ವರ್ಷದಲ್ಲಿ 12 ‘ಮುಟ್ಟು’ ರಜೆ: ಮಹಿಳಾಪರ ನಿರ್ಧಾರ ತೆಗೆದುಕೊಂಡ ಒಡಿಸ್ಸಾ ಸರಕಾರ

0
58

ಸನ್ಮಾರ್ಗ ವಾರ್ತೆ

ಸರ್ಕಾರಿ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯನ್ನು ನೀಡಲು ಒಡಿಸ್ಸಾ ಸರಕಾರ ತೀರ್ಮಾನಿಸುವ ಮೂಲಕ ಮಹಿಳಾಪರ ನಿಲುವನ್ನ ಕೈಗೊಂಡಿದೆ. ಇದರಿಂದಾಗಿ ವಾರ್ಷಿಕ 15 ರಜೆಗಳಲ್ಲದೆ ಮಹಿಳೆಯರಿಗೆ ಹೆಚ್ಚುವರಿ 12 ರಜೆಗಳು ಸಿಗಲಿವೆ.

ಇದು ವೇತನ ಸಹಿತ ರಜೆಯಾಗಿರಲಿದೆ. ಮಹಿಳೆಯರು ಎದುರಿಸುವ ವಿವಿಧ ಸಮಸ್ಯೆಗಳು ಮತ್ತು ಕೌಟುಂಬಿಕವಾಗಿರುವ ಜವಾಬ್ದಾರಿಗಳನ್ನು ಪರಿಗಣಿಸಿ ಈ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಮೊದಲು ಬಿಜೆಡಿ ಸರ್ಕಾರವು ಮಹಿಳೆಯರಿಗೆ 10 ಹೆಚ್ಚುವರಿ ರಜೆಯನ್ನು ಘೋಷಿಸಿತ್ತು. ಇದೀಗ ಬಿಜೆಪಿ ಸರ್ಕಾರವು ಅದಕ್ಕೆ ಹೆಚ್ಚುವರಿ ಎರಡು ರಜೆಯನ್ನು ಸೇರಿಸಿದೆ.

ಮುಟ್ಟು ಮಹಿಳೆಯರ ಪಾಲಿಗೆ ಸವಾಲಿನದ್ದು ಮಾತ್ರ ಅಲ್ಲ ಮಾನಸಿಕವಾಗಿಯೂ ದೈಹಿಕವಾಗಿಯೂ ಹಲವು ಏರುಪೇರುಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕಚೇರಿ ಕೆಲಸದೊಂದಿಗೆ ಮನೆ ಕೆಲಸವೂ ಮಾಡುವುದು ದುಸ್ತರವಾಗಬಲ್ಲದು. ಹೆಚ್ಚಿನ ಮಹಿಳೆಯರು ಕಚೇರಿ ಕೆಲಸದ ಜೊತೆಗೆ ಮನೆ ಕೆಲಸವನ್ನೂ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಈ ರಜಾ ಘೋಷಣೆಯು ಮಹಿಳೆಯರ ಪಾಲಿಗೆ ತುಂಬಾ ಉಪಕಾರಿಯಾಗಲಿದೆ ಎಂದು ಹೇಳಲಾಗಿದೆ.