆ ಉಪಕರಿಸಿತು. ಮೆಹಬೂಬ ಮುಫ್ತಿಯವರ ಪಿಡಿಪಿಯನ್ನು ನೆಲಕಚ್ಚುವಂತೆ ಮಾಡಿತು. ಒಮ್ಮೆ ಅಧಿಕಾರದಲ್ಲಿದ್ದ ಪಾರ್ಟಿ ಶೇ. 3ರಷ್ಟು ಮತಗಳಿಸುತ್ತದೆ ಎಂದರೆ ಅರ್ಥ ಏನು?

ಬಿಜೆಪಿಯೊಂದಿಗೆ ಸೇರಿ ಈ ಹಿಂದೆ ಅಧಿಕಾರ ಅನುಭವಿಸಿದ್ದಕ್ಕೆ ಜಮ್ಮು ಕಾಶ್ಮೀರದ ಜನ ಬುದ್ಧಿ ಕಲಿಸಿದ್ದಾರೆ. ಈಗ ಜಮ್ಮು ಕಾಶ್ಮೀರದ ಚುನಾವಣಾ ಫಲಿತಾಂಶದಲ್ಲಿ ಪಿಡಿಪಿ ಎಲ್ಲಿದೆ? ಎಲ್ಲೂ ಇಲ್ಲ. ಆದರೆ ಹರ್ಯಾಣಿಗರಿಂದ ಅದು ಸಾಧ್ಯವಾಗಿಲ್ಲ. ಆದರೂ ಕಾಂಗ್ರೆಸ್‌ಗೆ ಸ್ವಲ್ಪ ನೆಮ್ಮದಿ ಇರುವ ವಿಚಾರ ಹರ್ಯಾಣದ ಮತ ಚಲಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡೂ ಸಮಸಮವಾಗಿದೆ. ಆದರೆ ಪ್ರಾದೇಶಿಕ ಪಾರ್ಟಿಗಳಾದ ದೇವಿಲಾಲರ ನ್ಯಾಶನಲ್ ಲೋಕದಳ, ಅವರ ಮರಿ ಮೊಮ್ಮಗನ ಜೆಜೆಪಿಗಳನ್ನು ಮತದಾರರು ಚೇತರಿಸಿಕೊಳ್ಳಲಾಗದಂತೆ ಸೋಲಿಸಿ ಮೂಲೆಗೆಸೆದರು. ದುರದೃಷ್ಟಕ್ಕೆ ನ್ಯಾಶನಲ್ ಲೋಕದಳಕ್ಕೆ ಎರಡು ಸೀಟುಗಳು ಸಿಕ್ಕಿವೆ. ಉಪಮುಖ್ಯಮಂತ್ರಿಯಾಗಿದ್ದ ದುಷ್ಯಂತ ಚೌಟಾಲರ ಪಾರ್ಟಿ ಜೆಜೆಪಿ ಹೇಳ ಹೆಸರಿಲ್ಲದೆ ನಾಶವಾಯಿತು. ದುಷ್ಯಂತ್ ಹೀನಾಯವಾಗಿ ಸೋತಿದ್ದಾರೆ.

ಬಹುಶಃ ಬಿಜೆಪಿಯ ಜೊತೆ ಸೇರಿ ದರೆ ಏನಾಗುತ್ತದೆ ಎಂದು ಇಂದು ಚೆನ್ನಾಗಿ ದುಷ್ಯಂತ್ ಚೌಟಾಲರಿಗೂ ಅವರ ಜೆಜೆಪಿ ಪಾರ್ಟಿಗೂ ಅರ್ಥವಾಗಿರುತ್ತದೆ. ಅದರಲ್ಲಿ ಹೆಚ್ಚು ಶೋಕದ ಸುದ್ದಿ ಬಿಜೆಪಿ ಜೊತೆಗೂಡಿ ಕಾಶ್ಮೀರದ ವಿಶೇಷ ಸ್ಥಾನಮಾನವೇ ಕಿತ್ತು ಹೋಗುವಂತೆ ಮಾಡಿದ ಆಕ್ರೋಶಕ್ಕೆ ಮೆಹಬೂಬ ಮುಫ್ತಿಯ ಪಿಡಿಪಿ ತುತ್ತಾಯಿತು. ಮೆಹಬೂಬರಿಗೂ ಒಂದು ಕಾಲದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ದಕ್ಕೆ ಬಿಜೆಪಿ ಕೊಟ್ಟ ಪೆಟ್ಟು ಅರ್ಥ ಆಗಿರಬಹುದು. ಅಂದರೆ ಇಲ್ಲಿ ಹೇಳಬಹುದಾದದ್ದು ಜನರ ಅಭಿಮತಕ್ಕೆ ವಿರುದ್ಧ ನಿಂತರೆ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂದು. ಜನರನ್ನು ಯಾಮಾರಿಸಲು ಕಾಂಗ್ರೆಸ್ ಸಹಿತ ಈ ಎಲ್ಲ ಪಾರ್ಟಿಗಳು ಬಿಜೆಪಿಯಲ್ಲ. ಬಿಜೆಪಿಗೆ ಆರೆಸ್ಸೆಸ್‌ನ ಕ್ಯಾಡರ್ ಶಕ್ತಿ ಇದೆ. ಇವರಿಗೆ ಏನಿದೆ? ಸರಿಯಾದ ಸಿದ್ಧಾಂತ ಇದೆಯಾ? ಕಾಂಗ್ರೆಸ್ಸಿನ ಜಾತ್ಯತೀತ ಅಥವಾ ಧರ್ಮ ನಿರಪೇಕ್ಷ ಸಿದ್ಧಾಂತದ ಕತೆ ನೋಡಿ. ಅವರು ಬಿಜೆಪಿಯ ಹಿಂದುತ್ವವನ್ನು ಒಪ್ಪಿಕೊಂಡಂತೆ ವರ್ತಿಸಿದರು. ಬಾಬರಿ ಮಸೀದಿ ಮುಸ್ಲಿಮರು ಕಳಕೊಂಡಿದ್ದಾರೆ ಎಂದಿದ್ದರೂ ರಾಮ ಮಂದಿರವನ್ನು ಬೆಂಬಲಿಸಿ ಧಾರ್ಮಿಕತೆಯಲ್ಲಿ ಬಿಜೆಪಿಯನ್ನು ಮೀರಿಸಲು ನೋಡಿದರು. ಯಾವುದೋ ಧಾರ್ಮಿಕ ಸಂಘಟನೆಯವರಂತೆ ವರ್ತಿಸಿದ ಕಾಂಗ್ರೆಸ್ಸಿಗರನ್ನು ದೇಶ ಈ ಸಂದರ್ಭದಲ್ಲಿ ನೋಡಿತು. ಯೋಚಿಸಿತು. ಕಾಂಗ್ರೆಸ್ ಹೀಗೆ ತನ್ನ ಬಣ್ಣವನ್ನು ಬಯಲು ಗೊಳಿಸಿತು.

ಅಂದರೆ ಧರ್ಮ ನಿರಪೇಕ್ಷ ಸಿದ್ಧಾಂತಿಗಳು ತಮ್ಮ ವಿಷಯ ಬಂದಾಗ ಹೆಚ್ಚು ಧಾರ್ಮಿಕರಾದರು. ಇದಕ್ಕಿಂತ ಅವಮಾನ ಬೇರೆ ಇದೆಯೇ? ಅದರಲ್ಲೂ ಮಧ್ಯಪ್ರದೇಶದ ಚುನಾವಣೆಯ ವೇಳೆ ಕಾಂಗ್ರೆಸ್ ನಾಯಕ ಕಮಲನಾಥ್ ಕಾಂಗ್ರೆಸ್ಸನ್ನೇ ಹಿಂದುತ್ವದ ಪಾರ್ಟಿಯಾಗಿ ಮಾಡಲು ಶ್ರಮಿಸಿ ಅಧಿಕಾರಕ್ಕೆ ಬರಬಹುದಾಗಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲುವಂತೆ ಮಾಡಿದರು. ಮೂಡಾ ಕೇಸಿನಲ್ಲಿ ಸಿದ್ದರಾಮಯ್ಯರನ್ನು ಸಿಲುಕಿ ಹಾಕಿಸಲು ಕಾಂಗ್ರೆಸ್ಸಿಗರೆ ಸಹಕರಿಸಿದರೆಂದು ಕೆಲವು ಬಿಜೆಪಿಗರೇ ಹೇಳುತ್ತಿರುವುದು ಸಹಿತ ಅಧಿಕಾರದ ಹಂಬಲಿಗಳು ಕಾಂಗ್ರೆಸಿನಲ್ಲಿದ್ದಾರೆಂದು ಕಂಡು ಬರುತ್ತಾರೆ.

ಸಿಎಎ ಕಾನೂನು ತಂದಾಗ, ಮುಸ್ಲಿಮರ ಬಾಬರಿ ಮಸೀದಿ ಹೋದಾಗ, ಮೋದಿ ಮುಸ್ಲಿಮರ ವೈಯಕ್ತಿಕ ಕಾನೂನಿಗೆ ಕೈ ಹಾಕುವಾಗ ಕಾಂಗ್ರೆಸ್ ಜೀವ ಇಲ್ಲದಂತೆಯೇ ವರ್ತಿಸಿತು. ಅದರ ಪರಿಣಾಮ ಕಾಂಗ್ರೆಸ್ಸಿಗರನ್ನು ಜನರು ತಿರಸ್ಕರಿಸುತ್ತಿದ್ದಾರೆ. ಅದರಿಂದ ಬೇಸತ್ತವರೆಲ್ಲ ಚಿಕ್ಕ ಚಿಕ್ಕ ಪಾರ್ಟಿ ಮಾಡಿಕೊಂಡು ಸೋಲಿಸುತ್ತಿದ್ದಾರೆ. ಅಂದರೆ ಜನರ ಇಶ್ಯೂಗಳು ಅದು ಧಾರ್ಮಿಕವೋ ಸಾಮಾಜಿಕವೋ ಎತ್ತಿ ಭಾರತ ಜಾತ್ಯತೀತ ದೇಶ ಎಂದು ಹಿಂದುತ್ವದ ಬಿಜೆಪಿಗೆ ಸವಾಲೆಸೆಯುವಲ್ಲಿ ಜಾತ್ಯತೀತ ತಳಹದಿಯ ಕಾಂಗ್ರೆಸ್ ವಿಫಲವಾಗುತ್ತ ಬಂದಿದೆ. ರೈತರು ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿದಾಗ ಹರ್ಯಾಣದ ಬಿಜೆಪಿ ಸರಕಾರದಲ್ಲಿ ಕೂತು ಜೆಜೆಪಿ ಅಧಿಕಾರ ರುಚಿ ಅನುಭವಿಸಿತು. ಅಂದರೆ ಬಿಜೆಪಿ ಹೊರತು ಸಿದ್ಧಾಂತವೇ ಇಲ್ಲದ ಪಾರ್ಟಿಗಳು ಇವತ್ತಿದೆ. ಜುಜುಬಿ ಅಧಿಕಾರಕ್ಕಾಗಿ ರೈತರು ಜನಸಾಮಾನ್ಯರ ಬಗ್ಗೆ ಯೋಚಿಸದವರಿಗೆ ಮತದಾರ ಮಣೆ ಹಾಕುವುದಿಲ್ಲ. ಯಾವ ಪ್ರಗತಿ ಅಭಿವೃದ್ಧಿ ಮಾಡದಿದ್ದರೂ ಬಿಜೆಪಿಗೆ ಜನರ ಮುಂದೆ ಕತೆ ಬಿಡಿಸಲು ಹಿಂದುತ್ವ ಇದೆ. ವಿರೋಧಿಸಲು ಮುಸ್ಲಿಮರು ಇದ್ದಾರೆ.

ಬಿಜೆಪಿಯ ಬಿರುಗಾಳಿಗೆ ಸಿಲುಕಿದ ಭಾರತದ ಸಂವಿಧಾನವನ್ನು ಈ ಯಾವ ಪಾರ್ಟಿಗಳಿಂದ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜನರಿಗೆ ಅನಿಸುವಂತೆ ಚುನಾವಣಾ ಫಲಿತಾಂಶಗಳು ತೋರಿಸಿಕೊಡುತ್ತಿದೆ. ಈಗ ಇವಿಎಂನ್ನು ದೂರುವವರಿಗೆ ಅದು ಬೇಡವೆಂದಿದ್ದರೆ ಅದನ್ನು ಒಂದು ಆಂದೋಲನವಾಗಿ ಯಾಕೆ ದೇಶದಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ? ಇವಿಎಂ ಆಟದಲ್ಲಿ ಕೆಲವೊಮ್ಮೆ ಕಾಂಗ್ರೆಸ್ಸಿಗೂ ಲಾಭವಾಗಬಹುದು ಎಂಬ ಕಾರಣ ಇರಬಹುದೇ ಎಂದು ಜನರು ಕೇಳತೊಡಗಿದ್ದಾರೆ. ಹರ್ಯಾಣದಲ್ಲಿ ಕಾಂಗ್ರೆಸ್ಸಿನ ಕಾರಣಗಳಿಂದ ಅದು ಸೋತಿದೆ ಎಂಬುದು ಮೇಲ್ನೋಟಕ್ಕೆ ವ್ಯಕ್ತ ಸತ್ಯ. ಕುಮಾರಿ ಶೆಲ್ಜ, ಭೂಪಿಂದರ್ ಸಿಂಗ್ ಹೂಡ, ರಣಜಿತ್ ಸುರ್ಜೇವಾಲರ ನಡುವೆ ಸರಿ ಇರಲಿಲ್ಲ. ಈ ಒಳ ಜಗಳಾಟಗಳ ಎಡವಟ್ಟಿಂದ ಅವರು ಸೋತಿದ್ದಾರೆ. ಕಾಂಗ್ರೆಸ್ಸನ್ನು ಜನರು ಸೋಲಿಸಿಲ್ಲ ಎಂಬುದು ಸರಿಯಾಗಿದೆ ಎಂಬಂತೆ ಕಂಡು ಬರುತ್ತಿದೆ.

ದೇಶದಲ್ಲಿ ಎಲ್ಲೇ ಹೋಗಿ, ಕಾಂಗ್ರೆಸ್ಸಿಗೆ ನಾಯಕರಿದ್ದಾರೆ, ಸರಿಯಾದ ಕ್ಯಾಡರ್‌ಗಳಿಲ್ಲ. ಇದ್ದರೂ ಜನಮನತಟ್ಟುವ ಕಾರ್ಯಕರ್ತರಿಲ್ಲ. ಅಧಿಕಾರ, ಲಾಭದ ಲೋಭ ಇವತ್ತು ಇತರೆಲ್ಲ ಪಾರ್ಟಿಗಿಂತ ಕಾಂಗ್ರೆಸ್ಸಿನಲ್ಲಿ ಹೆಚ್ಚು ಕಾಣಿಸುತ್ತಿದೆ ಎಂದರೆ ಬರೇ ಆರೋಪ ಆಗಲಾರದು. ಒಂದು ಕಾಲದಲ್ಲಿ ದೇಶಕ್ಕಾಗಿ ತ್ಯಾಗ ಸಹಿಸಿದ್ದ ಪಾರ್ಟಿಗೆ ಇಂದು ಒಂದು ಸರಿಯಾದ ತತ್ವವೂ ಇಲ್ಲ ಎಂದು ಜನರೇ ಹೇಳ ತೊಡಗಿದ್ದಾರೆ.

ಅಂದಮೇಲೆ ರಾಹುಲ್ ಗಾಂಧಿ ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದು ದೇಶಕ್ಕೆ ಸಿಹಿ ಹಂಚಬಹುದು. ಆದರೆ ಕಾಂಗ್ರೆಸ್ಸನ್ನು ಗೆಲ್ಲಿಸುವ ಶಕ್ತಿ ಆ ಅಂಗಡಿಗಿಲ್ಲ ಎಂದು ಹರ್ಯಾಣದ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರತಿಫಲಿಸಿತು. ಮತಗಟ್ಟೆಗೆ ಬಂದಾಗ ಜನರು ಹಿಂದುತ್ವಕ್ಕೆ ವೋಟು ಹಾಕುತ್ತಿದ್ದಾರೆ. ಜಾತ್ಯತೀತತೆಯನ್ನು ತಿರಸ್ಕರಿಸುತ್ತಿದ್ದಾರೆ. ಮತದಾರರು ನಿರುದ್ಯೋಗ, ಬೆಲೆಯೇರಿಕೆ ಸಹಿತ ತಮಗಾದ ಕಹಿ ಅನುಭವವನ್ನು ಮರೆಯುತ್ತಿದ್ದಾರೆ. ಹಿಂದುತ್ವವನ್ನು ಅಷ್ಟು ಪ್ರಭಾವಿಯಾಗಿ ಮಾಡಿದ್ದೂ ಕಾಂಗ್ರೆಸ್ಸೇ ಎಂಬ ಸತ್ಯವನ್ನು ಇಂದು ದೇಶಕ್ಕೆ ಮನದಟ್ಟು ಮಾಡುವ ಅಗತ್ಯವೇ ಇಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಮೃದು ಹಿಂದುತ್ವವವನ್ನು ಬಿಟ್ಟು ಕೊಡದಿರುವುದು ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೆ ಮತದಾರರಿಂದ ಹಿನ್ನಡೆಯನ್ನು ಆಶೀರ್ವದಿಸುತ್ತಿದೆ. ಕಳೆದ ಲೋಕಸಭೆಯಲ್ಲಿ ಮತ್ತು ಈಗ ಹರ್ಯಾಣದಲ್ಲಿ ಕಾಂಗ್ರೆಸ್ಸಿಗೆ ಗೆಲ್ಲಲಾಗಿಲ್ಲ ಎಂಬುದಕ್ಕೆ ಇದುವೇ ಬಲವಾದ ಕಾರಣಗಳು.

ಹಾಗಿದ್ದರೆ ಕಾಂಗ್ರೆಸ್ಸನ್ನು ಬೈಯ್ಯುತ್ತ, ಮುಸ್ಲಿಮರನ್ನು ಅಪಮಾನಿಸುತ್ತ ಹಿಂದುತ್ವವಾದಿಗಳು ಈ ದೇಶವನ್ನು ಎತ್ತ ಒಯ್ಯಬಹುದು? ಇದು ಕೊನೆಗೂ ಕಗ್ಗಂಟಾಗಿ ಉಳಿದ ನಮ್ಮ ಪ್ರಜಾಪ್ರಭುತ್ವದ ನಿಜವಾದ ಸ್ಥಿತಿ. ಆದರೆ ಸತ್ಯ ಮತ್ತು ಕಾಲವನ್ನು ಮೀರಿಸಲು ಯಾವ ಫರೋವಂದಿರಿಗೂ ಸಾಧ್ಯವಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ಸಿಗರ ಮನಸ್ಥಿತಿಯಲ್ಲಿ ಬದಲಾಗುವವರೆಗೆ ಬಿಜೆಪಿಯನ್ನೂ ಅದರ ತೀವ್ರ ಹಿಂದುತ್ವವಾದವನ್ನೂ ಸೋಲಿಸಲಾಗದು ಎಂಬ ಪಾಠ ಹರ್ಯಾಣದ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿತು. ಬಿಜೆಪಿಯೊಂದಿಗೆ ಒಮ್ಮೆ ಸೇರಿ ಮತ್ತೆ ಎದುರು ನಿಂತರೆ ಅವರೆಲ್ಲ ನಿರ್ನಾಮವಾಗುತ್ತಾರೆ ಎಂಬುದನ್ನು ಹರ್ಯಾಣದಲ್ಲಿ ಜೆಜೆಪಿಗೆ, ಜಮ್ಮು ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿಯ ಪಿಡಿಪಿಗೆ ಬಿಜೆಪಿ ತೋರಿಸಿಕೊಟ್ಟಿತು. ಇಲ್ಲಿ ಕೊನೆಯ ಮಾತು ಮತ್ತು ಇವತ್ತು ಜನರಿಂದ ಕೇಳಿ ಬರುವ ಮಾತು ಕೂಡ ಅಂದರೆ ಇಂದಿನ ಬಲಿಷ್ಠ ಪಾರ್ಟಿಗೆ ಚುನಾವಣಾ ಆಯೋಗದ, ಇವಿಎಂನ ಸಹಕಾರ ಇದೆಯೇ ಎಂಬುದು ಅದು.