ಮುಸ್ಲಿಂ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ತರಾಟೆಗೆ ತೆಗೆದುಕೊಂಡ ಉತ್ತರಪ್ರದೇಶದ ಪೊಲೀಸರು: ತಪ್ಪಾಯ್ತು ಎಂದರು

0
139

ಸನ್ಮಾರ್ಗ ವಾರ್ತೆ

ಪ್ರವಾದಿ ನಿಂದನೆಯ ಕಾರಣಕ್ಕಾಗಿ ವರ್ಷಗಳ ಹಿಂದೆ ಬಿಜೆಪಿಯ ನೂಪುರ್ ಶರ್ಮ ಸುದ್ದಿಯಲ್ಲಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿ ವಿವಿಧ ಟಿವಿ ಚಾನಲ್ ಗಳಲ್ಲಿ ಚರ್ಚೆಯಲ್ಲಿ ಭಾಗವಹಿಸ್ತಾ ಇದ್ದರು. ಆ ವಿವಾದದ ಬಳಿಕವೂ ಅವರ ಮನಸ್ಥಿತಿ ಬದಲಾಗಿಲ್ಲ ಅನ್ನೋದಕ್ಕೆ ಮೊನ್ನೆ ಮೊನ್ನೆ ಅವರು ಮಾಡಿದ ಭಾಷಣವೇ ಅತ್ಯಂತ ಉತ್ತಮ ಪುರಾವೆ.

ಆದರೆ ಈ ಭಾಷಣದ ಬಳಿಕ ಅವರನ್ನು ಉತ್ತರ ಪ್ರದೇಶದ ಪೊಲೀಸರೇ ತರಾಟೆಗೆ ತೆಗೆದುಕೊಂಡರು. ಇದೀಗ ಎಕ್ಸ್ ಜಾಲತಾಣದಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ತಾನು ಮಾಡಿರುವ ಭಾಷಣದಲ್ಲಿ ಹಂಚಿಕೊಂಡಿರುವ ಮಾಹಿತಿ ತಪ್ಪಾಗಿದೆ, ನನ್ನನ್ನು ಕ್ಷಮಿಸಿ ಎಂದು ಕೋರಿಕೊಂಡಿದ್ದಾರೆ.

ನಡೆದಿದ್ದೇನು?
ಉತ್ತರ ಪ್ರದೇಶದ ಬಹರೇಚ್ ನಲ್ಲಿ ವಾರದ ಹಿಂದೆ ಕೋಮು ಘರ್ಷಣೆ ನಡೆದಿತ್ತು. ಇದರಲ್ಲಿ ಗೋಪಾಲ್ ಮಿಶ್ರಾ ಎಂಬ 22 ವರ್ಷದ ಯುವಕನ ಹತ್ಯೆಯಾಗಿತ್ತು. ಈ ಹತ್ಯೆಯನ್ನೇ ಎತ್ತಿಕೊಂಡು ಈ ನೂಪುರ್ ಶರ್ಮಾ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದಾರೆ. ಈ ಗೋಪಾಲ್ ಮಿಶ್ರನನ್ನು ಮುಸ್ಲಿಮರು ಕ್ರೂರವಾಗಿ ಹತ್ಯೆಗೈದಿದ್ದಾರೆ ಎಂದಾಕೆ ಹೇಳಿದ್ದಾರೆ. ಗೋಪಾಲ್ ಮಿಶ್ರನ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆಯಲಾಗಿದೆ, ಉಗುರುಗಳನ್ನು ಕಿತ್ತೆಸೆಯಲಾಗಿದೆ ಎಂದೆಲ್ಲ ಸಭೆಯಲ್ಲಿ ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದರು. ಮುಸ್ಲಿಮರ ವಿರುದ್ಧ ಎಲ್ಲರೂ ಒಂದಾಗಬೇಕು ಎಂದೂ ಕರೆ ಕೊಟ್ಟಿದ್ದರು. ಇದು ಆ ಪ್ರದೇಶದಲ್ಲಿ ಸಂಘರ್ಷದ ಸ್ಥಿತಿಗೆ ಕಾರಣವೂ ಆಗಿತ್ತು.

ಆದರೆ ನೂಪುರ್ ಶರ್ಮ ಅವರ ಈ ಹೇಳಿಕೆಯನ್ನು ಉತ್ತರ ಪ್ರದೇಶದ ಬಹ್ ರೇಚ್ ನ ಪೊಲೀಸರು ತಳ್ಳಿ ಹಾಕಿದ್ದಾರೆ. ಮಾತ್ರ ಅಲ್ಲ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ಯುವಕನ ಪೋಸ್ಟ್ ಮಾರ್ಟಂ ವರದಿಯನ್ನು ಉಲ್ಲೇಖಿಸಿ ಪೊಲೀಸರು ಈ ಹೇಳಿಕೆಯನ್ನು ನೀಡಿದ್ದಾರೆ.

ಯಾವಾಗ ತನ್ನ ಸುಳ್ಳುಗಳನ್ನು ಉತ್ತರ ಪ್ರದೇಶದ ಪೊಲೀಸರು ಬೆತ್ತಲು ಮಾಡಿದರೋ ನೂಪುರ್ ಶರ್ಮ ಕಂಗಾಲಾದರು. ತನ್ನ ವಿರುದ್ಧ ಪ್ರಕರಣ ದಾಖಲಾದೀತು ಎಂದು ಭಯ ಪಟ್ಟರು. ಕೊನೆಗೆ ಎಕ್ಸ್ ಜಾಲತಾಣದಲ್ಲಿ ಕ್ಷಮೆ ಯಾಚಿಸಿದರು. ಮಾತ್ರ ಅಲ್ಲ ಮಾಧ್ಯಮಗಳ ವರದಿಯಿಂದ ಪ್ರೇರಿತಳಾಗಿ ತಾನು ಈ ಹೇಳಿಕೆಯನ್ನು ನೀಡಿದ್ದೇನೆ ಎಂದೂ ಸಮರ್ಥಿಸಿಕೊಂಡರು.

ಪ್ರವಾದಿಯನ್ನು ನಿಂದಿಸಿ ವ್ಯಾಪಕ ಖಂಡನೆಗೆ ಒಳಗಾದ ಬಳಿಕವೂ ಈ ನೂಪುರ್ ಶರ್ಮ ಬದಲಾಗಿಲ್ಲ ಅನ್ನೋದಕ್ಕೆ ಅವರ ಈ ಭಾಷಣವೇ ಸಾಕ್ಷಿ.