ಝಾಕಿರ್ ನಾಯಕ್ ವಿರುದ್ಧ ಪಾಕಿಸ್ತಾನಿ ಕ್ರಿಶ್ಚಿಯನ್ನರ ಆಕ್ರೋಶ; ಪತ್ರ ಬರೆದ ಮುಖಂಡರು

0
169

ಸನ್ಮಾರ್ಗ ವಾರ್ತೆ

ಸಾಹಿವಾಲ್: ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಚರ್ಚ್‌ ಆಫ್ ಪಾಕಿಸ್ತಾನ ಸಿನೊಡ್ ಅಧ್ಯಕ್ಷ ರೆವರೆಂಡ್ ಆಜಾದ್ ಮಾರ್ಷಲ್ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಬರೆದ ಪತ್ರದಲ್ಲಿ, ನಾಗರಿಕರು ಮತ್ತು ನಂಬಿಕೆಗಳ ನಡುವೆ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ವಿಷಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಔಪಚಾರಿಕ ಅತಿಥಿಯಾಗಿ ಝಾಕಿರ್ ನಾಯ್ಕ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಈ ರೀತಿಯ ಹೇಳಿಕೆಗಳು ನೀಡಿದ್ದಾರೆ ಎಂದು ಮಾರ್ಷಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ, ರೆವರೆಂಡ್ ಆಜಾದ್ ಮಾರ್ಷಲ್ ಅವರು, “ಝಾಕಿರ್ ನಾಯ್ಕ್ ಅವರ ಸಾರ್ವಜನಿಕ ಭಾಷಣಗಳು ನಮ್ಮ (ಕ್ರಿಶ್ಚಿಯನ್) ಸಮುದಾಯದಲ್ಲಿ ಗಂಭೀರ ಬೇಸರ ಉಂಟು ಮಾಡಿವೆ. ಅವರು ನಮ್ಮ ನಂಬಿಕೆಯ ಸತ್ಯಾಸತ್ಯತೆಯನ್ನು ಬಹಿರಂಗವಾಗಿ ಪ್ರಶ್ನಿಸಿ, ನಮ್ಮ ಪವಿತ್ರ ಗ್ರಂಥಗಳನ್ನು ಅಪಖ್ಯಾತಿಗೊಳಿಸಿದ್ದು ಮಾತ್ರವಲ್ಲ, ಕ್ರಿಶ್ಚಿಯನ್ ಪಾದ್ರಿಗಳು ಮತ್ತು ವಿದ್ವಾಂಸರ ನಂಬಿಕೆಗಳ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನಿ ಕ್ರಿಶ್ಚಿಯನ್ ಸಮುದಾಯದ ನಂಬಿಕೆಗಳಿಗೆ ಅವಮಾನವಷ್ಟೇ ಅಲ್ಲ, ಎಲ್ಲಾ ಪಾಕಿಸ್ತಾನಿಗಳ ರಾಷ್ಟ್ರೀಯ ಹೆಮ್ಮೆಯನ್ನು ದುರ್ಬಲಗೊಳಿಸಿದೆ ಎಂದು ಹೇಳಿದ್ದಾರೆ.

ಇಂತಹ ವಿಭಜಕ ಮತ್ತು ಹಾನಿಕಾರಕ ಘಟನೆಗಳು ವಿಶೇಷವಾಗಿ ರಾಜ್ಯ ಪ್ರಾಯೋಜಕತ್ವದಲ್ಲಿ ನಡೆಯಬಾರದು. ಇದು ಭವಿಷ್ಯದಲ್ಲಿ ಶಾಂತಿ ಸಹಬಾಳ್ವೆಗೆ ಧಕ್ಕೆ ತರುತ್ತದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾರ್ಷಲ್ ಅವರು 1947 ರಲ್ಲಿ ಪಾಕಿಸ್ತಾನದ ಮೊದಲ ಸಂವಿಧಾನ ಸಭೆಯಲ್ಲಿ ಖಾಯಿದೆ-ಎ-ಅಝಮ್, ಮುಹಮ್ಮದ್ ಅಲಿ ಜಿನ್ನಾ ಅವರ ಐತಿಹಾಸಿಕ ಭಾಷಣವನ್ನು ಉಲ್ಲೇಖಿಸಿದ್ದು, ಝಾಕಿರ್ ನಾಯ್ಕ್ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಸಂಸ್ಥಾಪಕ ಪಿತಾಮಹರ ದೃಷ್ಟಿಕೋನವನ್ನು “ಅಗೌರವಗೊಳಿಸಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ. ಇದು “ದುರದೃಷ್ಟಕರ” ಎಂಬುದಾಗಿ ಹೇಳಿದ್ದಾರೆ.

“ಝಾಕಿರ್ ನಾಯ್ಕ್ ಅವರ ಕಾಮೆಂಟ್‌ಗಳನ್ನು ಮುಕ್ತ ವೇದಿಕೆಗಳಲ್ಲಿ ಮಾಡಲಾಗಿದ್ದು, ಅಲ್ಲಿ ನಮ್ಮ ಪಾದ್ರಿಗಳು ಮತ್ತು ವಿದ್ವಾಂಸರಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಲು ಅಥವಾ ಅವರ ಅಪ್ರಬುದ್ಧ ದೃಷ್ಟಿಕೋನಗಳಿಂದ ಹರಡಿದ ತಪ್ಪು ಮಾಹಿತಿಯನ್ನು ಸರಿಪಡಿಸಲು ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಪ್ರತಿಪಾದಿಸಿದರು.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪಾಕಿಸ್ತಾನದ ಕ್ರಿಶ್ಚಿಯನ್ ಮುಖಂಡರು
ಪತ್ರ ಬರೆದಿದ್ದು, ಝಾಕಿರ್ ನಾಯ್ಕ್ ಅವರು ಕಳೆದ ವಾರ ತಮ್ಮ ದೇಶ ಪ್ರವಾಸದ ವೇಳೆ ನಮ್ಮ ನಂಬಿಕೆಯನ್ನು ಅವಮಾನಿಸಿರುವುದಾಗಿ ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.