ನೈತಿಕ ಅಧೋಗತಿಗೆ ಸಾಗುತ್ತಿರುವ ಸಮಾಜ

0
74

ಸನ್ಮಾರ್ಗ ವಾರ್ತೆ

✍️ ಆಯಿಷಾ, ಶಿವಮೊಗ್ಗ

ಅರ್ಧಂಬರ್ಧ ಬಟ್ಟೆ ಹಾಕಿರಲಿಲ್ಲ. ಅರ್ಧ ರಾತ್ರಿಯಲ್ಲಿ ಬಾಯ್‌ಫ್ರೆಂಡ್ ಜೊತೆ ಪಿಕ್ಚರ್ ನೋಡೋಕೋ, ಟೈಮ್ ಪಾಸ್ ಮಾಡೋಕೋ ಹೊರಗೆ ಬಂದಿರಲಿಲ್ಲ. ಸತತವಾಗಿ 36 ಗಂಟೆಗಳ ಕಾಲ ನಿದ್ರೆ ಬಿಟ್ಟು ಕೆಲಸ ಮಾಡಿ ಸ್ವಲ್ಪ ಹೊತ್ತಾದರೂ ಮಲಗೋಣ ಎಂದು ಆಸ್ಪತ್ರೆಯ ಸೆಮಿನಾರ್ ರೂಮ್‌ನಲ್ಲಿ ಮಲಗಿದ್ದಾಗ ಅಲ್ಲಿಯೂ ಸಹ ಬೀದಿ ನಾಯಿಗಳು ಕಚ್ಚಿದ್ದವು.
ಅಂದರೆ ಏನೆನ್ನಬೇಕೋ ಗೊತ್ತಾಗ್ತಾ ಇಲ್ಲ.

ಸ್ನೇಹಿತರೇ ನಾನು ಏನು ಹೇಳಬೇಕು, ಯಾರ ಬಗ್ಗೆ ಹೇಳುತ್ತಿದ್ದೇನೆ ಬರೆಯುತ್ತಿದ್ದೇನೆ ಗೊತ್ತಾಗಿರಬಹುದು. ನೀವು ಸರಿಯಾಗಿ ಊಹಿಸಿದ್ದೀರಾ. ನಾನು ಹೇಳುತ್ತಿರುವುದು ಕಲ್ಕತ್ತಾದ ಆರ್.ಜಿ. ಕಾರ್ ಕಾಲೇಜಿನಲ್ಲಿ ಡಾ. ಮೊಮಿತಾ ಬಗ್ಗೆ.

ದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಆಗಿದ್ದಾಗ ಅವಳ ಬಗ್ಗೆ ಬಟ್ಟೆ ಸರಿಯಾಗಿರಲಿಲ್ಲ, ಅವಳ ಬಟ್ಟೆಗಳು ಪುರುಷರನ್ನು ಉತ್ತೇಜಿಸುವಂತಿದ್ದವು, ಜೊತೆಯಲ್ಲಿ ಬಾಯ್ ಫ್ರೆಂಡ್ ಬೇರೆ, ಅದರ ಜೊತೆಗೆ ಅವಳು ಅರ್ಧ ರಾತ್ರಿಯಲ್ಲಿ ಹೊರಗಡೆ ಇದ್ದ ಕಾರಣ ಅವಳ ಜೊತೆ ಈ ರೀತಿ ಗ್ಯಾಂಗ್ ರೇಪ್ ಆಗಿದೆ ಎಂದು ಕಮೆಂಟ್ ಮಾಡಿದ್ರು. ಹಾಥರಸ್‌ನಲ್ಲಿ ಮನಿಷಾ ಮೇಲೆ ಅತ್ಯಾಚಾರ ಕೊಲೆ ನಡೆಯಿತು. ಸ್ವತಃ ಅವಳೇ ಆರೋಪಿ ಬಗ್ಗೆ ಹೇಳಿದರೂ ಪೂರ್ಣ ನ್ಯಾಯ ಸಿಗಲಿಲ್ಲ. 9 ವರ್ಷದ ಆಸೀಫ ಮೇಲೆ ದೇವಾಲಯದ ಅರ್ಚಕರೇ ಅತ್ಯಾಚಾರ ಕೊಲೆ ಮಾಡಿದರು. ಪ್ರಿಯಾಂಕ ರೆಡ್ಡಿ ಎಂಬ ಪಶು ವೈದ್ಯೆಯನ್ನು ಅತ್ಯಾಚಾರ ಮಾಡಿ ಪೆಟ್ರೋಲ್ ಹಾಕಿ ಸುಟ್ಟರು.

ಇತ್ತೀಚೆಗೆ ಉತ್ತರಾಖಂಡದಲ್ಲಿ ತಸ್ಲೀಮ ಜಹಾನ್ ಎಂಬ ನರ್ಸ್ ಆಸ್ಪತ್ರೆಯಿಂದ ಬರುವಾಗ ಒಬ್ಬ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ. ಅದಲ್ಲದೆ ತಂದೆಯಿಂದಲೇ ಮಗಳು ಗರ್ಭಿಣಿ ಯಾದದು, 14 ವರ್ಷದ ಅಣ್ಣ ಪೋರ್ನ್ ಫಿಲ್ಮ್ ನೋಡಿ 9 ವರ್ಷದ ತನ್ನ ತಂಗಿಯನ್ನು ಅತ್ಯಾಚಾರ ಮಾಡಿದ್ದು, ಅದನ್ನು ತಾಯಿಗೆ ಹೇಳುತ್ತಿದ್ದಾಗ ತಾಯಿಯ ಎದುರೇ ತನ್ನ ತಂಗಿಯನ್ನು ಕತ್ತು ಹಿಸುಕಿ ಕೊಂದದ್ದು. 4 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ, ಚರಂಡಿಗೆಸೆದು ಕೊಲೆ. 6 ವರ್ಷದ ಹೆಣ್ಣು ಮಗುವಿನ ಮೇಲೆ ಸ್ವತಃ ಸಂಬಂಧಿಯಿಂದಲೇ ಅತ್ಯಾಚಾರ, ಕೈಕಾಲು ಮುರಿದು ಕೊಂದು ಪೊದೆಗೆಸೆದು ಹೋದ ಅತ್ಯಾಚಾರಿ, ಮಗನೇ ತಾಯಿಯನ್ನು ಅತ್ಯಾಚಾರ ಮಾಡಿರುವಂತಹ ಘಟನೆಗಳು. ಇದಕ್ಕೆ ಪೂರಕವೆನಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಯಂಗ್ ಆಗಿ ಕಾಣುವ ಹುಡುಗ ಹುಡುಗಿಯ ರೀಲ್ಸ್ ಗಳು ಬರ‍್ತಾ ಇದ್ದವು. ಯಾರಪ್ಪಾ ಇವರು ಅಂದ್ರೆ ತಾಯಿ ಮಗ ಅಂತೆ. ಆದರೆ ಅವರು ಮಾಡುತ್ತಿದ್ದ ವೀಡಿಯೋಗಳು ಯಾರೋ ಗಂಡ ಹೆಂಡತಿನೋ ಅಥವಾ ಪ್ರೇಮಿಗಳೋ ಇರಬಹುದು ಅನ್ನೋ ರೀತಿಯಲ್ಲಿ ಅಸಭ್ಯವಾಗಿ, ಅಶ್ಲೀಲವಾಗಿ ರೀಲ್ಸ್ ಗಳನ್ನು ಹಾಕುತ್ತಿದ್ದರು.
ನಾನು ಹೇಳುತ್ತಿರುವುದೇನೆಂದರೆ ಮಕ್ಕಳಿಗೆ ನೈತಿಕತೆ ಸಂಸ್ಕಾರ, ಸಂಬಂಧಗಳ ಅರ್ಥವನ್ನು ತಿಳಿಸಬೇಕಾದವಳೇ ದಾರಿ ತಪ್ಪಿದರೆ ಮಕ್ಕಳು ಏನಾಗಬಹುದು? ಸಮಾಜ ಏನಾಗಬಹುದೆಂದು ಯೋಚಿಸಬೇಕು.

ಈ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಯ ಬಗ್ಗೆ ಎಷ್ಟು ಅಪರಾಧಗಳು ಹೆಚ್ಚಾಗುತ್ತಿವೆಯೆಂದರೆ ಬಹುಶಃ ಅಂದಾಜು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣಗಳೇನು? ಯಾಕೆ ಈ ನಮ್ಮ ಸಮಾಜ ಇಷ್ಟು ನೈತಿಕ ಸಾಮಾಜಿಕ, ಧಾರ್ಮಿಕ, ಮಾನವೀಯ ಮೌಲ್ಯಗಳ ಅಧೋಗತಿಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಒಂದೇ ಕಾರಣ- ಮೊಬೈಲ್ ಎಂಬ ಶೈತಾನ್.

ಇನ್ನೊಂದು ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳು. ಆಲಸ್ಯ ಮತ್ತು ಬೇಜವಾಬ್ದಾರಿಯನ್ನು ತೋರಿಸುತ್ತಿರುವ ಕುಟುಂಬ ವ್ಯವಸ್ಥೆ, ನಿರ್ಲಕ್ಷಿಸುತ್ತಿರುವ ಸರಕಾರ, ಕಾನೂನು, ಸಮಾಜ ಇವೆಲ್ಲವೂ ಸಹ ನಮ್ಮ ಯುವ ಪೀಳಿಗೆಯನ್ನು ಬೀದಿ ನಾಯಿಗಳಂತೆ ಮಾಡಿದೆ ಎಂದರೆ ತಪ್ಪಿಲ್ಲ. ಹಿಂದೆ ನಮ್ಮ ಸಾಮಾಜಿಕ ಪಿಡುಗುಗಳು ಯಾವುವು ಎಂದರೆ ನಾವು ಹೇಳ್ತಾ ಇದ್ದೆವು ಶರಾಬು, ಜೂಜು, ವೇಶ್ಯಾವಾಟಿಕೆ, ವರದಕ್ಷಿಣೆ, ಸತಿ ಪದ್ಧತಿ ಅಂತ.

ಆದರೆ ಇಂದಿನ ಸಮಾಜದ ಜೊತೆ ಇಡೀ ಜಗತ್ತು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದರೆ ಮೊಬೈಲ್ ಚಟ. ಇಂದು ಚಿಕ್ಕ ಮಗುವಿನಿಂದ ಹಿಡಿದು ನಡೆಯಲು ಶಕ್ತಿಯಿಲ್ಲದ ಕಿವಿ ಕೇಳಿಸದವರ ವರೆಗೆ ಮೊಬೈಲ್ ಚಟ ಭಾರೀ ಹೆಚ್ಚಾಗಿದೆ. ರೀಲ್ಸ್ ಹುಚ್ಚು, ಟಿಕ್‌ಟಾಕ್, ಸಭ್ಯರನ್ನೂ ಬೀದಿಗೆ ತಂದು ಕೂರಿಸಿದೆ. ಅದಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ. ನೈತಿಕವಾಗಿ ಎಷ್ಟು ಬೇಕಾದರೂ ಕೆಳಗೆ ಬೀಳೋಕೆ ರೆಡಿಯಾಗಿದ್ದಾರೆ. ಈ ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ, ಹಿಂಸೆ ಈ ಎಲ್ಲಾ ಅಪರಾಧಗಳ ಹಿಂದಿರುವ ವ್ಯಕ್ತಿಗಳು ಅತೀ ಹೆಚ್ಚು ಬ್ಲೂ ಫೀಲ್ಮ್ಸ್ ನೋಡ್ತಾರೆ. ಮತ್ತೆ ಡ್ರಗ್ ವ್ಯಸನಿಗಳಾಗಿರುತ್ತಾರೆ. ಎಲ್ಲಿವರೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಚಲನಚಿತ್ರಗಳು ಬರ‍್ತಾ ಇರ‍್ತಾವೋ ಅಲ್ಲಿಯವರೆಗೆ ಇಂತಹ ಅಪರಾಧಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಬಹಳ ಸುಲಭವಾಗಿ ಸಿಗುತ್ತಿರುವ ಇಂತಹ ವೀಡಿಯೋಗಳು ನಮ್ಮ ಯುವ ಪೀಳಿಗೆ ಯನ್ನು ನೈತಿಕವಾಗಿ ಹಾಳು ಮಾಡುತ್ತಿವೆ. ಸರಕಾರ ಇದಕ್ಕೆ ಕಡಿವಾಣ ಹಾಕಬೇಕು.

ಇನ್ನೊಂದು ಡ್ರಗ್ ಮಾಫಿಯ. ಮೊದಲೇ ಉದ್ಯೋಗವಿಲ್ಲ. ಯುವ ಜನತೆ ಮೊಬೈಲ್ ಮತ್ತು ಡ್ರಗ್ ವ್ಯಸನಿಗಳಾಗಿ ಸಮಾಜಕ್ಕೆ ಹೊರೆಯಾಗಿರುವುದಲ್ಲದೆ ಮಾರಕವಾಗುತ್ತಿದ್ದಾರೆ, ಅಪರಾಧಿಗಳಾಗುತ್ತಿದ್ದಾರೆ.

ಎಲ್ಲಿ ಮಹಿಳೆ ಅತೀ ಹೆಚ್ಚು ಸುರಕ್ಷಿತಳಾಗಿರಬೇಕಿತ್ತೋ ಅಂದರೆ ಮನೆ, ಶಾಲೆ, ಕಾಲೇಜು, ಆಸ್ಪತ್ರೆ, ಪೊಲೀಸ್ ಸ್ಟೇಷನ್ ಅಲ್ಲೇ ಅವಳು ಸುರಕ್ಷಿತಳಾಗಿಲ್ಲ. ಯಾರು ತನ್ನವರೆಂದು ಕೊಂಡಿದ್ದಾಳೋ ಅವರಿಂದಲೇ ಅವಳು ಅತೀ ಹೆಚ್ಚು ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಗೀಡಾಗುತ್ತಿದ್ದಾಳೆ. ಮನೆ, ಶಾಲೆ, ಆಸ್ಪತ್ರೆ ಇವು ಧಾರ್ಮಿಕ, ಮಾನವೀಯ, ನೈತಿಕ ಮೌಲ್ಯಗಳನ್ನು ಹೇಳಿಕೊಡುವಂತಹ ಸ್ಥಳಗಳು. ಅಲ್ಲಿಯೇ ಇವುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದರೆ ಬಹಳ ನಾಚಿಕೆಗೇಡು ಮತ್ತು ಬಹಳ ಕಳವಳ.

ಆತಂಕ ಪಡುವಂತಹ ವಿಷಯ ಏಕೆಂದರೆ ಮನೆ, ಶಾಲೆಗಳು, ಆಸ್ಪತ್ರೆಗಳನ್ನು ದೇವಾಲಯಗಳೆಂದು ದೇವರಿಗೆ ಸಮಾನ ಸ್ಥಾನ ನೀಡಿದ್ದಾರೆ. “ವೈದ್ಯೋ ನಾರಾಯಣಿ ಹರಿ” ಅಂದರೆ ವೈದ್ಯರನ್ನು ಶಿಕ್ಷಕರನ್ನು “ಗುರದೇವೋಭವ” ಎಂದು ಕರೆಯುತ್ತಾರೆ. ತಂದೆ ತಾಯಿಗಳನ್ನು “ಮಾತೃ ದೇವೋಭವ, ಪಿತೃದೇವೋ ಭವ” ಎನ್ನುತ್ತೇವೆ. ತಂದೆ ತಾಯಿಗಳನ್ನು “ಸ್ವರ್ಗ, ಸ್ವರ್ಗದ ಬಾಗಿಲೆಂದು” ಇಸ್ಲಾಮ್ ಹೇಳುತ್ತದೆ. ಇಂತಹ ಸ್ಥಳಗಳಲ್ಲಿ ಅನಾಚಾರ, ಅತ್ಯಾಚಾರ, ಕೊಲೆಗಳು ನಡೆಯುತ್ತಿವೆ ಎಂದರೆ ನಮ್ಮ ಜಗತ್ತು ನಮ್ಮ ಸಮಾಜ ಅವನತಿಯತ್ತ ಹೋಗುತ್ತಿದೆ ಎಂದರ್ಥ.

ರಕ್ಷಕರೇ ಭಕ್ಷಕರಾದಾಗ, ಕಾಯು ವವರೇ ಕಳ್ಳರಾದರೆ ನಿಂತ ನೆಲವೇ ಕುಸಿದಾಗ ಏನಾಗಬಹುದೋ ಯೋಚಿಸಿ. ಜೀವನದಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ನೀಟ್, ಪಿ.ಜಿ., ಯುಜಿಸಿಗಳಂತಹ ಪರೀಕ್ಷೆಗಳನ್ನು ಪಾಸು ಮಾಡಿ ಡಾಕ್ಟರ್ ಆಗಿದ್ದ ಮೊಮಿತರ ಜೀವನವನ್ನು ಹಾಳು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಈ ಅತ್ಯಾಚಾರ ಮಾಡೋರಿಗೆ ಕಾನೂನಿನ ಭಯವೂ ಇಲ್ಲ, ಆ ದೇವ ಭಯವೂ ಇಲ್ಲ. ನಾನು ಹೇಳೋದು ಏನೆಂದರೆ ಅತ್ಯಾಚಾರಿಗಳಿಗೆ ಅವರು ಯಾವ ರೀತಿ ಚಿತ್ರಹಿಂಸೆ ಕೊಟ್ಟು ಮಹಿಳೆಯರನ್ನು ಕೊಲ್ಲುತ್ತಾರೋ ಅದೇ ರೀತಿಯಲ್ಲಿ ಬಹಿರಂಗವಾಗಿ ಅವರಿಗೆ ಹಿಂಸೆ ಕೊಡಬೇಕು. ಒಂದೇ ಬಾರಿ ಗಲ್ಲು ಶಿಕ್ಷೆ ಕೊಟ್ಟರೆ ಅಷ್ಟು ನೋವಾಗುವುದಿಲ್ಲ. ಕಣ್ಣಿಗೆ ಕಣ್ಣು ಅನ್ನೋ ಹಾಗೆ ಡಾ. ಮೊಮಿತಾಳಿಗೆ ಹಿಂಸೆಕೊಟ್ಟ ಅಪರಾಧಿಗೂ ಸಹ ದಿನವೊಂದಕ್ಕೆ ಒಂದು ರೀತಿಯ ಚಿತ್ರಹಿಂಸೆ ಕೊಡಬೇಕು. ನರಳಿ ನರಳಿ ಸಾಯುತ್ತಾರಲ್ಲ ಆಗ ಗೊತ್ತಾಗುತ್ತೆ ಹಿಂಸೆ ಅಂದರೇನು ಅಂತ.

ತಮ್ಮ ಮುದ್ದಿನ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳಿಗೆ ಅಣ್ಣ ತಮ್ಮಂದಿರಗೆ ಅಲ್ಲಾಹನು ತಾಳ್ಮೆ ಸಹನೆ ನೀಡಲಿ.