ಲಕ್ನೊ,ಮೇ 10: ನರೇಂದ್ರ ಮೋದಿ ಹಿಂದುಳಿದ ಜಾತಿಯ ವ್ಯಕ್ತಿಯಾಗಿದ್ದರೆ ಅವರಿಗೆ ಆರೆಸ್ಸೆಸ್ ಪ್ರಧಾನಿ ಮಂತ್ರಿಯಾಗಲು ಅವಕಾಶ ನೀಡುತ್ತಿತ್ತೇ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ. ಸಮಾಜವಾದಿ ಪಾರ್ಟಿ-ಬಿಎಸ್ಪಿ ಸಖ್ಯ ರಾಜಕೀಯ ಲಾಭಕ್ಕಾಗಿ ಜಾತಿಯನ್ನು ಆಯುಧವನ್ನಾಗಿ ಮಾಡುತ್ತಿದೆ ಎಂದು ಟೀಕಿಸಿದ ಪ್ರಧಾನಿಯನ್ನು ಈ ರೀತಿ ಮಾಯಾವತಿ ಮಾರ್ಮಿಕವಾಗಿ ಪ್ರಶ್ನಿಸಿದರು.
ಉತ್ತರಪ್ರದೇಶದಲ್ಲಿ ಮೋದಿಗೆ ಎಸ್ಪಿ-ಬಿಎಸ್ಪಿ ಸಖ್ಯದ ವಿರುದ್ಧ ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಜಾತೀಯ ಆಕ್ಷೇಪಗಳನ್ನು ಮಾಡಿ ಅಪಹಾಸ್ಯಕ್ಕೊಳಗಾಗುತ್ತಿದ್ದಾರೆ. ಜಾತೀಯ ತಾರತಮ್ಯ ಅನುಭವಿಸುತ್ತಿರುವ ನಾವು ಹೇಗೆ ಜಾತಿ ವಿರೋಧಿ ಪ್ರಚಾರ ಮಾಡಲು ಸಾಧ್ಯ. ಮೋದಿ ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿಯಲ್ಲ ಎಂದು ದೇಶದಲ್ಲಿ ಎಲ್ಲರಿಗೂ ಗೊತ್ತಿದೆ. ಅವರು ಜಾತಿ ತಾರತಮ್ಯವನ್ನು ಈವರೆಗೆ ಅನುಭವಿಸಿಲ್ಲ. ಇಂತಹ ಒಬ್ಬ ವ್ಯಕ್ತಿಗೆ ನಮ್ಮ ಸಖ್ಯದ ವಿರುದ್ಧ ಅಪಕ್ವವಾದ ಹೇಳಿಕೆ ನೀಡಲು ಸಾಧ್ಯ ಎಂದು ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. “ಆರೆಸ್ಸೆಸ್ ಕಲ್ಯಾಣ್ ಸಿಂಗ್ರಿಗೆ ಏನು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ನರೇಂದ್ರ ಮೋದಿ ಹಿಂದುಳಿದ ಜಾತಿಯವರಾಗಿದ್ದರೆ ಅವರನ್ನು ಪ್ರಧಾನಿಯಾಗಲು ಆರೆಸ್ಸೆಸ್ ಬಿಡುತ್ತಿತ್ತೇ?” ಎಂದು ಮಾಯಾವತಿ ಪ್ರಶ್ನಿಸಿದರು. ಸೋಲು ಖಚಿತವಾದ್ದರಿಂದ ಪ್ರತಿಪಕ್ಷ ಪಾರ್ಟಿಗಳ ವಿರುದ್ಧ ನರೇಂದ್ರ ಮೋದಿ ಕೆಟ್ಟ ಭಾಷೆ ಮತ್ತು ಹೀನಾಯ ಆರೋಪಗಳನ್ನು ಹೊರಿಸುತ್ತಾರೆ. ಬಿಜೆಪಿ ಪುನಃ ಅಧಿಕಾರಕ್ಕೆ ಬರುವುದಿಲ್ಲ ಎಂದು ದೇಶದ ಎಲ್ಲರಿಗೂ ಗೊತ್ತಿದೆ. ಪುನಃ ಪ್ರಧಾನಿಯಾಗುವ ಮೋದಿಯ ಕನಸು ಪೂರ್ಣಗೊಳ್ಳದು ಎಂದು ಮಾಯಾವತಿ ಹೇಳಿದರು.












