ಕರಿಪ್ಪೂರ್: ನಾಲ್ಕು ವರ್ಷದ ಬಳಿಕ ಮತ್ತೆ ಸಕ್ರಿಯಗೊಂಡ ಕೇರಳ ಹಜ್ಜ್ ಹೌಸ್

0
594

ಕರಿಪ್ಪೂರ್,ಮೇ 10: ನಾಲ್ಕು ವರ್ಷದ ಬಳಿಕ ಕರಿಪ್ಪೂರ್ ಹಜ್ಜ್ ಹೌಸ್ ಪುನರ್ ಸಕ್ರಿಯ ಸ್ಥಿತಿಯನ್ನು ಪಡೆದುಕೊಳ್ಳಲಿದೆ. ಈ ವರ್ಷ ಹಜ್ಜ್ ಶಿಬಿರ ಇಲ್ಲಿ ಏರ್ಪಡಿಸಲಾಗುವುದು ಎಂದು ಕೇರಳ ಹಜ್ ಕಮಿಟಿ ತಿಳಿಸಿದ್ದು ಹಜ್ಜ್ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧತೆ ಹಜ್ಜ್ ಹೌಸ್‍ನಲ್ಲಿ ಆರಂಭವಾಗಿದೆ. ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ ದೊಡ್ಡ ವಿಮಾನಗಳಿಗೆ ಪುನಃ ಅನುಮತಿ ಲಭಿಸಿದ್ದು ಹಜ್ಜ್ ಸೇವೆ ಮರು ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ಹಜ್ಜ್ ಹೌಸ್ ಮತ್ತೆ ಪ್ರಾಮುಖ್ಯಕ್ಕೆ ಬಂದಿದೆ.

ರನ್‍ವೇ ನವೀಕರಣಕ್ಕಾಗಿ 2015ರಲ್ಲಿ ದೊಡ್ಡ ವಿಮಾನಗಳು ಕರಿಪ್ಪೂರ್‌ಗೆ ಬರದಂತೆ ನಿಯಂತ್ರಣ ವಿಧಿಸಲಾಗಿತ್ತು. ನಂತರ ಕರಿಪ್ಪೂರಿನಿಂದ(ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ) ನೆಡುಂಬಶ್ಶೇರಿಗೆ ಹಜ್ಜ್ ಸೇವೆಯನ್ನು ಸ್ಥಳಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಜ್ಜ್ ಕ್ಯಾಂಪ್ ನಡೆದಿರಲಿಲ್ಲ. ಅದು ನೆಡುಂಬಶ್ಶೇರಿಯಲ್ಲಿ ನಡೆದಿತ್ತು. ಈಗಿನ ವೇಳಾಪಟ್ಟಿಯಂತೆ ಜುಲೈ ಏಳರಂದು ಬೆಳಗ್ಗೆ 7:10ಕ್ಕೆ ಕರಿಪ್ಪೂರ್‍ನಿಂದ ಮೊದಲ ವಿಮಾನ ಹೊರಡಲಿದೆ ಎಂದು ಕೇರಳ ಹಜ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಫೈಝಿ ತಿಳಿಸಿದ್ದಾರೆ. ಹಜ್ಜ್ ಶಿಬಿರದ ವ್ಯವಸ್ಥೆಗಾಗಿ ಮೇ 19ಕ್ಕೆ ಕಲ್ಲಿಕೋಟೆಯಲ್ಲಿ ಹಜ್ಜ್ ಕಮಿಟಿ ಸಭೆ ಸೇರಲಿದೆ ಎಂದು ಅವರು ಹೇಳಿದರು.