ಬಡತನ ಸೂಚ್ಯಂಕ ಭಾರತಕ್ಕೆ ಅಗ್ರಸ್ಥಾನ: ವಿಶ್ವಸಂಸ್ಥೆ ವರದಿ

0
192

ಸನ್ಮಾರ್ಗ ವಾರ್ತೆ

ವಿಶ್ವಸಂಸ್ಥೆ: 1.1 ಶತಕೋಟಿ ಜನರು, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಅಪ್ರಾಪ್ತರು, ವಿಶ್ವದಾದ್ಯಂತ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಜಾಗತಿಕವಾಗಿ ತೀವ್ರ ಬಡತನದಲ್ಲಿ ವಾಸಿಸುವ ಐದು ಪ್ರಮುಖ ದೇಶಗಳಲ್ಲಿ ಭಾರತವೂ ಒಂದು.

ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕವು (MPI) ಇತ್ತೀಚಿನ ತನ್ನ ಪರಿಷ್ಕೃತ ವರದಿಯಲ್ಲಿ ಈ ಅಂಶವನ್ನು ತಿಳಿಸಿದ್ದು, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI)ವು ಈ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿವೆ.

ವಿಶ್ವಾದ್ಯಂತ 1.1 ಶತಕೋಟಿ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದು, 40 ಪ್ರತಿಶತ ಜನರು ಯುದ್ಧ, ಆಂತರಿಕ ಸಂಘರ್ಷ ಅನುಭವಿಸುತ್ತಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಭಾರತದಲ್ಲಿ 234 ಮಿಲಿಯನ್ ಜನರು ಬಡತನದಲ್ಲಿ ವಾಸಿಸುತ್ತಿದ್ದು, ಇದು ಮಧ್ಯಮ ಮಾನವ ಅಭಿವೃದ್ಧಿ ಸೂಚ್ಯಂಕವಾಗಿದೆ. ಜಾಗತಿಕವಾಗಿ ಬಡತನದಲ್ಲಿ ವಾಸಿಸುವ ಅತಿ ಹೆಚ್ಚು ಜನರಿರುವ ಐದು ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

“ಇತರ ನಾಲ್ಕು ದೇಶಗಳಲ್ಲಿ ಪಾಕಿಸ್ತಾನ (93 ಮಿಲಿಯನ್), ಇಥಿಯೋಪಿಯಾ (86 ಮಿಲಿಯನ್), ನೈಜೀರಿಯಾ (74 ಮಿಲಿಯನ್), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (66 ಮಿಲಿಯನ್) ಸೇರಿವೆ” ಎಂದು ವರದಿ ಹೇಳಿದೆ.

ವಿಶ್ವದ ಬಡವರಲ್ಲಿ 455 ಮಿಲಿಯನ್ ಜನರು ಹಿಂಸಾತ್ಮಕ ಸಂಘರ್ಷಕ್ಕೆ ಒಳಗಾಗಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಬೆರಗು ಹುಟ್ಟಿಸುತ್ತದೆ. ಅದು ಬಡತನವನ್ನು ಕಡಿಮೆ ಮಾಡಲು ಸಾಧಿಸಿದ ಪ್ರಗತಿಯನ್ನು ತಡೆಯುವುದಲ್ಲದೆ ಅದನ್ನು ಹಿಮ್ಮೆಟ್ಟಿಸುತ್ತದೆ ಎಂದು ವರದಿ ಹೇಳಿದೆ.

“ಇತ್ತೀಚಿನ ವರ್ಷಗಳಲ್ಲಿ ಘರ್ಷಣೆಗಳು ತೀವ್ರಗೊಂಡು ಇನ್ನಷ್ಟು ವೃದ್ಧಿಯಾಗಿದೆ. ಸಾವು ನೋವುಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಜೀವನ ಸುಧಾರಿಸಲು ಮತ್ತು ಜೀವನೋಪಾಯಗಳಿಗೆ ದೊಡ್ಡ ಅಡೆತಡೆಗಳನ್ನು ಸೃಷ್ಟಿಸಿದೆ,” ಎಂದು UNDP ನಿರ್ವಾಹಕರಾದ ಅಚಿಮ್ ಸ್ಟೈನರ್ ಹೇಳಿದರು.

“ಈ ದೇಶಗಳಲ್ಲಿ ಬಡತನ, ಅಶಾಂತಿ ಮತ್ತು ಬಿಕ್ಕಟ್ಟಿನ ಚಕ್ರವನ್ನು ಮುರಿಯಲು ನಮಗೆ ವಿಶೇಷ ಅಭಿವೃದ್ಧಿ ಸಂಪನ್ಮೂಲಗಳು ನೀಡಬೇಕು ಎಂದು ಅವರು ಹೇಳಿದರು.

ವರದಿ ಪ್ರಕಾರ, 1.1 ಶತಕೋಟಿ ಬಡವರಲ್ಲಿ ಅರ್ಧದಷ್ಟು, ಅಂದರೆ 584 ಮಿಲಿಯನ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಜಾಗತಿಕವಾಗಿ, 27.9 ರಷ್ಟು ಮಕ್ಕಳು ಬಡತನದಲ್ಲಿ ವಾಸಿಸುತ್ತಿದ್ದಾರೆ.