50 ಪೈಸೆಗೂ ಬೆಲೆ ಇದೆ: ಹೆಚ್ಚುವರಿ 50 ಪೈಸೆ ವಸೂಲಿ ಮಾಡಿದ ರೆಸ್ಟೋರೆಂಟಿಗೆ ರೂ.10,000 ದಂಡ

0
18

ಸನ್ಮಾರ್ಗ ವಾರ್ತೆ

ಜೈಪುರ: ಡಿಜಿಟಲ್ ವಹಿವಾಟುಗಳು ವ್ಯಾಪಕವಾಗಿರುವ ಈ ಕಾಲದಲ್ಲಿ, ಗ್ರಾಹಕರ ಅನುಮತಿಯಿಲ್ಲದೆ ಬಿಲ್ ಮೊತ್ತವನ್ನು ‘ರೌಂಡ್ ಆಫ್’ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡಿದ ರೆಸ್ಟೋರೆಂಟಿಗೆ ಜೈಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರೂ.10,000 ದಂಡ ವಿಧಿಸಿದೆ.

ವ್ಯಾಲೆಂಟೈನ್ಸ್ ಡೇ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಕುಟುಂಬ ಸಮೇತ ರೆಸ್ಟೋರೆಂಟಿಗೆ ತೆರಳಿದ್ದ ಜೈಪುರ ನಿವಾಸಿಯೊಬ್ಬರಿಗೆ ಈ ಘಟನೆ ಎದುರಾಗಿತ್ತು. ಊಟದ ನಂತರ ರೆಸ್ಟೋರೆಂಟ್ ನೀಡಿದ ಅಸಲಿ ಬಿಲ್ ಮೊತ್ತ ರೂ.1,648.50 ಆಗಿತ್ತು. ಆದರೆ, ಮೊತ್ತವನ್ನು ರೌಂಡ್ ಆಫ್ ಮಾಡಿ 1,649 ಪಾವತಿಸುವಂತೆ ರೆಸ್ಟೋರೆಂಟ್ ಸಿಬ್ಬಂದಿ ಒತ್ತಾಯಿಸಿದರು. ತಾವು ಯುಪಿಐ ಮೂಲಕ ಪಾವತಿಸುವುದರಿಂದ ನಿಖರವಾದ ಮೊತ್ತವನ್ನೇ ನೀಡುವುದಾಗಿ ದೂರುದಾರರು ತಿಳಿಸಿದರೂ, ಸಂಸ್ಥೆಯ ನಿಯಮದಂತೆ ಬಿಲ್ ರೌಂಡ್ ಆಫ್ ಮಾಡಲೇಬೇಕು ಎಂದು ಸಿಬ್ಬಂದಿ ಪಟ್ಟು ಹಿಡಿದರು.

ಸಿಬ್ಬಂದಿ ಅಸಭ್ಯವಾಗಿ ವರ್ತಿಸಿ ಹಣ ಪಾವತಿಸಲು ಒತ್ತಡ ಹೇರಿದ್ದರಿಂದ, ಗ್ರಾಹಕರು ಅನಿವಾರ್ಯವಾಗಿ 1,649 ನೀಡಬೇಕಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗವು ನೋಟಿಸ್ ಜಾರಿ ಮಾಡಿದರೂ ರೆಸ್ಟೋರೆಂಟ್ ಪರವಾಗಿ ಯಾರೂ ಹಾಜರಾಗಲಿಲ್ಲ. ಇದರಿಂದ ಆಯೋಗವು ಪ್ರಕರಣವನ್ನು ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು. ಗ್ರಾಹಕರ ಒಪ್ಪಿಗೆಯಿಲ್ಲದೆ ಮತ್ತು ಮುಂಚಿತವಾಗಿ ತಿಳಿಸದೆ ಬಿಲ್ ಮೊತ್ತವನ್ನು ಹೆಚ್ಚಿಸಿ ವಸೂಲಿ ಮಾಡುವುದು ‘ಅನುಚಿತ ವ್ಯಾಪಾರ ಪದ್ಧತಿ’ ಹಾಗೂ ದೂರನ್ನು ಸಕಾಲದಲ್ಲಿ ಬಗೆಹರಿಸದಿರುವುದು ‘ಸೇವಾ ಲೋಪ’ ಎಂದು ಆಯೋಗ ಸ್ಪಷ್ಟಪಡಿಸಿತು.ಅಸಲಿ ಬಿಲ್ ಮೊತ್ತ ರೂ.1,648.50 ಆಗಿದ್ದು ರೆಸ್ಟೋರೆಂಟ್ ರೂ.1,649.00 ರೌಂಡ್ ಫೀಗರ್ ಆಗಿ ವಸೂಲಿ ಮಾಡಿತ್ತು. ಗ್ರಾಹಕಮ ಅನುಮತಿಯಿಲ್ಲದೆ ಪಡೆದ ಹೆಚ್ಚುವರಿ ಮೊತ್ತ 0.50 (50 ಪೈಸೆ)ಮತ್ತು ರೆಸ್ಟೊರೆಂಟ್‌ನಿಂದ ಗ್ರಾಹಕನಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪರಿಹಾರ 7,000.00, ಕಾನೂನು ಖರ್ಚು 3,000.00ಹೆಚ್ಚುವರಿ ಮೊತ್ತದ ಮರುಪಾವತಿ .50 ಪೈಸೆ ಒಟ್ಟು ರೆಸ್ಟೋರೆಂಟ್ 10,000.50 ಪಾವತಿಸಬೇಕೆಂದು ಗ್ರಾಹಕರ ಕೋರ್ಟು ಆದೇಶಹೊರಡಿಸಿದೆ.