ಜೋರ್ಡಾನ್: ಚುನಾವಣೆಯಲ್ಲಿ ಮೇಲುಗೈ ಪಡೆದ ಬ್ರದರ್‌ಹುಡ್

0
128

✍️ ಪಿ.ಕೆ. ನಿಯಾಝ್

ಜೋರ್ಡಾನ್ ಪಾರ್ಲಿಮೆಂಟ್‌ನ 138 ಸೀಟುಗಳಲ್ಲಿ 31ರಲ್ಲಿ ಗೆದ್ದ ಮುಸ್ಲಿಮ್ ಬ್ರದರ್‌ಹುಡ್‌ನ ರಾಜಕೀಯ ಪಕ್ಷವಾದ ಜಬ್‌ಹತುಲ್ ಅಮಲ್ ಅಲ್ ಇಸ್ಲಾಮಿ (ಇಸ್ಲಾಮಿ ಆ್ಯಕ್ಶನ್ ಫ್ರಂಟ್/ಐ.ಎ.ಎಫ್.) ದೊಡ್ಡ ಪಕ್ಷವಾಗಿ ಮೂಡಿಬಂದದ್ದು ಅರಬ್ ಜಗತ್ತಿನ ರಾಜಕೀಯ ಪರಿಸ್ಥಿತಿಯ ವಿಶೇಷ ವಾರ್ತೆಯಾಗಿದೆ. 1989ರಲ್ಲಿ 80 ಸದಸ್ಯರ ಪಾರ್ಲಿಮೆಂಟ್‌ನಲ್ಲಿ 22 ಸೀಟು ಗಳಿಸಿದ್ದು ಈ ಪಕ್ಷದ ಉತ್ತಮ ಪ್ರದರ್ಶನವಾಗಿತ್ತು. ಆಡಳಿತ ಪಕ್ಷದ ಇಸ್ರೇಲೀ ಬಾಂಧವ್ಯವನ್ನು ವಿರೋಧಿಸುವ ಐ.ಎ.ಎಫ್. ಮುಖ್ಯ ಪ್ರತಿಪಕ್ಷ ಶಕ್ತಿಯಾಗಲಿದೆ ಎಂದು ಹೇಳಲಾಗಿದೆ.

ತನ್ನ ಕಚೇರಿಯ ಮಾಜಿ ಮುಖ್ಯಸ್ಥ ಹಾಗೂ ತಂತ್ರಜ್ಞರಾದ ಜಅಫರ್ ಹಸನ್‌ರನ್ನು ಪ್ರಧಾನ ಮಂತ್ರಿಯಾಗಿ ರಾಜ ಅಬ್ದುಲ್ಲಾರು ನೇಮಿಸಿದ್ದಾರೆ. ಜೋರ್ಡಾನ್‌ನಲ್ಲಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವುದು ಅಲ್ಲಿನ ಆರಿಸಲ್ಪಟ್ಟ ಸರ್ಕಾರವಲ್ಲ. ಅಲ್ಲಿನ ದೊರೆ ಪ್ರಧಾನಮಂತ್ರಿಯನ್ನು ನೇಮಿಸುತ್ತಾರೆ. ಮಂತ್ರಿಮಂಡಲದಲ್ಲಿ ಯಾರನ್ನು ಸೇರ್ಪಡೆಗೊಳಿಸಬೇಕೆಂದು ಅರಮನೆಯು ತೀರ್ಮಾನಿಸುತ್ತದೆ. ಸಂವಿಧಾನದಂತೆ ಸರ್ಕಾರವನ್ನು ರೂಪಿಸುವುದೂ, ಸಂಸತ್ತನ್ನು ವಿಸರ್ಜಿಸುವುದೂ, ಉಭಯ ಸದನಗಳಿಗೆ 65 ಸದಸ್ಯರನ್ನು ನೇಮಿಸುವುದೂ ಸೇರಿದಂತೆ ವಿಫುಲವಾದ ಅಧಿಕಾರ ಅಲ್ಲಿನ ದೊರೆಗೆ ಇದೆ.

ಈ ಬಾರಿ ನಡೆದ ಈ ಚುನಾವಣೆಯಲ್ಲಿ ಸುಮಾರು 105 ರಾಜಕೀಯ ಪಕ್ಷಗಳು ಸ್ಪರ್ಧಿಸಿವೆ. 32.25 ಶೇಕಡಾ ಮಾತ್ರ ಮತದಾನ ನಡೆದಿತ್ತು. ಪಾರ್ಲಿಮೆಂಟ್‌ನ 138ರಲ್ಲಿ 97 ಸ್ಥಾನಗಳನ್ನು (18 ಲೋಕಲ್ ಡಿಜಿಟ್‌ಗಳು) ಓಪನ್ ಲೀಸ್ಟ್ ವಿಭಾಗದಲ್ಲಿ ಸೇರಿಸಿ ಅದರಲ್ಲಿ ರಾಜಕೀಯ ಪಕ್ಷ ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಉಳಿದ 41 ಸೀಟುಗಳು ರಿಜಿಸ್ಟರ್ ಮಾಡಿದ ರಾಜಕೀಯ ಪಕ್ಷಗಳಿಗೆ ಮಾತ್ರ. ಏಳು ಸೀಟುಗಳು ಕ್ರೈಸ್ತ ಅಲ್ಪಸಂಖ್ಯಾತರಿಗೂ, ಎರಡು ಸೀಟ್‌ಗಳು ಚೆಟನ್, ಸಿರ್‌ಕಾಸಿಯನ್ ಅಲ್ಪಸಂಖ್ಯಾತರಿಗೂ ಮೀಸಲಿದೆ. ಈ 41 ಸೀಟುಗಳ ಪೈಕಿ 18ರಲ್ಲಿ ಐ.ಎ.ಎಫ್. ಜಯ ಸಾಧಿಸಿದೆ.

ಹೊಸ ಪಾರ್ಲಿಮೆಂಟ್‌ನಲ್ಲಿ 27 ಮಹಿಳೆಯರಿರುತ್ತಾರೆ. ಮೀಸಲಿರಿಸಿದ 18 ಸ್ಥಾನಗಳ ಹೊರತು 9 ಜನರಲ್ ಸೀಟುಗಳಲ್ಲಿ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಳೆದ ಪಾರ್ಲಿಮೆಂಟ್‌ನಲ್ಲಿ 19 ಮಹಿಳಾ ಸದಸ್ಯೆಯರಿದ್ದರು. ಇದು 2022 ರಲ್ಲಿ ದೊರೆ ಅಬ್ದುಲ್ಲಾ ಜಾರಿಗೆ ತಂದ ಹೊಸ ಚುನಾವಣಾ ನಿಯಮದ ಆಧಾರದಲ್ಲಿ ನಡೆದ ಮೊದಲ ಚುನಾವಣೆಯಾಗಿದೆ. ಗೋತ್ರ ವಿಭಾಗಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುವ ಈಗಿನ ಚುನಾವಣೆಯ ಪ್ರಕ್ರಿಯೆಯಲ್ಲಿ ಬದಲಾವಣೆ ತಂದು ರಾಜಕೀಯ ಪಕ್ಷಗಳಿಗೆ ಸ್ಥಾನ ಹೆಚ್ಚಿಸಿ, ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲಾಗಿದೆ. ಸ್ವತಂತ್ರವಾಗಿ ಸ್ಪರ್ಧಿಸುವ ಗೋತ್ರ ವರ್ಗಗಳಿಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ನೀಡುವ ಹಿಂದಿನ ಸಂಪ್ರದಾಯವನ್ನು ಮಾನವ ಹಕ್ಕು ಸಂಘಟನೆಗಳು ಟೀಕಿಸಿದ್ದವು.

ಐ.ಎ.ಎಫ್.ಗೆ ಜನಬೆಂಬಲ ಬಿಟ್ಟು ಮತಗಳ ಪೈಕಿ 22% ಮತ ಪಡೆದು ಇಸ್ಲಾಮಿಸ್ಟ್ ಗಳು ಮುಂದಿನ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮೀಸಾಖ್ ಪಕ್ಷಕ್ಕೆ 21 ಸೀಟುಗಳು ಮಾತ್ರ ದೊರೆತಿವೆ. ಇರಾದ ಪಕ್ಷವು 19 ಸ್ಥಾನ ಪಡೆದಿದ್ದು ತಖದ್ದುಮ ಪಕ್ಷವು 8 ಸ್ಥಾನ ಪಡೆದಿದೆ. ಹಲವು ಗರ‍್ನರೇಟ್ ಗಳಲ್ಲಿ, ರಾಜಧಾನಿಯಾದ ಅಮ್ಮಾನ್ ಜಿಲ್ಲೆಗಳಲ್ಲೂ ಇಸ್ಲಾಮಿಸ್ಟ್ ಗಳು ಮೇಲುಗೈ ಸಾಧಿಸಿದ್ದಾರೆ. ಜನರಲ್ ಸೀಟುಗಳಲ್ಲಿ ನಾಲ್ವರು ಮಹಿಳೆಯರು ವಿಜಯ ಹೊಂದಿದ್ದಲ್ಲದೆ ಮಹಿಳಾ ಮೀಸಲಾತಿ ಸೀಟುಗಳಲ್ಲಿ ಸ್ಪರ್ಧಿಸಿದ ನಾಲ್ಕರಲ್ಲೂ ಐಎಎಫ್ ಜಯಗಳಿಸಿದೆ. ಕ್ರಿಶ್ಚಿಯನ್ನರಿಗೆ ಮೀಸಲಾದ ಅಮ್ಮಾನ್‌ನ ಏಕ ಸೀಟ್‌ನಲ್ಲೂ ಸಿರ್‌ಕಾಸಿಯನ್, ಚೆಟನ್‌ಗಳಿಗೆ ಮೀಸಲಾದ ಎರಡು ಸ್ಥಾನಗಳಲ್ಲೂ ಐ.ಎ.ಎಫ್. ಗೆದ್ದು ಬೀಗಿದೆ.

ಫೆಲೆಸ್ತೀನ್ ವಿಷಯದಲ್ಲಿ ಸರ್ಕಾರ ಅಸಡ್ಡೆ ಮತ್ತು ಋಣಾತ್ಮಕ ನಿಲುವು ಸ್ವೀಕರಿಸಿದಾಗ, ಬ್ರದರ್‌ಹುಡ್ ಮತ್ತು ಅದರ ರಾಜಕೀಯ ಬಣವು ಝಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕಿಳಿದಿತ್ತು. ಗಾಝಾದಲ್ಲಿ ಇಸ್ರೇಲ್‌ನ ನರಬೇಟೆಯ ವಿರುದ್ಧ ಪಕ್ಷದ ಪ್ರತಿಭಟನಾ ಹೋರಾಟಗಳು ದೊಡ್ಡ ತರಂಗವನ್ನುಂಟು ಮಾಡಿತು. ಜನರ ಸಮಸ್ಯೆಗಳಿಗೆ ಮುಖತಿರುಗಿಸುವ ಸರ್ಕಾರದ ನಿಲುವು ಮತದಾರರನ್ನು ಪುನರ್ ಚಿಂತಿಸುವಂತೆ ಮಾಡಿತು. ಈ ವರ್ಷದ ಮೊದಲ ಮೂರು ತಿಂಗಳ ಗಣತಿಯಂತೆ ನಿರುದ್ಯೋಗವು 21.4 ಶೇಕಡಾ ಆಗಿದೆ. ದೇಶದ ಆರ್ಥಿಕತೆಗೆ 14% ಕೊಡುಗೆ ನೀಡುವ ಪ್ರವಾಸೋದ್ಯಮವು ಗಾಝಾ ಯುದ್ಧದಿಂದ ನಷ್ಟ ಅನುಭವಿಸಿತು. ಇದರ ಹೊರತಾಗಿ ಅಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ.

ಒಂದು ಕೋಟಿಯಷ್ಟು ಇರುವ ಜೋರ್ಡಾನಿನ ಜನಸಂಖ್ಯೆಯಲ್ಲಿ ಅರ್ಧಾಂಶ ಫೆಲೆಸ್ತೀನಿಯನ್ನರಾಗಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಹಮಾಸನ್ನು ಬೆಂಬಲಿಸುತ್ತಾರೆ. `ತೂಫಾನುಲ್ ಅಕ್ಸಾ’ದ ಬಳಿಕ 2023 ನವೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯಂತೆ 85% ಜನರು ಹಮಾಸನ್ನು ಬೆಂಬಲಿಸಿದ್ದರು. 2020ರ ಸರ್ವೇಯಲ್ಲಿ ಹಮಾಸ್‌ಗೆ 44% ಬೆಂಬಲವಿತ್ತು.

ಹಮಾಸನ್ನು ಬಹಿರಂಗವಾಗಿ ಬೆಂಬಲಿಸಿ 1994ರಲ್ಲಿ ಇಸ್ರೇಲ್‌ನೊಂದಿಗಿನ ಒಪ್ಪಂದದಿಂದ ಜೋರ್ಡಾನ್ ಹಿಂದೆ ಸರಿಯಬೇಕೆಂದು ಬಲವಾಗಿ ಪ್ರತಿಪಾದಿಸುವ ಬ್ರದರ್‌ಹುಡ್ ವಿಜಯವು ಮತದಾರರ ಅನುಮೋದನೆಯಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷದ ಮುನ್ನಡೆಯು ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಮತ್ತು ಹಮಾಸ್‌ಗೆ ಬೆಂಬಲ ನೀಡುವ ಜನಾಭಿಪ್ರಾಯವಾಗಿದೆಯೆಂದು ಬ್ರದರ್‌ಹುಡ್‌ನ ಕಾರ್ಯದರ್ಶಿ ಜನರಲ್ ಮುರಾದ್ ಅದೆಯ್ಯ ಹೇಳುತ್ತಾರೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದರೆ ಹೆಚ್ಚು ಪ್ರಬಲವಾಗುವ ಬಲಪಂಥೀಯರನ್ನು ಎದುರಿಸಲು ಸಮರ್ಥರಿರುವವರನ್ನು ಮುಂದಿನ ಪಾರ್ಲಿಮೆಂಟ್‌ನಲ್ಲಿ ಕಾಣಲು ಸಾಧ್ಯವಾಗುತ್ತದೆಂದು ಅವರು ನೆನಪಿಸುತ್ತಾರೆ.

ಜೋರ್ಡಾನ್‌ನ ಇಖ್ವಾನ್ ಬೇರುಗಳು
ಇಂದಿನ ದೊರೆ ಅಬ್ದುಲ್ಲಾರ ಮುತ್ತಜ್ಜ ಒಂದನೇ ಅಬ್ದುಲ್ಲಾ ಕಾಲದಿಂದಲೇ ಜೋರ್ಡಾನ್ ನಲ್ಲಿ ಸಕ್ರಿಯವಾಗಿದೆ. ಇಸ್ಲಾಮೀ ಚಟುವಟಿಕೆಗಳ ಕುರಿತು ಒಲವಿದ್ದ ಒಂದನೇ ಅಬ್ದುಲ್ಲಾರು 1945 ರಲ್ಲಿ ಇಖ್ವಾನ್‌ನ ಚಟುವಟಿಕೆಗಳಿಗೆ ಅಮ್ಮಾನ್‌ನಲ್ಲಿ ಹಸಿರು ನಿಶಾನೆ ತೋರಿದ್ದರು. ಇಸ್ಲಾಮೀ ಸಹೋದರತೆ ಎಂಬ ಇಖ್ವಾನ್‌ನ ಧ್ಯೇಯಕ್ಕೆ ಅವರು ಆಕರ್ಷಿತರಾಗಿದ್ದರು. “ನಿಮ್ಮ ಗುರಿಯು ಇದಾದರೆ ನನ್ನನ್ನೂ ನಿಮ್ಮ ಪಕ್ಷದ ಓರ್ವ ಸದಸ್ಯನಾಗಿ ಸೇರಿಸಿಕೊಳ್ಳಿ” ಎಂಬ ಅಬ್ದುಲ್ಲಾರ ಮಾತುಗಳು ಪ್ರಸಿದ್ಧವಾಗಿವೆ.

1957ರಲ್ಲಿ ಮಿಲಿಟರಿ ದಂಗೆಯ ಸಂದರ್ಭದಲ್ಲಿ ಮತ್ತು 1970ರಲ್ಲಿ ಯಾಸಿರ್ ಅರಫಾತ್‌ರೊಂದಿಗೆ ಸಮಸ್ಯೆಗಳು ಉಲ್ಬಣಗೊಂಡಾಗ ಅಬ್ದುಲ್ಲಾರ ಮೊಮ್ಮಗ ದೊರೆ ಹುಸೈನ್‌ರನ್ನು ಬ್ರದರ್‌ಹುಡ್ ಬೆಂಬಲಿಸಿತ್ತು. ದೊರೆ ಹುಸೈನ್‌ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಬ್ರದರ್‌ಹುಡ್‌ನ ನಾಯಕತ್ವವು ದೇಶದ ಸಾಕ್ಷರತೆಯನ್ನು ಹೆಚ್ಚಿಸಬೇಕೆಂಬ ದೊರೆಯ ಕರೆಯನ್ನು ಗಂಭೀರವಾಗಿ ಪರಿಗಣಿಸಿ ದೀರ್ಘಕಾಲದ ಕಾರ್ಯಕ್ರಮಗಳನ್ನು ರೂಪಿಸಿತ್ತು.

1961ರಲ್ಲಿ 67.6% ವಿದ್ದ ಅನಕ್ಷರತೆಯು 1995 ತಲುಪುವಾಗ 14.3%ಕ್ಕೆ ಇಳಿಕೆಯಾಗಿತ್ತು. ಇದರ ಮುಖ್ಯ ಕ್ರೆಡಿಟ್ ಬ್ರದರ್‌ಹುಡ್‌ಗೆ ಹೋಗುತ್ತದೆ. ಆಡಳಿತಗಾರರೊಂದಿಗಿನ ಇಸ್ಲಾಮಿಸ್ಟ್ ಗಳ ಸಂಬಂಧವನ್ನು ಬೆಸೆಯಲು ಇದು ಕಾರಣವಾಯಿತು. 1960 ಮತ್ತು 70ರ ದಶಕದಲ್ಲಿ ಪಲಾಯನ ಮಾಡಿ ಬಂದ ಸಿರಿಯಾ ಮತ್ತು ಈಜಿಪ್ಟ್‌ನ ಇಖ್ವಾನ್‌ನ ಸದಸ್ಯರಿಗೆ ಅಭಯ ನೀಡಿದ್ದು ಮತ್ತು ಹಮಾಸ್‌ನ ನಾಯಕ ಖಾಲಿದ್ ಮಿಶ್‌ಅಲ್‌ರನ್ನು ವಧಿಸುವ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ರಹಸ್ಯ ಸಂಚನ್ನು ಸೋಲಿಸಿದವರು ದೊರೆ ಹುಸೈನ್ ಆಗಿದ್ದರು.

1992ರಲ್ಲಿ ಇಸ್ಲಾಮಿಕ್ ಆ್ಯಕ್ಶನ್ ಫ್ರಂಟ್ ಎಂಬ ಹೆಸರಿನ ರಾಜಕೀಯ ಪಕ್ಷ ರೂಪಿಸಲಾದರೂ 1989ರಲ್ಲಿ ಇಖ್ವಾನ್ ನೇರವಾಗಿ ಚುನಾವಣೆಯನ್ನು ಎದುರಿಸಿ ಪಾರ್ಲಿಮೆಂಟ್‌ನ 22 ಸೀಟುಗಳಲ್ಲಿ ವಿಜಯಿಯಾಯಿತು. 1993ರ ಚುನಾವಣೆಯಲ್ಲಿ 17 ಸೀಟು ಗಳಿಸಿದ ಐ.ಎ.ಎಫ್. 1997 ರಲ್ಲಿ ಚುನಾವಣೆಯನ್ನು ಬಹಿಷ್ಕರಿಸಿತು.

2003ರಲ್ಲಿ 16 ಸ್ಥಾನಗಳೊಂದಿಗೆ ಮರಳಿ ಬಂದ ಪಕ್ಷಕ್ಕೆ 2007ರಲ್ಲಿ ಆರು ಸೀಟುಗಳು ಮಾತ್ರ ಲಭಿಸಿತು. ನಂತರದ ಎರಡು ಚುನಾವಣೆಗಳನ್ನು ಬಹಿಷ್ಕರಿಸಿದ ಪಕ್ಷವು 2016ರಲ್ಲಿ ದೇಶೀಯ ಒಕ್ಕೂಟದ ಭಾಗವಾಗಿ ಸ್ಪರ್ಧಿಸಿ 16 ಸೀಟು ಪಡೆಯಿತು. 2020ರಲ್ಲಿ 10 ಸೀಟುಗಳು ಲಭಿಸಿತು.

2011ರ ಅರಬ್ ಕ್ರಾಂತಿಯು ವಲಯವನ್ನು ಹಿಂಡಿದಾಗ ಸರಕಾರವು ಬ್ರದರ್‌ಹುಡ್ ಅನ್ನು ಗುರಿಯಾಗಿಸಿತು. ಈಜಿಪ್ಟ್, ಲಿಬಿಯ, ಟ್ಯುನೀಷ್ಯಾದಲ್ಲಿ ಇಸ್ಲಾಮಿಸ್ಟ್ ಗಳ ಮುನ್ನಡೆಯನ್ನು ಸ್ವಾಗತಿಸಿ ಸಂಘಟನೆಯ ಕಾರ್ಯದರ್ಶಿ ಜನರಲ್ ಹಮ್ಮಾಮ್ ಸಈದ್ ನೀಡಿದ ಹೇಳಿಕೆಯು ಎರಡನೇ ಅಬ್ದುಲ್ಲಾರನ್ನು ಕೆರಳಿಸಿತು. ಅದನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ಇದರ ಹಿಂದೆಯೇ 2014ರಲ್ಲಿ ಪ್ರಥಮ ಬಾರಿ ಗುಪ್ತಚರ ವಿಭಾಗವು ಇಖ್ವಾನ್‌ನ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿತು. ಹಿಂದಿನ ಆಡಳಿತಗಾರರಿಗಿಂತ ಭಿನ್ನವಾಗಿ ಎರಡನೇ ಅಬ್ದುಲ್ಲಾ ಬ್ರದರ್‌ಹುಡ್ ಅನ್ನು ನೋಡಿದ್ದರು.

ಜೋರ್ಡಾನ್‌ನಲ್ಲಿ ಪ್ರಬಲವಾದ ಬೇರುಗಳಿರುವ ಬ್ರದರ್‌ಹುಡ್ ಅನ್ನು ನಿರ್ನಾಮ ಮಾಡಲು ಸಂಘಟನೆಯ ಒಳಗೆ ಭಿನ್ನತೆ ಮೂಡಿಸುವ ತಂತ್ರಕ್ಕೆ ಸರಕಾರ ಕೈ ಹಾಕಿತು. 2012ರಲ್ಲಿ ಸುಧಾರಣಾವಾದಿಗಳೆಂದು ಹೇಳಿಕೊಂಡವರು ‘ಝಂ ಝಂ’ ಎಂಬ ಹೆಸರಿನಲ್ಲಿ ಗ್ರೂಪ್ ರಚಿಸಿ ರಂಗಕ್ಕಿಳಿದರು. ನಂತರ ಈ ತಂಡವು ಬ್ರದರ್‌ಹುಡ್‌ನಿಂದ ಬೇರ್ಪಟ್ಟು ನ್ಯಾಶನಲ್ ಕಾಂಗ್ರೆಸ್ ಪಾರ್ಟಿ ರೂಪುಗೊಂಡಿತು. ಈಜಿಪ್ಟ್‌ನ ಮಾತೃ ಸಂಘಟನೆಯೊಂದಿಗಿನ ಸಂಬಂಧವನ್ನು ಬ್ರದರ್ ಹುಡ್ ಕಡಿತಗೊಳಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಸೆಕ್ರೆಟರಿ ಜನರಲ್ ಸ್ಥಾನದಿಂದ ಹಮ್ಮಾಮ್ ಸಈದ್‌ರನ್ನು ಹೊರಹಾಕಬೇಕೆಂಬ ಬೇಡಿಕೆಯೊಂದಿಗೆ 2014 ಜೂನ್‌ನಲ್ಲಿ ಭಿನ್ನಮತೀಯರು ಬಹಿರಂಗವಾಗಿ ರಂಗಕ್ಕಿಳಿದರು. ಸಂಘಟನಾ ವಿರೋಧಿ ಚಟುವಟಿಕೆಗಳಿಗಾಗಿ ಮಾಜಿ ನಾಯಕ ಅಬ್ದುಲ್ ಮಜೀದ್ ದುನೈಅತ್ ಸೇರಿದಂತೆ 10 ಜನರನ್ನು 2015 ಫೆಬ್ರವರಿಯಲ್ಲಿ ಉಚ್ಛಾಟಿಸಲಾಯಿತು.

ಸರಕಾರದೊಂದಿಗಿನ ಘರ್ಷಣೆಯನ್ನು ಹೋಗಲಾಡಿಸುವ ಸಲುವಾಗಿ ದೊರೆಯನ್ನು ಭೇಟಿಯಾದ ಪ್ರತಿನಿಧಿ ತಂಡದೊಂದಿಗೆ ಈಜಿಪ್ಟ್‌ನ ಇಖ್ವಾನ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ನಾಯಕತ್ವದಲ್ಲಿದ್ದ ಕೆಲವರು ಹಠ ಹಿಡಿದ ಕಾರಣ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿ 2015ರಲ್ಲಿ ಬ್ರದರ್‌ಹುಡ್ ಎರಡು ಭಾಗವಾಯಿತು. ಸಹಜವಾಗಿಯೇ ಇದರ ಹಿಂದೆ ಸರಕಾರದ ಕೈವಾಡವಿತ್ತು. ಬೇರ್ಪಟ್ಟವರು ಜೋರ್ಡಾನ್‌ಗೆ ಮಾತ್ರ ಸೀಮಿತವೆಂದು ಘೋಷಿಸಿ ದುನೈಅತ್‌ರನ್ನು ನಾಯಕನಾಗಿ ಆರಿಸಿದರು. ಸರಕಾರವು ಮುಸ್ಲಿಮ್ ಬ್ರದರ್‌ಹುಡ್ ಸೊಸೈಟಿ (ಎಂ.ಬಿ.ಎಸ್.) ಎಂಬ ಹೆಸರಿನಲ್ಲಿ ಭಿನ್ನಮತೀಯ ವಿಭಾಗವನ್ನು ಹೊಸ ಪಕ್ಷವಾಗಿ ಆಂಗೀಕರಿಸಿ ಸಂಘಟನೆಯ ಸೊತ್ತುಗಳನ್ನು ಅವರಿಗೆ ನೀಡಿ ಇದರ ವಿರೋಧಿ ನಾಯಕರನ್ನು ಜೈಲಿಗಟ್ಟಿತು. ಸೌದಿ ಅರೇಬಿಯಾ ಮತ್ತು ಯುಎಇಯು ಇಖ್ವಾನುಲ್ ಮುಸ್ಲಿಮೀನನ್ನು ಕಾನೂನು ವಿರೋಧಿ ಪಕ್ಷವೆಂದು ಘೋಷಿಸಿದ ಸಂದರ್ಭದಲ್ಲೇ ಜೋರ್ಡಾನ್‌ನಲ್ಲಿ ಈ ಬೆಳವಣಿಗೆ ಸಂಭವಿಸಿತು ಎಂಬುದು ಗಮನಾರ್ಹ.

ರಿಜಿಸ್ಟ್ರೇಶನ್ ನಿಯಮಗಳನ್ನು ಪಾಲಿಸಿಲ್ಲವೆಂದು ಆರೋಪಿಸಿ 2020 ಜುಲೈಯಲ್ಲಿ ಸರ್ವೋಚ್ಚ ನ್ಯಾಯಾಲಯವು ನಿಷೇಧ ಹೇರಿದ್ದರಿಂದ ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಮ್ ಬ್ರದರ್‌ಹುಡ್ ಅನಧಿಕೃತ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಕಾರ್ಯಕರ್ತರಿಗೆ ಅಭಿಪ್ರಾಯ ಸ್ವಾತಂತ್ರ‍್ಯವನ್ನು ಸರಕಾರವು ನೀಡಿತ್ತು. ಜುಮಾ ನಮಾಝ್ ನ ಬಳಿಕ ಮಸೀದಿಗಳ ಹೊರಗೆ ಇಸ್ರೇಲ್ ವಂಶ ಹತ್ಯೆಯ ವಿರುದ್ಧ ಹಮಾಸನ್ನು ಬೆಂಬಲಿಸಿ ಪ್ರಬಲವಾದ ಪ್ರಚಾರ ಚಟುವಟಿಕೆಗಳನ್ನು ಸಂಘಟನೆ ನಡೆಸಿತು. ರಾಜಕೀಯ ಪಕ್ಷವಾದ ಇಸ್ಲಾಮಿಕ್ ಆಕ್ಷನ್ ಫ್ರಂಟ್‌ನ ಮೂಲಕ ಸಂಘಟನೆಯು ಹೆಚ್ಚು ಜನಪ್ರಿಯವಾಯಿತು.

ಭಿನ್ನಮತೀಯ ವಿಭಾಗವು ಸರಕಾರದ ಆಜ್ಞಾನುವರ್ತಿಗಳಾಗಿ ಪರಿವರ್ತಿತರಾದರು. ಆದರೂ ಬ್ರದರ್‌ಹುಡ್‌ನ ಸಂಘಟನಾ ಶಕ್ತಿಯನ್ನು ಕಡಿಮೆಗೊಳಿಸಲು ಸಾಧ್ಯವಾಗಿರಲಿಲ್ಲ. ಅದರ ಮುಖ್ಯ ಉದಾಹರಣೆ 2016ರ ಚುನಾವಣಾ ಫಲಿತಾಂಶ. ಬ್ರದರ್‌ಹುಡ್‌ಗೆ 10 ಸ್ಥಾನ ಲಭಿಸಿದಾಗ ಸರಕಾರದ ಬೆಂಬಲವಿದ್ದ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ ಒಂದು ಸೀಟನ್ನೂ ಪಡೆಯಲು ವಿಫಲವಾಯಿತು. ಈ ಬಾರಿಯೂ ಅವರದ್ದು ಅದೇ ಸ್ಥಿತಿಯಾಗಿದೆ.

ರಾಜಾಡಳಿತವಿರುವ ಎರಡು ಅರಬ್ ದೇಶಗಳಲ್ಲಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಸ್ಲಾಮಿಸ್ಟ್ ಗಳು ವಿಜಯ ಗಳಿಸಿದ್ದಾರೆ. ಜೋರ್ಡಾನ್‌ನಲ್ಲಿ ಇಸ್ಲಾಮಿಕ್ ಆ್ಯಕ್ಷನ್ ಪಕ್ಷವು ಮುಖ್ಯ ಪ್ರತಿಪಕ್ಷವಾಗಿ ಇಲ್ಲಿಯವರೆಗೂ ಕಾರ್ಯನಿರ್ವಹಿಸಿದೆ. 1989ರ ಚುನಾವಣೆಯಲ್ಲಿ 34 ಸೀಟುಗಳೊಂದಿಗೆ ಇಸ್ಲಾಮಿಸ್ಟ್ ಒಕ್ಕೂಟವು ಅಧಿಕಾರಕ್ಕೆ ಬಂದಾಗ 22 ಸೀಟುಗಳನ್ನು ಪಡೆದ ಬ್ರದರ್‌ಹುಡ್‌ಗೆ ಶಿಕ್ಷಣ, ಧಾರ್ಮಿಕ ವ್ಯವಹಾರಗಳು ಸೇರಿದಂತೆ ಐದು ಕ್ಯಾಬಿನೆಟ್ ಸ್ಥಾನ ದೊರೆತಿತ್ತು. ಈ ಸರಕಾರವು ಕೇವಲ 6 ತಿಂಗಳು ಮಾತ್ರ ಇತ್ತು. ಮೊರೋಕ್ಕೋದಲ್ಲಿ ಜಸ್ಟಿಸ್ ಆ್ಯಂಡ್ ಡೆವಲಪ್ ಮೆಂಟ್ ಪಾರ್ಟಿ (ಹಿಸ್ಬುಲ್ ಅದಾಲತ್ತಿವತ್ತನ್‌ಮಿಯ) ಒಂದಕ್ಕಿಂತ ಹೆಚ್ಚು ಬಾರಿ ಅಧಿಕಾರಕ್ಕೇರಿತು. 2011ರಲ್ಲಿ 107 ಸೀಟುಗಳು ಮತ್ತು 2016ರಲ್ಲಿ 125 ಸೀಟುಗಳನ್ನು ಪಕ್ಷವು ಪಡೆದಿದೆ. ರಾಜಾಡಳಿತವು ಬಲಾತ್ಕಾರವಾಗಿ ಹೇರುವ ತೀರ್ಮಾನಗಳನ್ನು ಒಪ್ಪಿಕೊಂಡು ಜನಹಿತ ಸ್ಥಾಪಿಸಲು ಸಾಧ್ಯವಿಲ್ಲವೆಂದು ಪಕ್ಷಕ್ಕೆ ಬೇಗನೇ ಅರಿವಾಯಿತು. ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವ ಅರಮನೆಯ ತೀರ್ಮಾನವನ್ನು ಪ್ರತಿಭಟಿಸಲು ಕೂಡಾ ಸಾಧ್ಯವಿಲ್ಲದ ಪರಿಸ್ಥಿತಿ ಪಕ್ಷದ್ದಾಗಿತ್ತು. ಅದರ ಫಲಿತಾಂಶ 2021ರ ಚುನಾವಣೆಯಲ್ಲಿ ಸ್ಪಷ್ಟವಾಯಿತು. ಪಕ್ಷಕ್ಕೆ ಕೇವಲ 13 ಸೀಟುಗಳು ಮಾತ್ರ ಲಭಿಸಿತು.

ಈ ಪರಿಮಿತಿಯನ್ನು ಅರಿತುಕೊಂಡು ಪ್ರತಿಪಕ್ಷ ಸ್ಥಾನದಲ್ಲಿದ್ದುಕೊಂಡು ಸರಕಾರಕ್ಕೆ ಪ್ರಬಲ ಒತ್ತಡ ಹೇರುವ ಶಕ್ತಿಯಾಗಲು ಜೋರ್ಡಾನ್‌ನ ಬ್ರದರ್‌ಹುಡ್ ತೀರ್ಮಾನಿಸಿತು. ರಾಜಾಡಳಿತದ ವಿರುದ್ಧ ಬಹಿರಂಗವಾದ ಪ್ರತಿಭಟನೆಗೆ ಪಕ್ಷ ಮುಂದಾಗಲಿಲ್ಲವಾದರೂ ಫೆಲೆಸ್ತೀನ್ ಸೇರಿದಂತೆ ಹಲವು ವಿಷಯಗಳಲ್ಲಿ ಝಿಯೋನಿಸ್ಟ್ ನೊಂದಿಗೆ ರಾಜಿಯಾಗುವ ದೊರೆ ಅಬ್ದುಲ್ಲಾರ ನಿಲುವಿನ ವಿರುದ್ಧ ಜನಾಭಿಪ್ರಾಯ ರೂಪಿಸಲು ಒಂದು ಹಂತದವರೆಗೆ ಐ.ಎ.ಎಫ್.ಗೆ ಸಾಧ್ಯವಾಯಿತು. ಬೈತುಲ್ ಮಕ್ದಿಸ್‌ನ ಪಾಲಕನಾಗಿದ್ದರೂ ಅಲ್ಲಿ ನಡೆಯುತ್ತಿರುವ ಝಿಯೋನಿಸ್ಟ್ ಹಸ್ತಕ್ಷೇಪದ ವಿರುದ್ಧ ಧ್ವನಿಯೆತ್ತಲು ಸಿದ್ಧವಾಗದ ಜೋರ್ಡಾನ್ ಆಡಳಿತದ ವಿರುದ್ಧ ಪ್ರತಿಭಟನೆಯು ಪ್ರಬಲವಾಗಿದೆ. ಅರಮನೆಯು ತನ್ನ ಹಲವು ನಿಲುವುಗಳ ಕುರಿತು ಪುನಃ ಪರಿಶೋಧನೆ ನಡೆಸಬೇಕೆಂಬ ಸೂಚನೆಯನ್ನು ಇಸ್ಲಾಮಿಸ್ಟ್ ಗಳ ಗೆಲುವು ನೀಡುತ್ತಿದೆ.