ಜಾಮಿಯ ಮಿಲ್ಲಿಯ ಇಸ್ಲಾಮಿಯ ಉಪಕುಲಪತಿಯಾಗಿ ಮಾಜಿ ಎಬಿವಿಪಿ ಸದಸ್ಯ ನೇಮಕ

0
102

ಸನ್ಮಾರ್ಗ ವಾರ್ತೆ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಪ್ರತಿಷ್ಠಿತ ಅಧ್ಯಾಪಕ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಮಾಜಿ ಸದಸ್ಯ ಪ್ರೊಫೆಸರ್ ಮಝರ್ ಆಸಿಫ್ ಅವರನ್ನು ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ (ಜೆಎಂಐ) ಉಪಕುಲಪತಿಯಾಗಿ ನೇಮಿಸಲಾಗಿದೆ. ಅವರು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಕರಡು ಸಮಿತಿಯ ಸದಸ್ಯರಾಗಿದ್ದರು.

ಅವರ ನೇಮಕಾತಿಯು ಶೈಕ್ಷಣಿಕ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಆಸಿಫ್ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿದ್ಯಾರ್ಥಿ ಘಟಕದೊಂದಿಗೆ ಅವರ ಹಿಂದಿನ ಒಡನಾಟವನ್ನು ಪರಿಗಣಿಸಿದಾಗ, ಈ ಚರ್ಚೆಗಳು ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.

ಚೀನಾ ಮತ್ತು ಪೂರ್ವ ಏಷ್ಯಾದ ಅಧ್ಯಯನದಲ್ಲಿ ಪ್ರೊಫೆಸರ್ ಮಝರ್ ಆಸಿಫ್, JNUನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಚೀನೀ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಪರಿಣತರಾಗಿದ್ದಾರೆ. ವಿವಿಧ ಪ್ರಕಾಶನಗಳಲ್ಲಿ ಅವರ ಬರಹಗಳು ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ಮಾಡಿದ್ದಾರೆ. ಅವರ ಅಧ್ಯಯನವು ಅಂತಾರಾಷ್ಟ್ರೀಯ ವಿಚಾರಗಳು ಮತ್ತು ಜಾಗತಿಕ ಸಾಂಸ್ಕೃತಿಕ ತಿಳುವಳಿಕೆಗೆ ಬದ್ಧವಾಗಿದೆ.

ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯೊಂದಿಗೆ ಆಸಿಫ್ ಅವರ ಹಿಂದಿನ ಸಂಬಂಧ ಗಮನಾರ್ಹವಾಗಿ ಚರ್ಚೆಗೆ ಗ್ರಾಸವಾಗಿದೆ. ಜಾಮಿಯಾ ಮಿಲ್ಲಿಯಾವು ಉದಾರವಾದಿ ಮತ್ತು ಪ್ರಗತಿಪರ ಚಿಂತನೆಯ ಭದ್ರಕೋಟೆ ಎಂಬ ಖ್ಯಾತಿಯನ್ನು ಪಡೆದಿದ್ದು ವಿದ್ಯಾರ್ಥಿ ಜೀವನದಲ್ಲಿ ಮಝರ್ ಅವರು ಎಬಿವಿಪಿಯೊಂದಿಗೆ ಮಾಡಿಕೊಂಡ ಒಡನಾಟವು ಅವರ ಪ್ರೊಫೈಲ್‌ಗೆ ಸಂಕೀರ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ಅವರು ಶಿಕ್ಷಣ ಮತ್ತು ಶೈಕ್ಷಣಿಕ ಬೆಳವಣಿಗೆಯೇ ಅವರ ಮೊದಲ ಆದ್ಯತೆ ಎಂದು ಅವರ ಒಡನಾಡಿಗಳು ಅಭಿಪ್ರಾಯ ಪಡುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ, ಮಝರ್ ಆಸಿಫ್ ಸಕ್ರಿಯ ರಾಜಕೀಯದಿಂದ ದೂರವಿದ್ದಾರೆ. ಅವರು ಅಂತರರಾಷ್ಟ್ರೀಯ ಶೈಕ್ಷಣಿಕ ಸಂಬಂಧಗಳನ್ನು ಬೆಳೆಸಲು, ವಿಶೇಷವಾಗಿ ಚೀನಾದೊಂದಿಗೆ, ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಭಾರತದ ಶಕ್ತಿಯನ್ನು ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ ಎಂದು ಅಭಿಪ್ರಾಯ ಪಡಲಾಗಿದೆ.