ಬಿಲಾಲ್‌ರ(ರ) ಅದಾನ್‌ಗೆ ಗತ ನೆನಪಿಸಿದ ಮದೀನಾ

0
134

ಸನ್ಮಾರ್ಗ ವಾರ್ತೆ

✍️ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ

ಹಝ್ರತ್ ಬಿಲಾಲ್(ರ) ಇಸ್ಲಾಮ್ ಸ್ವೀಕರಿಸಿದ ಕಾರಣದಿಂದ ಎದುರಿಸಿದ ಸಂಕಷ್ಟಗಳು ಹಾಗೂ ಪರೀಕ್ಷೆಗಳನ್ನು ಕೇಳುವಾಗ ನಾವು ರೋಮಾಂಚನಗೊಳ್ಳುತ್ತೇವೆ. ಬಿಲಾಲ್ ಉಮಯ್ಯತ್ ಎಂಬ ನಾಯಕನ ಗುಲಾಮರಾಗಿದ್ದರು. ಉಮಯ್ಯತ್ ಇಸ್ಲಾಮಿನ ಬದ್ಧ ಶತ್ರು. ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿಗೆ ಕಾದ ಮರಳ ರಾಶಿಯ ಮೇಲೆ ಬಿಲಾಲ್‌ರನ್ನು ಮಲಗಿಸಲಾಗುತ್ತಿತ್ತು. ದೊಡ್ಡ ಬಂಡೆಗಲ್ಲನ್ನು ಎದೆಯ ಮೇಲೆ ಇರಿಸಲಾಗುತ್ತಿತ್ತು. ಏಕೆಂದರೆ ನೋವಿನಿಂದ ನರಳುವಾಗ ಅಲುಗಾಡಬಾರದು ಎಂಬ ಕಾರಣಕ್ಕೆ. ಇಸ್ಲಾಮ್ ಅನ್ನು ತ್ಯಜಿಸದಿದ್ದರೆ ಕೊಲ್ಲುತ್ತೇನೆಂಬ ಬೆದರಿಕೆ.

ಏಕದೇವ ವಿಶ್ವಾಸದಲ್ಲಿ ನಂಬಿಕೆ ಬಲವಾಗಿದ್ದ ಬಿಲಾಲ್ ಅಂತಹವರೊಂದಿಗೆ ಹೇಳುತ್ತಿದ್ದರು: “ಅಲ್ಲಾಹು ಅಹದ್…” (ಅಲ್ಲಾಹನು ಏಕನು ಏಕನು).

ರಾತ್ರಿಯಾಗುತ್ತಲೇ ಗಟ್ಟಿಯಾದ ಸಂಕೋಲೆಯಿಂದ ಬಿಗಿದು ಲಾಠಿಯಿಂದ ಬಾರಿಸಲಾಗುತ್ತಿತ್ತು. ಗಾಯಗಳಿದ್ದ ದೇಹಕ್ಕೆ ಮರು ದಿನ ಪುನಃ ಮರಳ ಮೇಲೆ ಹಾಕಿ ಹಿಂಸೆ ಮುಂದುವರಿಸಲಾಗುತ್ತಿತ್ತು. ಹೊಸ ಧರ್ಮದಿಂದ ಹಿಂದೆ ಸರಿಯದಿದ್ದರೆ ನೀನು ಇದೇ ರೀತಿ ಚಿತ್ರ ಹಿಂಸೆಯನ್ನು ಅನುಭವಿಸಿ ಸಾಯಬೇಕಾಗುತ್ತದೆ ಎಂದು ಉಮಯ್ಯತ್ ಘರ್ಜಿಸುತ್ತಿದ್ದ. ಹಾಗಿದ್ದರೂ ಬಿಲಾಲ್ ಸ್ವಲ್ಪವೂ ವಿಚಲಿತರಾಗದೆ ಅಲ್ಲಾಹು ಏಕನು, ಅಲ್ಲಾಹ್ ಅಹದ್’ ಎಂದು ಘೋಷಿಸುತ್ತಲೇ ಇದ್ದರು. ಆ ದುಷ್ಟನಿಗೆ ಹೊಡೆದೂ ಹೊಡೆದೂ ಸಾಕಾಗಿ, ಕೊನೆಗೆ ಬಿಲಾಲ್‌ರ ಕುತ್ತಿಗೆಗೆ ಹಗ್ಗ ಕಟ್ಟಿ ಊರಿನ ಪುಂಡ ಪೋಕರಿಗಳಿಗೆ ಒಪ್ಪಿಸುತ್ತಿದ್ದ. ಅವರು ಅದನ್ನು ಊರಿಡೀ ಎಳೆದಾಡಿಕೊಂಡು ಹೋಗುತ್ತಿದ್ದರು. ಆಗಲೂ ಬಿಲಾಲ್ ಅಹದ್ ಅಹದ್’ ಎಂದು ಜೋರಾಗಿ ಹೇಳುತ್ತಿದ್ದರು.

ಈ ಎಲ್ಲಾ ತ್ಯಾಗಗಳಿಗೆ ಬಹುಮಾನವಾಗಿ ಪ್ರವಾದಿವರ್ಯರು(ಸ) ಮದೀನಾದ ಮಸೀದಿಯ ಬಾಂಗ್ ನೀಡುವ ಜವಾಬ್ದಾರಿಯನ್ನು ಹ. ಬಿಲಾಲ್(ರ)ರಿಗೆ ವಹಿಸಿದ್ದರು. ಪ್ರವಾದಿಯವರೊಂದಿಗಿನ ಪ್ರಯಾಣದ ಸಂದರ್ಭದಲ್ಲಿ ಅವರೇ ಅದಾನ್ ನೀಡುತ್ತಿದ್ದರು. ಪ್ರವಾದಿ(ಸ)ರ ಮರಣದ ಬಳಿಕ ಬಿಲಾಲ್‌ರು ಮದೀನವನ್ನು ತೊರೆದು ವಿದೇಶಿಯಾದರು. ಮದೀನಾದ ದಾರಿಗಳು, ಗೋಡೆಗಳು ಪ್ರವಾದಿಯವರ(ಸ) ಕುರಿತ ನೆನಪುಗಳು ಅವರನ್ನು ಅಷ್ಟು ಭಾವಪರವಶವಾಗಿಸಿತ್ತು.

ಒಮ್ಮೆ ಬಿಲಾಲ್(ರ)ರು ಕನಸಿನಲ್ಲಿ ಪ್ರವಾದಿಯವರನ್ನು ಕರೆದರು. ಅವರು ಬಿಲಾಲ್‌ರೊಡನೆ ಕೇಳಿದರು: “ನೀನು ನನ್ನನ್ನು ನೋಡಲು ಏಕೆ ಬರಲಿಲ್ಲ?” ನಿದ್ದೆಯಿಂದ ಎಚ್ಚೆತ್ತ ಬಿಲಾಲ್ ಕೂಡಲೇ ಮದೀನಾದ ಪ್ರಯಾಣದ ಸಿದ್ಧತೆ ಆರಂಭಿಸಿದರು. ತಡಮಾಡದೆ ಪ್ರಯಾಣ ಆರಂಭಿಸಿದರು. ಮದೀನಾಕ್ಕೆ ತಲುಪಿದಾಗ ಅಲ್ಲಿ ಪ್ರವಾದಿಯವರೊಂದಿಗಿನ ಬದುಕು ಒಂದು ಚಲನಚಿತ್ರದ ರೀತಿಯಲ್ಲಿ ಕಣ್ಣ ಮುಂದೆ ಬಂತು. ಬಿಲಾಲ್(ರ)ರ ಕಣ್ಣುಗಳು ತುಂಬಿ ಹರಿಯಿತು. ಪ್ರವಾದಿಯವರ(ಸ) ಮೊಮ್ಮಕ್ಕಳಾದ ಹಸನ್(ರ) ಮತ್ತು ಹುಸೈನ್(ರ)ರು ಬಿಲಾಲ್‌ರೊಂದಿಗೆ ಬಾಂಗ್ ಕೊಡಲು ಒತ್ತಾಯಿಸಿದರು. ಬಿಲಾಲ್(ರ)ರ ಅದಾನ್ ಕರೆಯು ಮದೀನಾ ನಿವಾಸಿಗಳನ್ನು ಪ್ರವಾದಿವರ್ಯರ(ಸ) ಕಾಲವನ್ನು ನೆನಪಿಸಿತು. ಎಲ್ಲರೂ ಭಾವಪರವಶರಾದರು. ಬಿಕ್ಕಿ ಬಿಕ್ಕಿ ಅತ್ತರು. ಮಹಿಳೆಯರೂ ಕೂಡಾ ದುಃಖವನ್ನು ನಿಯಂತ್ರಿಸಿಕೊಂಡು ಮನೆಗಳಿಂದ ಹೊರಬಂದರು. ಮದೀನಾದಲ್ಲಿ ಸ್ಥಿರವಾಗಿ ನೆಲೆಸಲು ಮನಸ್ಸು ಒಪ್ಪದ ಕಾರಣ ಅವರು ಪುನಃ ಡಮಾಸ್ಕಸ್‌ಗೆ ಮರಳಿದರು. ಅವರು ಅಲ್ಲಿಯೇ ಮರಣ ಹೊಂದಿದರು ಮತ್ತು ಅವರ ಗೋರಿಯೂ ಅಲ್ಲಿಯೇ ಇದೆ.
(ರೋಶನ್ ಸಿತಾರೆ ಎಂಬ ಕೃತಿಯಿಂದ)