ಕಾಂಗ್ರೆಸ್ ವೈಫಲ್ಯಕ್ಕೆ ಬಿಜೆಪಿ ಕಾರಣವಾ?

0
99

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ಕಾಂಗ್ರೆಸ್ ಮುಂದೆ ನಿಂತು ರೂಪಿಸಿದ ಇಂಡಿಯ ಕೂಟದಲ್ಲಿ ಜನರಿಗೆ ಹೆಚ್ಚು ನಿರೀಕ್ಷೆ ಇತ್ತು. ಕಾಂಗ್ರೆಸ್ ಈ ಕೂಟದಲ್ಲಿ ಬಲಿಷ್ಠ ಪಕ್ಷ. ಆದರೂ ಬಹಳಷ್ಟು ರಾಜಿ ಮಾಡಿಕೊಂಡಿದೆ. ತ್ಯಾಗವನ್ನು ಮಾಡಿದೆ. ಆದರೆ ದೇಶದ ಪರಿಸ್ಥಿತಿಯಲ್ಲಿ ಸ್ವಲ್ಪವಾದರೂ ಸರಿಯಾದ ಬದಲಾವಣೆ ತರಲು ಸಾಧ್ಯವಾಗಿಲ್ಲ. ಕೆಲವರು ಅದನ್ನು ಮೂರ್ಖರು ತುಂಬಿದ ಪಕ್ಷವೆಂದು ಇನ್ನೂ ಕೆಲವರು ಬಿಜೆಪಿ ಬುದ್ಧಿವಂತರ ಪಾರ್ಟಿಯೆಂದು ಹೇಳುತ್ತಿದ್ದಾರೆ.

ಬಹುಶಃ ಈ ವಾದಗತಿಯನ್ನು ಬರೇ ಒಂದು ಆರೋಪವೆಂದು ಹರ್ಯಾಣ ಸಹಿತ ಇತ್ತೀಚೆಗಿನ ಭಾರೀ ಗೆಲುವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ನಿಮಗೂ ನಿರಾಕರಿಸಲು ಸಾಧ್ಯವಾಗದು.
ಒಂದನೆಯದಾಗಿ ಕಾಂಗ್ರೆಸ್ಸಿನ ರಾಜ್ಯ ಘಟಕಗಳನ್ನು ಎತ್ತಿಕೊಳ್ಳಿ. ಇವು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯವರ ಅಭಿಪ್ರಾಯಕ್ಕೂ ಮನ್ನಣೆ ನೀಡದೆ ಸಾಗುತ್ತಿದೆ. ಕರ್ನಾಟಕವನ್ನೇ ಎತ್ತಿಕೊಳ್ಳಿ. ಇಲ್ಲಿ ಒಳಗೊಳಗೆ ಕೊಳಕು ತುಂಬಿದ ಪ್ರಯತ್ನಗಳು ನಡೆಯುತ್ತಿವೆ. ಡಿಕೆಶಿಯನ್ನು ಮುಖ್ಯ ಮಂತ್ರಿ ಮಾಡುವುದಕ್ಕೊಂದು ಲಾಬಿ. ದಲಿತ ಮುಖ್ಯಮಂತ್ರಿ ಬೇಕೆಂದು ಕೆಲವರ ವಾದ ಗುರಿ ತಲುಪದೆ ಕೊಳೆಯುತ್ತಿವೆ. ಸಿದ್ದರಾಮಯ್ಯ ವಿರುದ್ಧ ಮೂಡ ಕೇಸಿನ ಹಿಂದೆ ಕಾಂಗ್ರೆಸ್ಸಿಗರ ಈ ಕೊಳಕಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಬಹಿರಂಗವಾಗಿ ಮಾತಾಡುವರು ಶಿಸ್ತು ಕ್ರಮ ಜರಗಿಸಲಾಗುವುದು ಎಂದರು. ಇದು ಕಾಂಗ್ರೆಸ್ಸಿಗರಿಗೆ ಕೇಳಿತಾ? ಇಲ್ಲ. ಶಿಸ್ತು ಕ್ರಮ ಜರಗಿಸುವ ತಾಕತ್ತು ಕಾಂಗ್ರೆಸ್ ಹೈಕಮಾಂಡಿಗೆ ಇದೆಯಾ?

ಒಂದು ವೇಳೆ ಇಂತಹ ಶಿಸ್ತುಗೊಳಗಾದರೆ ಅಲ್ಲಿ ಬೊಗೆಸೆಯೊಡ್ಡಿ ಸಂಪೂರ್ಣ ಗೌರವಗಳೊಂದಿಗೆ ಸ್ವಾಗತಿಸಲು ಬಿಜೆಪಿ ಸಿದ್ಧವಾಗಿದೆ. ಯಾಕೆಂದರೆ ಅದಕ್ಕೆ ಆಪರೇಷನ್ ಲೋಟಸ್ ಮಾಡುವ ಅಗತ್ಯವಿರುವುದಿಲ್ಲ. ಅದಕ್ಕಾಗಿ ಹಣ ವ್ಯಯಿಸುವ ಅಗತ್ಯವೇ ಇಲ್ಲ. ಕಾಂಗ್ರೆಸ್ ಸರಕಾರ ಬಿದ್ದರೆ ನಿವೃತ್ತಿಯಲ್ಲಿರುವ ಯಡಿಯೂರಪ್ಪರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿದರೂ ಮಾಡಬಹುದು. ಅಧಿಕಾರ ಇಲ್ಲದಿದ್ದರೂ ಕಾಂಗ್ರೆಸ್‌ನಲ್ಲಿ ಮೇಲಾಟ ಕೀಳಾಟ ಕಿತ್ತಾಟಗಳು ಭಾರೀ ಸದ್ದು ಮಾಡುತ್ತಿವೆ.

ಪಂಜಾಬ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಕ್ರಮ ಜರಗಿಸಿ ಕಾಂಗ್ರೆಸ್ ಧೂಳಿಪಟವಾಯಿತು. ದಿಲ್ಲಿಯಲ್ಲಿ ಕಾಂಗ್ರೆಸ್ಸಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದ್ದು ಬರೇ ಝೀರೊ. ಏಳು ಸೀಟುಗಳಲ್ಲಿ ಒಂದನ್ನು ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ದಿಲ್ಲಿ ವಿಧಾನಸಭೆಗೆ ಚುನಾವಣೆ ಹತ್ತಿರವಿದೆ. ದಿಲ್ಲಿ ವಿಧಾನಸಭೆಗೆ ಕೇಜ್ರಿವಾಲ್ ಎಂದು ಆರೆಸ್ಸೆಸ್ ನಿರ್ಧರಿಸಿದೆ ಎಂಬ ಮಾತು ಖಂಡಿತ ಚಲಾವಣೆಯಲ್ಲಿದೆ. ನಿರಾಕರಿಸುವ ಹಾಗೂ ಇಲ್ಲ. ಆರೆಸ್ಸೆಸ್- ಬಿಜೆಪಿ ಪ್ರಾಯೋಜಿತ ಅಣ್ಣಾ ಹಝಾರೆಯ ಸತ್ಯಾಗ್ರಹದ ಪ್ರಮುಖ ರೂವಾರಿ ಈ ಕೇಜ್ರಿವಾಲ್. ಅವರು ಕೂಡ ಹಿಂದುತ್ವ ರಾಷ್ಟ್ರೀಯತೆಯ ಮಹಾ ಪ್ರತಿಪಾದಕ. ಸೌಲಭ್ಯಗಳ ಮುಖವಾಡದಲ್ಲಿ ಅವರು ಇದೇ ಕೆಲಸವನ್ನು ಮಾಡುತ್ತಾರೆ. ಮದ್ಯ ನೀತಿ ಕಾರಣಕ್ಕೆ ಅವರು ಮತ್ತು ಅವರ ಸಂಗಡಿಗರಾದ ಸಿಸೋಡಿಯ, ಜೈನ್ ಸಹಿತ ಹಲವರು ಜೈಲಿಗೆ ಹೋಗಿರಬಹುದು. ಅದಕ್ಕೆ ಮೋದಿ ವಿರೋಧವೊಂದೇ ಕಾರಣವಾಗಿದೆ. ಕೇಜ್ರಿವಾಲ್ ಸಹಿತ ಜೈಲುಪಾಲಾದವರು ಹೊರ ಬಂದುದರಲ್ಲಿಯೂ ಅರೆಸ್ಸೆಸ್ ಹಸ್ತ ಇದೆ ಎನ್ನುವವರೂ ಇದ್ದಾರೆ. ಏನಿದ್ದರೂ ಈಗ ಸತ್ಯೇಂದ್ರ ಜೈನ್ ಜಾಮೀನು ಪಡೆದು ಹೊರಬಂದಿದ್ದಾರೆ. ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಹತ್ತಿರವಾಗುವಾಗ ಈ ಬಿಡುಗಡೆ ನಡೆದದ್ದು ಎಂಬುದೆಲ್ಲ ಅಳವಾಗಿ ನೋಡಬೇಕಾದ ವಿಚಾರ. ಆರೆಸ್ಸೆಸ್ಸಿಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ವಿಚಾರವನ್ನು ಕೂಡ ಆಳವಾಗಿ ಗಮನಿಸಬೇಕಾಗಿದೆ. ಒಟ್ಟಿನಲ್ಲಿ ತತ್ವಕ್ಕಾಗಿ ಈ ಎಲ್ಲ ಖೇಲ್‌ಗಳು ನಡೆಯುತ್ತಿವೆ. ಕಾಂಗ್ರೆಸ್ಸಿಗೆ ತತ್ವವೇ ಇಲ್ಲ. ಈ ಅಂಶವನ್ನೂ ಕೂಡ ಮೌಲ್ಯಮಾಪನ ಮಾಡಿ ಜನರು ಕಾಂಗ್ರೆಸ್ ಮೂರ್ಖರು ತುಂಬಿಕೊಂಡಿರುವ ಪಾರ್ಟಿ ಎನ್ನುತ್ತಿರುವುದಾಗಿರಬಹುದು.

ಅದಿರಲಿ, ಕೇರಳದ ಹಿರಿಯ ಕಾಂಗ್ರೆಸ್ಸಿಗ ಅಂಟನಿಯ ವಿಚಾರವನ್ನೇ ತೆಗೆದುಕೊಳ್ಳಿ. ಅವರು ಕೆಲವು ವರ್ಷಗಳ ಹಿಂದೆ ಕೇರಳದ ಕಾಂಗ್ರೆಸ್ಸಿಗರು ಹಗಲು ಕಾಂಗ್ರೆಸ್ಸಿಗರಾಗಿರುತ್ತಾರೆ. ರಾತ್ರೆಯಲ್ಲಿ ಬಿಜೆಪಿಯಾಗುತ್ತಾರೆ ಎಂದು ಹೇಳಿದ್ದಾರಷ್ಟೇ. ಆಂಟನಿ ಹಾಗಂದರಲ್ಲ. ಏನಾಯಿತು? ಆಂಟನಿಯ ಹಿರಿಯ ಪುತ್ರ ವಿಜಯ್ ಆಂಟನಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾದರು. ಇಂತಹವರು ಯಾರಿಗಾಗಿ ತತ್ವ ಮಾತಾಡುತ್ತಾರೆ? ಅವರಿಗೆ, ಅವರ ಕುಟುಂಬಕ್ಕೆ
ಅನ್ವಯವಾಗುವುದಿಲ್ವಾ? ಹೀಗಾಗಿ ಕಾಂಗ್ರೆಸ್ಸಿಗರು ಹೇಳುವ ಮಾತುಗಳೆಲ್ಲ ದ್ವಂದ್ವದ್ದೆಂದೂ ಮತ್ತು ಮೂರ್ಖತ್ವದ್ದೆಂದೂ ಜನರು ಹೇಳತೊಡಗಿದ್ದು ಇರಬಹುದು.

ನೋಡಿ, ಕರ್ನಾಟಕದ ವಿಷಯ ಎತ್ತಿಕೊಳ್ಳುವುದಾದರೆ ದಲಿತ ಮುಖ್ಯಮಂತ್ರಿ ಅಂತ ಓಡಾಡುವವರ ಕುರಿತು ಹೈಕಮಾಂಡ್ ಯಾಕೆ ಮೌನವಾಗಿದೆ? ಸಿದ್ದರಾಮಯ್ಯರನ್ನು ಉರುಳಿಸುವ ಯೋಜನೆ ರೂಪುಗೊಳ್ಳುವಾಗ ಅದೆಲ್ಲಿ ಮಲಗಿತ್ತು? ರಾಹುಲ್ ಗಾಂಧಿ ಜನನಾಯಕನಾಗಿ ಬೆಳೆದರೆ ಸಾಕೆ? ಪಾರ್ಟಿಯನ್ನು ಗೆಲ್ಲಿಸುವ ತಾಕತ್ತೇಕೆ ಇಲ್ಲ? ಇವಿಎಂನಿಂದ ಸೋತೆವು, 20 ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗಿತ್ತು ಎಂದು ಕಾಂಗ್ರೆಸ್ ಸುಪ್ರೀಂಕೋರ್ಟಿಗೆ ಹೋಯಿತು. ಈಗ ಸುಪ್ರಿಂ ಕೋರ್ಟು ಚುನಾವಣಾ ಆಯೋಗಕ್ಕೆ ನೋಟಿಸು ಕೊಟ್ಟಿದೆ. ಆದರೆ ಇವೆಲ್ಲ ಇದ್ದೂ ಹರ್ಯಾಣದಲ್ಲಿ ನಾಯಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಸಾಧ್ಯ ವಾಯಿತಾ? ಇಲ್ಲ. ಅದು ಕಾಂಗ್ರೆಸ್ ಪಲ್ಟಿ ಹೊಡೆದರೂ ಅದರಿಂದ ಸಾಧ್ಯವಿಲ್ಲ. ಇನ್ನು ಬಿಜೆಪಿಯಾದರೆ ಸಲೀಸಾಗಿ ನಡೆದಿರುತ್ತದೆ. ಅಂತಹ ಬಾಬರಿ ಮಸೀದಿಯನ್ನೇ ಮುಸ್ಲಿಮರಿಂದ ಕಿತ್ತು ಬಹುಸಂಖ್ಯಾತ ನ್ಯಾಯ ಪ್ರಕಟವಾಗಿದ್ದನ್ನು ನೆನಪಿಸಿಕೊಳ್ಳಿ.

ಇಲ್ಲಿ ಸಾಂದರ್ಭಿಕವಾಗಿ ಸೂಚಿಸಲೇ ಬೇಕಾದ ಇನ್ನೊಂದು ವಿಷಯ ನ್ಯಾಯಾಲಯಗಳು ಕೂಡ ಬಿಜೆಪಿಗೆ ಅನುಕೂಲಕರ ರೀತಿಯಲ್ಲಿ ವರ್ತಿಸುತ್ತಿವೆಯಾ ಎಂಬುದು. ಇವಿಎಂನ ಆಟವೇ ನಡೆಯುವುದಿಲ್ಲ. ಇವಿಎಂ ಚುನಾವಣೆಯಿಂದ ವಾಪಸು ತೆಗೆಯುವುದಿಲ್ಲ ಎಂದು ಅದರ ಒಂದು ಪೀಠ ಈ ಹಿಂದೆ ತೀರ್ಪು ಕೊಟ್ಟಿತ್ತು. ನಂತರ ಈಗ ಕಾಂಗ್ರೆಸ್ಸಿನ ಅರ್ಜಿಯನ್ನು ಅದು ಯಾವ ಕಾರಣಕ್ಕಾಗಿ ಸ್ವೀಕರಿಸಿತು? ಚಂಡಿಗಢ ಮೇಯರ್ ಚುನಾವಣೆಯಲ್ಲಿ ಮೋಸ ಆಗಿದ್ದನ್ನು ಪ್ರಜಾಪ್ರಭುತ್ವದ ದೊಡ್ಡ ವಿನಾಶ ಎಂದು ಚೀಫ್ ಜಸ್ಟಿಸ್ ಚಂದ್ರಚೂಡರೇ ಬಣ್ಣಿಸಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಲ್ಲ. ಹೀಗೆ ಮಾಡುವ ಕೋರ್ಟು ದೇಶದ ಜನತೆ ಇವಿಎಂನಿಂದ ನಮ್ಮ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಬೊಬ್ಬೆ ಹೊಡೆದರೂ ಮಧ್ಯ ಪ್ರದೇಶ, ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿ ಇವಿಎಂನಲ್ಲಿ ಮೋಸ ಮಾಡಿ ಗೆದ್ದಿದೆ ಎಂದು ವಕೀಲರುಗಳು ಅರ್ಜಿ ಸಲ್ಲಿಸಿದರೂ ಅದನ್ನು ವಿಚಾರಣೆಗೆತ್ತಿ ಕೊಳ್ಳಲಿಲ್ಲ. ಯಾಕೆ?

ಚುನಾವಣಾ ಅಯೋಗ ಮೋದಿ ಸರಕಾರದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಗಳಿದ್ದರೂ ಚುನಾವಣಾ ಆಯೋಗದ ವಿರುದ್ಧ ತನಿಖೆಗೆ ಯಾಕೆ ಅದೇಶಿಸುವುದಿಲ್ಲ? ಪ್ರತಿಯೊಂದು ಮತದಾನದ ವೇಳೆ ಮೊದಲೊಂದು ಲೆಕ್ಕ ನಂತರ ಅದನ್ನು ಹೆಚ್ಚಿಸಿ ಇನ್ನೊಂದು ಲೆಕ್ಕವನ್ನು ಪ್ರಕಟಿಸುವ ಚುನಾವಣಾ ಆಯೋಗದಲ್ಲಿ ಅಪ್ರಾಮಾಣಿಕರು ಕೂತಿದ್ದಾರೆ ಎಂದು ಕೋರ್ಟಿಗೆ ಯಾಕೆ ಅನಿಸುತ್ತಿಲ್ಲ? ಈ ಎಲ್ಲ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಒಂದು ವೇಳೆ ಜನರ ಅಭಿಮತ ಅಭಿಪ್ರಾಯ ಸಂದೇಹಕ್ಕೆ ಅವಕಾಶವಾಗುವಂತೆ ಕೋರ್ಟು ಕೂಡ ನಡೆಯುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅದರ ಬಗ್ಗೆ ಕಾಂಗ್ರೆಸ್ ಕೊಟ್ಟ ಹರ್ಯಾಣ ಚುನಾವಣೆ ವಿರುದ್ಧ ಅರ್ಜಿಯಲ್ಲಿ ಯಾವ ತೀರ್ಪು ಬರುತ್ತದೆ ಎಂಬುದು ನೋಡಿಕೊಂಡು ಜನರಲ್ಲಿರುವ ಅಭಿಪ್ರಾಯ ಬದಲಾವಣೆ ಯಾಗಬಹುದು.

ಇಂಡಿಯಾ ಕೂಟದ ವಿಚಾರವನ್ನು ಮತ್ತೆ ಎತ್ತಿಕೊಳ್ಳಿ. ಈಗ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿಗೆ ಪ್ರತಿಯಾಗಿ ಮೂರನೇ ಫ್ರಂಟ್ ಅಸ್ತಿತ್ವಕ್ಕೆ ಬಂದಿದೆ. ಇದಕ್ಕೆ ಮಹಾರಾಷ್ಟ್ರದ ಸಿಪಿಎಂ ನೇತೃತ್ವ ನೀಡುತ್ತಿದೆ. ಇದೀಗ ಇವರೆಲ್ಲ ಬೇರೆಯೇ ಒಂದು ಫ್ರಂಟ್ ರಚಿಸಿಕೊಂಡು ಚುನಾವಣೆಯ ವೇಳೆಗೆ ಇಂಡಿಯ ಕೂಟಕ್ಕೆ ಸವಾಲು ಹಾಕುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ತಮಗೆ ಸರಿಯಾದ ಪರಿಗಣನೆ ನೀಡದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ. ಎಂದು ಹೇಳುತ್ತಿದ್ದಾರೆ. ಕಬ್ಬಿಣ ಕಾದಲೇ ಬಡಿಯಬೇಕೆಂದು ಇವರ ನ್ಯಾಯ ಆಗಿರಬಹುದು. ಬರೇ ರಾಜಕೀಯ ಇವರದ್ದು ತತ್ವರಹಿತವಾದದ್ದು.

ಮಹಾರಾಷ್ಟ್ರದಲ್ಲಿ ಬಿಜೆಪಿಯ ನೇತೃತ್ವದ ಮಹಾಯುತಿ ಸರಕಾರವನ್ನು ಕೆಳಗಿಳಿಸುವುದು ತಮ್ಮ ಉದ್ದೇಶ ಎಂದು ಇವರು ಕೂಡ ಹೇಳುವುದು. ಇದನ್ನೆ ಅಲ್ವಾ ಇಂಡಿಯಾ ಕೂಟದ ಮಹಾ ಅಘಾಡಿ ಕೂಡ ಹೇಳುವುದು? ಹಾಗಿದ್ದರೆ ಇವರಿಗೊಂದು ಮೂರನೇ ಫ್ರಂಟ್ ಯಾಕೆ? ಯಾಕೆಂದರೆ ಇವರೆಲ್ಲ ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ದುಡಿಯುತ್ತಿದ್ದಾರೆ. ಆದರೆ ಪರೋಕ್ಷವಾಗಿ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದಾದ ಕಾಂಗ್ರೆಸ್ ನೇತೃತ್ವದ ಇಂಡಿಯ ಕೂಟವನ್ನು ಮಣಿಸುವುದಕ್ಕೆ ಸಹಾಯ ಮಾಡುವವರಿಗೆ ಇಂದು ಹಣದ ಕೊರತೆ ಇರುವುದಿಲ್ಲ ಎಂಬುದು ಸತ್ಯವೇ ಆಗಿದೆ. ಅದು ಸಿಪಿಎಂ ಆಗಿರಲಿ ಇನ್ನೊಂದು ಪಾರ್ಟಿಯೇ ಆಗಿರಲಿ. ಬಿಜೆಪಿ ಇಂದು ಬಹಳ ಶ್ರೀಮಂತ ಪಾರ್ಟಿ. ತಾನು ಗೆಲ್ಲುವುದಕ್ಕೆ ಯಾವುದಕ್ಕೂ ಸಿದ್ಧವಾಗಿ ನಿಂತ ಪಾರ್ಟಿ. ಇಂಡಿಯ ಕೂಟದಲ್ಲಿರುವವರಿಗೆ ಅಧಿಕಾರದ ಹೊರತಾಗಿ ತತ್ವ, ಜನರು ಇತ್ಯಾದಿ ಮುಖ್ಯವಾಗಿದೆಯೇ?

ವಿಷಯ ಬದಲಿಸೋಣ: ಸ್ಟ್ಯಾನ್ ಸ್ವಾಮಿಯ ನಂತರ ಈಗ ಪ್ರೊಫೆಸರ್ ಜಿ.ಎನ್. ಸಾಯಿ ಬಾಬ ಕೂಡ ನಿಧನರಾಗಿದ್ದಾರೆ. ಫ್ಯಾಶಿಸಂ ಅನ್ನು ಬಲವಾಗಿ ವಿರೋಧಿಸಿ ಜನರ ಪರ ಹೋರಾಟ ನಡೆಸಿದ ವ್ಯಕ್ತಿಗಳಲ್ಲಿ ಸ್ಟ್ಯಾನ್ ಸ್ವಾಮಿಯಂತೆ ಸಾಯಿ ಬಾಬ ಕೂಡ ಒಬ್ಬರು. ಸ್ಟ್ಯಾನ್ ಸ್ವಾಮಿ ಜೈಲೊಳಗೆ ಕೊನೆಯುಸಿರೆಳೆದರು. ಸಾಯಿಬಾಬ ಜಾಮೀನು ಪಡೆದು ಹೊರಬಂದು ನಿಧನರಾದರು ಅಷ್ಟೇ. ನಕ್ಸಲ್ ವಿರುದ್ಧ ಹೋರಾಟ ಎಂಬ ಹೆಸರಿನಲ್ಲಿ ಆದಿವಾಸಿ ಜನರನ್ನು ಮನೆಯಿಂದ ಬಡಿದೋಡಿಸಿದರ ವಿರುದ್ಧ ಸಾಯಿಬಾಬ ಮಾನವ ಹಕ್ಕುಗಳಿಗಾಗಿ ಹೋರಾಟದ ಧ್ವನಿ ಎತ್ತಿದ್ದು ಸರಕಾರದ ಕೆಂಗಣ್ಣಿಗೆ ಪಾತ್ರವಾಯಿತು. ಇಲ್ಲಿ ಬಿಜೆಪಿಗಿಂತ ದೊಡ್ಡ ಕುತಂತ್ರಿ ಅಂದಿನ ಯುಪಿಎ ಸರಕಾರ ಎಂದು ಹೇಳಬಹುದಾಗಿದೆ. ಯಾಕೆಂದರೆ ಒಕ್ಕಲೆಬ್ಬಿಸಿ ಪ್ರಗತಿಗೆ ಮುಂದಾಗಿದ್ದು ಮನ್‌ಮೋಹನ್ ಸಿಂಗ್ ಸರಕಾರ. ಗ್ರೀನ್ ಹಂಟ್ ಹೆಸರಿನಲ್ಲಿ ಆದಿವಾಸಿಗಳನ್ನು ಬಡಿದಟ್ಟಲಾಯಿತು. ಗ್ರೀನ್ ಹಂಟ್ ವಿರುದ್ಧ ನಿಂತವರು ನಕ್ಸಲರೆಂದು ಹಂಟ್‌ನ ಗುಂಡಿಗೆ ಬಲಿಯಾದರು.

ಗಾಲಿ ಕುರ್ಚಿಯಲ್ಲಿ ಅಡ್ಡಾಡುತ್ತಿದ್ದ ಸಾಯಿಬಾರನ್ನು ಹತ್ತು ವರ್ಷಗಳ ವರೆಗೆ ಜೈಲಲ್ಲಿಟ್ಟ ನಂತರ ಕೋರ್ಟು ಜಾಮೀನು ನೀಡಿತು. ನೋಡಿ, ಸಾಯಿ ಬಾಬರ ಬಂಧನ ನಡೆದಿದ್ದ ಸಂದರ್ಭದಲ್ಲಿ ವಿರೋಧಿಸಿ ದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಡಾ. ಹಾನಿ ಬಾಬು, ರೋನ ವಿಲ್ಸನ್ ಮತ್ತು ಉಮರ್ ಖಾಲಿದ್ ಈಗಲೂ ಜೈಲಿನಲ್ಲಿದ್ದಾರೆ ಎಂಬುದು ಇಲ್ಲಿ ಸಾಂದರ್ಭಿಕವಾಗಿ ಹೇಳಬೇಕಾಗಿದೆ. ಅಂದರೆ ಸಾಯಿಬಾಬ ಜೈಲುಪಾಲಾಗುವಂತಹದ್ದರಲ್ಲಿ ಬಿಜೆಪಿಯಷ್ಟೇ ಕಾಂಗ್ರೆಸ್ಸಿನ ಪಾಲಿದೆ. ಬಿಜೆಪಿಗೆ ಅದರದ್ದೇ ಆದ ಹಿಂದುತ್ವ ಕಾರಣವಾಗಿದ್ದರೆ ಕಾಂಗ್ರೆಸ್ಸಿಗರಿಗೆ ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕೆಲೆಬ್ಬಿಸಿ ಓಡಿಸಿ ರಿಯಲ್ ಎಸ್ಟೇಟ್, ಗಣಿಗಾರಿಕೆಗೆ ಅವರ ಜಮೀನು ಕೊಟ್ಟು ಹಣ ಮಾಡುವುದು ಕಾರಣವಾಗಿತ್ತು. ಹೀಗಾಗಿ ಆದಿವಾಸಿಗಳು ಬಿಜೆಪಿಯನ್ನೆ ನೆಚ್ಚಿಕೊಳ್ಳುವುದು ಅನಿವಾರ್ಯವಾಯಿತು.

ಇನ್ನೊಂದು ಘಟನೆಯನ್ನು ಎತ್ತಿಕೊಳ್ಳೋಣ- ಬಿಹಾರದಲ್ಲಿ ನಿತೀಶ್ ಸರಕಾರದಡಿಯಲ್ಲಿ ಇದು ಎಷ್ಟನೇ ಬಾರಿ ಕಳ್ಳಭಟ್ಟಿ ದುರಂತ ನಡೆಯುತ್ತಿದೆ. ಹೇಳುವುದಕ್ಕೆ ಬಿಹಾರ ಪಾನ ನಿರೋಧ ರಾಜ್ಯವಾಗಿದೆ. ಈ ಸಲದ ಮದ್ಯ ದುರಂತದಲ್ಲಿ ಈ ವರೆಗೆ 42 ಮಂದಿ ಮೃತಪಟ್ಟಿದ್ದಾರೆ. 2016ರಲ್ಲಿ ನಿತೀಶ್ ಸರಕಾರ ಬಿಹಾರದಲ್ಲಿ ಮದ್ಯ ನಿರೋಧ ಜಾರಿಗೆ ತಂದಿತ್ತು. ಬಿಹಾರದಲ್ಲಿ ಗಾಂಧಿ ನಾಡು ಮಾಡಲು ಹೋಗಿ ಜನ ಕಂಟಕವಾಗಿ ಪರಿವರ್ತಿಸಿದ ಕುಖ್ಯಾತಿ ಈ ಅಮಾಯಕರ ಸಾವುಗಳೊಂದಿಗೆ ನಿತೀಶ್ ಕುಮಾರ್ ಮೈಗಂಟಿಸಬೇಕಾಗಿದೆ. ಜೆಪಿ ಹೋರಾಟದಿಂದ ಮೇಲೆ ಬಂದ ಈ ವ್ಯಕ್ತಿಯ ಸೋಗಲಾಡಿತನ ಮಹಿಳೆಯರ ವೋಟು ಹಿಡಿಯವ ಕುತಂತ್ರ ಎಂದು ಇಂದು ಮದ್ಯ ನಿರೋಧ ಬಣ್ಣಿಸಲ್ಪಡುತ್ತಿದೆ.

ವಿಷಯಕ್ಕೆ ಬರೋಣ:
ಕಾಂಗ್ರೆಸ್ ಮುಂದೆ ನಿಂತು ಮಾಡಿದ ಎಲ್ಲ ಘಟ್ ಬಂದನ್‌ಗಳನ್ನು ತಲೆ ಎತ್ತಲು ಬಿಜೆಪಿ ಬಿಡುವುದಿಲ್ಲ ಎಂಬ ವಿಚಾರವನ್ನು ಈ ಹಿಂದಿನ ಒಂದು ಲೇಖನದಲ್ಲಿ ನಾವು ವಿವರಿಸಿದ್ದೇವೆ. ಅಂದರೆ ಅದು ಅಂತಹ ಬಲಿಷ್ಠ ತತ್ವ ಮತ್ತು ಕ್ಯಾಡರ್ ವ್ಯವಸ್ಥೆಯನ್ನು ಹೊಂದಿದೆ. ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಅಲ್ಲಿನ ಚುನಾವಣೆಯ ಪ್ರಚಾರ ಮುಗಿದ ಕೂಡಲೇ ಸಂಘದ ಸಾವಿರಾರು ಕಾರ್ಯಕರ್ತರು ಫೀಲ್ಡಿಗಿಳಿದು ಫಲಿತಾಂಶ ಬದಲಾವಣೆಗೆ ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ಹಣ ವಸ್ತುಗಳ ಲಂಚ ಮುಂದಿಡುತ್ತಾರೆ ಮತ್ತು ಈಗ ಆರೋಪಿಸಲಾಗುತ್ತಿರುವಂತೆ ಇವಿಎಂ ಕುತಂತ್ರವೂ ನಡೆಯುತ್ತದೆ. ಬಲಿಷ್ಠ ಜಾತ್ಯತೀತ ಪ್ರತಿಪಾದಕ ರಾಹುಲ್ ಗಾಂಧಿ ಇದ್ದೂ ಈಗಲೂ ಕಾಂಗ್ರೆಸಿಗರು ದುರ್ಬಲರು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ರಾಹುಲ್ ಗಾಂಧಿ ದೇಶವಿಡೀ ಸಾವಿರಾರು ಮೈಲು ಪಾದಯಾತ್ರೆ ಮಾಡಿದ ಮನುಷ್ಯ ನಿಜ. ಆದರೆ ಜಾತ್ಯತೀತ ತತ್ವವನ್ನು ಗೆಲ್ಲಿಸಲು ಅವರಿಗೂ ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಕಾಂಗ್ರೆಸ್ಸಿನಲ್ಲಿ ರಾಹುಲ್‌ರ ವಿಚಾರವನ್ನು ಒಪ್ಪದವರೇ ಹೆಚ್ಚಿನವರು. ಹಾಗೆ ಹೇಳುವುದಾದರೆ ರಾಹುಲ್ ಸ್ವತಃ ಅಮೇಠಿ ರಾಯ್‌ಬರೇಲಿ ವಯನಾಡನನ್ನು ಗೆಲ್ಲಿಸಿಕೊಡಬಹುದು ಅದರೆ ಇಂದಿರಾಗಾಂಧಿಯವರಂತೆ ಇಡೀ ಭಾರತವನ್ನು ಗೆಲ್ಲಿಸುವ ಶಕ್ತಿ ಹೊಂದಿಲ್ಲ. ಕಾಂಗ್ರೆಸ್ಸಿನ ಹಳೆಯ ಇತಿಹಾಸ ತೆಗೆದು ನೋಡಿ.

ಮಂದಗಾಮಿಗಳು ಮತ್ತು ತೀವ್ರ ಗಾಮಿಗಳು ಅದರಲ್ಲಿದ್ದರು. ಪಟೇಲ್. ಲಾಲ ಲಜ ಪತ್‌ರಾಯ್, ತಿಲಕ್ ಮುಂತಾದ ತೀವ್ರಗಾಮಿಗಳ ರಾಜಕೀಯ ಹಿಂದುತ್ವದ ಆಧಾರಿತವಾಗಿತ್ತು. ಇಂದಿನ ಈ ಪೀಳಿಗೆಯವರಲ್ಲಿ ಮಧ್ಯಪ್ರದೇಶದ ಕಮಲ್‌ನಾಥ್, ಹಿಮಾಚಲದಲ್ಲಿ ವಿಕ್ರಮಾದಿತ್ಯ ಸಿಂಗ್, ಹರ್ಯಾಣದಲ್ಲಿ ಕುಮಾರಿ ಶೆಲ್ಜ ಸಹಿತ ಹಲವರು ದೇಶಾದ್ಯಂತ ಇದ್ದಾರೆ. ಇಂತಹ ಮನೋಭಾವದವರು ಹರ್ಯಾಣದ ರೈತ ಹೋರಾಟಗಳಲ್ಲಿಯೂ ಇದ್ದಾರೆ. ಮೇಲಿಂದ ಮೇಲೆ ಅವರು ಉಗ್ರ ಚಳವಳಿ ನಡೆಸುತ್ತಾರೆ. ಬಿಜೆಪಿಗೆ ಅಥವಾ ಆರೆಸ್ಸೆಸ್ ವಿಚಾರಕ್ಕೆ ಹೊಂದಿಕೆಯಾಗುತ್ತಾರೆ. ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಜಾತ್ಯತೀತತೆಯನ್ನು ರಾಷ್ಟೀಯತೆಯಾಗಿ ಕಾಂಗ್ರೆಸ್ ಇಟ್ಟುಕೊಂಡದ್ದು ಒಂದು ದೇಶ ಸ್ವತಂತ್ರವಾಗಬೇಕೆಂಬ ಕಾರಣದಿಂದಾಗಿತ್ತು. ಹಾಗಿದ್ದರೆ ಇನ್ನೊಂದು ಕಾರಣ ಏನು? ಮುಸ್ಲಿಂ ಲೀಗ್ ರಹಿತ ಭಾರತದಲ್ಲಿ ಮುಸ್ಲಿಮರ ವೋಟನ್ನು ಗಳಿಸಲು ಅನುಕೂಲವಾಗಬೇಕು ಎಂಬುದಾಗಿತ್ತು. ಮೂರನೆಯ ಕಾರಣ ವಿಶ್ವದಲ್ಲಿಯೇ ನಾವು ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಮತ್ತು ಜಾತ್ಯತೀತ ತತ್ವ ಇಟ್ಟು ಕೊಂಡಿದ್ದೇವೆ ಎಂದು ತೋರಿಸಿಕೊಡಬೇಕೆಂಬುದಕ್ಕಾಗಿತ್ತು.

ಹೌದು, ಇವೆಲ್ಲವೂ ಮಿತವಾದಿಗಳಾದ ನೆಹರೂ ವಿಭಾಗದ ತಂತ್ರವಾಗಿತ್ತು. ದೇಶದ ವಿಭಜನೆಯ ಕುರಿತು ಹೇಳುವುದಾದರೆ ಇದೇ ನೆಹರೂ ಪಟೇಲ್ ಇಬ್ಬರೂ ಲಾರ್ಡ್ ಮೌಂಟ್ ಬ್ಯಾಟನ್
ಜೊತೆ ಶಾಮೀಲಾಗಿ ಜಿನ್ನಾರನ್ನು ದೇಶ ವಿಭಜನೆಯಾಗುವಲ್ಲಿಗೆ ತಂದಿಟ್ಟರು. ಪಾಕಿಸ್ತಾನ ಭಾರತದಲ್ಲಿಯೇ ಇಂದೂ ಇದ್ದಿದ್ದರೆ ಮುಸ್ಲಿಮರು ಪ್ರಬಲರಾಗುತ್ತಾರೆ ಎಂಬ ಹೆದರಿಕೆ ಉದಾರವಾದಿಗಳ ನಾಯಕ ನೆಹರೂಗೂ ಇತ್ತು. ತೀವ್ರಗಾಮಿಗಳ ನಾಯಕ ಪಟೇಲ್ ಮುಂತಾದವರಿಗೂ ಇತ್ತು.
ಯೋಚಿಸಿ ನೋಡಿ, ಕಾಂಗ್ರೆಸ್ಸಿಗರ ವರ್ತನೆಯಿಂದ ಅವರಲ್ಲಿ ಯಾವುದಾದರೊಂದು ತತ್ವ ಇದೆಯೆಂದು ನಿಮಗನಿಸುತ್ತದೆಯಾ? ಪ್ರಾಮಾಣಿಕವಾಗಿ ಹೇಳಿದರೆ ಅದು ಗಾಂಧಿ ಕಟುಂಬದಲ್ಲಿಯೂ ಇಲ್ಲ. ಅದು ಕೂಡ ಎರಡು ಕವಲುಗಳಲ್ಲಿ ಸಾಗುತ್ತಿದೆ. ದಿವಂಗತ ಸಂಜಯ್ ಗಾಂಧಿ ಪ್ರತಿಪಾದಿಸುತ್ತಿದ್ದುದನ್ನು ಇಂದು ಅವರ ಪತ್ನಿ ಮೆನಕಾ ಗಾಂಧಿ, ಪುತ್ರ ಮುಂದುವರಿಸುತ್ತಿದ್ದಾರೆ. ಅಂದರೆ ಇವರದ್ದು ಕಾಂಗ್ರೆಸ್ಸಿನ ತೀವ್ರಗಾಮಿ ಪಂಥ. ನೆಹರೂರ ದಾರಿಯಲ್ಲಿ ರಾಹುಲ್ ಗಾಂಧಿ ಸಾಗುತ್ತಿದ್ದಾರೆ. ಆದ್ದರಿಂದ ಅವರನ್ನು ಮೋದಿ ಕಟುವಾಗಿ ಟೀಕಿಸಿ ಪ್ರತಿಸ್ಪರ್ಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ.

ನೋಡಿ ಈಗ ಬಿಜೆಪಿ ಮುಸ್ಲಿಮರನ್ನು ತೋರಿಸಿ ಜನರನ್ನು ಧ್ರುವೀಕರಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಹಿಂದುತ್ವದ ವಿರುದ್ಧ ಇರುವವರನ್ನೂ ಸೆಳೆಯುವಲ್ಲಿಯೂ ಅದು ನಿಸ್ಸೀಮತೆಯನ್ನು ಪ್ರದರ್ಶಿಸುತ್ತಿದೆ. ಬಿಜೆಪಿ ಹೈ ಕಮಾಂಡ್ ಕ್ಷಣ ಮಾತ್ರದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್, ಹರ್ಯಾಣದಲ್ಲಿ ಕಟ್ಟರ್‌ರನ್ನು ಏನು ಮಾಡಿತು? ಮಹಾರಾಷ್ಟ್ರದಲ್ಲಿ ಒಂದು ಕಾಲದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್‌ರನ್ನು ಉಪಮುಖ್ಯಮಂತ್ರಿ ಮಾಡಿತು. ರಾಜಸ್ತಾನದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯನ್ನು ಸುಮ್ಮನಾಗಿಸಿತು.
ಆದರೆ ಇಂತಹ ಶಕ್ತಿ ಕಾಂಗ್ರೆಸ್ ಹೈಕಮಾಂಡಿಗಿಲ್ಲ. ಅಧಿಕಾರಕ್ಕಾಗಿ ಗುಟುರು ಹಾಕುವ ಚಿಲ್ಲರೆ ನಾಯಕರ ವಿರುದ್ಧ ಕ್ರಮ ಜರಗಿಸುವ ತಾಕತ್ತು ಅದಕ್ಕಿಲ್ಲ. ಎಲ್ಲಿಯಾದರೂ ಮುಸ್ಲಿಂ ನಾಯಕರು ಭಿನ್ನಮತ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಬಹುದು. ಯಾಕೆಂದರೆ ಅವರು ಬಿಜೆಪಿಗೆ ಬೇಡ.

ಆದುದರಿಂದ ಅವರನ್ನು ಕಾಂಗ್ರೆಸ್ ಹೊರತು ಪಡಿಸಿದಂತೆ ಕೇಳುವವರೇ ಇಲ್ಲ. ಕಾಂಗ್ರೆಸ್ ಸದ್ಯ ಗೆಲ್ಲುವುದಿಲ್ಲ, ಆರೆಸ್ಸೆಸ್ ಜಾಲಕ್ಕೆ ಬಿದ್ದು ಒದ್ದಾಡುತ್ತಿದೆ. ದಿಲ್ಲಿಯಿಂದ ಕಾಂಗ್ರೆಸ್ಸನ್ನು ಬಡಿದಟ್ಟಲು ಕೇಜ್ರಿವಾಲರ ಉದಯವಾಯಿತು. ರಾಜ್ಯದ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ಎಎಪಿಗೆ ಆರೆಸ್ಸೆಸ್ ನೀಡಿತು. ಕೇಂದ್ರದ ಚುನಾವಣೆ ಬಂದಾಗ ಬಿಜೆಪಿಗೆ ದಿಲ್ಲಿಯ ಏಳು ಸೀಟುಗಳನ್ನು ಗೆಲ್ಲಿಸಿ ಕೊಟ್ಟಿತು. ಇವೆಲ್ಲ ಗೊತ್ತಿದ್ದು ಒಂದು ಪ್ರಬಲ ತತ್ವವನ್ನು ಆವಿಷ್ಕರಿಸದೆ ಆ ತತ್ವದಡಿ ಕ್ಯಾಡರ್‌ಗಳನ್ನು ಕಟ್ಟದೆ, ಅಧಿಕಾರಕ್ಕೆ ಪೈಪೋಟಿ ನಡೆಸುತ್ತಿರುವ ನಾಯಕರನ್ನು ಇಟ್ಟುಕೊಂಡು ಕಾಂಗ್ರೆಸ್ ಈ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಯಾರಾದರೂ ಪ್ರತಿಪಾದಿಸಿದರೆ ನಂಬುವುದು ಹೇಗೆ? ಕಾಂಗ್ರೆಸ್ಸಿಗರೇ ನೀವು ಗೆಲ್ಲಬೇಕಾದರೆ ನಿಮ್ಮನ್ನು ಅಮೂಲಾಗ್ರವಾಗಿ ನೀವೆ ಬದಲಿಸಿಕೊಳ್ಳಬೇಕಾಗಿದೆ. ಅದು ಈ ರಾಜ್ಯದಿಂದ ಆರಂಭವಾಗಲಿ.