ದೇವಸ್ಥಾನ ಬಳಿ ಲಾಠಿಚಾರ್ಜ್ ಪ್ರಕರಣ; ಪೊಲೀಸರನ್ನು ಅಮಾನತುಗೊಳಿಸಲು ವಿಎಚ್‌ಪಿ ಒತ್ತಾಯ

0
216

ಸನ್ಮಾರ್ಗ ವಾರ್ತೆ

ಹೈದರಾಬಾದ್: ಮುತ್ಯಾಲಮ್ಮ ದೇವಸ್ಥಾನದ ಬಳಿ ಪ್ರತಿಭಟನೆ ನಿರತರ ಮೇಲೆ ಶನಿವಾರ ಲಾಠಿ ಚಾರ್ಜ್ ಮಾಡಿದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು 48 ಗಂಟೆಗಳ ಒಳಗೆ ಅಮಾನತುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಒತ್ತಾಯಿಸಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ವಿಫಲವಾದರೆ ಹೋರಾಟ ಆರಂಭಿಸುವುದಾಗಿ ಬಲಪಂಥೀಯ ಗುಂಪು ಬೆದರಿಕೆ ಹಾಕಿದೆ.

ಅಕ್ಟೋಬರ್ 20, ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಮುಖಂಡರು, ತೆಲಂಗಾಣದಲ್ಲಿ ಯೋಜಿತ ರೀತಿಯಲ್ಲಿ ದೇವಾಲಯಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿದ್ದು ಜನರು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ ಹಿಂದೂಗಳಿಗೆ ಗಾಯಗೊಳಿಸಿದ್ದಾರೆ ಎಂದು ವಿಎಚ್‌ಪಿ ನಾಯಕ ಭಾನು ಪ್ರಸಾದ್ ಹೇಳಿದ್ದಾರೆ.

ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರನ್ನು ವಿಎಚ್‌ಪಿ ನಿಯೋಗ ಭೇಟಿಯಾಗಿ ರಾಜ್ಯದಲ್ಲಿನ ದೇವಾಲಯಗಳ ಮೇಲಿನ ದಾಳಿಗಳ ಕುರಿತು ಮನವಿ ಸಲ್ಲಿಸಲಿದೆ.

ತೆಲಂಗಾಣದ ದೇವಸ್ಥಾನಗಳ ಮೇಲಿನ ದಾಳಿ ಮತ್ತು ಧ್ವಂಸ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ವಿಎಚ್‌ಪಿ ನಾಯಕರು ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ದತ್ತಿ ಸಚಿವೆ ಕೊಂಡಾ ಸುರೇಖಾ ಅವರನ್ನು ಭೇಟಿಯಾಗಲಿದ್ದಾರೆ.